ಮಂಗಳೂರು : ಮಂಗಳೂರು ವಿವಿ ಡಾ. ಶಿವರಾಮ ಕಾರಂತ ಪೀಠ, ವಿವಿ ಕಾಲೇಜು ಮಂಗಳೂರು ಹಾಗೂ ಡಾ. ಉಲ್ಲಾಸ ಕಾರಂತ ಬೆಂಗಳೂರು ಇವರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಕನ್ನಡಕ್ಕೆ ಅನುವಾದಿಸಿದ ‘ಕಾರಂತರ ಸುಳಿಯಲ್ಲಿ’ ಕೃತಿಯು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಿನಾಂಕ 18 ಏಪ್ರಿಲ್ 2026ರಂದು ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.
ಕೃತಿ ಲೋಕಾರ್ಪಣೆಗೊಳಿಸಿದ ವಿಶ್ರಾಂತ ಕುಲಪತಿ, ವಿಮರ್ಶಕ ಪ್ರೊ. ಬಿ.ಎ. ವಿವೇಕ ರೈ ಇವರು ಮಾತನಾಡಿ “ಯಾವುದೇ ಒಳ್ಳೆಯ ಸಾಹಿತ್ಯ ಕೃತಿ ಭಾಷೆಯಲ್ಲಿ ಬರೆಯುವ ಪಠ್ಯವಲ್ಲ, ಕೃತಿಯಲ್ಲಿ ಬರೆಯುವವರ ಧಾಟಿ ಮತ್ತು ಧೋರಣೆ ಇರಬೇಕು. ಕಾರಂತರ ಕೃತಿಯಲ್ಲಿ ಈ ಎರಡನ್ನು ನೋಡಬಹುದಾಗಿದೆ. ಧಾಟಿ ಮತ್ತು ಧೋರಣೆ ಇಲ್ಲದ ಯಾವುದೇ ಸಾಹಿತ್ಯ ಕೃತಿ ಕಳಪೆಯಾಗಿರುತ್ತದೆ. ಡಾ. ಶಿವರಾಮ ಕಾರಂತರ ಮೂವರು ಮಕ್ಕಳಾದ ಉಲ್ಲಾಸ್ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಇವರು ತಂದೆ ನಿಧನರಾದ 25 ವರ್ಷಗಳ ಬಳಿಕ ಅವರ ಬಗ್ಗೆ ಬರೆದಿದ್ದಾರೆ. ಇದು ತಂದೆ-ತಾಯಿಯ ನೆನಪುಗಳನ್ನು ಇಟ್ಟುಕೊಂಡು ಮಕ್ಕಳು ಬರೆದ ಸಾಹಿತ್ಯ ಕೃತಿಯಾಗಿದೆ. ಇಂತಹ ಅನೇಕ ಕೃತಿಗಳು ಹೊರಬಂದಿದೆ. ಆದರೆ ಇಲ್ಲಿ ಬೇರೆ ಬೇರೆ ಮನೋಧರ್ಮದವರು, ವಿಭಿನ್ನ ವೃತ್ತಿಯವರು, ಬೇರೆ ಬೇರೆ ಆಲೋಚನೆ ಇರುವರು ಬರೆದಿದ್ದಾರೆ. ಕನ್ನಡದಲ್ಲಿ ಕಾರಂತರ ಸುಳಿಯಲ್ಲಿ ವಿಶ್ವೇಶ್ವರ ಭಟ್ ಮೂಲ ಧಾಟಿಗೆ ಧಕ್ಕೆಯಾಗದಂತೆ ಅನುವಾದಿಸಿದ್ದಾರೆ. ಕಾರಂತರ ಮೂವರು ಮಕ್ಕಳು ಸೇರಿಕೊಂಡು ತಂದೆಯ ಬಗ್ಗೆ ಇಂಗ್ಲೀಷ್‌ನಲ್ಲಿ ‘ಗ್ರೂವಿಂಗ್ ಅಪ್ ಕಾರಂತ’ ಎಂಬ ಕೃತಿಯನ್ನು ಅದ್ಭುತವಾಗಿ ಬರೆದಿದ್ದಾರೆ. ಇದರ ಅನುವಾದವನ್ನು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅಷ್ಟೇ ಅದ್ಭುತವಾಗಿ ಮಾಡಿದ್ದಾರೆ.
ವಿಭಿನ್ನ ಧಾಟಿ ಮತ್ತು ಧೋರಣೆ ಇರುವ ಮಾಲವಿಕಾ ಕಪೂರ, ಉಲ್ಲಾಸ್ ಕಾರಂತ ಮತ್ತು ಕ್ಷಮಾ ರಾವ್ ಇವರು ಅಪ್ಪ ತೀರಿಕೊಂಡ 25 ವರ್ಷಗಳ ಬಳಿಕ ಮತ್ತು ಅಮ್ಮ ತೀರಿಕೊಂಡ 40 ವರ್ಷಗಳ ಬಳಿಕ ತಂದೆ-ತಾಯಿ ಬಗ್ಗೆ ಬರೆದಿದ್ದಾರೆ. ಒಬ್ಬ ವ್ಯಕ್ತಿ ಜೀವಂತವಾಗಿ ಇರುವಾಗ ಅವರ ಬಗ್ಗೆ ಬರೆಯುವುದಕ್ಕಿಂತ ಅವರು ಕಾಲಾಂತರದ ಬಳಿಕ ಬರೆಯುವುದು ಸುರಕ್ಷಿತ ಮತ್ತು ಹೆಚ್ಚು ಪ್ರಾಮಾಣಿಕವಾಗಿದೆ. ಜೀವಂತ ಇಲ್ಲದೆ ಇದ್ದಾಗ ಅವರನ್ನು ವಿಮರ್ಶೆ ಮಾಡಬಹುದು, ಟೀಕೆ ಮಾಡಬಹುದು. ಆ ಕೆಲಸ ಈ ಕೃತಿಯಲ್ಲಿ ನಡೆದಿದೆ. ಮೂಲದಲ್ಲಿರುವ ಎಲ್ಲ ಧ್ವನಿಗಳನ್ನು ಉತ್ತಮವಾಗಿ ‘ಕಾರಂತರ ಸುಳಿಯಲ್ಲಿದೆ. ಇಂಗ್ಲೀಷ್‌ನಿಂದ ಅನುವಾದಿತ ಕೃತಿಯಾಗಿದ್ದರೂ, ಕನ್ನಡದಲ್ಲಿ ಮೂವರು ಸೇರಿಕೊಂಡು ರಚಿಸಿದಂತಿದೆ. ಈ ಕೃತಿಯನ್ನು ಓದುತ್ತಾ ಹೋದಂತೆ ಕಥನವನ್ನು ಓದಿದ ಸುಖ ಸಿಗುತ್ತದೆ. ಕೃತಿಯಲ್ಲಿ ಲಾಲಿತ್ಯ ಟೀಕೆ, ತಮಾಷೆ, ಆನೇಕ ರೀತಿಯ ವೈಯಕ್ತಿಕ ವಿವರ ಇದೆ. ಜೊತೆಗೆ ಅವೆಲ್ಲವನ್ನು ಮೀರಿದ ಧ್ವನಿ ಕೂಡಾ ಇದೆ. ಅಪ್ಪನನ್ನು ಜೀನಿಯಸ್ ಆಗಿ, ಅವರಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಕೃತಿಯಲ್ಲಿ ಮಕ್ಕಳು ವರ್ಣಿಸಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ “ಕಾರಂತರ ಸುಳಿಯಲ್ಲಿ ಪುಸ್ತಕವನ್ನು ಓದುವಾಗ ನಿಲ್ಲಿಸಬೇಕು ಅನ್ನಿಸುವುದಿಲ್ಲ. ಕಾರಂತರು ಸಮಾಜದ ಪ್ರತಿಬಿಂಬ ಎಂಬ ಭಾವನೆ ಕೃತಿ ಓದುವುದರಿಂದ ವ್ಯಕ್ತವಾಗುತ್ತದೆ. ಕೃತಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇತಿಮಿತಿಯೊಳಗಡೆ ಬರೆದಿದ್ದಾರೆ. ಮೂಲ ಕೃತಿಯ ಅನುವಾದವನ್ನು ಚೆನ್ನಾಗಿ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಓದಿದ ಅದ್ಭುತ ಪುಸ್ತಕ, ಇದರಲ್ಲಿ ದೊಡ್ಡ ಸಂಸ್ಕೃತಿ ಇದೆ. ತಮ್ಮ ಕುಟುಂಬದ ಬದುಕನ್ನು ಲೋಕಕ್ಕೆ ಸಾರಿರುವುದು ಉತ್ತಮ ಕೆಲಸ” ಎಂದು ನುಡಿದರು.
ಮಂಗಳೂರು ವಿಶ್ವವಿದ್ಯಾನಿಯದಲ್ಲಿರುವ ಕಾರಂತ ಅಧ್ಯಯನ ಪೀಠ ಕೇವಲ ಕಾರಂತರ ಹುಟ್ಟುಹಬ್ಬ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಅಲ್ಲಿ ಒಳೊಳ್ಳೆಯ ಸಂಶೋಧನೆಗಳಾಗಬೇಕು. ಈ ಪೀಠವನ್ನು ಎತ್ತರದ ಸ್ಥಾನಕ್ಕೆ ಏರಿಸಲು ನೆರವಾಗುವಂತೆ ಡಾ. ಉಲ್ಲಾಸ ಕಾರಂತರಿಗೆ ಮನವಿ ಮಾಡಿದರು. ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಎನ್.ಜಿ. ಮೋಹನ್ ಉಪಸ್ಥಿತರಿದ್ದರು. ವಿ.ವಿ. ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಗೌಡ ಸ್ವಾಗತಿಸಿದರು. ವನ್ಯಜೀವಿ ತಜ್ಞರು ಮತ್ತು ಲೇಖಕ ಡಾ. ಉಲ್ಲಾಸ್ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವರಾಮ ಕಾರಂತ ಪೀಠದ ನಿರ್ದೇಶಕ ಪ್ರೊ. ನಾಗಪ್ಪ ಗೌಡ ವಂದಿಸಿ, ಡಾ. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
