ಮುಂಬೈ : ಕಲಾ ಕನೆಕ್ಟ್ ವತಿಯಿಂದ ಆಯೋಜಿಸಲಾಗಿರುವ ಪ್ರತಿಷ್ಠಿತ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಈ ಬಾರಿ ಕನ್ನಡಿಗ, ಪ್ರಸಿದ್ಧ ಕಲಾವಿದ, ಸೇನಾನಿ ಡಾ. ಪರಶುರಾಮ ನಾಯಕ ಇವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಪ್ರದರ್ಶನವು ದಿನಾಂಕ 01, 02 ಮತ್ತು 03 ಮೇ 2026ರಂದು ಮುಂಬೈ ವರ್ಲಿಯಲ್ಲಿರುವ ನೆಹರು ಸೆಂಟರ್‌ನಲ್ಲಿ ನಡೆಯಲಿದೆ. ಈ ಕಲಾಪ್ರದರ್ಶನದಲ್ಲಿ ಮುಕ್ತ ಪ್ರವೇಶವಿದ್ದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕರ್ನಲ್ ಡಾ. ಪರಶುರಾಮ ನಾಯಕ ಅವರದು ಬಹುಮುಖ ಪ್ರತಿಭೆ. ಚಿತ್ರಕಲೆ, ಸಾಹಿತ್ಯ ಬರವಣಿಗೆ ಹೀಗೆ ಹಲವು ಹವ್ಯಾಸಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಉತ್ತಮ ಕಲಾವಿದರೂ ಆಗಿದ್ದಾರೆ. ಡಾ. ಪರಶುರಾಮ ನಾಯಿಕ ಅವರು ಒಬ್ಬ ಮಿಸ್ಟಿಕ್ ಆರ್ಟಿಸ್ಟ್, ಮನಃಶಾಸ್ತ್ರಜ್ಞರು ಆಧ್ಯಾತ್ಮಿಕ ಮಾರ್ಗದರ್ಶಕ ಮತ್ತು ಲೇಖಕರಾಗಿದ್ದಾರೆ.


ಮಾನವನ ಮನಸ್ಸು ಮತ್ತು ಚಿಂತನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯಕ್ಕಾಗಿ ಅವರು ಪ್ರಸಿದ್ಧರು. ಸೃಜನಶೀಲತೆ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಒಟ್ಟಿಗೆ ಬಳಸಿಕೊಂಡು, ಅವರು ಜನರಿಗೆ ತಮ್ಮ ಸಮಸ್ಯೆಗಳನ್ನು ಎದುರಿಸಲು ಮತ್ತು ಸ್ಪಷ್ಟತೆ ಪಡೆಯಲು ಸಹಾಯವನ್ನು ಮಾಡುತ್ತಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪರಿಣತಿ ಹೊಂದಿರುವ ಅವರು, ಜನರು ತಮ್ಮ ಆಂತರಿಕ ಸಮತೋಲನ, ಸ್ವಯಂ ಅರಿವು ಮತ್ತು ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ.


