ಪೊಳಲಿ ಒಂದು ಸಾಂಸ್ಕೃತಿಕ ಅಧ್ಯಯನ – ಇದು ಮಹೇಶ್ ಪ್ರಸಾದ್ ಹೆಗ್ಡೆ ಪೊಳಲಿ ಅವರು ಮುಂಬೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಎಂ.ಎ. ಸಂಪ್ರಬಂಧ. ಅದು ಈಗ ಕೃತಿ ರೂಪದಲ್ಲಿ ಓದುಗರ ಕೈಸೇರಿದೆ. ಪೊಳಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಮುಖ ಊರುಗಳಲ್ಲಿ ಒಂದು. ಅಲ್ಲಿ ಇತಿಹಾಸ ಪ್ರಸಿದ್ಧ ರಾಜರಾಜೇಶ್ವರಿ ದೇವಾಲಯವಿದೆ. ಹೀಗಾಗಿ ಪೊಳಲಿ ಊರಿನ ಹೆಸರು ಜಗತ್ತಿನ ಸಾಂಸ್ಕೃತಿಕ ನಕಾಶೆಯಲ್ಲಿ ಸೇರಿ ಹೋಗಿದೆ. ಈ ಊರಿನ ಸಾಂಸ್ಕೃತಿಕ ಮಹತ್ವವನ್ನು ವಿಭಿನ್ನ ನೆಲೆಗಳಲ್ಲಿ ದಾಖಲಿಸಿರುವುದು ಪ್ರಸ್ತುತ ಕೃತಿಯ ಅನನ್ಯತೆ.
ಮಹೇಶ್ ಹೆಗ್ಡೆ ಅವರು ವೃತ್ತಿಯಲ್ಲಿ ಇಂಜಿನಿಯರ್; ಪ್ರವೃತ್ತಿಯಲ್ಲಿ ಕವಿ, ಲೇಖಕ, ಸಂಘಟಕ. ಕನ್ನಡ ತುಳು ಸಾಹಿತ್ಯ ಸಂಸ್ಕೃತಿಗಳ ಬಗೆಗೆ ವಿಶೇಷವಾದ ಆಸ್ಥೆ ಅಭಿಮಾನವನ್ನು ಇಟ್ಟುಕೊಂಡಿರುವ ಅವರು ದೂರದ ಪುಣೆಯಲ್ಲಿ ನೆಲೆಸಿದರೂ ನಿರಂತರವಾಗಿ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿರುವುದು ಇನ್ನೊಂದು ವಿಶೇಷ.
ಒಂದು ಊರಿಗೆ ಮಹತ್ವ ಬರುವುದು ಅಲ್ಲಿರುವ ಸಂಘ ಸಂಸ್ಥೆಗಳಿಂದ, ವ್ಯಕ್ತಿಗಳಿಂದ ಹಾಗೂ ಸ್ಮಾರಕಗಳಿಂದ. ದೇವಾಲಯಗಳ ನಿರ್ಮಾಣ ಕರ್ನಾಟಕ ಸಂಸ್ಕೃತಿಯ ಪ್ರಧಾನ ಲಕ್ಷಣಗಳಲ್ಲಿ ಒಂದು. ಮುಂಚಿನಿಂದಲೂ ದೇವಾಲಯಗಳು, ಮಠಮಾನ್ಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರಲಿಲ್ಲ ಎಂಬುದು ವಿಶೇಷ. ಅವು ಸಾಂಸ್ಕೃತಿಕ ಕೇಂದ್ರಗಳಾಗಿ ಜನಸಾಮಾನ್ಯರನ್ನು ತಿದ್ದುವ, ವಿವೇಕಿಗಳನ್ನಾಗಿ ಮಾಡುವ ಕೆಲಸವನ್ನು ಮಾಡಿದ್ದು ಈಗ ಇತಿಹಾಸ. ಈ ಪರಂಪರೆಗೆ ಸೇರಿದ ಸಾಂಸ್ಕೃತಿಕ, ಧಾರ್ಮಿಕ ತಾಣಗಳಲ್ಲಿ ಪೊಳಲಿಯೂ ಒಂದು. ಪೊಳಲಿ ಊರಿನ ಸಂಕಥನವನ್ನು ಸಮಗ್ರವಾಗಿ ದಾಖಲಿಸುವ ಕೆಲಸವನ್ನು ಇಲ್ಲಿ ಮಹೇಶ ಹೆಗ್ಡೆ ಅವರು ಯಶಸ್ವಿಯಾಗಿ ಮಾಡಿದ್ದಾರೆ.
ಇದು ಊರೊಂದರ ಏಳುಬೀಳುಗಳ ಯಶೋಗಾಥೆಯೂ ಹೌದು. ಶಾಸನ, ಸ್ಥಳನಾಮ, ವಾಸ್ತುಶಿಲ್ಪ, ಐತಿಹ್ಯ ಮೊದಲಾದ ಕುರುಹುಗಳನ್ನು ಆಧರಿಸಿ ಪೊಳಲಿಯ ಸಾಂಸ್ಕೃತಿಕ ಚರಿತ್ರೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಪೊಳಲಿಯಲ್ಲಿ ಹುಟ್ಟಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆಗಳನ್ನು ಮಾಡಿದ ಸಾಧಕರನ್ನು ಇಲ್ಲಿ ಪರಿಚಯಿಸಿರುವುದು ಅಗತ್ಯದ ಒಳ್ಳೆಯ ಉಪಕ್ರಮ. ಇದು ಮಹೇಶ ಹೆಗ್ಡೆ ಅವರ ಹುಟ್ಟೂರಿನ ಗ್ರಾಮಾಯಣವು ಹೌದು. ಹೀಗಾಗಿ ಇಲ್ಲಿನ ವಿದ್ಯಮಾನಗಳನ್ನು ಅವರು ಅಧಿಕೃತವಾಗಿ ಚಿತ್ರಿಸುವಲ್ಲಿ ಯಶ ಕಂಡಿದ್ದಾರೆ.
ಕರಾವಳಿ ಕರ್ನಾಟಕ ದೇವಾಲಯಗಳ ತವರೂರು. ಮಂಗಳೂರು, ಕಟೀಲು, ಬಪ್ಪನಾಡು, ಧರ್ಮಸ್ಥಳ, ಉಡುಪಿ, ಬಾರ್ಕೂರು, ಸಾಲಿಗ್ರಾಮ, ಕೋಟ, ಕುಂಭಾಶಿ, ಕೋಟೇಶ್ವರ, ಹಾಲಾಡಿ, ಶಂಕರನಾರಾಯಣ, ಹಿರಿಯಡ್ಕ, ಮಂದಾರ್ತಿ, ಹೊರನಾಡು, ಕೊಲ್ಲೂರು, ಕಮಲಶಿಲೆ, ಸುಬ್ರಮಣ್ಯ ಹೀಗೆ ಇಪ್ಪತ್ತಕ್ಕೂ ಹೆಚ್ಚು ಪ್ರಸಿದ್ಧವಾದ ದೇವಾಲಯಗಳಿವೆ. ಈ ಸಾಲಿನಲ್ಲಿ ಕೇಳಿ ಬರುವ ಇನ್ನೊಂದು ಪ್ರಸಿದ್ಧ ದೇವಾಲಯ ಪೊಳಲಿಯ ರಾಜರಾಜೇಶ್ವರಿ ದೇವಾಲಯ. ಈ ದೇವಾಲಯದ ಇತಿಹಾಸ, ಪೌರಾಣಿಕ ಹಿನ್ನೆಲೆ, ಪೊಳಲಿಯ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಆರ್ಥಿಕ ವಿದ್ಯಮಾನಗಳನ್ನು, ಗ್ರಾಮ ವಿಕಾಸ, ವಿದ್ಯಮಾನಗಳನ್ನು ವಿಸ್ತಾರವಾಗಿ ಚಿತ್ರಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ.
ಪ್ರಾಚೀನ ಕರ್ನಾಟಕದ ಇತಿಹಾಸವನ್ನು ಮಗುಚಿ ಹಾಕಿದರೆ ಸಾವಿರಾರು ದೇವಾಲಯಗಳು ನಿರ್ಮಾಣವಾಗಿ ಹೆಸರು ಮಾಡಿದ್ದನ್ನು ನಾವು ಕಾಣಬಹುದು. ದೇವಾಲಯಗಳನ್ನು ಕಟ್ಟಿಸುವುದರ ಜೊತೆಗೆ ಅಲ್ಲಿನ ರಂಗಭೋಗ ಅಂಗಭೋಗಗಳಲ್ಲಿ ಅನೇಕ ಸಮುದಾಯಗಳು ತಮ್ಮನ್ನು ತೊಡಗಿಸಿಕೊಂಡದ್ದು ವಿವಿಧ ಕನ್ನಡ ಶಾಸನಗಳಿಂದ ತಿಳಿದು ಬರುತ್ತದೆ. ಅನೇಕ ದೇವಾಲಯಗಳು ವಿದ್ಯಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದ್ದನ್ನು ಸಹ ನಾವು ನೋಡಬಹುದು. “ದೇವಾಲಯಗಳು ಜನಜೀವನದಲ್ಲಿ ನಿತ್ಯ ಸಂಗಾತಿಗಳಾಗಿ ಅವರನ್ನು ತಿದ್ದುವ ಶಕ್ತಿಗಳಾಗಿದ್ದವು. ದೇವಾಲಯ ನಿರ್ಮಾಣ ಉದಾತ್ತವಾದ ಸಂಸ್ಕೃತಿಯ ಸಾಧನೆಗೆ ಹಿನ್ನೆಲೆಯಾಗಿತ್ತು. ಜೀವನದಲ್ಲಿ ಒಂದಾದರೂ ಗುಡಿಯನ್ನು ಕಟ್ಟಿಸಬೇಕೆಂಬುದು, ಇಲ್ಲವೇ ಕಟ್ಟಿಸಿದ ಗುಡಿಗಳಿಗೆ ದಾನವನ್ನು ಕೊಡಬೇಕೆಂಬುದು ಆಗಿನವರ ಧಾರ್ಮಿಕ ಭಾವನೆಯಾಗಿತ್ತು. ಈ ಧರ್ಮ ಸಮನ್ವಯ ಭಾವನೆ ಜನರಲ್ಲಿ ಬೆಳೆಯಲು ದೇವಾಲಯಗಳು ಕಾರಣವಾಗಿದೆ. ಊರೂರಿಗೂ ದೇವಾಲಯಗಳಿದ್ದವು ಮತ್ತು ಅವು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು’ ಎಂಬುದಾಗಿ ಎಚ್. ತಿಪ್ಪೇರುದ್ರಸ್ವಾಮಿ ಅವರು ಹೇಳಿದ್ದಾರೆ. (ನೋಡಿ, ಕರ್ನಾಟಕ ಸಂಸ್ಕೃತಿ ಸಮೀಕ್ಷೆ, 1989 ಪುಟ 270-71).
ಬನವಾಸಿಯ ಮಧುಕೇಶ್ವರ ದೇವಾಲಯ, ತಲಕಾಡಿನ ಗಂಗರ ದೇವಾಲಯಗಳು, ಬಾದಾಮಿ ಚಾಲುಕ್ಯರು ಕಟ್ಟಿಸಿದ ಬಾದಾಮಿ ಐಹೊಳೆ ಪಟ್ಟದಕಲ್ಲು ಮೊದಲಾದ ದೇವಾಲಯಗಳು, ಹೊಯ್ಸಳರ ಕಾಲದ ಬೇಲೂರು, ಹಳೇಬೀಡು, ಸೋಮನಾಥಪುರದ ರಚನೆಗಳು, ಹಂಪಿಯ ಕಲಾ ವೈಭವ, ಶ್ರವಣ ಬೆಳಗೊಳದ ಗೊಮ್ಮಟ ಮೂರ್ತಿ, ಬಿಜಾಪುರದ ಗೋಳಗುಮ್ಮಟ ಹೀಗೆ ಹಲೆವೆಡೆ ತಲೆಯೆತ್ತಿದ ವಾಸ್ತುಶಿಲ್ಪ, ಶಿಲ್ಪಕಲೆಯಿಂದ ಕರ್ನಾಟಕ ಕಲೆಗಳ ಬೀಡಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಇವತ್ತು ಕರ್ನಾಟಕದ ಹೊರಗಿರುವ ಎಲ್ಲೋರದ ಗುಹಾಲಯಗಳು, ಎಲಿಫೆಂಟಾ ಗುಹಾಲಯಗಳು ರಾಷ್ಟ್ರಕೂಟರ ಕಾಲದ ಪ್ರಸಿದ್ಧ ಕಲಾಕೃತಿಗಳಾಗಿವೆ. ಹರಪ್ಪ, ಮೊಹೆಂಜೋದಾರೊದ ಸಂಸ್ಕೃತಿ ಚಿತ್ರಕಲೆಗಳು ಕರ್ನಾಟಕ ಸಂಸ್ಕೃತಿಯೊಂದಿಗೆ ತಳುಕುಹಾಕಿಕೊಂಡಿದೆ ಎಂಬುದಾಗಿ ಸಂಶೋಧಕ ಫಾದರ್ ಹೆರಾಸ್ ಅವರು ಹೇಳಿದ್ದಾರೆ. ಕರ್ನಾಟಕದ ಧಾರ್ಮಿಕ ಪರಂಪರೆ ಬಹಳ ಉಜ್ವಲವಾದದ್ದು. ಮತತ್ರಯಗಳ ಆಚಾರ್ಯರ ಪುಣ್ಯಭೂಮಿ ಕರ್ನಾಟಕ ಎಂಬುದು ವಿಶೇಷ. ಇದೇ ಪರಂಪರೆಗೆ ಸೇರಿದ ಪೊಳಲಿಯ ಸಮಗ್ರ ಚಿತ್ರಣ ಇಲ್ಲಿ ನಮಗೆ ಕಾಣಸಿಗುತ್ತದೆ.
ಕುಗ್ರಾಮ ಒಂದು ದೇವಾಲಯದ ಮೂಲಕ ನಾಡಿನಾದ್ಯಂತ ಹೆಸರು ಮಾಡಿದ್ದು, ಅದು ಕಾಲಕಾಲಕ್ಕೆ ಕಂಡ ವಿಕಾಸ ಅಭಿವೃದ್ಧಿ ಬೆಳವಣಿಗೆ, ಪೊಳಲಿಯ ಸ್ಥಳ ಪುರಾಣ, ಇತಿಹಾಸ, ಪೊಳಲಿಯ ಹಿರಿಮೆಯನ್ನು ಹೆಚ್ಚಿಸಿದ ಸಾಹಿತಿಗಳು ಸಾಧಕರು, ಆ ಊರಿನ ವರ್ತಮಾನದ ಸ್ಥಿತಿಗತಿಗಳನ್ನು, ಒಂದು ಊರಿನ ವಾಸ್ತವ ದರ್ಶನವನ್ನು ಯಾವುದೇ ಉತ್ಪೇಕ್ಷೆ ವೈಭವೀಕರಣವಿಲ್ಲದೆ ಸರಳವಾಗಿ ಸುಂದರವಾಗಿ ಮಾಡಿಕೊಡುವಲ್ಲಿ ಈ ಕೃತಿ ಸಫಲವಾಗಿದೆ. ಕ್ಷೇತ್ರಕಾರ್ಯ ಅಧ್ಯಯನದ ಮುಖಾಂತರವಾಗಿ ಪೊಳಲಿಯ ವೈಶಿಷ್ಟ್ಯವನ್ನು ಬಹಳ ಶ್ರಮ ವಹಿಸಿ ಕಟ್ಟಿಕೊಟ್ಟಿರುವುದು ಮೆಚ್ಚತಕ್ಕ ಅಂಶ. ಈ ಕೃತಿಗಾಗಿ ಮಹೇಶ್ ಹೆಗಡೆ ಪೊಳಲಿ ಅವರಿಗೆ ಹಾರ್ದಿಕ ಅಭಿನಂದನೆಗಳು.
ಪೊಳಲಿ ಇತಿಹಾಸ ಸಂಸ್ಕೃತಿ ಪರಂಪರೆ
ಮಹೇಶ್ ಪ್ರಸಾದ್ ಹೆಗ್ಡೆ ಪೊಳಲಿ
ಶ್ರೀರಾಮ ಪ್ರಕಾಶನ
ಮಂಡ್ಯ, ಸಂಪರ್ಕ 9448930173

ಪುಸ್ತಕ ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು.
ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ. ಮುಂಬೈ -400 098
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

ಲೇಖಕ : ಮಹೇಶ್ ಪ್ರಸಾದ್ ಹೆಗ್ಡೆ ಪೊಳಲಿ
