ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ದಿನಾಂಕ 14 ಫೆಬ್ರವರಿ 2026ರಂದು ಪೆರ್ಮನ್ನೂರು ತೊಕ್ಕೊಟ್ಟು ಒಳಪೇಟೆಯ ಡಾ. ಅಂಬೇಡ್ಕರ್ ರಂಗ ಮಂದಿರದಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳದ ರಾಣಿ ಅಬ್ಬಕ್ಕ ವಂಶಸ್ಥರಾದ ಅನಿತಾ ಸುರೇಂದ್ರ ಕುಮಾರ್ “ರಾಣಿ ಅಬ್ಬಕ್ಕ 1525ರಿಂದ 1570ರವರೆಗೆ ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದ ಹೆಗ್ಗಳಿಕೆ ಪಡೆದಿದ್ದಳು. ಯುದ್ಧದ ಮೂಲಕ ಅವರನ್ನು ಸೆದೆ ಬಡಿದು ರಾಜ್ಯ ರಕ್ಷಣೆಗೆ ಪಣ ತೊಟ್ಟಿದ್ದ ರಾಣಿ ಆಗಿದ್ದಾಳೆ. ಅಬ್ಬಕ್ಕಳ ಹೆಸರಿನಲ್ಲಿ ನಾನಾ ಕಡೆ ಅಬ್ಬಕ್ಕ ಉತ್ಸವ ಆಗುತ್ತಿರುವುದು ಶ್ಲಾಘನೀಯ. ಅವಳ ಹೆಸರಿನಲ್ಲಿ ನಡೆಯುವ ಉತ್ಸವ ಶಾಶ್ವತವಾಗಿ ಉಳಿಸಬೇಕು” ಎಂದು ಹೇಳಿದರು.
ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅಭಿನಂದನಾ ನುಡಿ ಸಲ್ಲಿಸಿ, “ಇತಿಹಾಸದಲ್ಲಿ 13 ಮಂದಿ ಶೂರ ಯೋಧರ ಪೈಕಿ 5 ಮಂದಿ ಮಹಿಳೆಯರು ಇದ್ದಾರೆ. ಅವರಲ್ಲಿ ರಾಣಿ ಅಬ್ಬಕ್ಕಳ ಹೆಸರು ಮೊದಲಿಗರಾಗಿ ಉಲ್ಲೇಖವಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲೂ ಅಬ್ಬಕ್ಕಳ ಜೀವನ ಅಪೂರ್ವವಾಗಿದೆ. ಕೆಚ್ಚೆದೆಯ ದಿಟ್ಟತನ, ಅಚಲ ಧೈರ್ಯ ಮತ್ತು ಸ್ವಾಭಿಮಾನದಿಂದ ಅವರು ಇತಿಹಾಸದಲ್ಲಿ ಅಮರರಾಗಿದ್ದಾರೆ” ಎಂದರು.

ಆಶಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಡಾ. ಆಶಾಜ್ಯೋತಿ ರೈ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಶಸ್ವಿನಿ ಉಳ್ಳಾಲ್ ನೇತೃತ್ವದ ಸ್ವರಮಾಧುರ್ಯ ತಂಡದಿಂದ ನಾಡು ನುಡಿಯ ಗೀತೋತ್ಸವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಅಲ್ ಅಝಾರಿಯಾ ದಫ್ ತಂಡದಿಂದ ಧಫ್ ಕಾರ್ಯಕ್ರಮ, ಯುವವಾಹಿನಿ ಕೊಲ್ಯ ಘಟಕದಿಂದ ಸಾಂಸ್ಕೃತಿಕ ವೈವಿಧ್ಯ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕುಡುಂಬಿ ನೃತ್ಯ, ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸಾ ಕಾಪು ತಂಡದಿಂದ ಹಾಸ್ಯ ವೈವಿಧ್ಯ ‘ಬಲೆ ತೆಲಿಪಾಲೆ’ ಹಾಗೂ ಪಜೀರು ನೃತ್ಯಲಹರಿ ನಾಟ್ಯಾಲಯದ ವಿದುಷಿ ರೇಷ್ಮಾ ನಿರ್ಮಲ್ ಭಟ್ ತಂಡದಿಂದ ಸ್ವಾಗತ. ನೃತ್ಯ ನಡೆಯಿತು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ. ಸಾಯಿಗೀತಾ ಹೆಗ್ಡೆ ಮತ್ತು ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ನಾಟ್ಯನಿಕೇತನ ನೃತ್ಯ ಸಂಸ್ಥೆಯ ಪ್ರಿನ್ಸಿಪಾಲ್ ರಾಜಶ್ರೀ ಉಳ್ಳಾಲ್ ಇವರುಗಳಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ನಗರಸಭೆ ಪೌರಾಯುಕ್ತ ಸಂತೋಷ್, ರೈತ ಮುಖಂಡ ಕೃಷ್ಣಪ್ಪ ಸಾಲಿಯಾನ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ದಿವ್ಯ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ತುಳು ಸಾಹಿತ್ಯ ತಾರಾನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಚೀರುಂಬ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಡಿ.ಎಸ್. ಗಟ್ಟಿ ಯಶವಂತ ಅಮೀನ್, ಪೆರ್ಮನ್ನೂರು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ, ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷೆ ದೇವಕಿ ಆರ್. ಉಳ್ಳಾಲ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತಾಧ್ಯಕ್ಷ ಜಯರಾಮ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿ, ಧನಲಕ್ಷ್ಮೀ ಗಟ್ಟಿ, ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ವಂದಿಸಿದರು.
