Subscribe to Updates

    Get the latest creative news from FooBar about art, design and business.

    What's Hot

    ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    February 10, 2026

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಂಕಣಿ ಸಂಭ್ರಮ್’

    February 10, 2026

    ಶತಾವಧಾನಿ ಡಾ‌. ಆರ್. ಗಣೇಶ್ ಇವರಿಂದ ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ

    February 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶತಾವಧಾನಿ ಡಾ‌. ಆರ್. ಗಣೇಶ್ ಇವರಿಂದ ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ
    Book Release

    ಶತಾವಧಾನಿ ಡಾ‌. ಆರ್. ಗಣೇಶ್ ಇವರಿಂದ ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ

    February 10, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಂಬೈ : ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನವು ಸ್ಥಾಪಿತವಾಗಿ 125 ವರ್ಷಗಳು ಸಂದಿರುವ ಸಂಭ್ರಮದಲ್ಲಿ ಕನ್ನಡ ವಿಭಾಗವು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 06 ಫೆಬ್ರವರಿ 2026ರಂದು ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ನಡೆಯಿತು.

    ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ‘ಅಭಿಜಾತ ಸಾಹಿತ್ಯದ ಆವಶ್ಯಕತೆ’ ಎಂಬ ವಿಷಯದ ಕುರಿತು ಮಾತನಾಡಿದ ಖ್ಯಾತ ಬಹುಶ್ರುತ ವಿದ್ವಾಂಸರೂ, 2026ರ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಆದ ಶತಾವಧಾನಿ ಡಾ. ಆರ್. ಗಣೇಶ್ “ಒಂದು ದೇಶದ ಸಂಸ್ಕೃತಿಯ ದಾರ್ಢ್ಯವನ್ನು ಅರಿಯಬೇಕಾದರೆ ಅಲ್ಲಿಯ ಅಭಿಜಾತ ಸಾಹಿತ್ಯ ಎಷ್ಟರ ಮಟ್ಟಿಗೆ ನೆಲೆಯೂರಿದೆ ಎಂದು ನೋಡಬೇಕಾಗುತ್ತದೆ. ಅಭಿಜಾತ ಸಾಹಿತ್ಯವನ್ನು ಆಧುನಿಕ ದೇಶಗಳು ಕೂಡ ಕಾಪಾಡಿಕೊಂಡು ಬಂದಿವೆ. ಅದು ಜನಜೀವನದಲ್ಲಿ ಒಂದು ಮಟ್ಟದಲ್ಲಿ ಹಾಸುಹೊಕ್ಕಾಗಿದೆ. ಅಭಿಜಾತ ಕೃತಿಯ ಲಕ್ಷಣ ಏನೆಂದರೆ ಅದು ಹೇಳಬೇಕಾದುದನ್ನು ಎಂದೂ ಹೇಳಿ ಮುಗಿಸಿರುವುದಿಲ್ಲ. ಅನುಭವದಲ್ಲಿ ಹೊಸತನ್ನು ತಂದುಕೊಡುವುದು ಅಭಿಜಾತ ಸಾಹಿತ್ಯದ ಮುಖ್ಯ ಲಕ್ಷಣ. ಒಂದು ಕೃತಿಗೆ ಕಾಲಪ್ರತಿಷ್ಠೆ ಬೇಕು; ಅದು ಬಂದರೆ ಆ ಕೃತಿಗೆ ಆದರ ಬರುವುದು. ಅಭಿಜಾತ ಸಾಹಿತ್ಯ ಅನಾಥ ಪ್ರಜ್ಞೆಯನ್ನು ದೂರಗೊಳಿಸುತ್ತದೆ. ಅದು ನಿತ್ಯ ಸಾಹಚರ್ಯದಲ್ಲಿ ಇರುವಂಥದ್ದು. ಮಾನವ ಸ್ವಭಾವ ಕಾಲಾತೀತವಾಗಿ ಹೇಗೆ ಇರುತ್ತದೆ ಎನ್ನುವುದನ್ನು ಅಭಿಜಾತ ಸಾಹಿತ್ಯ ತಿಳಿಸುತ್ತದೆ. ಮಾನವರಲ್ಲಿ ಅನಿರೀಕ್ಷಿತವಾದದ್ದು ಇಲ್ಲ; ಎಲ್ಲವೂ ನಿರೀಕ್ಷಿತವೇ ಎನ್ನುವುದನ್ನು ಅಭಿಜಾತ ಸಾಹಿತ್ಯ ಹೇಳಿಕೊಡುತ್ತದೆ. ಅಭಿಜಾತ ಕೃತಿಗಳ ಮಗ್ನತೆ ಎಂದಿಗೂ ನಮ್ಮನ್ನು ಉಳಿಸುತ್ತದೆ. ಆ ಸಾಹಿತ್ಯವು ಸ್ವಲ್ಪವೂ ಕೊರತೆ ಇಲ್ಲದಂತೆ, ಖರ್ಚಿಲ್ಲದ ಆನಂದವನ್ನು ಕೊಡುವಂಥದ್ದು. ಅದೊಂದು ಕಣ್ಣಿಗೆ ಕಾಣದ ದೀಪ. ಅಭಿಜಾತ ಕೃತಿಗಳ ಮಹತ್ವವನ್ನು, ಅವುಗಳ ವಸ್ತು ವಿಷಯ ಪಾತ್ರ ಕತೆಗಳ ಮೂಲಕ ವಿಶ್ಲೇಷಿಸುವುದು ಮುಖ್ಯವಾಗುತ್ತದೆ” ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಮುಖ್ಯಸ್ಥರೂ, ಪ್ರಾಧ್ಯಾಪಕರೂ ಆದ ಪ್ರೊ. ಜಿ.ಎನ್. ಉಪಾಧ್ಯ ಅವರು “ಮುಂಬೈ ವಿಶ್ವವಿದ್ಯಾಲಯದಲ್ಲಿ 1901ರಲ್ಲಿ ಕನ್ನಡ ಅಧ್ಯಯನಕ್ಕೆ ನಾಂದಿ ಹಾಡಲಾಯಿತು. ವಿಶ್ವವಿದ್ಯಾಲಯವು 125 ವರ್ಷಗಳಲ್ಲಿ ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಗೆ ಮಹತ್ತ್ವದ ದೇಣಿಗೆಯನ್ನು ಕೊಟ್ಟಿದೆ. ಇಲ್ಲಿಯ ಐವತ್ತಾರಕ್ಕಿಂತಲೂ ಹೆಚ್ಚು ಶೈಕ್ಷಣಿಕ ವಿಭಾಗಗಳಿಗೆ ಸರಿದೊರೆಯಾಗಿ ಕನ್ನಡ ವಿಭಾಗವು ಕೆಲಸ ಮಾಡುತ್ತಿದೆ. ಶ್ಯಾಮರಾವ್ ವಿಠ್ಠಲ ಕೈಕಿಣಿ, ರಾ. ಹ. ದೇಶಪಾಂಡೆ ಇವರಿಬ್ಬರು ಮುಂಬೈ ವಿಶ್ವವಿದ್ಯಾಲಯದಲ್ಲಿ ಬಹಳ ಪ್ರಯಾಸಪಟ್ಟು ಕನ್ನಡವನ್ನು ಸ್ಥಾಪಿಸಿ ಮುಂಬೈ ಪ್ರಾಂತ್ಯದಲ್ಲಿ ಕನ್ನಡ ಬೆಳಗುವಂತೆ ನೋಡಿಕೊಂಡರು. ಆ ಬಳಿಕ ಅನೇಕ ಸಂಘ ಸಂಸ್ಥೆಗಳು ಕನ್ನಡದ ಕೈಂಕರ್ಯವನ್ನು ಮಾಡಿದವು. ವರ್ತಮಾನದ ಅರಿವಿಗೆ ಪೂರ್ವಸ್ಮೃತಿ ಯಾವತ್ತೂ ಬೇಕು. ಕನ್ನಡದಲ್ಲಿ ಇರುವ ಏಕೈಕ ಶತಾವಧಾನಿಗಳಾದ ಡಾ. ಆರ್. ಗಣೇಶ್ ಅವರು ಎಂಟು ಭಾಷೆಗಳಲ್ಲಿ ಅಷ್ಟಾವಧಾನ ಮಾಡಿ ಬೆರಗು ಮೂಡಿಸಿದವರು. ಅವರು ವಿದ್ವಲ್ಲೋಕದ ವಿಸ್ಮಯ. ಅವರಿಂದು ಉಪನ್ಯಾಸ ನೀಡಲು ಬಂದಿರುವುದು ನಮ್ಮೆಲ್ಲರ ಭಾಗ್ಯ” ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ಸಂದರ್ಭದಲ್ಲಿ ಡಾ. ಉಮಾ ರಾಮರಾವ್ ಅವರ ಪಿಎಚ್. ಡಿ. ಮಹಾಪ್ರಬಂಧ ‘ಬಹು ನೆಲೆಗಳ ಬೆರಗು’ ಕೃತಿಯನ್ನು ಶತಾವಧಾನಿ ಡಾ. ಆರ್. ಗಣೇಶ್ ಅವರು ಬಿಡುಗಡೆಗೊಳಿಸಿದರು. ಡಾ. ಉಪಾಧ್ಯ ಅವರು ಆಶಯ ನುಡಿಗಳನ್ನಾಡಿ, “ಉಮಾ ರಾಮರಾವ್ ಅವರೊಬ್ಬ ಸಾಧಕರು. ಅವರ ಪಿಎಚ್.ಡಿ. ಮಹಾಪ್ರಬಂಧವು ಭೈರಪ್ಪನವರಾದಿಯಾಗಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ” ಎಂದರು.

    ಪದ್ಮಭೂಷಣ ಡಾ. ಆರ್. ಗಣೇಶ್ ಇವರನ್ನು ಶಾಲು ಹೊದಿಸಿ, ಕೃತಿ ಗೌರವ ನೀಡಲಾಯಿತು. ಶತಾವಧಾನಿಗಳನ್ನು ಸಭೆಗೆ ಪರಿಚಯಿಸಿದ ಡಾ. ಉಮಾ ರಾಮರಾವ್ ಅವರು ಶತಾವಧಾನಿಗಳು ತಮ್ಮ ಉಪನ್ಯಾಸವೇ ತಮ್ಮ ಪರಿಚಯವೆನ್ನುತ್ತಾರೆಂದು ಹೇಳಿ ಅವರ ಜ್ಞಾನ ದಾಹ, ಕಲಿಕೆಯಲ್ಲಿ ಅವರಿಗಿರುವ ಶ್ರದ್ಧೆ, ಅಧ್ಯಯನಶೀಲರನ್ನು ಅವರು ಪ್ರೋತ್ಸಾಹಿಸುವ ಬಗೆಗಳನ್ನು ವಿವರಿಸಿದರು. ಅವಧಾನ ಕಲೆಯ ಸಂಕ್ಷಿಪ್ತ ಪರಿಚಯವನ್ನು ಹೇಳಿ ಶತಾವಧಾನಿ ಎಂಬ ಬಿರುದಿನ ಅರ್ಥವನ್ನು ತಿಳಿಸಿದರು.

    ‘ಬಹು ನೆಲೆಗಳ ಬೆರಗು’ ಕೃತಿಯ ಲೇಖಕರಾದ ಉಮಾ ಅವರು ಮೇರು ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರ ಸರಳ ಸ್ವಭಾವವನ್ನು ವಿವರಿಸುತ್ತಾ ಅವರ ಕಾದಂಬರಿಗಳಲ್ಲಿನ ಮೆಚ್ಚುವ ಮತ್ತು ಮೆಚ್ಚದ ಅಂಶಗಳನ್ನೆಲ್ಲ ಯಾವ ಹಿಂಜರಿಕೆಯೂ ಇಲ್ಲದೆಯೇ ಹೇಳುವ ಸ್ವಾತಂತ್ರ್ಯವನ್ನು ತಮಗೆ ಕೊಟ್ಟಿದ್ದರೆಂದು ಹೇಳಿದರು. ಕೃತಿಯೊಂದು ರಚಿತವಾಗುತ್ತಿರುವ ಹಂತದಲ್ಲಿ ಸಾಹಿತಿಯದಾಗಿರುತ್ತದೆ ಮತ್ತು ಒಮ್ಮೆ ಪ್ರಕಟವಾದ ನಂತರ ಓದುಗನದಾಗಿಬಿಡುತ್ತದೆ ಎಂಬ ನಿಲುವನ್ನು ಹೊಂದಿದ್ದ ಭೈರಪ್ಪನವರು ಅಧ್ಯಯನದಲ್ಲಿ ಎಲ್ಲಿಯೂ ಒಳಗೊಳ್ಳದಿದ್ದರೂ ಪ್ರಕಟವಾದ ಪುಸ್ತಕವನ್ನೋದಿ ಮೆಚ್ಚಿಕೊಂಡದ್ದು ತಮಗೆ ಸಮಾಧಾನವನ್ನು ತಂದಿತೆಂದು ಉಮಾ ಹೇಳಿದರು. ತಮ್ಮ ಅಧ್ಯಯನದ ಸಂದರ್ಭದಲ್ಲಿ ಮಾರ್ಗದರ್ಶಕರಾದ ಡಾ. ಉಪಾಧ್ಯರ ಜೊತೆಯಲ್ಲಿ ತಮ್ಮನ್ನು ಮುನ್ನಡೆಸಿದ ಶತಾವಧಾನಿ ಡಾ. ಆರ್. ಗಣೇಶ್, ಪ್ರೊ. ಎಲ್.ವಿ. ಶಾಂತಕುಮಾರಿ ಮತ್ತು ಲಕ್ಷ್ಮೀಶ ತೋಳ್ಪಾಡಿಯವರನ್ನು ಉಮಾ ಕೃತಜ್ಞತೆಯಿಂದ ನೆನೆದರು.

    ಅಂದು ಬಿಡುಗಡೆಗೊಂಡ ಕೃತಿಯ ಪರಿಚಯವನ್ನು ಮಾಡುತ್ತಾ, ವಿಭಾಗದ ಹಿರಿಯ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅವರು “ಅತ್ಯಂತ ವಾಚನೀಯವೂ ಸೃಜನಾತ್ಮಕವೂ ಆಗಿ ಮೂಡಿ ಬಂದಿರುವ ಈ ಕೃತಿಯಲ್ಲಿ ಭೈರಪ್ಪನವರ ಪರ್ವ, ಉತ್ತರಕಾಂಡಗಳ ಓದಿನಿಂದ ಕೆಲವೊಮ್ಮೆ ದಕ್ಕದೇ ಹೋಗಬಹುದಾದ ಒಂದು ಸಮಗ್ರ ದೃಷ್ಟಿಕೋನವು ದೊರೆಯುತ್ತದೆ” ಎಂದರು.

    ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಸ್ವಾಗತ ಗೀತೆಯನ್ನು ಹಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು. ಸಂವಾದದಲ್ಲಿ ಕಲಾ ಭಾಗ್ವತ್, ವಿಕ್ರಮ್ ಜೋಶಿ, ಡಾ. ಜಿ.ಎನ್. ಉಪಾಧ್ಯ, ನಾರಾಯಣ ನವಿಲೇಕರ್, ಅಮಿತಾ ಭಾಗ್ವತ್, ಉಮಾ ರಾಮರಾವ್ ಮೊದಲಾದವರು ಪಾಲ್ಗೊಂಡರು. ವಿಭಾಗದ ವಿದ್ಯಾರ್ಥಿಗಳು, ನಗರದ ಕನ್ನಡ ಸಾಹಿತ್ಯಾಸಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.‌

    baikady Book release felicitation kannada Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಸನಾತನ ನೃತ್ಯಾಲಯದ ಶಾರದಾಮಣಿಗೆ ‘ನಾಟ್ಯಶ್ರೀ’ ಪ್ರಶಸ್ತಿ
    Next Article ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಂಕಣಿ ಸಂಭ್ರಮ್’
    roovari

    Add Comment Cancel Reply


    Related Posts

    ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    February 10, 2026

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಂಕಣಿ ಸಂಭ್ರಮ್’

    February 10, 2026

    ಸನಾತನ ನೃತ್ಯಾಲಯದ ಶಾರದಾಮಣಿಗೆ ‘ನಾಟ್ಯಶ್ರೀ’ ಪ್ರಶಸ್ತಿ

    February 10, 2026

    ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ

    February 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.