28 ಮಾರ್ಚ್ 2023, ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕವು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ‘ಮನದನಿ’ – ಹೆಣ್ಣಿನ ಒಳದನಿ ಕಾರ್ಯಕ್ರಮವು ದಿನಾಂಕ 25-03-2023ರಂದು ಮಂಗಳೂರಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನ ಹ್ಯಾಟ್ ಹಿಲ್, ಲಾಲ್ ಬಾಗ್ ಇಲ್ಲಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎಸ್.ಕೆ. ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ “ಯುವವಾಹಿನಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ‘ಮನದನಿ’ – ಹೆಣ್ಣಿನ ಒಳದನಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂತೋಷವನ್ನು ತಂದಿದೆ. ಮಹಿಳೆಯರು ಎನನ್ನೂ ಬಯಸದವರು, ಗೌರವ, ಸಮಾನತೆ, ಪ್ರೀತಿ, ನಂಬಿಕೆ ಇದನ್ನು ಮಾತ್ರ ಬಯಸುತ್ತಾರೆ. ಈ ನಾಲ್ಕನ್ನು ತಮ್ಮ ಜೀವನದಲ್ಲಿ ಅರ್ಥಗರ್ಭಿತವಾಗಿ ಅಳವಡಿಸಿಕೊಂಡು ನೋವು, ನಲಿವು, ಕಷ್ಟ, ಸುಖಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಈ ಮಹಿಳಾ ದಿನಾಚರಣೆಯು ಅರ್ಥಪೂರ್ಣವಾಗಿರಬೇಕು” ಎಂದರು.
ಜಾನಪದ ವಿದ್ವಾಂಸರಾದ ಕೆ.ಕೆ. ಪೇಜಾವರ ಇವರು ಮಾತನಾಡಿ “ವಿಶ್ವ ಮಹಿಳಾ ದಿನ ಎನ್ನುವುದು ಒಂದು ದಿನದ ಆಚರಣೆಗೆ ಸೀಮಿತವಾಗಿರಬಾರದು. ಮಹಿಳೆಯ ಬಗ್ಗೆ ಅಭಿಮಾನ, ಗೌರವ ಇರಬೇಕು” ಎಂದರು. ಈ ಸಂದರ್ಭದಲ್ಲಿ ಪ್ರಸಿದ್ಧ ಲೇಖಕಿ, ಶಿಕ್ಷಕಿ, ಚಿಂತಕಿ, ಸಂಶೋಧಕಿಯಾದ ಬಿ.ಎಂ.ರೋಹಿಣಿಯವರು ಮಾಡಿದ ಸಾಹಿತ್ಯ ಸೇವೆಯನ್ನು ಗಮನಿಸಿ ಅವರನ್ನು ಗೌರವದಿಂದ ಸನ್ಮಾನಿಸಲಾಯಿತು. ಗೌರವನ್ನು ಸ್ವೀಕರಿಸಿ ಮಾತನಾಡಿದ ಅವರು “ಜಗತ್ತಿನಲ್ಲಿ ಹೆಣ್ಣು ಮತ್ತು ಗಂಡಿಗೆ ಸಮಾನವಾದ ಸ್ಥಾನವಿರಬೇಕು. ಹೆಣ್ಣಿನಲ್ಲಿರುವ ಎಲ್ಲಾ ಗುಣಗಳೂ ಗಂಡಿನಲ್ಲೂ ಇವೆ. ಆದ್ದರಿಂದ ಯಾರೂ ಮೇಲಲ್ಲ ಯಾರೂ ಕೀಳಲ್ಲ. ಪುರುಷರಷ್ಟೇ ಹೆಣ್ಣಿಗೂ ಗೌರವಿದೆ. ಈ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ಹೆಣ್ಣಿಗೆ ಮಾನ್ಯತೆ ಸಿಗಬೇಕು” ಎಂದರು.
ವೇದಿಕೆಯಲ್ಲಿ ರಾಜೇಶ್ ಬಿ. ಅಧ್ಯಕ್ಷರು, ಯುವವಾಹಿನಿ, ಜಾನಪದ ವಿದ್ವಾಂಸರು ಕೆ.ಕೆ. ಪೇಜಾವರ, ಲೇಖಕಿ ಬಿ.ಎಂ.ರೋಹಿಣಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕರಾದ ಶ್ರೀಮತಿ ವಿದ್ಯಾ ರಾಕೇಶ್, ಸಂಚಾಲಕರಾದ ಕುಶಲಾಕ್ಷಿ ಯಶವಂತ್ ಹಾಗೂ ಕಾರ್ಯದರ್ಶಿಯವರಾದ ಶ್ರೀಮತಿ ಕಸ್ತೂರಿ ಮಹೇಶ್ ಉಪಸ್ಥಿತರಿದ್ದರು.
ಯುವ ವಾಹಿನಿ ಮಂಗಳೂರು ಮಹಿಳಾ ಘಟಕ ಸದಸ್ಯೆಯರು ಮತ್ತು ಲಯನ್ಸ್ ಕ್ಲಬ್ ಮಂಗಳಾದೇವಿಯ ಸದಸ್ಯರು ಜಂಟಿಯಾಗಿ ಉದ್ಯಾನವನಕ್ಕೆ ಕಸ ವಿಲೇವಾರಿ ಮಾಡುವ ತೊಟ್ಟಿಯನ್ನು ನೀಡಿದರು. ಶ್ರೀಮತಿ ರವಿಕಲಾ, ಶ್ರೀಮತಿ ರಶ್ಮಿ ಸಿ. ಕರ್ಕೇರ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು ಮತ್ತು ಶ್ರೀಮತಿ ಕಸ್ತೂರಿ ಮಹೇಶ್ ಧನ್ಯವಾದ ನೀಡಿದರು.