ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಇದರ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 23 ಆಗುಸತು 2026ರ ಆದಿತ್ಯವಾರದಂದು ಅಪರಾಹ್ನ ಗಂಟೆ 2-30 ಗಂಟೆಗೆ ಕುಮಾರಿ ಸಮೃದ್ಧಿ ಆಳ್ವ ಇವರ ಚೊಚ್ಚಲ ಕವನ ಸಂಕಲನ ‘ಚಿಗುರಿದ ಕನಸು’ ಬಿಡುಗಡೆ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚು.ಸಾ.ಪ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಇವರು ವಹಿಸಲಿದ್ದು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಕವಿ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸವಿಹೃದಯದ ಕವಿಮಿತ್ರರು ವೇದಿಕೆ, ಪೆರ್ಲ ಇದರ ಸಂಚಾಲಕರಾದ ಸುಭಾಷ್ ಪೆರ್ಲ ಮತ್ತು ಚುಸಾಪ ಮಂಗಳೂರು ತಾಲೂಕು ಅಧ್ಯಕ್ಷರಾದ ಗೋಪಾಲಕೃಷ್ಣ ಶಾಸ್ತ್ರಿ ಇವರು ಮುಖ್ಯ ಅತಿಥಿಗಳಾಗಿ ಪಾಳ್ಗೊಳ್ಳಲಿರುವರು. ಅನಾವರಣ ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇದರ ಅಧ್ಯಕ್ಷರಾದ ಪರಿಮಳ ರಾವ್ ಕೃತಿ ಪರಿಚಯ ಮಾಡಲಿರುವರು. ಕವಯತ್ರಿ ಕುಮಾರಿ ಸಮೃದ್ಧಿ ಆಳ್ವ ಇವರ ಹೆತ್ತವರಾದ ಶ್ರೀ ಪ್ರಣಪ್ ಕುಮಾರ್ ಆಳ್ವ ಹಾಗೂ ಶ್ರೀಮತಿ ಬಿಂದ್ಯಾ ಪ್ರಣಪ್ ಆಳ್ವ ಅವರು ಉಪಸ್ಥಿತರಿರುವರು.
ಯುವ ಕವಯತ್ರಿ ಸಮೃದ್ಧಿ ಆಳ್ವ ಅವರ ಸಾಹಿತ್ಯ ಪಯಣಕ್ಕೆ ಹೊಸ ಚಿಗುರೊಡೆಸುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಕವಿಮಿತ್ರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಅಪರಾಹ್ನ ಗಂಟೆ 2-30ರಿಂದ 3-30ರ ತನಕ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಆಶ್ರಯದಲ್ಲಿ ಅಂತರ ಜಿಲ್ಲಾ ಮಟ್ಟದ ಚುಟುಕು ವಾಚನ ಗೋಷ್ಠಿ, ಮಕ್ಕಳ ಕವನ ವಾಚನ ಗೋಷ್ಠಿ, ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.

