ಪೆರಿಯ : ಬೇಕಲ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಜರುಗುತ್ತಿರುವ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ದಿನಾಂಕ 9 ಮೇ 2026ರಂದು ಆಂಧ್ರಪ್ರದೇಶದ ನೃತ್ಯ ತಂಡಗಳು ಪ್ರದರ್ಶಿಸಿದ ಕುಚಿಪುಡಿ ನೃತ್ಯವು ಕಲಾ ರಸಿಕರನ್ನು ಭಕ್ತಿ ಮತ್ತು ಆನಂದದ ಪರಾಕಾಷ್ಠೆಗೆ ಕೊಂಡೊಯ್ದವು. ಹೈದರಾಬಾದ್‌ನ ಶಂಕರಿ ನಾಟ್ಯಶಾಲೆ, ಮೆಹರ್ ಪ್ರಭಾಕರ್ ಮತ್ತು ತಂಡ ಹಾಗೂ ತಿರುಪತಿಯ ರೇಖಾ ಸತೀಶ್ ಇವರ ತಂಡಗಳು ಈ ಪವಿತ್ರ ವೇದಿಕೆಯಲ್ಲಿ ಈಗಾಗಲೇ ನೃತ್ಯ ಸಮರ್ಪಣೆ ಮಾಡಿವೆ.
ಅಮೃತವರ್ಷಿಣಿ ರಾಗದ ಲಯಕ್ಕೆ ತಕ್ಕಂತೆ ಹೆಜ್ಜೆಹಾಕಿದ ಅಮೃತವರ್ಷಿಣಿ ನೃತ್ಯ ವಿದ್ಯಾಲಯದ ಚಿಪ್ಪಿ ಪಿಳ್ಳೆ ಮತ್ತು ತಂಡದ ಪ್ರದರ್ಶನವು ಪ್ರೇಕ್ಷಕರಲ್ಲಿ ಧನ್ಯತಾ ಭಾವ ಮೂಡಿಸಿತು. ಪ್ರಕೃತಿಯೂ ಸ್ಪಂದಿಸುವಂತೆ, ನೃತ್ಯ ಪ್ರದರ್ಶನದ ವೇಳೆ ಬೀಸಿದ ಮಾರುತ ಮತ್ತು ಮಳೆಹನಿಗಳು ಕಾರ್ಯಕ್ರಮಕ್ಕೆ ದೈವಿಕ ಮೆರುಗನ್ನು ನೀಡಿದವು.
ಆಂಧ್ರಪ್ರದೇಶದ ಆರು ವರ್ಷದ ಬಾಲಕಿ ಆದ್ಯ ಲಕ್ಷ್ಮಿ ಇವರ ಕುಚಿಪುಡಿ ನೃತ್ಯವು ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು. ಈ ಬಾರಿಯ ವೈಶಾಖ ನಟನಂ ಉತ್ಸವದ ಅತ್ಯಂತ ಕಿರಿಯ ವಯಸ್ಸಿನ ನೃತ್ಯ ಕಲಾವಿದೆ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ನೃತ್ಯೋತ್ಸವದ ಹತ್ತನೇ ದಿನವಾದ ಭಾನುವಾರ ರಾತ್ರಿ 8-00 ಗಂಟೆಗೆ ಪ್ರಸಿದ್ಧ ನಟಿ ಹಾಗೂ ನೃತ್ಯ ಕಲಾವಿದೆ ರಚನಾ ನಾರಾಯಣನ್‌ಕುಟ್ಟಿ ಇವರಿಂದ ಕುಚಿಪುಡಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ವೈಶಾಖ ನಟನಂ ಸರಣಿಯಲ್ಲಿ ಇವರು ಸತತ ಮೂರನೇ ವರ್ಷ ನೃತ್ಯ ಪ್ರದರ್ಶಿಸುತ್ತಿರುವುದು ಗಮನಾರ್ಹ.
