ಕುಳಿರ್ಗಾಳಿಯ ಮುದವಾದ ಆ ತಂಪುಸಂಜೆಯಲ್ಲಿ ರಂಗದ ಮೇಲೆ ನಾಲ್ವರು ಮುದ್ದಾದ ಕನ್ಯಾಮಣಿಯರು ಒಂದೇ ಎರಕದ ಅಚ್ಚಿನಂತೆ ಮನಮೋಹಕವಾಗಿ ನರ್ತಿಸುತ್ತ ನೋಡುಗರ ಕಣ್ಣೆದುರು ರಮ್ಯಲೋಕವೊಂದನ್ನು ಅನಾವರಣಗೊಳಿಸಿ ಕಣ್ಮನ ಸೆಳೆದರು. ಅಂದು ನಾಲ್ವರು ಉದಯೋನ್ಮುಖ ನರ್ತಕಿಯರ ಪ್ರಥಮ ಪದಾರ್ಪಣೆಯ ನರ್ತನದ ಸಂಭ್ರಮದ ದಿನವಾಗಿತ್ತು. ನೃತ್ಯಗುರು ಶ್ರೀಮತಿ ವಸುಂಧರಾ ಸಂಪತ್ ಕುಮಾರ್ ಅವರ ನುರಿತ ಗರಡಿಯಲ್ಲಿ ರೂಹು ತಳೆದ ನೃತ್ಯಶಿಲ್ಪಗಳಾದ ಕುಮಾರಿಯರಾದ ಆರಾಧನ, ಅವನಿ ಎಂ. ಭಾಸ್ಕರ್, ಸೃಷ್ಟಿ ಎಸ್. ಮತ್ತು ಜಾಹ್ನವಿ ಗರಿ ಬಿಚ್ಚಿದ ನವಿಲುಗಳಂತೆ ನಾಟ್ಯಾಗಸದಲ್ಲಿ ನಲಿದ ಸಂದರ್ಭ- ಗೆಜ್ಜೆ ಪೂಜೆಯ ಅವಿಸ್ಮರಣೀಯ ಕ್ಷಣ.

ಹೆಸರಿಗೆ ‘ಗೆಜ್ಜೆ ಪೂಜೆ’ಯಾದರೂ ಕಲಾವಿದೆಯರು ರಂಗಪ್ರವೇಶಕ್ಕೆ ಅಗತ್ಯವಾದ ಪರಿಶ್ರಮದ ತಾಲೀಮು ಪಡೆದದ್ದು ದೃಗೋಚರವಾಗಿತ್ತು. ಎಂದಿನ ಭರತನಾಟ್ಯದ ವಸ್ತ್ರಾಲಂಕಾರಕ್ಕಿಂತ ಬೇರೆಯದೇ ಆದ ಆಕರ್ಷಕ ಶ್ವೇತವರ್ಣದ ಲಂಗ- ಚೋಲಿ- ಚೆಂದದ ಸೆರಗಿನ ವಿನ್ಯಾಸದ ಆಭರಣಗಳಿಂದ ಶೋಭಿತವಾಗಿದ್ದ, ಸರಳ – ಸುಂದರ – ಸಂಕ್ಷಿಪ್ತ ಕೃತಿಗಳ ಆಯ್ಕೆ ಮೆಚ್ಚುಗೆ ತಂದಿತ್ತು. ಹಸನ್ಮುಖ, ಆತ್ಮವಿಶ್ವಾಸದ ಲಲನೆಯರ ಮೋಹಕ ಆಂಗಿಕಾಭಿನಯ, ತಾಳ-ಲಯ ಜ್ಞಾನ, ರಂಗಪ್ರಜ್ಞೆಯ ಸುವಿನ್ಯಾಸದ ಹೆಜ್ಜೆಗಳ ಮೆರುಗು ಮತ್ತು ಗುರು ವಸುಂಧರಾ ಅವರ ಕಲಾತ್ಮಕ ನೃತ್ಯ ಸಂಯೋಜನೆ ಮುದ ನೀಡಿದ್ದವು.


‘ಹಿಮಗಿರಿ ತನಯೆ’ಯನ್ನು ಹಾಡಿ ಹೊಗಳುವ ಕೀರ್ತನೆಯ ಶುಭಾರಂಭ, ಪುಷ್ಪಾಂಜಲಿ ರೂಪದಲ್ಲಿ ಪ್ರಪ್ಹುಲ್ಲಿಸಿ, ನೃತ್ತನಮನ ಸಲ್ಲಿಕೆಯನ್ನು ಸಾರ್ಥಕವಾಗಿ ನಿರೂಪಿಸಿತು. ಹಂಸಧ್ವನಿ ರಾಗ –ಆದಿತಾಳದ ‘ಗಣೇಶ ಕೌತ್ವಂ’ – ಪ್ರಥಮ ಪೂಜಿತ ವಿನಾಯಕನಿಗೆ ಅರ್ಪಿಸಿದ ನರ್ತನಾರಾಧನೆ ವಿಶಿಷ್ಟ- ವಿನೂತನ ಭಂಗಿಗಳಿಂದ ಆನಂದ ನೀಡಿತು. ನಾಲ್ವರು ನರ್ತಕಿಯರೂ ತಮ್ಮ ಅಂಗಶುದ್ಧ ಸಾಮರಸ್ಯದ ನರ್ತನದಿಂದ ಮೆರುಗಿನ ಭಾವ- ಭಂಗಿಗಳಿಂದ ಮನಮುಟ್ಟಿದರು. ಮುಂದೆ ಶ್ರೀ ಅಣ್ಣಮಾಚಾರ್ಯ ವಿರಚಿತ (ಬೌಳೀ ರಾಗ- ಆದಿತಾಳ) ‘ಶ್ರೀಮನ್ನಾರಾಯಣ’ನ ದಿವ್ಯರೂಪ- ದರ್ಶನವನ್ನು ಸಾಕ್ಷಾತ್ಕರಿಸಿದ ದೈವೀಕ ಕೃತಿ, ಭಕ್ತಿಪೂರ್ವಕವಾಗಿ ಅಷ್ಟೇ ಶೋಭಾಯಮಾನವಾಗಿ ಅರ್ಪಿತವಾಯಿತು.

ಯಾವುದೇ ಭರತನಾಟ್ಯ ಕಾರ್ಯಕ್ರಮದ ಹೃದಯ ಭಾಗ ಅಷ್ಟೇ ಹೃದ್ಯವೂ ಆದ ನೃತ್ಯಘಟ್ಟ – ‘ವರ್ಣಂ’. ಅದು ಸಂಕೀರ್ಣ, ಜೊತೆಗೆ ಅಷ್ಟೇ ಆಕರ್ಷಕ ಭಾಗ ಕೂಡ. ‘ವರ್ಣ’ವು ಸಾಮಾನ್ಯವಾಗಿ ನೃತ್ಯಕಲಾವಿದರ ಸ್ಮರಣಶಕ್ತಿಗೆ ಸವಾಲೆಸೆವ, ನೃತ್ತ ಮತ್ತು ಅಭಿನಯಗಳೆರಡರಲ್ಲೂ ಪರಿಣತಿ ಬೇಡುವ ಕ್ಲಿಷ್ಟ ನೃತ್ಯಬಂಧ. ತಮ್ಮ ‘ಗೆಜ್ಜೆ ಪೂಜೆ’ಯ ಪವಿತ್ರ ಸಂದರ್ಭದಲ್ಲಿ ಚತುರ್ನರ್ತಕಿಯರು ಸುಭಗವಾಗಿ ಅಭಿನಯಿಸಿದ್ದು- ಹರಿಕೇಶನಲ್ಲೂರು ಮುತ್ತಯ್ಯ ಭಾಗವತರ್ ಕಮಾಚ್ ರಾಗ- ಆದಿತಾಳದಲ್ಲಿ ರಚಿಸಿದ ‘ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ’ಯಾದ ಆ ಪರಾಶಕ್ತಿಯ ಜನನ ವೃತ್ತಾಂತ- ಮಹಿಮೆ- ಕೀರ್ತನೆಗಳ ಸುತ್ತ ಚಿತ್ರಿತವಾದ ಭಕ್ತಿಪ್ರಧಾನವಾದ ದೈವೀಕ ಕೃತಿ. ಸುಂದರ ನೃತ್ತಗಳ ಹೆಣಿಗೆಯ ಜಾಲದಿಂದ ಸಂಭ್ರಮವಾಗಿ ಆರಂಭವಾದ ಕೃತಿ- ಸುಂದರ ಸಂಚಾರಿ ಕಥೆಯಿಂದ ಭಕ್ತಿಸಿಂಚನಗೈದಿತು.


ಗುರು ವಸುಂಧರಾ ಅವರ ಕಲಾತ್ಮಕ ಪರಿಕಲ್ಪನೆಯಲ್ಲಿ ಮೂಡಿಬಂದ ಗಣೇಶ ಮತ್ತು ಸುಬ್ರಹ್ಮಣ್ಯರ ನಡುವಿನ ‘ಜ್ಞಾನಫಲ’ದ ಸುಂದರ ಸಂಚಾರಿಯನ್ನು ನಾಲ್ವರು ಕಲಾವಿದೆಯರು ವಿವಿಧ ಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸುವ ಮೂಲಕ ಪರಿಣಾಮಕಾರಿಯಾಗಿಸಿದರು. ನಡು ನಡುವೆ ಜ್ಹೆಂಕರಿಸಿದ ಮಿಂಚಿನ ಸಂಚಾರದ ನೃತ್ತಗಳ ಮನೋಹರತೆಯಿಂದ ಸಾಗಿದ ಮೀನಾಕ್ಷೀ ದೇವಿಯ ಕಥೆ ಹಂತ ಹಂತವಾಗಿ ಅರಳಿತು. ನರ್ತಕಿಯರ ಹೆಜ್ಜೆಗಳಿಗೆ ಸ್ಫೂರ್ತಿಯುತವಾಗಿದ್ದ ವಿದುಷಿ ಅಶ್ವಿನಿಯವರ ಸ್ಫುಟವಾದ ನಟುವಾಂಗದ ನಿರ್ಝರಿ ಲೀಲಾಜಾಲವಾಗಿ ಹರಿಯಿತು. ಗಾಯಕ ಬಾಲಸುಬ್ರಹ್ಮಣ್ಯ ಶರ್ಮರ ಕಂಚಿನ ಕಂಠದಲ್ಲಿ ದೇವಿಯ ಸ್ತುತಿ ಭಾವಪೂರ್ಣವಾಗಿ ಮನ ಸ್ಪರ್ಶಿಸಿತು.

ಮುಂದಿನ ಅಪರೂಪದ ಕೃತಿ ನಿಜಕ್ಕೂ ರೋಚಕ- ಕುತೂಹಲಕಾರಿಯಾಗಿ ಗಮನ ಸೆಳೆಯಿತು. ‘ಚತುರ್ವೇದ’ಗಳ ಉಗಮದ ಕಥೆಯನ್ನು ರಸವತ್ತಾಗಿ ನಿರೂಪಿಸಲಾಯಿತು. ಹಿಂದೂ ಧರ್ಮದ ಪರಮೋಚ್ಚ ಮತ್ತು ಅತ್ಯಂತ ಪ್ರಾಚೀನ ಗ್ರಂಥಗಳಾದ ಚತುರ್ವೇದಗಳ (ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ) ಉಗಮದ ಹಿಂದೆ ಸುಂದರವಾದ ಆಧ್ಯಾತ್ಮಿಕ ಮತ್ತು ಪೌರಾಣಿಕ ಕಥೆಗಳಿವೆ. ಸನಾತನ ಸಂಪ್ರದಾಯದ ಪ್ರಕಾರ, ಯಾವುದೇ ಮನುಷ್ಯನಿಂದ ಬರೆಯಲ್ಪಡದ ‘ಅಪೌರುಷೇಯ’ ಮತ್ತು ‘ಶಾಶ್ವತ’ ಎಂದು ಕರೆಯಲಾಗುವ ಈ ವೇದಗಳ ಉಗಮಕ್ಕೆ ಸಂಬಂಧಿಸಿದ ಪ್ರಮುಖ ಕಥೆಗಳನ್ನು ಗುರು ವಸುಂಧರಾ ತಮ್ಮ ಹೊಸ ಪರಿಕಲ್ಪನೆಯಲ್ಲಿ ನೃತ್ಯದಲ್ಲಿ ಸಾಕಾರಗೊಳಿಸಿದ್ದು ನಿಜಕ್ಕೂ ಅವರ ಅಸ್ಮಿತೆ. ಋಷಿಪತ್ನಿ ಪತಿವ್ರತೆ ಸುಕನ್ಯ ಹಾಗೂ ಚವನ ಮುನಿಗಳ ಸುತ್ತಣ ಕಥೆ ಹಾಗೂ ಅಶ್ವಿನಿ ದೇವತೆಗಳು ನಡೆಸಿದ ಪರೀಕ್ಷೆ ಮತ್ತು ಚಮತ್ಕಾರ, ಈ ಕುರಿತ ದೃಶ್ಯವತ್ತಾದ ಸ್ವಾರಸ್ಯಕರ ಕಥೆ ತುಂಬಾ ಸೊಗಸಾಗಿ ಮೂಡಿಬಂತು. ಅಂತ್ಯದಲ್ಲಿ- ಹಿಂದೋಳ ರಾಗದ ‘ತಿಲ್ಲಾನ’ ಮತ್ತು ದಶಾವತರದಿಂದ ಕೂಡಿದ್ದ ಮಂಗಳದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.
ಈ ಕಮನೀಯ ನೃತ್ಯಕ್ಕೆ ತಮ್ಮ ಸುಶ್ರಾವ್ಯ ಸಂಗೀತದ ಸಾಂಗತ್ಯದಿಂದ ಸುವರ್ಣ ಪ್ರಭಾವಳಿ ನೀಡಿದ ಕಲಾವಿದರಾದ ಗಾಯನ – ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ, ಕೊಳಲು – ವಿದ್ವಾನ್ ಜಯರಾಂ ಕಿಕ್ಕೇರಿ, ಮೃದಂಗ – ವಿದ್ವಾನ್ ಧನುಷ್, ವೀಣೆ – ವಿದುಷಿ ಶ್ರುತಿ ಆನಂದ್ ಮತ್ತು ರಿದಂ ಪ್ಯಾಡ್ ವಿದ್ವಾನ್ ಮಿಥುನ್ ಶಕ್ತಿ ಹಾಗೂ ನಟುವಾಂಗ – ಗುರು ವಸುಂಧರಾ ಸಂಪತ್ ಕುಮಾರ್- ಜತಿಗಳ ನಿರೂಪಣೆ ವಿದುಷಿ ಅಶ್ವಿನಿ ವಿಶ್ವನಾಥ್ ಅವರ ಸಹಕಾರ ಬಹು ಉತ್ತೇಜನಕರವಾಗಿತ್ತು.

ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
