ಮುಂಬೈ : ಮುಂಬೈಯ ಮೈಸೂರು ಅಸೋಸಿಯೇಷನ್ ಸಂಸ್ಥೆಯ ಶತಮಾನೋತ್ಸವದ ಸಂದರ್ಭದಲ್ಲಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾರ್ಥಿಗಳು ರಚಿಸಿದ ಕನ್ನಡ ಶೋಧ ಸಂಪ್ರಬಂಧಗಳ ಪ್ರದರ್ಶನದ ಉದ್ಘಾಟನೆ ಮತ್ತು ಸಂವಾದ ಕಾರ್ಯಕ್ರಮವು ದಿನಾಂಕ 19 ಏಪ್ರಿಲ್ 2026ರಂದು ನಡೆಯಿತು.
ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಸಂವಾದದಲ್ಲಿ ಪಾಲ್ಗೊಂಡ ಮುಂಬೈ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರವೀಂದ್ರ ಕುಲಕರ್ಣಿ ಇವರು ಕನ್ನಡ ವಿಭಾಗದ ವಿದ್ಯಾರ್ಥಿಗಳ ಸಾಧನೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ “ಕನ್ನಡ ವಿಭಾಗದ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಧನೆಯನ್ನು ನೋಡಿ ನಾನು ಸಂತೋಷಪಟ್ಟಿದ್ದೇನೆ. ವಿಭಾಗದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳ ಹಿನ್ನೆಲೆಯಿಂದ ಬಂದು ಕನ್ನಡದಲ್ಲಿ ಅಧ್ಯಯನವನ್ನು ಮಾಡುತ್ತಿರುವುದು, ಅಂತರ್‌ಶಿಸ್ತೀಯ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಇದೊಂದು ವಿನೂತನ ಉಪಕ್ರಮವೇ ಆಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕನ್ನಡ ಕೃತಿಗಳನ್ನು ರಚನೆ ಮಾಡಿರುವುದು ಹೆಮ್ಮೆಯ ಸಂಗತಿ” ಎಂದು ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ವಿಭಾಗಕ್ಕೆ ಬೇಕಾದ ಎಲ್ಲ ಬಗೆಯ ಸಹಾಯವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ವಿಭಾಗದ ವಿದ್ಯಾರ್ಥಿಗಳು ಕಳೆದ ನಾಲ್ಕೈದು ವರ್ಷಗಳಲ್ಲಿ 20ಕ್ಕೂ ಹೆಚ್ಚು ಶೋಧ ಸಂಪ್ರಬಂಧಗಳನ್ನು ರಚಿಸಿ ನಾಡಿನಲ್ಲೆಡೆ ಹೆಸರು ಮಾಡಿದ್ದಾರೆ. ಈ ಹಿಂದೆ ಎಂ.ಫಿಲ್, ಪಿಎಚ್.ಡಿ ವಿದ್ಯಾರ್ಥಿಗಳು ಕೃತಿಗಳನ್ನು ರಚನೆ ಮಾಡುತ್ತಿದ್ದರು; ಇದೀಗ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಸಂಪ್ರಬಂಧಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಕಟಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಕನ್ನಡ ವಿಭಾಗ ಸಾಂಸ್ಕೃತಿಕ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಹತ್ತಾರು ಪ್ರಮುಖ ಸಂಘ ಸಂಸ್ಥೆಗಳೊಂದಿಗೆ ಕನ್ನಡ ವಿಭಾಗ ಕೈಜೋಡಿಸಿ ಸಾಹಿತ್ಯಕ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಇದು ಮುಂಬೈ ಕನ್ನಡಿಗರ ಸಹಾಯದಿಂದ ಸಾಧ್ಯವಾಗಿದೆ” ಎಂದು ಅವರು ವಿಭಾಗದ ಸಾಧನೆಯನ್ನು ಕುಲಪತಿಗಳಿಗೆ ಪರಿಚಯಿಸಿದರು.

ಮೈಸೂರು ಅಸೋಸಿಯೇಷನ್‌ನ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ ಅವರು ಕನ್ನಡ ವಿಭಾಗದ ವಿವಿಧ ನೆಲೆಗಳ ಸಾಧನೆಗಳ ಕುರಿತು ಹಾಗೂ ಮೈಸೂರು ಅಸೋಸಿಯೇಷನ್ ಸಂಸ್ಥೆಯು ಕನ್ನಡ ವಿಭಾಗದ ಜೊತೆಗೆ ನಡೆಸಿಕೊಂಡು ಬಂದಿರುವ ದತ್ತಿ ಉಪನ್ಯಾಸ ಮಾಲಿಕೆ ಮತ್ತು ಇನ್ನಿತರ ವಿವಿಧ ಕಾರ್ಯಕ್ರಮಗಳ ಕುರಿತು ಕುಲಪತಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂವಾದ ಕಾರ್ಯಕ್ರಮದಲ್ಲಿ ಮುಂಬೈ ಐಐಟಿಯ ಉಪನಿರ್ದೇಶಕ ಪ್ರೊ .ರವೀಂದ್ರ ಗುಡಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪೂರ್ಣಿಮಾ ಸುಧಾಕರ್ ಶೆಟ್ಟಿ, ಮೈಸೂರು ಅಸೋಸಿಯೇಷನ್ ಅಧ್ಯಕ್ಷರಾದ ಕೆ. ಕಮಲಾ, ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮರಾವ್, ಪ್ರಾಚಾರ್ಯ ಮಾಧವ ರಾಜವಾಡೆ, ಡಾ.ಊರ್ವಶಿ ಪಂಡ್ಯಾ, ಡಾ. ರಾಧಾ ಅಯ್ಯರ್, ಕನ್ನಡ ವಿಭಾಗದ ಕಲಾಭಾಗ್ವತ್, ವಿದ್ಯಾ ರಾಮಕೃಷ್ಣ, ಗೀತಾ ಮಂಜುನಾಥ್, ಕುಮುದಾ ಆಳ್ವ, ಮೈಸೂರು ಅಸೋಸಿಯೇಷನ್‌ನ ನಾರಾಯಣ ನವಿಲೇಕರ್ ಮೊದಲಾದವರು ಪಾಲ್ಗೊಂಡು ವರ್ತಮಾನದ ಕನ್ನಡ ಭಾಷೆ, ಸಾಹಿತ್ಯ- ಸಂಸ್ಕೃತಿ, ಶಿಕ್ಷಣ ಮೊದಲಾದ ವಿಚಾರಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಪ್ರೊ. ರವೀಂದ್ರ ಕುಲಕರ್ಣಿ ಇವರು ಗೀತಾ ಮಂಜುನಾಥ್ ರಚಿಸಿದ ‘ಕಲಾಸೌರಭ ಸರೋಜಾ ಶ್ರೀನಾಥ್’, ದಿನಕರ ನಂದಿ ಚಂದನ್ ಇವರ ‘ಆದರ್ಶ ಶಿಕ್ಷಕಿ ಮೇರಿ ಪಿಂಟೋ’, ಅನಿತಾ ಪಿ. ತಾಕೋಡೆ ಇವರ ‘ಸವ್ಯಸಾಚಿ ಸಾಹಿತಿ ಡಾ. ಬಿ .ಜನಾರ್ಧನ್ ಭಟ್’ ಮತ್ತು ‘ಮೋಹನ ತರಂಗ’, ಸುರೇಖಾ ಹರಿಪ್ರಸಾದ್ ಶೆಟ್ಟಿ ರಚಿಸಿದ ‘ಮುಂಬೈ ತುಳು ಕನ್ನಡಿಗರ ರಾಯಭಾರಿ- ಎಂ.ಡಿ. ಶೆಟ್ಟಿ’ ಮತ್ತು ‘ಮುಂಬೈಯಲ್ಲಿ ಕನ್ನಡದ ಕಂಪು ಸೂಸುವ ಗೋರೆಗಾಂವ್ ಕರ್ನಾಟಕ ಸಂಘ’, ಜ್ಯೋತಿ ಶೆಟ್ಟಿ ಇವರ ‘ಎಕ್ಕಾರಿನ ಯಕ್ಷಮಣಿ ದಯಾಮಣಿ’, ಉದಯ ಶೆಟ್ಟಿ ಇವರ ‘ಕೋಡು ಭೋಜ ಶೆಟ್ಟಿ -ಬದುಕು ಬರಹ’, ಕಲಾ ಭಾಗ್ವತ್ ಇವರ ‘ವೈದ್ಯಭೂಷಣ ಡಾ. ಬಿ.ಎಂ. ಹೆಗಡೆ’ ಮತ್ತು ‘ಜೀವ ಸ್ವರ- ಜಯಂತ ಕಾಯ್ಕಿಣಿ ಪ್ರಬಂಧ ಲೋಕ’, ಸೋಮಶೇಖರ ಮಸಳಿ ಇವರ ‘ಅರವಿನ ಅಂಗಳದಲ್ಲಿ’, ಪಾರ್ವತಿ ಪೂಜಾರಿ ಇವರ ‘ಕೋಲ್ಯಾರು ರಾಜು ಶೆಟ್ಟಿ ಅವರ ಬದುಕು ಬರಹ’, ಶಶಿಕಲಾ ಹೆಗಡೆ ಇವರ ‘ಸೂರಿ ಪರ್ವ’, ಸವಿತಾ ಅರುಣ್ ಶೆಟ್ಟಿ ಇವರ ‘ಬೆಳಕಿಂಡಿ – ಮಿತ್ರಾ ವೆಂಕಟ್ರಾಜ್ ಸಾಹಿತ್ಯ ಅವಲೋಕನ’, ಪ್ರತಿಭಾ ರಾವ್ ಇವರ ‘ಜೀವನ್ಮುಖಿ- ಸುಧಾ ಮೂರ್ತಿ ಅವರ ಸಾಹಿತ್ಯ ಸಂಪದ’ ಮತ್ತು ‘ಶತಮಾನದ ಯಾನ’, ವಿದ್ಯಾ ರಾಮಕೃಷ್ಣ ರಚಿಸಿದ ‘ಪ್ರಬಂಧಕಾರರಾಗಿ ಕಾರಂತರು’, ಪ್ರಭಾಕರ ಎಸ್. ದೇವಾಡಿಗ ಇವರ ‘ಲಲಿತರಂಗ ಗುಣ ನಾಯಕ’, ಮಹೇಶ್ ಹೆಗಡೆ ಇವರ ‘ಪೊಳಲಿ ಸಂಸ್ಕೃತಿ ಪರಂಪರೆ ಇತಿಹಾಸ’ ಮೊದಲಾದ ಕೃತಿಗಳನ್ನು ಅನಾವರಣಗೊಳಿಸಿ ಹರ್ಷ ವ್ಯಕ್ತಪಡಿಸಿದರಲ್ಲದೆ ಶುಭ ಹಾರೈಸಿದರು. ಡಾ.ಪೂರ್ಣಿಮಾ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ, ಕಲಾವಿದ ಜಯ ಸಾಲಿಯಾನ್ ಇವರು ರಚಿಸಿದ ಚಿತ್ರವನ್ನು ಕುಲಪತಿಗಳಿಗೆ ನೀಡಿ ಗೌರವಿಸಲಾಯಿತು.

