ಕೋಟೇಶ್ವರ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಶ್ರೀ ಮಹತೋಭಾರ ಕೋಟಿಲಿಂಗೇಶ್ವರ ದೇಗುಲದ ಸಹಕಾರದಲ್ಲಿ ದಿನಾಂಕ 28 ಜೂನ್ 2026ರಂದು ಕೋಟೇಶ್ವರದಲ್ಲಿ ಹಿರಿಯ ಕಲಾವಿದರಾದ ವಿದ್ವಾನ್ ಗಣಪತಿ ಭಟ್, ಜಬ್ಬಾರ್ ಸಮೋ ಹಾಗೂ ವಾಸುದೇವ ರಂಗ ಭಟ್‌ರವರನ್ನು ಸಮ್ಮಾನಿಸಲಾಯಿತು. ‘ಅರ್ಥಾಂಕುರ’ ತಿಂಗಳ ಸರಣಿ ಕಾರ್ಯಕ್ರಮ 3 ಹಾಗೂ ಯಕ್ಷಲೋಕದ ಮಾಸದ ಬಣ್ಣ 100ರ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಜುನಾಥ ಸಕ್ಕಟ್ಟು ಮಾತನಾಡಿ “ಬಣ್ಣದ ವೇಷವನ್ನು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಪ್ರಚಾರ ಮಾಡಿದವರು ಲಕ್ಷ್ಮೀನಾರಾಯಣಯ್ಯ ಸಕ್ಕಟ್ಟು. ಬಡಗಿನಲ್ಲಿ ತೀರಾ ವಿರಳವೆನಿಸುವ ಸಾಂಪ್ರದಾಯಿಕ ಬಣ್ಣದ ವೇಷ ಉತ್ಕೃಷ್ಣ ಸ್ಥಾನಕ್ಕೆ ಕೊಂಡೊಯ್ದವರು ಸಕ್ಕಟ್ಟು. ಬಡಗು ತಿಟ್ಟಿನ ಬಣ್ಣಗಾರಿಕೆಯ ಪ್ರತಿನಿಧಿಯಾಗಿ ಯಕ್ಷಗಾನವನ್ನು ಮೆರೆಸಿದ ಸಕ್ಕಟ್ಟು ಇವರ ನೆನಪಿನಲ್ಲಿ ಯಕ್ಷಲೋಕದ ಮಾಸದ ಬಣ್ಣ 100 ಕಾರ್ಯಕ್ರಮಕ್ಕೆ ಸರ್ವರ ಮೆಚ್ಚುಗೆಗೆ ಪಾತ್ರವಾದದ್ದು ಸಂತಸ ನೀಡಿದೆ” ಎಂದು ಹೇಳಿದರು.
“ಅರ್ಥಾಂಕುರ ಕಾರ್ಯಕ್ರಮದ ಮೂಲಕ ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧ ಕಾರ್ಯಕ್ರಮದಡಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಸದ ಬಣ್ಣ 100. ಬಣ್ಣದ ವೇಷದ ಮೂಲಕ ಇತಿಹಾಸ ಸೃಷ್ಠಿಸಿದವರು ಲಕ್ಷ್ಮೀನಾರಾಯಣಯ್ಯ. ಅವರ ಕಾರ್ಯಕ್ರಮಕ್ಕೆ ಸ್ಪಂದಿಸಬೇಕಾದುದು ಕಲಾವಿದರೆಲ್ಲರ ಕರ್ತವ್ಯ” ಎಂದು ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಅಭಿಪ್ರಾಯಪಟ್ಟರು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಕೂಡ್ಲಿ ನಾಗರಾಜ್ ರಾವ್ ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ಶ್ರೀರಾಮ ಪಟ್ಟಾಭಿಷೇಕ’ ರಂಗ ಪ್ರಸ್ತುತಿಗೊಂಡಿತು.
