ಹೆಸರಿಗೆ ಅನ್ವರ್ಥಕವಾದ ಮುದ್ದಾದ ರೂಪ- ಮಾಟವಾದ ಕಾಯ ಹೊಂದಿದ್ದ ಮನಮೋಹಕ ಕಲಾವಿದೆ ಗೌರೀ ಕೃಷ್ಣ, ವೇದಿಕೆಯ ಮೇಲೆ ಧವಳವಸ್ತ್ರಧಾರಿಯಾಗಿ ಸಾಕ್ಷಾತ್ ಸರಸ್ವತಿಯಾಗಿ ನರ್ತಿಸುತ್ತಿದ್ದರೆ ನೋಡುಗರಿಗೆ ಮುದ ಉಕ್ಕುವ ರಮ್ಯಾನುಭವ. ಇತ್ತೀಚೆಗೆ ‘ಸ್ಫುರಣ ನೃತ್ಯ ಕಲಾಕೇಂದ್ರ’ದ ನೃತ್ಯಾಚಾರ್ಯ ವಿನ್ಸೆಂಟ್ ಪಾಲರ ಶಿಷ್ಯೆಯಾದ ಅವಳು ಗುರುವಿನ ಮಾರ್ಗದರ್ಶನದಲ್ಲಿ ಕರಗತಗೊಳಿಸಿಕೊಂಡ ನೃತ್ಯದ ವಿವಿಧ ಆಯಾಮಗಳನ್ನು ತನ್ನ ಅಂಗಶುದ್ಧ, ನಗುಮೊಗದ ಸುಂದರಾಭಿನಯದಲ್ಲಿ, ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ನಡೆದ ತನ್ನ ವಿದ್ಯುಕ್ತ ‘ರಂಗಾರ್ಪಣೆ’ ಸಂದರ್ಭದಲ್ಲಿ ಸಾಕಾರಗೊಳಿಸಿದಳು.

ಈ ರಂಗಾರ್ಪಣೆಯ ವಿಶೇಷವೆಂದರೆ ಕಲಾವಿದೆ ನರ್ತಿಸಿದ ಹೆಚ್ಚಿನ ಕೃತಿಗಳು ಗುರು ವಿನ್ಸೆಂಟ್ ಅವರಿಂದ ರಚಿತ ಮತ್ತು ನೃತ್ಯ ಸಂಯೋಜಿತ ಎಂಬುದು ಗಮನಾರ್ಹವಾಗಿತ್ತು. ರಂಗಾಧಿದೇವತೆ, ಭೂತಾಯಿಗೆ, ಗುರು-ಹಿರಿಯರಿಗೆ ವಂದನಾಪೂರ್ವಕವಾಗಿ ಸಮರ್ಪಿತವಾದ ಶುಭಾರಂಭದ ‘ಸರಸ್ವತಿ ಪುಷ್ಪಾಂಜಲಿ’ ಮತ್ತು ‘ವಕ್ರತುಂಡ ಮಹಾಕಾಯನಾದ ಗಣೇಶನ ಶ್ಲೋಕ ಹಾಗೂ ಸಾಂಪ್ರದಾಯಕ ಅಲರಿಪು (ಖಂಡ ತ್ರಿಪುಟ ತಾಳ- ರಾಗ ಕಾನಡ) – ಅವಳ ಅಂಗಶುದ್ಧ ನರ್ತನದ ಹರಿತ ನೃತ್ತಗಳ ಸೊಗಸನ್ನು ಎತ್ತಿ ಹಿಡಿದವು ಮತ್ತು ಅನುಪಮ ಭಾವ-ಭಂಗಿಗಳಿಗೆ ಕನ್ನಡಿ ಹಿಡಿಯಿತು. ಹಸನ್ಮುಖದಲ್ಲಿ ರಂಗವನ್ನು ಪ್ರವೇಶಿಸಿದ ಕಲಾವಿದೆಯ ನವಿರಾದ ಅಭಿನಯ ಹಾಗೂ ನಿಖರ ಅಂಗಿಕಾಭಿನಯ ಕೃತಿಗಳಿಗೆ ಮೆರಗು ತಂದು ನೋಡುಗರನ್ನು ಸೆರೆಹಿಡಿಯಿತು. ನಂತರ – ಅಮೃತವರ್ಷಿಣಿ ರಾಗ- ಏಕತಾಳದ ವಿವಿಧ ನೃತ್ತವಿನ್ಯಾಸಗಳಿಂದ ಕೂಡಿದ ‘ಜತಿಸ್ವರ’ – ಏಕತಾನತೆ ಇಲ್ಲದ ವೈವಿಧ್ಯಪೂರ್ಣ ಮನಮೋಹಕ ನೃತ್ತವಲ್ಲರಿಯಿಂದ ರಂಜಿಸಿತು. ಇದು ಶುದ್ಧ ನೃತ್ತಬಂಧ ಎಂದರೂ ಅಭಿನಯ ಕುಶಲೆಯ ಅಂತಃಸ್ಫುರಣದ ಸತ್ವ ಅವಳ ಪ್ರತಿ ಹೆಜ್ಜೆ-ಗೆಜ್ಜೆಯಲ್ಲೂ ಸ್ಫುರಿಸಿತು ಎಂದರೆ ಅತಿಶಯೋಕ್ತಿಯಲ್ಲ. ಗೌರೀ ಕೃಷ್ಣಳ ಅಭಿನಯ ಪ್ರತಿಭೆಯನ್ನು ನೋಡುಗರು ಅದಾಗಲೇ ಗುರುತಿಸಿದ್ದರು.


ಭರತನಾಟ್ಯ ಪ್ರಸ್ತುತಿಯ ‘ಮಾರ್ಗಂ’ ಸಂಪ್ರದಾಯದಲ್ಲಿ ಮಹತ್ವದ ಘಟ್ಟ’ವರ್ಣ’. ನೃತ್ಯಕಲಾವಿದರ ನೃತ್ಯಪಾಂಡಿತ್ಯಕ್ಕೆ ಒಡ್ಡಿದ ನಿಜವಾದ ಸವಾಲು ಇದು ಎಂದರೂ ತಪ್ಪಿಲ್ಲ. ಈ ದೀರ್ಘಬಂಧದಲ್ಲಿ ಸಂಕೀರ್ಣ ಜತಿಗಳು, ನೃತ್ತ ಮತ್ತು ಅಭಿನಯದ ಕ್ಷಮತೆ, ತಾಳ-ಲಯಜ್ಞಾನ, ನೆನೆಪಿನ ಶಕ್ತಿಗಳು ಅಗತ್ಯ. ಗೌರಿ ಅಂದು ನರ್ತಿಸಿದ ‘ಪದ ವರ್ಣ’ (ರಾಗಮಾಲಿಕೆ – ಆದಿತಾಳ) ಭಕ್ತಿಪ್ರಧಾನವಾಗಿ ಅನೇಕ ಸಂಚಾರಿ ಕಥಾನಕಗಳಿಂದ ಕೂಡಿತ್ತು. ಶ್ರೀರಮಣ ಮಹರ್ಷಿಗಳು ತಮಿಳಿನಲ್ಲಿ ರಚಿಸಿದ ಈ ‘ವರ್ಣ’ವನ್ನು ಡಾ. ಶಾರದಾ ನಟರಾಜನ್ ಕನ್ನಡಕ್ಕೆ ಅನುವಾದಿಸಿದ್ದರು. ಅಚಲನೇ ಆದರೂ ಚಿತ್ಸಭೆಯಲ್ಲಿ ಅಚಲ ಶಿವನು ಶಕ್ತಿಯ ಎದುರು ನರ್ತಿಸುವ, ಆ ಅಗಣಿತ ಮಹಿಮೆಯೊಂದಿಗೆ ಶಿವನೇ ಭವ್ಯ ಅರುಣಾಚಲನಾಗಿ ನಿಲ್ಲುವ, ಅನಂತರ ಅದ್ಭುತವಾಗಿ ನರ್ತಿಸುವ ಬೆರಗಿನ ಸಂದರ್ಭವೊಂದು ಪರಿಣಾಮಕಾರಿಯಾಗಿ ಅನಾವರಣವಾಯಿತು.


ತಾಯಿ ಪಾರ್ವತಿಯ ದೈವೀಕ ಸನ್ನಿಧಿಯಲ್ಲಿನ ನಟರಾಜನ ದಿವ್ಯನರ್ತನವು ಸಂಚಾರಿ ಭಾಗದಲ್ಲಿ ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಸಿ, ಅರುಣಾಚಲದ ಮೇರು ವ್ಯಕ್ತಿತ್ವವನ್ನು ತನ್ನ ಸಮ್ಮೋಹಕ ಭಾವ- ಭಂಗಿಗಳಿಂದ ಸಾಕಾರಗೊಳಿಸಿದಳು ಕಲಾವಿದೆ. ಸಂಚಾರಿಯಲ್ಲಿ ಮೂಡಿಬಂದ ಪ್ರಸಂಗ ನಿಜಕ್ಕೂ ರೋಮಾಂಚಿತವಾಗಿತ್ತು. ದೇವಿಯು ಒಮ್ಮೆ ತಮಾಷೆಗಾಗಿ, ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ಆದರೆ ಆ ಕಣ್ಣುಗಳೇ ಜಗತ್ತಿಗೆ ಬೆಳಕು ನೀಡುವ ಸೂರ್ಯ–ಚಂದ್ರರು. ಆ ಕೂಡಲೇ, ಇಡೀ ಬ್ರಹ್ಮಾಂಡ ಮಹಾಪ್ರಳಯದಲ್ಲಿ ಮುಳುಗಿದಾಗ, ಶಿವನು, ಕರುಣಾಮಯನಾಗಿ ತನ್ನ ಮೂರನೇ ಕಣ್ಣನ್ನು ತೆರೆದು, ಇಡೀ ಸೃಷ್ಟಿಯ ಮೇಲೆ ಕೃಪೆಯ ಬೆಳಕನ್ನು ಬೀರುತ್ತಾನೆ. ತನ್ನ ತಪ್ಪಿನ ಅರಿವಾಗಿ, ಪಾರ್ವತಿಯು ತಕ್ಷಣ ತಿರುವಣ್ಣಾಮಲೈಗೆ ಪ್ರಯಾಣ ಬೆಳೆಸಿ ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ವರ್ಷಗಳ ತಪಸ್ಸಿನ ನಂತರ ಶಿವನು ಪ್ರತ್ಯಕ್ಷನಾಗಿ ಆಕೆಯನ್ನು ಆಶೀರ್ವದಿಸಿ, ಅರ್ಧನಾರೀಶ್ವರನಾದ. ಇಂಥ ಅರುಣಾಚಲನೇ ಕೃಪೆ ತೋರು ಎಂಬ ಸಾರಾಂಶದ ‘ವರ್ಣ’ದ ಕೃತಿಯನ್ನು ಕಲಾವಿದೆ ತನ್ನ ಮನದುಂಬಿದ ಮೆರುಗಿನ ಅಭಿನಯ- ನರ್ತನದಿಂದ ಪ್ರೇಕ್ಷಕರ ಮನವನ್ನು ಗೆದ್ದಳು. ನಡುನಡುವೆ ಝೇಂಕರಿಸಿದ ಕಲಾವಿದೆಯ ನೃತ್ಯವೈವಿಧ್ಯ ಮನತಣಿಸಿದರೆ, ಗುರು ವಿನ್ಸೆಂಟ್ ನಟುವಾಂಗದ ಭೋರ್ಗರೆತ ಕಲಾವಿದೆಯ ಕಲಾನೈಪುಣ್ಯಕ್ಕೆ ಮತ್ತಷ್ಟು ಪ್ರೇರಣೆ ನೀಡಿತು.


ಮುಂದೆ- ಶ್ರೀ ಶ್ಯಾಮಾ ಶಾಸ್ತ್ರಿಗಳು ರಚಿಸಿದ, ಸಾವೇರಿ ರಾಗದ ದೇವಿಸ್ತುತಿಯನ್ನು ಪ್ರಸ್ತುತಪಡಿಸಿ, ದೈವೀಕ ಆಯಾಮದಲ್ಲಿ ಸ್ತುತಿಸಿ ತನ್ನ ‘ನೃತ್ಯ ನೈವೇದ್ಯ’ ಅರ್ಪಿಸಿದಳು. ಅನಂತರ ಮನಸ್ಪರ್ಶೀ ‘ಪದಂ’ ಕೃತಿಯನ್ನು ನರ್ತಿಸಿದಳು ಗೌರೀ. ಎಲ್ಲವನ್ನೂ ಸೃಷ್ಟಿಸಿದ ಜಗತ್ಕಾರಣನಾದ, ಪರಬ್ರಹ್ಮನು ಮಗುವಿನ ರೂಪದಲ್ಲಿ ಬಂದು ಯಶೋದೆಯನ್ನು “ಓ! ನನ್ನ ತಾಯಿ!” ಎಂದು ಕರೆಯುವುದು ಸಾಮಾನ್ಯವೇ? ಇಂಥ ಪುಣ್ಯವಂತೆ ಯಶೋದೆ ಮಾಡಿದ ತಪಸ್ಸಾದರೂ ಏನು? “ಎನ್ನ ತವಂ ಸೆಯ್ದಾನೈ” – (ರಾಗ- ಕಾಪಿ, ತಾಳ-ಆದಿ) ಎಂದು ಕವಿ ಪಾಪನಾಶಂ ಶಿವನ್ ಬೆರಗಾಗುತ್ತಾರೆ. ಈ ಭಾವಸ್ಪರ್ಶವನ್ನು ಹೃದಯಂಗಮವಾಗಿ ಅಭಿನಯಿಸಿ ಕಲಾವಿದೆ ‘ಸೈ’ ಎನಿಸಿಕೊಂಡಳು. ಅಂತ್ಯದಲ್ಲಿ ಸೊಲ್ಲುಕಟ್ಟುಗಳಿಂದ ಕೂಡಿದ ‘ತಿಲ್ಲಾನ’ವನ್ನು ಗೌರೀ ಉತ್ಸಾಹಭರಿತವಾಗಿ ಪ್ರದರ್ಶಿಸಿ ಗುರುವಿನೊಂದಿಗೆ ನರ್ತಿಸಿ, ಅವರ ಸಾಂಗತ್ಯದ ಸ್ಫೂರ್ತಿ ಪಡೆದು ಎಲ್ಲರ ಕಣ್ಮನ ತಣಿಸಿದಳು.

ಕಲಾವಿದೆಯ ರಮ್ಯ ನರ್ತನಕ್ಕೆ ಸಂಗೀತದ ಪ್ರಭಾವಳಿಯಲ್ಲಿ ಮೆರುಗನ್ನು ಹೆಚ್ಚಿಸಿದವರು – ಗಾಯನ ವಿದುಷಿ ಸ್ಮೃತಿ ಭಾಸ್ಕರ್, ಮೃದಂಗ ವಿದ್ವಾನ್ ವಿನಯ್ ನಾಗರಾಜನ್ , ಕೊಳಲು- ವಿದ್ವಾನ್ ಪ್ರಮುಖ್ ಎಂ.ಎಸ್., ರಿದಮ್ಪ್ಯಾಡ್ – ವಿದ್ವಾನ್ ಭಾರ್ಗವ್ ಹಾಲಂಬಿ ಮತ್ತು ಅಭಿಮನ್ಯು ಜಯಕೃಷ್ಣನ್ ಹಾಗೂ ನಟುವಾಂಗ – ಆಚಾರ್ಯ ವಿದ್ವಾನ್ ವಿನ್ಸೆಂಟ್ ಪಾಲ್.


*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
