ಹಾಸನ : ಹಾಸನದ ಬಸವಕೇಂದ್ರ ಮತ್ತು ಬಸವ ಸಮಿತಿ ವತಿಯಿಂದ ನಗರದ ಯುನೈಟೆಡ್ ಅಕಾಡೆಮಿಯ ಜ್ಞಾನ ಮಂಟಪದಲ್ಲಿ ದಿನಾಂಕ 12 ಸೆಪ್ಟೆಂಬರ್ 2026ರಂದು ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಚಿಂತನ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಇವರು ಉಪನ್ಯಾಸ ನೀಡಿ “ಬಸವಣ್ಣನವರು ಕೇವಲ ಭಕ್ತಿಯನ್ನಷ್ಟೇ ಬೋಧಿಸಿದವರಲ್ಲ; ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹೊಸ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದ ಮಹಾನ್ ಸಮಾಜ ಸುಧಾರಕರು. ಅವರ ವಚನಗಳಲ್ಲಿ ಅವರು ಬಯಸಿದ ಸಮಾಜದ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಬಸವಣ್ಣನವರು ಕಟ್ಟಬಯಸಿದ ಸಮಾಜವು ಜಾತಿ-ಭೇದವಿಲ್ಲದ, ಮೇಲು-ಕೀಳುಗಳಿಲ್ಲದ, ಸ್ತ್ರೀ-ಪುರುಷ ಸಮಾನತೆಯ, ಕಾಯಕಕ್ಕೆ ಗೌರವ ನೀಡುವ, ದಾಸೋಹವನ್ನು ಪಾಲಿಸುವ, ಸತ್ಯ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವಾಗಿತ್ತು. ಅಲ್ಲಿ ರೈತ, ಕಮ್ಮಾರ, ಕುಂಬಾರ, ಚಮ್ಮಾರ, ನೇಕಾರ, ಮಹಿಳೆ, ಜ್ಞಾನಿ—ಎಲ್ಲರೂ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಇದರಿಂದ ವಿಚಾರ ಸ್ವಾತಂತ್ರ್ಯು ಮತ್ತು ಸಮಾನತೆಯ ಸಮಾಜದ ಕಲ್ಪನೆ ಮೂಡಿತು. ವಿವಿಧ ಕಾಯಕ ಮಾಡುವ ಜನರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ನೀಡಿದರು. ಅನುಭವ ಮಂಟಪವು ಜಾತಿ, ವರ್ಗ ಮತ್ತು ಲಿಂಗದ ಭೇದಗಳನ್ನು ಮೀರಿ ಚರ್ಚೆ ನಡೆಸುವ ವೇದಿಕೆಯಾಯಿತು. ಅವರ ಚಿಂತನೆಯ ಸಾರವನ್ನು ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ಎಂಬ ಎರಡು ಪ್ರಮುಖ ತತ್ವಗಳಲ್ಲಿ ಕಾಣಬಹುದು. ಬಸವಣ್ಣನವರ ವಚನಗಳು 12ನೇ ಶತಮಾನದಲ್ಲಷ್ಟೇ ಅಲ್ಲದೆ, ಇಂದಿನ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಮಾಜ ನಿರ್ಮಾಣಕ್ಕೂ ದಾರಿದೀಪವಾಗಿವೆ. ಬಸವಣ್ಣನವರು ಜನರನ್ನು ಹುಟ್ಟಿನ ಆಧಾರದ ಮೇಲೆ ಮೇಲು-ಕೀಳು ಎಂದು ವಿಭಜಿಸುವುದನ್ನು ವಿರೋಧಿಸಿದರು. ಮನುಷ್ಯನ ಗುಣ ಮತ್ತು ಕಾಯಕವೇ ಅವನ ಮೌಲ್ಯವನ್ನು ನಿರ್ಧರಿಸಬೇಕು ಎಂದು ಸಾರಿದರು. ಬಸವಣ್ಣನವರ ದೃಷ್ಟಿಯಲ್ಲಿ ಭಕ್ತಿ ಎಂದರೆ ಕೇವಲ ಪೂಜೆ ಮಾಡುವುದು ಅಲ್ಲ. ನಿಜವಾದ ಭಕ್ತಿ ಒಳ್ಳೆಯ ನಡತೆ ಮತ್ತು ಸತ್ಯ ಜೀವನದಲ್ಲಿ ವ್ಯಕ್ತವಾಗಬೇಕು. ಬಸವಣ್ಣನವರ ಕಾಲದಲ್ಲಿ ಮಹಿಳೆಯರಿಗೆ ಅನೇಕ ಸಾಮಾಜಿಕ ನಿರ್ಬಂಧಗಳಿದ್ದವು. ಆದರೆ ಬಸವಣ್ಣನವರು ಮಹಿಳೆಯರಿಗೂ ಪುರುಷರಷ್ಟೇ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸ್ಥಾನಮಾನ ನೀಡಿದರು” ಎಂದು ಅಭಿಪ್ರಾಯಪಟ್ಟರು.
ಸೀಗೆನಾಡಿನ ಮಳೆಮಲ್ಲೇಶ್ವರ ಬೆಟ್ಟದ ಶ್ರೀ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ “ಬಸವಣ್ಣನವರು ಹೊರಗಿನ ಆಡಂಬರಕ್ಕಿಂತ ಒಳಗಿನ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದರು. ಮನುಷ್ಯನ ದೇಹ ಮತ್ತು ಮನಸ್ಸು ಪವಿತ್ರವಾಗಿದ್ದರೆ ಅದೇ ನಿಜವಾದ ದೇವಾಲಯ ಎಂಬುದು ಇದರ ಅರ್ಥ. ಆದ್ದರಿಂದ ಆಡಂಬರದ ಪೂಜೆಯ ಬದಲು ಸತ್ಯ, ಪ್ರಾಮಾಣಿಕತೆ ಮತ್ತು ಸತ್ಕಾಯಕಕ್ಕೆ ಅವರು ಮಹತ್ವ ನೀಡಿದರು. ಬಸವಣ್ಣನವರು ಮನುಷ್ಯನು ಕಳ್ಳತನ, ಹಿಂಸೆ, ಸುಳ್ಳು, ದ್ವೇಷ, ಅಹಂಕಾರ ಮತ್ತು ಪರನಿಂದೆಗಳಿಂದ ದೂರವಿರಬೇಕು ಎಂದು ಬೋಧಿಸುತ್ತಾರೆ. ಇಂತಹ ನಡತೆಯುಳ್ಳ ಜನರಿಂದ ಕೂಡಿದ ನೈತಿಕ ಮತ್ತು ಶಾಂತಿಯುತ ಸಮಾಜವನ್ನು ಅವರು ಬಯಸಿದರು. ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ ಮುಂತಾದ ಶರಣೆಯರ ಉಪಸ್ಥಿತಿ ಇದಕ್ಕೆ ಸಾಕ್ಷಿಯಾಗಿದೆ. ತನು ಸೇವೆಗೆ, ಮನ ಶುದ್ಧ ಭಾವನೆಗೆ, ಧನ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಸ್ವಾರ್ಥಕ್ಕಾಗಿ ಬದುಕದೆ, ಕಾಯಕದ ಮೂಲಕ ಸಂಪಾದಿಸಿ, ದಾಸೋಹದ ಮೂಲಕ ಸಮಾಜಕ್ಕೆ ಅರ್ಪಿಸುವುದೇ ಸಾರ್ಥಕ ಜೀವನ. ಬಸವಣ್ಣನವರ ದೃಷ್ಟಿಯಲ್ಲಿ ದಾಸೋಹವು ದಾನಕ್ಕಿಂತ ವಿಶಾಲವಾದುದು; ಅದು ಸೇವೆ, ಸಮಾನತೆ, ಹಂಚಿಕೆ ಮತ್ತು ಮಾನವೀಯತೆಯ ಜೀವನತತ್ತ್ವವಾಗಿದೆ. ಬಸವಣ್ಣನವರು ದೇವಾಲಯ ಕಟ್ಟಲು ಸಾಧ್ಯವಿಲ್ಲದ ಸಾಮಾನ್ಯ ಮನುಷ್ಯನಿಗೂ ತನ್ನ ದೇಹವೇ ದೇವಾಲಯ ಎಂದು ಹೇಳುತ್ತಾರೆ. ದೇವರನ್ನು ಕಾಣಲು ಹಣ, ಸಂಪತ್ತು ಅಥವಾ ದೊಡ್ಡ ದೇವಾಲಯದ ಅವಶ್ಯಕತೆ ಇಲ್ಲ; ಶುದ್ಧ ಮನಸ್ಸು ಮತ್ತು ಸತ್ಕಾರ್ಯವೇ ಮುಖ್ಯ ಎಂಬ ಸಂದೇಶ ಸಾರಿದರು” ಎಂದರು.

ಹಾಸನದ ಬಸವಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ತಾನು ದುಡಿದು ಗಳಿಸಿದುದರಲ್ಲಿ ಅಗತ್ಯಕ್ಕಿಂತ ಹೆಚ್ಚಿನದನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳಬೇಕು. ಸ್ವಾರ್ಥವಿಲ್ಲದೆ ಇತರರ ಹಿತಕ್ಕಾಗಿ ಬದುಕುವುದು ಬಸವಣ್ಣನವರ ದಾಸೋಹದ ತತ್ವ. ಬಸವಣ್ಣನವರ ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದು ಬದುಕಬೇಕು. ಯಾವುದೇ ಕೆಲಸ ಮೇಲು-ಕೀಳು ಎಂಬ ಭಾವನೆ ಇರಬಾರದು. ‘ಕಾಯಕವೇ ಕೈಲಾಸ’ ಈ ಮಾತಿನ ಮೂಲಕ ಬಸವಣ್ಣನವರು ದುಡಿಮೆಯೇ ದೇವರ ಆರಾಧನೆ ಎಂಬ ಸಂದೇಶ ನೀಡಿದರು. ಕೆಲಸ ಮಾಡುವವನನ್ನು ಕೀಳಾಗಿ ಕಾಣದೆ, ಅವನ ಕಾಯಕಕ್ಕೆ ಗೌರವ ನೀಡಬೇಕು ಎಂಬುದು ಅವರ ಆಶಯವಾಗಿತ್ತು” ಎಂದರು.
ಕಾರ್ಯಕ್ರಮದಲ್ಲಿ ಯುನೈಟೆಡ್ ಅಕಾಡೆಮಿಯ ಆರ್.ಇ. ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕರಾದ ಶಿವನಂಜೇಗೌಡ, ರತ್ನಸೋಮಶೇಖರ್, ದೇವಿರಮ್ಮ, ಸವರ್ಣ ರಾಮಚಂದ್ರ ಅವರುಗಳು ವಚನ ಗಾಯನ ನಡೆಸಿಕೊಟ್ಟರು. ವೇದಿಕೆಯಲ್ಲಿ ವೃತ್ತಿಯಿಂದ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಶಿಕ್ಷಣ ಇಲಾಖೆಯ ಪಾಲಾಕ್ಷಮ್ಮ ಮೋಹನ್ ರಾಜ್, ದೇವಿರಮ್ಮ ಹರೀಶ್, ಬಸವರಾಜ್, ವಿಜಯ ಶಿವರುದ್ರಪ್ಪ, ಪುಟ್ಟಪ್ಪ, ಚಂದ್ರಮೌಳಿ, ಕೆ.ಎಂ. ಪ್ರಕಾಶ್, ಮಲ್ನಾಡ್ ಕಾಲೇಜಿನ ಅಧೀಕ್ಷಕ ಕಟ್ಟಾಯ ಶಿವಕುಮಾರ್, ನಿವೃತ್ತ ಪ್ರಾಂಶುಪಾಲೆ ಜಯಶೀಲ, ಅಕಾಶವಾಣಿ ಮುಖ್ಯಸ್ಥ ವಿಜಯ ಅಂಗಡಿ, ಮಹಾನಗರ ಪಾಲಿಕೆ ಅಭಿಯಂತರರಾದ ಮಂಜುನಾಥ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ಪ್ರೊ. ತಿಮ್ಮೇಶ್, ಡಾ. ಗುರುರಾಜ್ ಯಲಗಚ್ಚಿನವರ್, ಅಖಿಲ ಭಾರತೀಯ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷೆ ಮಮತಾ ಪಾಟೀಲ, ಭಾರತ್ ಸ್ಕೌಟ್ಸ್ ಗೈಡ್ಸ್ ಹಾಸನ ಜಿಲ್ಲಾ ಉಪಾಧ್ಯಕ್ಷೆ ಎಂ.ಬಿ. ಗಿರಿಜಾಂಬಿಕ, ಲೆಕ್ಕಪರಿಶೋಧಕ ಎಸ್.ಎನ್. ಜಗದೀಶಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
