ಬೆಂಗಳೂರು: ಜಯಚಾಮರಾಜೇಂದ್ರ ಒಡೆಯರ್ ಅವರ 104ನೇ ಜನ್ಮ ದಿನೋತ್ಸವವನ್ನು ದಿನಾಂಕ 18-07-2023ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಬಳಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು “ಜಯಚಾಮರಾಜ ಒಡೆಯರ್ ಅವರು ಮೊದಲಿನಿಂದಲೂ ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಅಖಂಡ ಕರ್ನಾಟಕ ಅವರ ಕನಸಾಗಿತ್ತು. ಅದನ್ನು ನನಸಾಗಿಸಲು ರಾಜಪದವಿಯನ್ನು ತ್ಯಜಿಸಲೂ ಸಿದ್ಧರಾಗಿದ್ದರು. ಶ್ರೀ ಜಯಚಾಮರಾಜ ಒಡೆಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೂಡ ಆಗಿದ್ದರು. ಅವರ ಕಾಳಜಿಯಿಂದಲೇ ಬಿ.ಎಂ. ಶ್ರೀ ಅಚ್ಚಕೂಟ ಕನ್ನಡ ಮತ್ತು ಮಹಿಳಾ ಘಟಕದ ಯೋಜನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪನೆಯಾಯಿತು. ಮಹಾರಾಜರು ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದರು. ತಾವೇ ಕುವೆಂಪು ಅವರ ಮನೆಗೆ ಹೋಗಿ ಕನ್ನಡ ಕಲಿತಿದ್ದು ಅವರ ಹಿರಿಮೆ. ಹೀಗಾಗಿಯೇ ಕನ್ನಡ ಪ್ರೇಮ ಅವರಲ್ಲಿ ಮೂಡಿತ್ತು. ಜಯಚಾಮರಾಜೇಂದ್ರ ಗ್ರಂಥರತ್ನಮಾಲೆಯ ಮೂಲಕ ವೇದ, ಪುರಾಣ ಮತ್ತು ಇತಿಹಾಸಗಳ ಗ್ರಂಥಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಪಂಡಿತರಿಂದ ಅನುವಾದ ಮಾಡಿಸಿ ಪ್ರಕಟಿಸಿದ್ದರು. ಸ್ವತಃ ತಾವೇ ‘ದತ್ತಾತ್ರೇಯ ದಿ ವೇ ಅಂಡ್ ದಿ ಗೋಲ್’, ‘ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್’, ‘ದಿ ರಿಲಿಜಿಯನ್ ಅಂಡ್ ದಿ ಮ್ಯಾನ್’ ಮತ್ತು ‘ಆತ್ಮ ಅಂಡ್ ಬ್ರಹ್ಮ’ ಮೊದಲಾದ ಗ್ರಂಥಗಳನ್ನು ರಚಿಸಿದ್ದಾರೆ.
ಇವರು ಸಂಗೀತ ಸಾಹಿತ್ಯ ಕಲೆಗಳಲ್ಲಿ ಪರಿಣತರೂ ಪ್ರೋತ್ಸಾಹಕರೂ ಆಗಿದ್ದರು. ಇವರಿಗೆ ಚರಿತ್ರೆ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ವಿಶೇಷ ಆಸಕ್ತಿ ಇತ್ತು. ಇವರೊಬ್ಬ ಉತ್ತಮ ಕುದುರೆ ಸವಾರರಾಗಿದ್ದರು. ಟೆನಿಸ್ ಆಟವನ್ನೂ ಆಡುವುದರೊಂದಿಗೆ ಅರಮನೆಯಲ್ಲಿಯೇ ಉತ್ತಮ ಗ್ರಂಥ ಭಂಡಾರವನ್ನೂ ನಿರ್ಮಿಸಿದ್ದರು. ಸಂಗೀತ ಪ್ರೇಮಿಗಳಾಗಿದ್ದ ಮಹಾರಾಜರು ವಾಗ್ಗೇಯಕಾರರೂ ಆಗಿದ್ದರು. 94 ಕೃತಿಗಳನ್ನು ರಚನೆ ಮಾಡಿದ್ದು ‘ಶ್ರೀಚಕ್ರವರ್ಧಿನಿ’ ಎನ್ನುವ ರಾಗವನ್ನು ಕೂಡ ಸೃಷ್ಟಿ ಮಾಡಿದ್ದರು.” ಎಂದು ಹೇಳಿದರು.
ರಾಜ್ಯಪಾಲರಾಗಿದ್ದ ಸಮಯದಲ್ಲಿ ಇವರು ಸಂಬಳವನ್ನು ಸ್ವೀಕರಿಸುತ್ತಿರಲಿಲ್ಲ ಎಂಬುವುದು ಇವರ ಹೆಗ್ಗಳಿಕೆ.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ ಮತ್ತು ಡಾ.ಪದ್ಮನಿ ನಾಗರಾಜ ಗೌರವ ಕೋಶಾಧ್ಯಕ್ಷರಾದ ಪಟೇಲ್ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.