ಮಂಗಳೂರು : ಸಂಗೀತ ಪರಿಷತ್ ಸಂಸ್ಥೆಯು ಸ್ಥಾಪನೆಯಾದ ಆರಂಭದ ಹಂತದಲ್ಲಿ ಹಲವು ಮನೆ ಮನೆಗಳಲ್ಲಿ ಸಂಗೀತ ಕಛೇರಿಯನ್ನು ಹಮ್ಮಿಕೊಂಡು ಬರುತ್ತಿತ್ತು. ಕರ್ನಾಟಕ ಸಂಗೀತವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಸಿ ಬೆಳೆಸುವ ಮಹತ್ತರ ಆಶಯದೊಂದಿಗೆ ಕಲಾಭಿಮಾನಿಗಳಿಗೆ ಸಂಗೀತವನ್ನು ನೀಡುವುದರೊಂದಿಗೆ ಸಂಸ್ಥೆಯ ಪರಿಚಯ, ಕಲಾಭಿಮಾನಿಗಳ ಪರಿಚಯ, ಕಲಾವಿದರ ಪರಿಚಯ ಹೀಗೆ ಒಂದು ಕುಟುಂಬದಂತೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಂಸ್ಥೆಯು ಬೆಳೆಯುತ್ತಿದ್ದಂತೆ ದೊಡ್ಡ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಆರಂಭವಾಯಿತು. ಗೃಹ ಸಂಗೀತವು ಸಭಾಭವನಕ್ಕೆ ಸ್ಥಳಾಂತರಗೂಂಡಿತು.
2013 ಅಕ್ಟೋಬರ್ 18ರಂದು ನಾವು ಕಲಾವಿದರೂ ಹಾಗೂ ಕಲಾಭಿಮಾನಿಗಳೊಂದಿಗೆ ದೂರದ ಊರುಗಳಿಗೆ ತೆರಳಿ (ಶೃಂಗೇರಿ) ಒಂದು ದಿನದ ಪ್ರವಾಸ (ಸಂಗೀತ ಯಾತ್ರಾ) ಅಲ್ಲಿಯ ಸಭಾದ ಜೊತೆಯಲ್ಲಿ ಕಛೇರಿ ಹೀಗೆ ವಿಭಿನ್ನ ಯೋಜನೆಯನ್ನು ಆರಂಭಿಸಲಾಯಿತು. ಸುಬ್ರಹ್ಮಣ್ಯದಲ್ಲೂ ಕಾರ್ಯಕ್ರಮ ಆಯೋಜಿಸಿತ್ತು. ಇದೀಗ ನಮ್ಮ ಸದಸ್ಯರು, ಕಲಾಭಿಮಾನಿಗಳು ಹಾಗೂ ಕಲಾಪೋಷಕರ ಆಸ್ಥೆಯಂತೆ ಈ ಯೋಜನೆಯ ಪುನರಾರಂಭ ಇದೇ ಬರುವ ದಿನಾಂಕ 14 ಫೆಬ್ರುವರಿ 2026ರ ಶನಿವಾರ ವಾಮಂಜೂರಿನ ಚರ್ಚ್ ಮುಂಭಾಗ ಮೆಂಡೋನ್ಸ ಗಾರ್ಡನ್ ಗ್ಲೋಬಲ್ ಸ್ಪೋರ್ಟ್ಸ್ ಅರೇನ ಬಳಿ ಇರುವ ಮೈಥಿಲಿ ಸಿಂಹ ಗೃಹದಲ್ಲಿ ನಡೆಯಲಿದೆ.
ಸಂಜೆ 4-00 ಗಂಟೆಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಂಗಳೂರಿನ ಮಹಾ ಪ್ರಬಂಧಕರಾದ ಶ್ರೀ ಕೆ.ಯಸ್. ಅರುಣ್ ಪ್ರಭ ಇವರಿಂದ ದೀಪ ಪ್ರಜ್ವಲನೆ. ಮುಖ್ಯ ಅತಿಥಿಯಾಗಿ ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯರಾದ ಶ್ರೀ ಜಯಪ್ರಕಾಶ್ ಇವರು ಉಪಸ್ಥತರಿರುವರು. ಗಂಟೆ 4-15ಕ್ಕೆ ಸರಿಯಾಗಿ ಮಂಗಳೂರಿನ ಯುವ ಪ್ರತಿಭೆಗಳಾದ ಮಾಸ್ಟರ್ ಅಭಿರಾಜ್ ಮಯ್ಯ ಹಾಗೂ ಮಾಸ್ಟರ್ ಅಭಯ್ ರಾಜ್ ಮಯ್ಯ ಇವರಿಂದ ದ್ವಂದ್ವ ಪಿಟೀಲುವಾದನ ಕಛೇರಿ ಅವಿನಾಶ್ ಬೆಳ್ಳಾರೆಯವರ ಮೃದಂಗ ಪಕ್ಕವಾದ್ಯ ಸಹಕಾರದೊಂದಿಗೆ ನಡೆಯಲಿದೆ.
ಗಂಟೆ 4-45ಕ್ಕೆ ಪ್ರಧಾನ ಕಛೇರಿಯಲ್ಲಿ ಪುತ್ತೂರಿನ ಡಾ. ಸುಚಿತ್ರ ಹೊಳ್ಳ ಇವರ ಹಾಡುಗಾರಿಕೆಗೆ ಮಂಗಳೂರಿನ ಗೌತಮ್ ಭಟ್ ಪಿಟೀಲು, ಕಲ್ಲಿಕೋಟೆಯ ಡಾ. ವಿ.ಆರ್. ನಾರಾಯಣ ಪ್ರಕಾಶ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದೆ.

