ಬೆಂಗಳೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್ 7, 8 ಮತ್ತು 9ರಂದು ಮಂಡ್ಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಿಎಂ ಅಧ್ಯಕ್ಷತೆಯಲ್ಲಿ ದಿನಾಂಕ 01-02-2024ನೇ ಗುರುವಾರ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಜೂನ್ ವೇಳೆ ಲೋಕಸಭಾ ಚುನಾವಣೆ ಪ್ರಕ್ರಿಯೆ ಕೊನೆಗೊಂಡು ನೀತಿ ಸಂಹಿತೆ ಕೂಡ ರದ್ದಾಗಿರುತ್ತದೆ. ಶಾಲೆಗಳೂ ಕೂಡ ಆರಂಭವಾಗಿರುತ್ತವೆ. ಮಳೆಗಾಲ ಇನ್ನೂ ಆರಂಭವಾಗಿರುವುದಿಲ್ಲ ಎಂಬ ಅಂಶಗಳನ್ನು ಆಧರಿಸಿ ಜೂನ್‌ನಲ್ಲಿಯೇ ಸಮ್ಮೇಳನ ನಡೆಯುವುದು ಸೂಕ್ತ ಎಂಬ ಬಗ್ಗೆ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು. ಅದಕ್ಕೆ ಸಿಎಂ ಕೂಡ ಸಮ್ಮತಿ ಸೂಚಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ “ಕನ್ನಡ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕು. ಈ ಬಾರಿಯ ಸಮ್ಮೇಳನವನ್ನು ಅದ್ಧೂರಿ ಎನ್ನುವುದಕ್ಕಿಂತ ಅರ್ಥಪೂರ್ಣವಾಗಿ ಆಚರಿಸಬೇಕು. ಜಿಲ್ಲಾಡಳಿತದ ಸಹಕಾರದೊಂದಿಗೆ, ಕನ್ನಡ ಸಂಘಟನೆಗಳನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಜೂನ್ ಮೊದಲನೇ ವಾರದಲ್ಲಿ ಸಮ್ಮೇಳನ ಆಯೋಜಿಸಬೇಕು, ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಹಿರಿಯರು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದವರನ್ನು ಪರಿಗಣಿಸಬೇಕು.” ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ “ಈ ಬಾರಿ 87ನೇ ವರ್ಷದ ಸಾಹಿತ್ಯ ಹಬ್ಬ ನಡೆಯುತ್ತಿರುವುದರಿಂದ 87ಮಂದಿ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಜೊತೆಗೆ ಅರ್ಥಪೂರ್ಣವಾಗಿ ಮೂರು ದಿನಗಳ ಕಾಲ ಕನ್ನಡ ವಿಚಾರಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.” ಎಂದರು.
1994ರ ಫೆಬ್ರವರಿಯಲ್ಲಿ 63ನೇ ಸಮ್ಮೇಳನವನ್ನು ಮಂಡ್ಯದಲ್ಲೇ ನಡೆಸಲಾಗಿತ್ತು. ಹೀಗಾಗಿ, ಫೆಬ್ರವರಿಯಲ್ಲೇ ಸಮ್ಮೇಳನ ನಡೆಸಿದರೆ 30 ವರ್ಷಗಳ ನೆನಪಿನಾರ್ಥ ವಿಶೇಷವಾಗಿರುತ್ತದೆ ಎಂದು ಡಾ. ಮಹೇಶ್ ಜೋಶಿ ಆಶಿಸಿದ್ದರು. ಆದರೆ, ರಾಜ್ಯದಲ್ಲಿ ಬರ ಇರುವ ಹಿನ್ನೆಲೆಯಲ್ಲಿ ಸಮ್ಮೇಳನ ಮುಂದೂಡಲಾಗಿತ್ತು. ಈಗ ಸಿಎಂ ಜೂನ್ ತಿಂಗಳಲ್ಲಿ ಸಮ್ಮೇಳನ ನಡೆಸಲು ಸೂಚನೆ ನೀಡಿರುವುದರಿಂದ, ಆಗ ಯಾವುದೇ ಪರೀಕ್ಷೆಗಳು ಇರುವುದಿಲ್ಲವಾದ್ದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಉಪಸ್ಥಿತರಿದ್ದರು.