ತೌಲನಿಕ ಅಧ್ಯಯನದ ಮೂಲಕ ಇಂದು ನಮಗೆ ಜಾಗತಿಕ ಸಾಹಿತ್ಯದ ಪರಿಚಯವಾಗಿದೆ. ವಿಶ್ವಸಾಹಿತ್ಯಕ್ಕೆ ಕನ್ನಡದ ಕೊಡುಗೆ ‘ವಚನ ಸಾಹಿತ್ಯ’ ಎಂಬ ನಮ್ಮ ಪೂರ್ವಸೂರಿಗಳ ಮಾತಿನಲ್ಲಿ ಅತ್ಯುಕ್ತಿಯಿಲ್ಲ. ನಮ್ಮ ನಾಡಿನ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಅವರದೇ ಆದ ಭಾಷೆಯಲ್ಲಿ ತಿಳಿ ಹೇಳಿ ಅವರ ಮನೋವಿಕಾಸಕ್ಕೆ ಶ್ರಮಿಸಿದ ಶಿವಶರಣರ ವಿಚಾರಧಾರೆ ಇಂದಿಗೂ ಎಂದಿಗೂ ಪ್ರಸ್ತುತವೇ ಆಗಿದೆ. ಅಲ್ಲಿನ ವಿಚಾರ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಎದ್ದು ಕಾಣುವುದು ಗಾಢವಾದ ಜೀವನ ನಿಷ್ಠೆ, ಅದಮ್ಯ ಜೀವನೋತ್ಸಾಹ, ಸಮುದಾಯದ ಹಿತ ಮತ್ತು ಸಮಷ್ಟಿ ಪ್ರಜ್ಞೆ. ದಯವೇ ಧರ್ಮದ ಮೂಲವಯ್ಯಾ, ದಯಬೇಕು ಸಕಲ ಪ್ರಾಣಿಗಳಲ್ಲಿ, ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವ ನಮ್ಮ ಮನೆಯ ಮಗನೆಂದೆನಿಸಯ್ಯಾ, ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂಬಾದಿಯಾಗಿರುವ ಗಾಢವಾದ ಅಮೃತಾನುಭವವನ್ನು ಇತರ ಜಾಗತಿಕ ಸಾಹಿತ್ಯದಲ್ಲೂ ಅಷ್ಟಾಗಿ ನಾನು ಕಂಡಿಲ್ಲ. ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ ಮೊದಲಾದ ಭಾರತೀಯ ಭಾಷೆಗಳಲ್ಲೂ ವಚನ ಸಾಹಿತ್ಯದಷ್ಟು ಗಟ್ಟಿಯಾದ ರೂಪ ನಮಗೆ ಕಾಣಲು ಸಿಗದು.
ಹೊಸ ಸಮಾಜವನ್ನು ಕಟ್ಟಬಯಸಿದ ಶರಣರ ಅನುಭಾವ ಸಾಹಿತ್ಯ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಅಪಾರವಾದ ಲೋಕಾನುಭವವನ್ನು ಹೊಂದಿದ್ದ ಶಿವಶರಣರು ನುಡಿದದ್ದೇ ಸಾಹಿತ್ಯವಾಗಿ ರೂಪುಗೊಂಡು ಜನಮನವನ್ನು ತಟ್ಟಿ ವೈಚಾರಿಕ ಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯ ಮನುಕುಲದ ಆಸ್ತಿ. ವಚನವೆಂದರೆ ಮಾತು. ಆದರೆ ಅದು ಸಾಮಾನ್ಯವಾದ ಮಾತಲ್ಲ; ಪ್ರಮಾಣದ ಮಾತು. ಅಂತರಂಗದ ಧ್ವನಿ, ನಿಜದನಿ. ಅದು ಬರೇ ಬುದ್ಧಿಯ ಕೂಸಲ್ಲ, ಹೃದಯದ ಬಿಸಿಯುಸಿರು. ಅದು ಪ್ರಚಾರದ ಸರಕಲ್ಲ. ನಾವು ಅದನ್ನು ಆತ್ಮಸಾತ್ ಮಾಡಿಕೊಳ್ಳಬೇಕು. ವಚನ ಸಾಹಿತ್ಯದಲ್ಲಿ ಬಾಳ್ವೆಗೆ ಬೆಳಕಾಗಬಲ್ಲ ಜೀವನ ದರ್ಶನವಿದೆ. ಪರಿಪೂರ್ಣ ಬದುಕಿಗೆ ಬೇಕಾದ ತತ್ವದರ್ಶನವಿದೆ. ಅನುಭಾವದ ಗಾಢವಾದ ಚಿಂತನೆಯಿದೆ. ಸಾರ್ವಕಾಲಿಕ ಮಾನವ ಧರ್ಮದ ಚಿಂತನೆ ಅಲ್ಲಿದೆ.
ವಚನ ವಾಙ್ಮಯ ನಮ್ಮ ನಾಡಿನ ತವನಿಧಿ. ಈ ಸಾಹಿತ್ಯವನ್ನು ಕುರಿತಂತೆ ನಡೆದಿರುವಷ್ಟು ಚಿಂತನ ಮಂಥನ, ವಿಚಾರ ವಿಮರ್ಶೆ, ಚರ್ಚೆಗಳು ಬೇರೆ ಯಾವ ಸಾಹಿತ್ಯ ಪ್ರಕಾರಗಳ ಕುರಿತು ನಡೆದಂತೆ ಕಾಣುತ್ತಿಲ್ಲ ಎಂದರೆ ಅತಿಶಯೋಕ್ತಿಯಾಗದು. ಕರಿಯನ್ನು ಕನ್ನಡಿಯೊಳಡಗಿಸಿದಂತೆ ನಾಡಿನ 68 ಮಂದಿ ವಿದ್ವಾಂಸರು ವಚನ ಸಾಹಿತ್ಯವನ್ನು ಕುರಿತು ನೀಡಿರುವ ಅನಿಸಿಕೆ, ವಿಶ್ಲೇಷಣೆಗಳು,ಖಚಿತ ಅಭಿಪ್ರಾಯಗಳು ಸಾಂಪ್ರತ ಕೃತಿಯಲ್ಲಿ ಸಾಂದ್ರವಾಗಿ ದಾಖಲಾಗಿರುವುದು ವಿಶೇಷ. ಹನ್ನೆರಡನೆಯ ಶತಮಾನದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅತ್ಯಪೂರ್ವ ಘಟನೆ. ವಚನಗಳ ಸೃಷ್ಟಿ ಒಂದು ಅನನ್ಯ ವಿಶಿಷ್ಟ ಪ್ರಯೋಗ. ಸಮಾಜದ ಎಲ್ಲ ವರ್ಗಗಳ, ಎಲ್ಲ ವರ್ಣಗಳ ಜನ ಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ವಚನಗಳು ಇವತ್ತು ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿರುವುದು ಅಸಾಧಾರಣ ಸಂಗತಿ.
ಈ ವಚನ ಸಾಹಿತ್ಯದ ಮಹತ್ವ ಹಾಗೂ ಗುಣಾತಿಶಯಗಳನ್ನು ಖಚಿತವಾಗಿ ಗುರುತಿಸುವ, ಸ್ಪಷ್ಟವಾಗಿ ನಿರೂಪಿಸುವ ದೃಷ್ಟಿಯಿಂದ ಅದರ ಬಗೆಗೆ ನಾಡಿನ ವಿದ್ವಾಂಸರ ಅಭಿಪ್ರಾಯಗಳು ಒಂದು ಕಡೆ ದೊರಕುವಂತೆ ಮಾಡಿರುವುದು ಈ ಕೃತಿಯ ಹೆಚ್ಚುಗಾರಿಕೆ. ಇದು ನಾಡಿನ ಹಿರಿಯ ವಿದ್ವಾಂಸರಾದ ಗೊರುಚ ಅವರ ವಿಶಿಷ್ಟ ಪರಿಕಲ್ಪನೆ. ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ, ವಿಮರ್ಶೆ, ವ್ಯಾಖ್ಯಾನ, ಚಿಂತನ, ಚರ್ಚೆ, ವಿಶ್ಲೇಷಣೆಗಳ ಮೂಲಕ ವಚನ ಸಾಹಿತ್ಯದ ವಸ್ತು, ಭಾಷೆ, ಶೈಲಿ, ಬಂಧ, ಆಶಯ ಇತ್ಯಾದಿಗಳ ಕುರಿತು ಅನ್ಯಾನ್ಯ ನೆಲೆಗಳಲ್ಲಿ ಸೂತ್ರರೂಪದ ಚಿಂತನೆ ವಿಶ್ಲೇಷಣೆ ಇಲ್ಲಿ ನೆಲೆ ಪಡೆದಿರುವುದು ಅವಲೋಕನೀಯವಾಗಿದೆ.
ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ. ವಚನಗಳ ಸೃಷ್ಟಿ ಒಂದು ಅನನ್ಯ, ಭಿನ್ನ ವಿಭಿನ್ನ ಪ್ರಯೋಗ. ಸಮಾಜದ ಎಲ್ಲ ವರ್ಗಗಳ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ವಚನಗಳು ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿರುವುದು ಚಾರಿತ್ರಿಕ ಸತ್ಯ. ‘ವಚನ’ ಶಬ್ದಕ್ಕೆ ಇಲ್ಲಿ ಗದ್ಯ ಸಾಹಿತ್ಯ ಪ್ರಕಾರವೆಂದು ಅರ್ಥವಲ್ಲ; ಪ್ರತಿಜ್ಞೆ, ಆತ್ಮಸಾಕ್ಷಿಯ ಮಾತು ಎಂದು ಅರ್ಥ. ನಡೆ ಹೇಗೇ ಇರಲಿ, ನುಡಿಮಾತ್ರ ಕಲಾತ್ಮಕವಾಗಿದ್ದುದು ‘ರಚನೆ’ಯಾದರೆ, ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿ ‘ವಚನ’ವೆನಿಸುತ್ತದೆ. ವಚನಗಳು ಆಚಾರರ ಸಾಹಿತ್ಯವಲ್ಲ; ಅನುಭಾವಿಗಳ ಸಾಹಿತ್ಯ, ಮೂಲತಃ ವಚನ ವಾಙ್ಮಯನಿಧಿ ಜನರಿಂದ, ಜನರಿಗಾಗಿ ಹುಟ್ಟಿ, ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ ‘ವಚನ’ ಏಕಕಾಲಕ್ಕೆ ಆತ್ಮಕಲ್ಯಾಣವನ್ನು, ಸಮಾಜ ಕಲ್ಯಾಣವನ್ನು ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ ಗಳಿಸಿದೆ ಎಂಬುದಾಗಿ ನಾಡಿನ ಹಿರಿಯ ಸಂಶೋಧಕರಾದ ಡಾ. ಎಂ.ಎಂ. ಕಲಬುರ್ಗಿ ವಚನ ಸಾಹಿತ್ಯದ ಔನ್ನತ್ಯವನ್ನು ಗುರುತಿಸಿದ್ದಾರೆ.
“ವಚನ ಚಳುವಳಿ ಹಚ್ಚಿಟ್ಟ ಹಣತೆಗಳು ಇವತ್ತಿನ ಕತ್ತಲೆಯನ್ನು ಕರಗಿಸಬಲ್ಲವು” ಎಂಬುದು ಕವಿ ಕಣವಿ ಅವರ ನಿಲುವು. ಮನೆ ಮಾತುಗಳೇ ಲೋಕೋಕ್ತಿಗಳಾದ ಸಾಹಿತ್ಯ ಎಂಬುದಾಗಿ ಅ.ರಾ. ಮಿತ್ರ ಅವರು ಅಭಿಪ್ರಾಯಪಟ್ಟಿದ್ದಾರೆ. ವಚನ ಸಾಹಿತ್ಯದ ಬಹಳಷ್ಟು ಅಂಶಗಳು ಸಂವಿಧಾನದಲ್ಲಿವೆ (ಬಿ.ವಿ. ಶಿರೂರ), ವಚನ ಸಾಹಿತ್ಯದ ಪ್ರಗತಿಪರ ವಿಚಾರಗಳು ಲೋಕೋತ್ತರವೆನಿಸಿವೆ (ವೀರಣ್ಣ ರಾಜೂರ), ಸಾಹಿತ್ಯ ಮತ್ತು ಸಮೂಹ ಪ್ರಜ್ಞೆಯ ಪ್ರತಿನಿಧಿಯಾಗಿಸಿದ ಹಿರಿಮೆ (ಶಾಂತ ಇಮ್ರಾಪುರ) – ಹೀಗೆ ನಾಡಿನ ಸಾರಸ್ವತ ಲೋಕ ವಚನ ಸಾಹಿತ್ಯದ ಆಳ ಅಗಲ ವೈಭವಗಳನ್ನು ಕುರಿತು ಕರಾರುವಕ್ಕಾಗಿ ಅರುಹಿದ, ಅರ್ಥೈಸಿದ ಸಾರಭೂತವಾದ ವಿಚಾರಧಾರೆ ಇಲ್ಲಿ ಮಡುಗಟ್ಟಿದೆ.
ಉದಾಹರಣೆಗೆ:
1) ವಚನಗಳು ವೇದ ಉಪನಿಷತ್ತಿನ ಸಾರವನ್ನು ಹೀರಿ ಉತ್ತುಂಗಕ್ಕೆ ಎತ್ತರಿಸಿವೆ. ಅನ್ಯತ್ರ ಕಾಣುವ ತಾರತಮ್ಯವನ್ನು ಮೀರಿ ವಚನಕಾರರು ಬೆಳೆದಿದ್ದಾರೆ. ಆದ್ದರಿಂದಲೇ ಕನ್ನಡ ಸಾಹಿತ್ಯದಲ್ಲಿ ವಚನಕಾರ್ತಿಯರಿಗೂ, ವಚನಕಾರರಿಗೂ, ವಚನಗಳಿಗೂ ಒಂದು ವಿಶಿಷ್ಟ ಸ್ಥಾನ ದೊರೆತಿದೆ. ಇಂದಿಗೂ ಗಂಡು-ಹೆಣ್ಣಿನ ವಿಚಾರದಲ್ಲಿ ಮೇಲು-ಕೀಳು ಎಂದು ನರಳುತ್ತಿರುವ ಜಗತ್ತಿಗೆ ಆ ಅರ್ಥಹೀನ ತಾರತಮ್ಯವನ್ನು ಹೋಗಲಾಗಿಸುವಲ್ಲಿ ವಚನಗಳು ದಾರಿಗಂಬವಾಗಿವೆ, ಅಲ್ಲಿನ ಮಾತುಗಳು ದೀಪಸ್ತಂಭವಾಗಿವೆ. (ಕಮಲಾ ಹಂಪನಾ )
2) ಮುಕ್ತತೆ ವಚನದ ಮುಖ್ಯ ಲಕ್ಷಣ. ಅದು ಶರಣರ ಮುಕ್ತ ಬದುಕು, ಮುಕ್ತ ವಿಚಾರ, ಮುಕ್ತ ಧರ್ಮ, ಮುಕ್ತ ಸಮಾಜ, ಮುಕ್ತ ಭಾಷೆ, ಮುಕ್ತ ಸಾಹಿತ್ಯ, ಮುಕ್ತ ಧೋರಣೆಯನ್ನು ಸೂಚಿಸುತ್ತದೆ. ಮುಕ್ತತೆ ಅಂದರೆ ಸ್ವಚ್ಛಂದತೆ ಅಲ್ಲ. ಸಾಮಾಜಿಕ ಹೊಣೆಗಾರಿಕೆಯನ್ನು ಇಟ್ಟುಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೆರೆಯುವುದು. ‘ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ಮಾತಿನಲ್ಲಿ ಬಸವಣ್ಣನವರು ಅದನ್ನು ಧ್ವನಿಸಿದ್ದಾರೆ. (ವೀರಣ್ಣ ರಾಜೂರ)
3) ಇಂಗ್ಲೀಷ್ ಕವಿ ಟಿ.ಎಸ್. ಎಲಿಯಟ್ “ಕವಿಯೊಬ್ಬನು ಬದಲಾದ ಸಂವೇದನೆಯನ್ನು ಗುರುತಿಸದೆ, ತನಗಾಗುತ್ತಿರುವ ಅನುಭವವು ಹಳೆಯ ತಲೆಮಾರಿನ ಸಿದ್ದಮಾದರಿಗಳಿಂದ ಭಿನ್ನ ಎಂಬುದನ್ನು ಬಗೆಯದೆ ಬರೆಯುವವನು ಆತನ ಕಾಲದ ಎರಡನೆಯ ದರ್ಜೆಯ ಕವಿ ಎನಿಸಿಕೊಳ್ಳುತ್ತಾನೆ” ಎಂದಿದ್ದಾನೆ. ಅಂದರೆ ಕವಿ ಸಮಕಾಲೀನ ಪ್ರಜ್ಞೆಯನ್ನು ರೂಢಿಸಿಕೊಂಡು ಅದಕ್ಕನುಗುಣವಾದ ಭಾಷೆಯನ್ನು ನಿರ್ಮಿಸಬೇಕಾಗಿದೆ ಎನ್ನುವುದೇ ಆಗಿದೆ. ಈ ತಿಳಿವಳಿಕೆಯನ್ನು ಬಹಳ ಹಿಂದೆಯೇ ಅರಿತಿದ್ದ ವಚನಕಾರರು ತಮ್ಮ ಮಾತಿಗೆ ಹೊಸ ಬಗೆಯ ಭಾಷೆಯನ್ನು ಪಳಗಿಸಿಕೊಂಡರು. ಅದಕ್ಕಾಗಿ ಭಾಷೆಯ ವ್ಯಾಕರಣ ಪ್ರಕ್ರಿಯೆಯನ್ನು ಮೀರಿ ಮುನ್ನಡೆದರು. ಭಾಷೆಯ ಬಗೆಗಿನ ಮಡಿವಂತಿಕೆಯನ್ನು ತೊರೆಯುವ ವೀರವ್ರತಿಗಳಾದರು. ಪದಶಯ್ಕೆಯನ್ನು ತಮ್ಮ ಭಾವಕ್ಕನುಸರಿಸಿ ಹಿಗ್ಗಿಸಿದರು, ಕುಗ್ಗಿಸಿದರು. ಅನೇಕ ನುಡಿನಾಣ್ಯಗಳು ಶರಣರ ಭಾವಕೋಶದಲ್ಲಿ ಹೊಸರೂಪ ತಾಳಿ, ಭಾವಾನುಸಾರಿಯಾಗಿ ಹ್ರಸ್ವವಾಗಿಯೋ, ಮುರುಟಿಯೋ, ಆದರೆ ಭಾವಶ್ರೀಮಂತವಾಗಿ ವಚನದೊಳಗೆ ಹೆಣಿಗೆಗೊಂಡವು ಅಂತಹ ಪದಗಳಿಗೆ ಕೆಲವು ದೃಷ್ಟಾಂತಗಳು: ಹೋಯಿತ್ತೆ, ಬಹ, ಆಯಿತ್ತೆ, ನಿಮ್ಮುವ, ಎನ್ನುವ, ಹತ್ತೆ, ಎಂಬರು, ಕೊಂದಹೆ, ಕೊಂಬ, ಹೋಹನ, ಹೋದಹೆ, ತಾರೌ? ನೀಡೌ, ಆಯಿತ್ತು, ಬಾಹುದಕ್ಕೆ, ಇಪ್ಪುದು, ಒಳರೆ, ಮಾಬೆನೆ, ತಪ್ಪುಕ, ಪೊಲುಗ, ಕ್ರೀ ಇತ್ಯಾದಿ. (ಪ್ರೊ. ಎ.ವಿ. ನಾವಡ)
4) ‘ವಚನಸಾಹಿತ್ಯ’ ಎಂದಾಕ್ಷಣ ಬಸವಣ್ಣ ಅಲ್ಲಮಪ್ರಭುದೇವರು ನನ್ನ ಮುಂದೆ ಬರುತ್ತಾರೆ. ಇದು ವೀರಶೈವ ಸಾಹಿತ್ಯವೆಂದೋ ಲಿಂಗಾಯತ ಸಾಹಿತ್ಯವೆಂದೋ ಕರೆಯಲು ನನಗೆ ಸಾಧ್ಯವಾಗುತ್ತಿಲ್ಲ. ನಮ್ಮ ನಾಡಿನ ಪೂರ್ವದ ವಿದ್ವಾಂಸರು ಆ ಹಿನ್ನೆಲೆಯಲ್ಲಿಯೇ ವಚನಗಳನ್ನು ನೋಡಿದರು. ಮತ್ತೂ ಕೆಲವರು ಸಾಹಿತ್ಯಾತ್ಮಕ ದೃಷ್ಟಿಯಿಂದ ಮಾತ್ರ ಕಂಡರು. ಇಬ್ಬಗೆಯ ದೃಷ್ಟಿಯಿಂದ ಹೊರತಾಗಿ ಸಾಂಸ್ಕೃತಿಕ – ವೈಜ್ಞಾನಿಕ ದೃಷ್ಟಿಯಿಂದ ಪರಿಗಣಿಸಿದವರೂ ಇದ್ದಾರೆ. ಇಷ್ಟಿದ್ದರೂ ‘ವಚನಸಾಹಿತ್ಯ’ ಎಂಬ ಪರಿಪ್ರೇಕ್ಷ್ಯದಲ್ಲಿ ನೋಡುವುದು ಉಚಿತವೆಂದು ನನಗೆ ತೋರುತ್ತದೆ. ವಚನಗಳ ಅಂತರಂಗದ ಕದವನ್ನು ತೆರೆದು ನೋಡಿದಾಗ, ಅವು ಮುಖ್ಯವಾಗಿ ಸಾಧಕನ ನೆಲೆಗಳನ್ನು ಕುರಿತಿವೆ. ‘ಸಾಧಕ’ ಎಂದಾಗ ಇತ್ತ ವ್ಯಾವಹಾರಿಕ ಜಗತ್ತನ್ನೂ, ಅತ್ತ ಪಾರಮಾರ್ಥಿಕ ಜಗತ್ತನ್ನೂ ಸೂಕ್ಷ್ಮವಾಗಿ ಪರಿಭಾವಿಸುತ್ತಿರುವ ವ್ಯಕ್ತಿ. ಈ ವ್ಯಕ್ತಿಯು ತನ್ನತನವನ್ನು ನೀಗಿಕೊಂಡಾಗ ಸಾಧಕನಾಗಿ ನೆಲೆ ನಿಲ್ಲುತ್ತಾನೆ. ವ್ಯಾವಹಾರಿಕ ಜಗತ್ತನ್ನು ಸ್ಥೂಲವೆಂದು ತಿಳಿದು ಭಾವಿಸಿ, ಸೂಕ್ಷ್ಮತತ್ತ್ವದತ್ತ ಅವನು ಸಾಗುತ್ತಾನೆ. (ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್)
ವಚನಕಾರರು ಪರ್ಯಾಯ ಸಂಸ್ಕೃತಿಯ ಹರಿಕಾರರು. ಅದು ಕೇವಲ ಸಾಹಿತ್ಯವಲ್ಲ. ಅಲ್ಲಿ ಮಾನವತ್ವದ ಚಿಂತನೆ ಒಡೆದು ಕಾಣುತ್ತದೆ. ಶೋಷಣೆ, ಅನ್ಯಾಯ, ಅಸಮಾನತೆಗೆ ಕಾರಣವಾದ ಎಲ್ಲವನ್ನು ವಚನಕಾರರು ಮುಲಾಜಿಲ್ಲದೆ ಖಂಡಿಸಿದರು. ಈ ವಚನ ಸಾಹಿತ್ಯಕ್ಕೆ ಯಾವುದೇ ಚೌಕಟ್ಟಿನ ಹಂಗಿಲ್ಲ. ಅವು ಸರ್ವತಂತ್ರ ಸ್ವತಂತ್ರ ರಚನೆಗಳು. ಅಲ್ಲಿ ಕಟುಸತ್ಯಗಳಿಂದ ಕೂಡಿದ ಸಮಾಜ ಕೇಂದ್ರಿತ ವಿಮರ್ಶೆ ಇದೆ. ಜತೆಗೆ ಆತ್ಮಕೇಂದ್ರಿತ ಅನುಸಂಧಾನ, ಚಿಂತನೆಯೂ ಕಾಣಸಿಗುತ್ತದೆ. ಹೀಗಾಗಿ “ವಚನಗಳ ಓದು ನನಗಾಗಿಯೇ ಬರೆದದ್ದು ಎನ್ನುವ ಆಪ್ತ ಭಾವವನ್ನು ಹುಟ್ಟಿಸುತ್ತದೆ. ಈ ವಚನಗಳು ನನಗಾಗಿಯೇ ಬರೆದದ್ದು ಎನ್ನುವ ಸಖ್ಯಭಾವವನ್ನು ಅವು ಸೃಷ್ಟಿಸುತ್ತವೆ. ಇದು ಕೇವಲ ವಚನಗಳ ಕಾವ್ಯಗುಣ, ಆಪ್ತವಾಕ್‌ನ ಗುಣದಿಂದ ಬಂದದ್ದೆ? ಇದಕ್ಕೆ ನಮಗೆ ಹೊಳೆಯುವ ಉತ್ತರವೆಂದರೆ, ವಚನಗಳ ಅಸಾಧಾರಣವೆನಿಸುವ ಶಕ್ತಿ ಮತ್ತು ಸೌಂದರ್ಯದ ಮೂಲವೆಂದರೆ, ಅನುಭವ ಮತ್ತು ಅಭಿವ್ಯಕ್ತಿಗಳ ಅಖಂಡತೆ. ಅನುಭವ ಮತ್ತು ಅಭಿವ್ಯಕ್ತಿಗಳ ಅಖಂಡತೆಯಲ್ಲಿ ಮಾತ್ರ ಸಾಧ್ಯವಾಗುವ ‘ಮಾಂತ್ರಿಕತೆ’ ಇಲ್ಲಿ ಘಟಿಸುತ್ತದೆ. ಇತರ ಯಾವ ಪರಿಕರಗಳ, ಕಷ್ಟಪಟ್ಟು ಓದಬೇಕಾದ್ದರ ಅಗತ್ಯವೇ ಇಲ್ಲದೆ ನಾವು ವಚನಗಳನ್ನು, ವಚನಗಳು ನಮ್ಮನ್ನು ಆಲಂಗಿಸಿಕೊಳ್ಳುವುದು ಸಾಧ್ಯವಾಗುತ್ತದೆ. ವಚನಗಳು ಮೂಲತಃ ‘ಆತ್ಮಗೀತೆ’ಗಳು. ಇವುಗಳನ್ನು ಓದಬೇಕಾದ್ದೇ ಸ್ವಗತಗಳೆಂದು. ಏಕೆಂದರೆ, ಸ್ವಗತಗಳಿಗೆ ಮಾತ್ರ ಸಾಧ್ಯವಾಗುವ ಆತ್ಮನಿರೀಕ್ಷಣೆ, ವಸ್ತುನಿಷ್ಠತೆ, ತನ್ನ ಕಟ್ಟೆಕಾಂತದಲ್ಲಿ ಮಾತ್ರ ಸಾಧ್ಯವಾಗುವ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗಳು ವಚನಗಳಲ್ಲಿ ಢಾಳಾಗಿ ಕಾಣಿಸುತ್ತವೆ” ಎಂಬಲ್ಲಿ ವಚನಗಳ ಬಹುರೂಪಿತನವನ್ನು ಆಶಾದೇವಿ ಅವರು ತೆರೆದಿಟ್ಟಿದ್ದಾರೆ. ಇದು ಓದುಗ ಕೇಂದ್ರಿತ ನೆಲೆಗೂ ಚಾಚಿಕೊಂಡಿದೆ. ಬದುಕು ಸಹ್ಯವಾಗಬೇಕು ಎನ್ನುವ ಉದಾತ್ತ ಆಶಯವನ್ನು ಮಾನವ್ಯ ಧೋರಣೆಯನ್ನು ಒಳಗೊಂಡಿರುವ ವಚನ ವಾಙ್ಮಯ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಅಷ್ಟೇ ಪ್ರಸ್ತುತವಾಗಿದೆ. ಅದರ ಅತಿಶಯತೆಯನ್ನು ಮತ್ತೆ ಜನಮಾನಸಕ್ಕೆ ಮನದಟ್ಟು ಮಾಡಿಕೊಡುವ ಪ್ರಯತ್ನ ಈ ಕೃತಿಯಲ್ಲಿ ಯಶಸ್ವಿಯಾಗಿ ನೆರವೇರಿದೆ. ಇದೊಂದು ಅಗತ್ಯದ ಉಪಕ್ರಮವೂ ಹೌದು. ಇದನ್ನು ಪ್ರಕಟಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥೆಯ ಶ್ರಮ ಸಾರ್ಥಕವಾಗಿದೆ.
ವಚನ ಸಾಹಿತ್ಯ ನನ್ನ ದೃಷ್ಟಿಯಲ್ಲಿ
(ಸಂ) ಗೊ.ರು. ಚನ್ನಬಸಪ್ಪ,
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು.
ಬೆಲೆ: ರೂ 200/-

ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ. ಮುಂಬೈ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.
