ಕಾಸರಗೋಡು : ಪೆರಿಯ ಅಲಕ್ಕೋಡ್ ಗೋಕುಲಂ ಗೋ ಶಾಲೆಯಲ್ಲಿ ದಿನಾಂಕ 15-07-2023ರಂದು ನಡೆದ ಮಲ್ಲಾಡಿ ಸಹೋದರರ ಸಂಗೀತ ಕಛೇರಿಯು ಅಕ್ಷರಶಃ ಅಪೂರ್ವ ರಾಗಗಳ ಅಮೃತವರ್ಷಿಣಿಯಂತಿದ್ದು ಗಮನ ಸೆಳೆಯಿತು.
ಗೋವುಗಳಿಗಾಗಿ ನಡೆಸಿಕೊಂಡು ಬರುವ ಪ್ರತೀ ತಿಂಗಳ ಸಂಗೀತ ಕಛೇರಿಯಲ್ಲಿ ಮೂರೂವರೆ ಗಂಟೆಗಳ ಕಾಲ ಗೋವುಗಳು ಮೌನವಾಗಿ ಆಲಿಸಿ, ತಲೆ ಅಲ್ಲಾಡಿಸಿ, ನರ್ತನ ಮಾಡಿಯೂ ಸಂಗೀತ ಆಸ್ವಾದನೆ ಮಾಡಿದ್ದನ್ನು ಕಂಡು ಶ್ರೇಷ್ಠ ಗಾಯಕ ಸಹೋದರರಿಗೂ ಹಾಗೂ ಇತರ ಶೋತೃಗಳಿಗೂ ಸಂಭ್ರಮ ಉಂಟಾಗಿ ರೋಮಾಂಚನವಾಯಿತು. ಇದು ಸಾಮಾನ್ಯ ಸಂಗೀತ ಕಛೇರಿಯಲ್ಲ, ಪ್ರಕೃತಿಗೆ ಸಮರ್ಪಣೆ ಆಗಿದೆ. ಮತ್ತೊಮ್ಮೆ ದೀಪಾವಳಿ ಸಂಗೀತೋತ್ಸವಕ್ಕೆ ಬರುತ್ತೇವೆ ಎಂದು ಮಲ್ಲಾಡಿ ಸಹೋದರರು ಹೇಳಿದರು.
ಮಲ್ಲಾಡಿ ಸಹೋದರರು ಹಂಸಧ್ವನಿ ರಾಗದಲ್ಲಿ ವರ್ಣದಿಂದ ಪ್ರಾರಂಭಿಸಿ ಅತೀ ಅಪೂರ್ವವಾದ ಸುಪ್ರದೀಪರಾಗದ ಏಕೈಕ ಕೃತಿಯಾದ ತ್ಯಾಗರಾಜ ಸ್ವಾಮಿಗಳ ‘ವರಶಿಕಿವಾಹನ’ ಮತ್ತು ಧೇನುಕರಾಗದಲ್ಲಿ ‘ಕಾಮಧೇನುಕಾಂ ಆಶ್ರಯೇ’ ಮೊದಲ್ಗೊಂಡು ನಂತರ ಗಾನಮೂರ್ತಿ-ಮೋಹನ ರಾಗವೂ ಬಳಿಕ ರೇವತಿ ರಾಗದ ‘ಜಯತಿ ಜಯತಿ ಗೋಮಾತೆ’, ಸೌರಾಷ್ಟ್ರ ರಾಗದಲ್ಲಿ ‘ಶಿವ ಶಿವ ಭವ ಶರಣಂ’ ಆಲಾಪಿಸಿ ಮಂಗಳ ಹಾಡಿದರು.