ಬೆಂಗಳೂರು : ಕನ್ನಡ ಚಿತ್ರರಂಗದ ದಿಗ್ಗಜ ನಟ ಅಭಿನಯ ಸಾರ್ವಭೌಮ ಡಾ. ರಾಜಕುಮಾರ್ ಇವರು ಎಲ್ಲರ ಮನದಲ್ಲೂ ಸದಾ ಹಸಿರು ನೆನಪು. ಸಾಂಸ್ಕೃತಿಕ ಲೋಕಕ್ಕೆ ಈ ಬಂಗಾರದ ಮನುಷ್ಯನ ಕೊಡುಗೆ ಅನನ್ಯ. ಅವರ ಬಹುಮುಖ ಪ್ರತಿಭೆಯ ಪ್ರಜ್ವಲತೆ, ಕಾಲಾಂತರದಲ್ಲೂ ಚಿರಸ್ಥಾಯಿಯಾಗಿ ಉಳಿದುಕೊಂಡು ಬರುವಂಥ ಅನರ್ಘ್ಯ ಭಂಡಾರ. ಇಂಥದೊಂದು ಅವರ ಚಿರಸ್ಮರಣೀಯ ನೆನಪನ್ನು ಹೃದಯಸ್ಪರ್ಶಿಯಾಗಿಸುವ ಇನಿಸಂಜೆ ‘ಬಂಗಾರದ ಮನುಷ್ಯ – ಗಾನ ಜೀವನಯಾನ’ – ಎಂಬ ಅರ್ಥಪೂರ್ಣ ಶೀರ್ಷಿಕೆಯಲ್ಲಿ ಸುಮಧುರ ಗಾನ ರಸಾಯನ ಯಶಸ್ವೀ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿ ನಡೆಯಿತು. ಬಂಗಾರದ ಮನುಷ್ಯನಿಗೆ ಗೌರವಾರ್ಪಣೆಯ ಈ ಅಪೂರ್ವ ಕಾರ್ಯಕ್ರಮದ ಪರಿಕಲ್ಪನೆ ಮತ್ತು ಸಂಘಟನೆ ಸಂಗೀತಲೋಕದ ಪ್ರಖ್ಯಾತ ಗಾಯಕಿ, ಸಂಘಟಕಿ, ಕಲಾ ಪೋಷಕಿಯಾದ ‘ಸಂಗೀತ ಸಂಭ್ರಮ’ದ ಡಾ. ಪುಸ್ತಕಂ ರಮಾ, ಸುರಾಘವಿ ಫೌಂಡೆಶನ್ ನ ರಘುನಂದನ್ ಮತ್ತು ಬಾಬು ಸ್ಕೂಲ್ ಆಫ್ ರಿದಮ್ಸ್ ನ ಅರುಣ್ ಕುಮಾರ್.

ಕಿಕ್ಕಿರಿದು ತುಂಬಿದ್ದ ಭವನದಲ್ಲಿ ಕಲಾರಸಿಕರ ಅಮೋಘ ಪ್ರತಿಕ್ರಿಯೆ- ಕಿವಿಗಡಚಿಕ್ಕುವ ಕರತಾಡನ – ಶಿಳ್ಳೆಗಳ ಮೆಚ್ಚುಗೆಯ ಅಭಿವ್ಯಕ್ತಿ ಮನದುಂಬಿಸಿತು. ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ ಇವರ ನಿರೂಪಣೆಯೊಂದಿಗೆ ಮೂಡಿಬಂದ ಗಾನ ರಸಗಂಗೆಯ ಕಾರ್ಯಕ್ರಮ ಪ್ರಖ್ಯಾತ ವಾದ್ಯಗಾರರ ಅನುಪಮ ಸಾಂಗತ್ಯದೊಂದಿಗೆ, ಹಿನ್ನಲೆಯ ಪರದೆಯ ಮೇಲೆ ಮಲ್ಟೀ ಮೀಡಿಯಾದಲ್ಲಿ ಮೂಡಿ ಬಂದ ರಾಜ್ ಕುಮಾರರ ಜನಪ್ರಿಯ ಚಿತ್ರಗಳ ಹಾಡಿನ ಸನ್ನಿವೇಶವನ್ನು ಕಂಡು ಜನ ಭಾವಭರಿತರಾಗಿ ಸಂತೋಷವನ್ನು ಅಭಿವ್ಯಕ್ತಿಸಿದರು. ರಂಗುರಂಗಿನ ಬೆಳಕಿನ ಮೋಡಿಯಲ್ಲಿ, ಕಿವಿದುಂಬಿದ ಗಾನ ಮಾಧುರ್ಯ ಎರಡೂವರೆ ಗಂಟೆಗಳ ಕಾಲ ಮೈ ಮರೆಸಿತು ಎಂದರೆ ಅತಿಶಯೋಕ್ತಿಯಲ್ಲ.


ಹೆಸರಾಂತ ಉತ್ತಮ ಗಾಯಕರಾದ ರಾಧಾಕೃಷ್ಣ ಮೋಹನ್, ಸುಪ್ರಿಯ ರಘುನಂದನ್, ಶ್ರೀಹರ್ಷ, ಲಕ್ಷ್ಮೀ ವಿಜಯ್ ಮತ್ತು ಕುಮಾರಿ ಸಾಕ್ಷಿ ಜಗದೀಶ್ ಇವರು ಉತ್ಸಾಹಭರಿತರಾಗಿ ಸೊಗಸಾಗಿ ಹಾಡಿ ಕಲಾರಸಿಕರ ಆಮೋದವನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಕುಮಾರಿ ಸಾಕ್ಷಿ ಜಗದೀಶ್ ಉದಯೋನ್ಮಖ ಗಾಯಕಿಯಾಗಿ ಭರವಸೆ ಮೂಡಿಸಿದರು. ವೇದಿಕೆಯ ಹಿಂಭಾಗದಲ್ಲಿ ತೇಲಿ ಬರುತ್ತಿದ್ದ ರಾಜಕುಮಾರರ ಜನಪ್ರಿಯ ಗೀತೆಗಳ ಸನ್ನಿವೇಶವನ್ನು ನೋಡಿ ಮನಸಾರೆ ಆನಂದಿಸಿದ ಜನ, ಅದಕ್ಕೆ ಜೀವ ನೀಡಿದ ಹಾಡಿನ ಮೋಡಿಗೆ ಬೆರಗುಗೊಂಡರು. ತಮ್ಮ ಕಂಠ ಸಿರಿಯಿಂದ ಮೈಮರೆತು ಹಾಡಿದ ಗಾಯಕರೊಂದಿಗೆ ಪ್ರೇಕ್ಷಕರು ಸ್ಪಂದಿಸುತ್ತಾ ಮನರಂಜನೆ ಪಡೆದದ್ದು ಒಂದು ಸ್ಮರಣೀಯ ಸನ್ನಿವೇಶವೇ ಸರಿ.


ಮೂಲ ಗಾಯನದ ಧ್ವನಿ ಮತ್ತು ಸುನಾದ ವಾದ್ಯ ಮೇಳ, ಎಲ್ಲರನ್ನೂ ಆ ರಸಗಂಧರ್ವ ಲೋಕಕ್ಕೆ ಯಾನ ಮಾಡಿಸಿದ್ದು ನಿಜ. ದಂತಕತೆಯಾದ ರಾಜಕುಮಾರರೆಂದರೆ ಜನಕ್ಕೆ ಎಷ್ಟು ಅಭಿಮಾನ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದ ವೇದಿಕೆಯ ಮೇಲೆ ಗಾಯಕರು ಲವಲವಿಕೆಯಿಂದ ಓಡಾಡುತ್ತ, ನಾಟಕೀಯವಾಗಿ ಅಭಿನಯಿಸುತ್ತ ಜನರನ್ನು ಆಕರ್ಷಿಸಿದರು. ತುಂಬಿದ ಸಭಾಗೃಹ ಮಂತ್ರಮುಗ್ಧವಾಗಿ ಕುಳಿತು ರಸಾನಂದ ಪಡೆಯುವಂತೆ ಮಾಡಿದ ಆಯೋಜಕ ಸಂಸ್ಥೆಗಳ ಕಾರ್ಯವೈಖರಿ ಸ್ತುತ್ಯಾರ್ಹ. ಬೆಂಗಳೂರು ನಗರದಲ್ಲಿ ಆಗಿಂದ್ದಾಗ್ಗೆ ಇಂಥ ಸ್ಮರಣೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಇತರರಿಗೆ ಮಾದರಿಯಾದ ಈ ವಿಶಿಷ್ಟ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


ಬಹು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶ್ವತ್ಥನಾರಾಯಣ್ ಇವರು ವಹಿಸಿದ್ದರು. ಸಮಾರಂಭದಲ್ಲಿ ಖ್ಯಾತ ನಟರುಗಳಾದ ಡಾ. ಮುಖ್ಯಮಂತ್ರಿ ಚಂದ್ರು, ಡಾ. ಗಿರಿಜಾ ಲೋಕೇಶ್ ಮತ್ತು ಡಾ. ಟಿ.ಎಸ್. ನಾಗಾಭರಣ ನಿರ್ದೇಶಕರು ನುಡಿ ನಮನಗಳನ್ನು ಸಲ್ಲಿಸಿದರು.

*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
