ಮಂಗಳೂರು : ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮತ್ತು ರಂಗ ಅಧ್ಯಯನ ಕೇಂದ್ರ ಆಯೋಜನೆಯಲ್ಲಿ ದಿನಾಂಕ 13 ಫೆಬ್ರವರಿ 2026ರಂದು ಬೆಳಗ್ಗೆ ಗಂಟೆ 10-00ಕ್ಕೆ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ಕೃತಿ ಲೋಕಾರ್ಪಣೆ, ಸಂವಾದ ಮತ್ತು ವಿನೂತನ ಯಕ್ಷಪ್ರಸ್ತುತಿ ಕಾರ್ಯಕ್ರಮ ನಡೆಯಲಿದೆ.
ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಇವರು ಯಕ್ಷಗಾನ ಮತ್ತು ಕರಾವಳಿಯ ಸಾಮಾಜಿಕ ಇತಿಹಾಸದ ಕುರಿತು ಸಂಶೋಧನೆ ನಡೆಸಿ ಬರೆದ ‘ಅಳವು ಅರಿಯದ ಭಾಷೆ’ ಎಂಬ ಪುಸ್ತಕದ ಬಿಡುಗಡೆ, ಸಂವಾದ ನಡೆಯಲಿದೆ. ಪಟ್ಲ ಸತೀಶ್ ಶೆಟ್ಟಿ ಪುಸ್ತಕ ಬಿಡುಗಡೆ ಮಾಡಲಿದ್ದು, ಸುಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ರಂಗಾಭಟ್ಟ, ಪ್ರಾಧ್ಯಾಪಕ ಪ್ರೊ. ಐವಾನ್ ಫ್ರಾನ್ಸಿಸ್ ಲೋಬೋ, ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಕೆ. ಶೆಟ್ಟಿ, ಕವಿ ಡಾ. ಚೇತನ್ ಸೋಮೇಶ್ವರ, ಸಹಾಯಕ ಪ್ರಾಧ್ಯಾಪಕರಾದ ಡಾ. ಜೈಬುನ್ನೀಸಾ ಅಬ್ದುಲ್ಲಾ ರಜಾಕ್ ಹಮ್ಮಬ್ಬ ಮತ್ತು ಇಂಗ್ಲೆಂಡ್ ನ ಯೂನಿವರ್ಸಿಟಿ ಆಫ್ ಬಾತ್ ನ ಸಂಶೋಧಕ ಹರೀಶ್ ಶೆಟ್ಟಿ ಮೊದಲಾದವರು ವಿದ್ವಾಂಸರು ಪುಸ್ತಕದ ಬಗ್ಗೆ ತಮ್ಮ ವಿಚಾರ ಮಂಡನೆ ಮಾಡಲಿದ್ದಾರೆ. ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ವಂ। ಡಾ। ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಳ್ಳಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕಾರಿಯಾ ಜೋಕಟ್ಟೆ ಉದ್ಘಾಟಿಸಲಿದ್ದಾರೆ. ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಉಪಸ್ಥಿತರಿರಲಿದ್ದು, ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 2-00 ಗಂಟೆಗೆ ಸಂತ ಅಲೋಶಿಯಸ್ ಯಕ್ಷಬಳಗದಿಂದ ಡಾ. ದಿನೇಶ್ ನಾಯಕ್ ಇವರ ವಿಶಿಷ್ಟ ಪರಿಕಲ್ಪನೆಯಲ್ಲಿ ಯಕ್ಷ-ಭಾವ-ಅಭಿವ್ಯಕ್ತಿ ಎಂಬ ವಿನೂತನ ಯಕ್ಷಗಾನ ಪ್ರದರ್ಶನವಿದೆ. ಯಕ್ಷಗಾನ ಕಲಾವಿದ ಪಡ್ರೆ ರಕ್ಷಿತ್ ಶೆಟ್ಟಿ ನಿರ್ದೇಶನವಿದ್ದು, ಹಿಮ್ಮೇಳದಲ್ಲಿ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಯುವ ಭಾಗವತ ಚಿನ್ಮಯ್ ಭಟ್ ಕಲ್ಲಡ್ಕ, ಚೆಂಡೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ರಕ್ಷಣ್ ಕುಮಾರ್, ಮದ್ದಲೆಯಲ್ಲಿ ಸಮರ್ಥ್ ಎಸ್. ಉಡುಪ, ಚಕ್ರತಾಳದಲ್ಲಿ ಮಧುಸೂದನ ಅಲೆವೂರಾಯ ಜತೆ ಸೇರಲಿದ್ದಾರೆ. ರಂಗಭೂಮಿಯ ಬೆಳಕಿನ ಸಂಯೋಜನೆ, ಪಿಟೀಲು ವಾದನ ಇರಲಿದೆ.

