ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗವು ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾ ಭೂಷಣ ಪ್ರಶಸ್ತಿ’ಯನ್ನು 2026ರಿಂದ ಎಚ್.ಎನ್. ಶೃಂಗೇಶ್ವರರ ಹೆಸರನ್ನು ಸೇರಿಸಿ ಈರ್ವರ ನೆನಪಿನಲ್ಲಿ ನೀಡಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಎಸ್. ಗೋಪಾಲ ಕೃಷ್ಣ ಅವರು 27 ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಎಚ್.ಎನ್. ಶೃಂಗೇಶ್ವರರು ಕಾರ್ಯಕರ್ತರಾಗಿ, ಜೊತೆ ಕಾರ್ಯದರ್ಶಿಯಾಗಿ 35 ವರ್ಷಗಳ ಕಾಲ ಸಂಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದರು.
ಈ ವರ್ಷದ ಸೇವಾ ಭೂಷಣ ಪ್ರಶಸ್ತಿಗೆ ನಿವೃತ್ತ ಬ್ಯಾಂಕ್ ಅಧಿಕಾರಿ, ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆಯಾಗಿದ್ದು, ಇವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವೋಪದೇಶವನ್ನು ಸ್ವತಃ ಮೈಗೂಡಿಸಿಕೊಂಡು ಗುರುಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅದನ್ನು ಉಚಿತವಾಗಿ ಹಂಚುತ್ತಾ ಅವರ ಜೀವನ ಮೌಲ್ಯಗಳನ್ನು ಪ್ರಸಾರ ಮಾಡುತ್ತಾ ನೊಂದವರು, ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 27 ಫೆಬ್ರವರಿ 2026ರಂದು ಸಂಸ್ಥೆಯ ಐ.ವೈ.ಸಿ. ಸಭಾಂಗಣದಲ್ಲಿ ಜರಗಲಿದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
