Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕಜ್ಜಾಯ’ ಲಲಿತ ಪ್ರಬಂಧಗಳ ಸಂಕಲನ
    Article

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕಜ್ಜಾಯ’ ಲಲಿತ ಪ್ರಬಂಧಗಳ ಸಂಕಲನ

    May 13, 2026No Comments8 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಾನವೀಯ ಸಂವೇದನೆ ಮತ್ತು ಹೆಣ್ಣಿನ ಅಂತರಾಳವನ್ನು ತಮ್ಮ ಕೃತಿಗಳಲ್ಲಿ ಸೊಗಸಾಗಿ ಮೂಡಿಸಿರುವ ಸುನಂದಾ ಬೆಳಗಾಂವಕರವರು ಕನ್ನಡದ ಮಹತ್ವದ ಲೇಖಕಿ. ಬಹಳ ಕಾಲ ವಿದೇಶದಲ್ಲಿ ಜೀವನ ನಡೆಸಿದರೂ ಹುಟ್ಟೂರಾದ ಧಾರವಾಡದಲ್ಲಿ ಬದುಕಿದ ಕ್ಷಣಗಳನ್ನು ಉಸಿರಾಗಿಸಿಕೊಂಡವರು.

    ಸುನಂದಾ ಬೆಳಗಾಂವಕರರ ಚೊಚ್ಚಲ ಲಲಿತ ಪ್ರಬಂಧಗಳ ಸಂಕಲನ ‘ಕಜ್ಜಾಯ’ದಲ್ಲಿ ಸುಮಾರು ಐವತ್ತು ವರ್ಷಗಳ ಹಿಂದಿನ ಧಾರವಾಡದ ಜನ ಜೀವನ, ಗುಣ ನಡತೆ, ಹುಟ್ಟು ಸಾವಿನ ಬಗೆಗಿನ ಚಿಂತನೆಗಳು ಅಡಕವಾಗಿವೆ. ಓದಲು ಖುಷಿಯನ್ನು ನೀಡುವ ಈ ಲಲಿತ ಪ್ರಬಂಧಗಳ ಗುಚ್ಛವನ್ನು ಕಥಾ ಸಂಕಲನ ಎಂದು ಕರೆದರೂ ತಪ್ಪಲ್ಲ. ಬರಹದ ಹೆಚ್ಚಿನ ವಸ್ತುವಿಗಾಗಿ ಅವರು ಕಾಡುಮೇಡು ಅಲೆಯಲಿಲ್ಲ. ಗುಡ್ಡ ಹತ್ತಿ ನೋಡಲಿಲ್ಲ. ತಾನು, ತನ್ನ ಮನೆಯವರು ಮತ್ತು ಮನೆಗೆ ಸಂಬಂಧಪಟ್ಟಂತಿರುವ ಇತರರನ್ನು ಕುರಿತ ವಿಚಾರಗಳನ್ನು ಪರಾಮರ್ಶಿಸಿ, ಪಾಕವಾಗಿಸಿ ಓದುಗರ ಮುಂದೆ ಇರಿಸಿದ್ದಾರೆ. ಧಾರವಾಡದ ಆಹಾರ ಪದ್ಧತಿಯ ವಿವರಗಳಲ್ಲದೆ, ಸಾಂಸಾರಿಕ ಸಂದರ್ಭಗಳನ್ನೊಳಗೊಂಡ ಕೃತಿಯು ಓದುಗರ ಪಾಲಿಗೆ ಸಿಹಿಯೂಟವಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ಸಂದ ಉತ್ತಮ ಕೊಡುಗೆಯಾಗಿದೆ.

    ಈ ಸಂಕಲನದ ಮೊದಲ ಪ್ರಬಂಧವೇ ‘ಮಣ್ಣು’. ತನ್ನ ಊರು ಧಾರವಾಡದ ನೆಲ, ಇಲ್ಲಿನ ಮಳೆ, ಕೆಂಪು ಮಣ್ಣಿನ ಬಗ್ಗೆ ಲೇಖಕಿಗೆ ಅಭಿಮಾನವಿದೆ. ‘ಶ್ರಾವಣ ಬಂತೆಂದರೆ ಧಾರವಾಡ ಕಣ್ಣಿಗೆ ಹಬ್ಬ’ ಎನ್ನುವ ಲೇಖಕಿ ಯಾವುದೋ ಗಳಿಗೆಯಲ್ಲಿ ಮುಂದೆ ಬರುವ ಚೌತಿಯ ಹಬ್ಬವನ್ನು ನೆನಪಿಸಿಕೊಂಡು ಮಣ್ಣಿನ ಮೂರ್ತಿಗಳನ್ನು ತಯಾರಿಸುವ ದಾನಪ್ಪನನ್ನು ಓದುಗರಿಗೆ ಪರಿಚಯಿಸುತ್ತಾರೆ. ಆತನಿಗೆ ಮಣ್ಣು ಎಂದರೆ ಬರೇ ವಸ್ತು ಅಲ್ಲ. ಜೀವನದ ರಥ ಸಾಗಲು ಬೇಕಾದ ಪವಿತ್ರ ಸಾಧನ. ತಂದೆ ಶರಣಪ್ಪನವರಿಂದ ಬಳುವಳಿಯಾಗಿ ಬಂದ ಮೂರ್ತಿ ಮಾಡುವ ಕಲೆಯನ್ನು ಆರಾಧಿಸಿದ ಆತನು ತನ್ನ ವಂಶದ ಕುಡಿಯಾದ ಶ್ರೀಶೈಲ ಆ ವೃತ್ತಿಯನ್ನು ಮುಂದುವರಿಸಬೇಕೆಂಬ ಅಭಿಲಾಷೆಯನ್ನು ಹೊಂದಿರುತ್ತಾನೆ. ‘ಧಾರವಾಡದಲ್ಲಿದ್ದು ಮಣ್ಣ ಮೂರ್ತಿ ಮಾಡಿದರೆ ಮಣ್ಣು ತಿನ್ನಬೇಕಾಗುತ್ತದೆ’ ಎಂಬ ಧೋರಣೆಯನ್ನು ಹೊಂದಿದ ಆಧುನಿಕ ಮನೋಭಾವದ ಮಗ ಶ್ರೀಶೈಲನು ಕುಲ ಕಸುಬನ್ನು ತೊರೆದು ಹೋಗುವುದನ್ನು ತಡೆಯುವಲ್ಲಿ ದಾನಪ್ಪ ವಿಫಲನಾಗುತ್ತಾನೆ.

    ದಾನಪ್ಪನು ತನ್ನ ತಂದೆ ನೀಡಿದ ಶಿಕ್ಷಣದ ಪ್ರಭಾವದಿಂದ ಕಲೆಯಲ್ಲಿ ಹೊಸತನವನ್ನು ತರಲು ಯತ್ನಿಸುತ್ತಾನೆ. ಬಡತನದಿಂದಾಗಿ ಹಸಿವಿನಲ್ಲಿದ್ದ ದಾನಪ್ಪ ಗಣಪತಿ ತಯಾರಿಸುವಾಗ ‘ಕಡಬು ಮೋದಕ ತಿಂದ ನೀನೇಕೆ ಲಂಬೋದರನಾಗಬೇಕು? ನಿನಗೂ ನನ್ನಂತೆ ಸೊರಗಿದ ಹೊಟ್ಟೆ ಇರಲಿ’ ಎಂದು ತೆಳು ಹೊಟ್ಟೆಯ ಗಣಪತಿಯನ್ನು ಮಾಡುತ್ತಾನೆ. ದಾನಪ್ಪನ ಮೂರ್ತಿಗಳಲ್ಲಿ ರಸಿಕತೆ, ವಿದ್ವತ್ತು, ಸಾಹಿತ್ಯಾಭ್ಯಾಸ ಎದ್ದು ಕಂಡರೂ ಅವನ ಹೊಸ ವಿಚಾರಗಳಿಗೆ ಜನ ಮನ್ನಣೆ ದೊರೆಯದೆ ನಿಂದೆಗೆ ಒಳಗಾಗುತ್ತಾನೆ. ಅವನ ಕೈಬೆರಳುಗಳಿಗೆ ದೌರ್ಬಲ್ಯ ಬಂದಾಗ ಲೇಖಕಿಯ ಅಜ್ಜಿ ‘ದೇವರು ಆಟದ ಬೊಂಬೆಯಲ್ಲ. ಗಣಪತಿಗೆ ಏನೇನೋ ವೇಷ ಹಾಕಿದಕ್ಕೆ ದೇವರು ಕೊಟ್ಟ ಶಿಕ್ಷೆ’ ಅಂದಾಗ ಲೇಖಕಿಯ ತಂದೆ ‘ತಾನು ಹುಟ್ಟಿಸಿದ ಕಲಾಕಾರರನ್ನು ತಿಳಿದುಕೊಳ್ಳುವ ಶಕ್ತಿ ದೇವರಿಗಿಲ್ಲ ಅಂದಮೇಲೆ ಅವ ಎಂಥ ದೇವರು?’ ಎಂದು ತಾಯಿಯ ಮಾತನ್ನು ತಳ್ಳಿ ಹಾಕುತ್ತಾರೆ. ಶ್ರಾವಣದ ಮಳೆಗೆ ನೆನಪಿನ ಸುರುಳಿ ಬಿಚ್ಚಿದ ಲೇಖಕಿ ಶ್ರಾವಣದ ಬಿರುಸಾದ ಮಳೆಯ ಸಮಯದಲ್ಲೇ ಕಲಾಕಾರ ದಾನಪ್ಪ ಮರಣ ಹೊಂದಿ ಧಾರವಾಡದ ಮಣ್ಣಲ್ಲಿ ಐಕ್ಯವಾದುದನ್ನು ನೆನೆದು ವಿಷಾದಿಸುತ್ತಾರೆ. ಶ್ರೀಮಂತನಾಗುವ ಆಸೆಯಲ್ಲಿ ಮುಂಬೈಗೆ ತೆರಳಿದ ಮಗ ಮರಳಿ ಧಾರವಾಡದ ಮಣ್ಣಿಗೆ ಬರುತ್ತಾನೆ. ‘ಮಣ್ಣು’ ಇಡೀ ಲೇಖನದ ಆದಿ ಮತ್ತು ಅಂತ್ಯವನ್ನು ಆವರಿಸಿಕೊಳ್ಳುತ್ತದೆ.

    ಕುಲಕಸುಬಿನ ಪ್ರಶ್ನೆಯು ಹಿರಿಯ ಮತ್ತು ಕಿರಿಯ ತಲೆಮಾರುಗಳ ನಡುವೆ ಸಂಘರ್ಷವನ್ನು ತರುವುದರ ಸ್ಪಷ್ಟ ಚಿತ್ರಣವು ಈ ಪ್ರಬಂಧದಲ್ಲಿದೆ. ಹಳೆಯ ಕಸುಬನ್ನು ತಾತ್ಸಾರ ಮಾಡದೆ ಅದರ ಜೊತೆಗೆ ಎಲ್ಲರೂ ಮೆಚ್ಚುವಂತಹ ಹೊಸ ಕೌಶಲ್ಯಗಳನ್ನು, ತಂತ್ರಜ್ಞಾನಗಳನ್ನು ಬಳಸಿಕೊಂಡು ಮುನ್ನಡೆಯುವುದು ಒಳ್ಳೆಯದು. ಉತ್ತಮ ಶಿಕ್ಷಣವನ್ನು ಪಡೆದ ಇಂದಿನ ಯುವಕರು ಹೊಸ ಜೀವನ ಶೈಲಿಯನ್ನು, ಹೊಸ ಉದ್ಯೋಗವನ್ನು ಬಯಸುತ್ತಾರೆ. ಕುಲಕಸುಬು ಮರೀಚಿಕೆಯಾಗದಂತೆ ತಮ್ಮ ನೆಚ್ಚಿನ ಉದ್ಯೋಗದ ಜೊತೆಗೆ ಪರ್ಯಾಯ ಉದ್ಯೋಗವಾಗಿ ಉಳಿಸಬೇಕಾಗುತ್ತದೆ. ಕುಲಕಸುಬು ಒಂದೇ ಜಾತಿಯವರಿಗೆ ಸೀಮಿತವಾಗಿರದೆ ಆಸಕ್ತರು ಅದನ್ನು ಜೀವಂತವಾಗಿರಿಸಬೇಕಾಗಿದೆ.

    ‘ಬೆಣ್ಣೆಯ ಗಡಿಗೆ’ ಎಂಬ ಪ್ರಬಂಧದಲ್ಲಿ ಲೇಖಕಿ ಹೆಣ್ಣಿನ ದುಃಖದ ಸ್ತರಗಳನ್ನು ಮನದಟ್ಟು ಮಾಡಿಸಿದ್ದಾರೆ. ಈ ಕಥೆಯಲ್ಲಿ ಪತಿಯು ಪರಸ್ತ್ರೀ ಸಂಗವನ್ನು ಮಾಡಿದ ಪರಿಣಾಮವಾಗಿ ಪತ್ನಿ ಅನುಭವಿಸುವ ದುಃಖವನ್ನು ಹಾಗೂ ಮಗನನ್ನು ಕಳೆದುಕೊಂಡ ಮಾತೃ ಹೃದಯದ ನೋವನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ತಾನೇ ಪತಿಯ ಸರ್ವಸ್ವ ಎಂದು ಭ್ರಮೆಯಲ್ಲಿದ್ದ ಗೌರಿ ತನ್ನ ಪತಿ ಭರಮಿಯ ಜೊತೆ ಸಂಬಂಧ ಇಟ್ಟುಕೊಂಡದ್ದು ತಿಳಿದಾಗ ದುಃಖಕ್ಕೊಳಗಾಗುತ್ತಾಳೆ. ಬೇಸರದಿಂದ ತವರು ಮನೆ ಸೇರಿದಾಕೆಯನ್ನು ಗೌಡರು ಮನೆಗೆ ಆಹ್ವಾನಿಸಿದಾಗ ತನ್ನ ಮೇಲೆ ಪ್ರೀತಿ ಇದೆ ಎಂದು ನಂಬಿ ಖುಷಿಪಡುತ್ತಾಳೆ. ಮೊದಲಿಗಿಂತ ಹೆಚ್ಚು ಪ್ರೀತಿಸಬಹುದು ಎಂದುಕೊಂಡವಳಿಗೆ ಗರ್ಭವತಿಯಾದ ಭರಮಿಯನ್ನು ಗೌಡರು ಸುಲಭವಾಗಿ ಬಿಟ್ಟು ಕೊಡಲಾರರು ಎಂದು ತಿಳಿದು ಆಘಾತವಾಗುತ್ತದೆ. “ಗೌರಾ ನೀ ಮನಸಿಗೊಪ್ಪಿದ ಹೆಣ್ಣು, ಭರಮಿ ದೇಹಕೊಪ್ಪಿದ ಹೆಣ್ಣು” ಎಂಬ ಮಾತು ಕೇಳಿ ವಿಚಲಿತಳಾದ ಆಕೆ ಆತನ ಮನೆಯಲ್ಲಿದ್ದರೂ ಸಂಸಾರವನ್ನು ಮಾಡುವುದಿಲ್ಲ. ಹೆಣ್ಣಿಗೆ ಕಷ್ಟಗಳನ್ನು ಎದುರಿಸುವ ತಾಳ್ಮೆಯಿದೆ. ಆಕೆ ಇತರರ ಸಂತೋಷಕ್ಕಾಗಿ ತನ್ನತನವನ್ನು ಬಿಟ್ಟುಕೊಡುವ ಮನೋಭಾವದವಳು. ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದ ಜೊತೆಗೆ ದಯೆ, ಜವಾಬ್ದಾರಿ ಮತ್ತು ತ್ಯಾಗದ ಗಣಿಯಾಗಿದ್ದಾಳೆ. ಆದ್ದರಿಂದ ಗೌಡರ ಮನೆಯ ಅಣ್ಣ ತಂಗಿಯರಿಗೆ ತಾಯಿಯಾಗಲು ಆಕೆಗೆ ಸಾಧ್ಯವಾಗುತ್ತದೆ. ಹೊಲ, ಮನೆ, ಆಳು ಕಾಳು, ಬಂಧು ಬಳಗವನ್ನು ಸಂಭಾಳಿಸುತ್ತಾಳೆ. ಗೌಡರ ಮನೆಯಲ್ಲಿ ಮಗನನ್ನು ಚೆನ್ನಾಗಿ ಬೆಳೆಸಿ ಭರಮಿ ಹಾಗೂ ಆಕೆಯ ಮಗ ಬಸವಣ್ಣಿಯಲ್ಲಿ ದ್ವೇಷವನ್ನು ಬೆಳೆಸಿಕೊಳ್ಳದೆ ಬಾಳುತ್ತಾಳೆ. ‘ಮಕ್ಕಳಿದ್ದರೆ ಪ್ರಪಂಚ. ಇಲ್ಲದಿದ್ದರೆ ಏನೂ ಇಲ್ಲ’ ಎನ್ನುತಿದ್ದ ಭರಮಿಗೆ ಚುರುಕಾಗಿದ್ದ ತನ್ನ ಮಗನ ಮರಣದಿಂದ ಬಹಳ ದುಃಖವಾಗುತ್ತದೆ. “ನಿನ್ನ ಮಕ್ಕಳು ಬೆಣ್ಣೆ ತಿಂದರೆ ನನ್ನ ಮಗನ ಹೊಟ್ಟೆ ತುಂಬುತೈತಿ” ಎಂದು ಲೇಖಕಿಯ ತಾಯಿಯಲ್ಲಿ ಭರಮಿ ಹೇಳಿದ ಮಾತು ಮಾರ್ಮಿಕವಾಗಿದೆ. ಲೇಖಕಿ ಮತ್ತು ಮನೆಯವರು ಊರಿಗೆ ಹಿಂತಿರುಗುವ ವೇಳೆಯಲ್ಲಿ ಭರಮಿ ತನ್ನ ಮಗನನ್ನು ಕಳೆದುಕೊಂಡ ನೋವನ್ನು ಅದುಮಿಟ್ಟುಕೊಂಡು, ಬೆಣ್ಣೆಯ ಗಡಿಗೆಗಳನ್ನು ಕಾರಿನಲ್ಲಿ ಇಡಲು ಹೇಳುತ್ತಾಳೆ. ದುಃಖದ ಮಡುವಿನಿಂದ ಹೊರಳಿ ಸಾಮಾನ್ಯ ದಿನಚರಿಗೆ ಬರಲು ಪ್ರಯತ್ನಿಸುವ ಈ ಸಂದರ್ಭವನ್ನು ಲೇಖಕಿಯು ಆಂಗ್ಲ ಕವಿ ಕೀಟ್ಸ್ ನ ತತ್ವಕ್ಕೆ ಹೋಲಿಸುತ್ತಾರೆ. ವೈಶಾಖ ಭೂಮಿಯನ್ನು ಸುಟ್ಟರೂ ಶ್ರಾವಣದ ಮಳೆ ಹಸಿರು ಹುಟ್ಟಿಸುತ್ತದೆ. ಜೀವನದಲ್ಲಿ ಮೃತ್ಯು ತಾಂಡವವಾಡಿದರೂ ಕಾಲಕ್ರಮೇಣ ಉತ್ಸಾಹ ಉಕ್ಕುತ್ತದೆ ಎಂದು ಕೀಟ್ಸ್ ನ ode on a gracian urn ಎಂಬ ಕವನ ಹೇಳುತ್ತದೆ. ಬೆಣ್ಣೆಯ ಗಡಿಗೆಗಳು ಅವರಿಗೆ ಚಿತಾಭಸ್ಮ ಕುಂಭಗಳಾಗಿ ಕಂಡು ಬಂದು ಹೊರಗೆ ಜೀವನ ಒಳಗೆ ಮರಣ ಎಂಬ ಸತ್ಯ ವ್ಯಕ್ತವಾಗುತ್ತದೆ.

    ಭಾವಜೀವಿ ಪ್ರಬಂಧಗಾರ್ತಿ ಸುನಂದ ಅವರು ‘ಋಣ’ ಎಂಬ ಪ್ರಬಂಧದಲ್ಲಿ ಸಂತಾನವಿಲ್ಲದೆ ಪಡುವ ಹೆಣ್ಣಿನ ವೇದನೆಯನ್ನು, ಆ ಕೊರತೆಯನ್ನು ನೀಗಿಸಲು ವರವಾಗಿ ದೊರಕಿದ ದಾಸ ಎಂಬ ನಾಯಿ ಹಾಗೂ ಅದರ ನಿಸ್ವಾರ್ಥ ಪ್ರೀತಿ, ನಿಷ್ಠೆ, ಭಾವನೆಯನ್ನು ಗುರುತಿಸುವ ಶಕ್ತಿ ಇವೆಲ್ಲವನ್ನು ಆರ್ದ್ರತೆಯೊಂದಿಗೆ ಬರಹ ರೂಪಕ್ಕಿಳಿಸಿದ್ದಾರೆ. ತನ್ನದೇ ಭಾವ ಪ್ರಪಂಚದಲ್ಲಿ ಲೀನವಾಗಿದ್ದ ಲೇಖಕಿ ಮನೆಯ ಬಳಿ ಬಂದ ದಾಸನನ್ನು ಕಾಣುತ್ತಾಳೆ. ಆ ಕ್ಷಣಕ್ಕೆ ಮಾತೃ ಹೃದಯದ ಹಾಗೂ ಕವಿ ಹೃದಯದ ಅಂಜನಾಳ ಮನ ಮಿಡಿಯುವ ಮಾತು, ದಾಸ ಎಂಬ ನಾಯಿ ಅವಳ ಮಕ್ಕಳಿಲ್ಲದ ಮನೆಯನ್ನು ತುಂಬಿಕೊಂಡ ಆ ದಿನಗಳನ್ನು ನೆನಪಿಸಿಕೊಂಡಾಗ ಬರಹಗಾರ್ತಿ ಭಾವುಕರಾಗುತ್ತಾರೆ.

    ಮಕ್ಕಳಿಲ್ಲದ ಮನೆಯಲ್ಲಿ ಸದ್ದು ಗದ್ದಲವಿಲ್ಲದಿದ್ದರೂ ಮನೆ ಮಾತ್ರ ಅಚ್ಚುಕಟ್ಟಾಗಿರುತ್ತದೆ. ಮನೆಯ ಸಾಮಾನು ಹಿಡಿದೆಳೆದು ಆಟವಾಡುವ ಮಕ್ಕಳು ಇಲ್ಲದೆ ಇರುವುದರಿಂದ ಮನೆಯು ಸ್ವಚ್ಚವಾಗಿರುತ್ತದೆ. ದಾಸ ಮನೆಗೆ ಕಾಲಿಟ್ಟ ದಿನ ಪಡಸಾಲೆ ಅಸ್ತವ್ಯಸ್ಥವಾಗುತ್ತದೆ. ಟೀಪಾಯಿಯ ಮೇಲಿದ್ದ ಹೂದಾನಿ ಉರುಳಿ ರತ್ನಗಂಬಳಿ ತೊಯ್ದು ಹೋಗುತ್ತದೆ. ವೃತ್ತ ಪತ್ರಿಕೆ ಚೆಲ್ಲಾಪಿಲ್ಲಿಯಾಗುತ್ತದೆ. ಆದರೆ ಅಂಜನಾ ಆ ನಾಯಿಮರಿಯನ್ನು ಎತ್ತಿ ಮುದ್ದಾಡಿ, ಹಾಲು ಕುಡಿಸಿ, ತಲೆ ನೇವರಿಸುತ್ತಾಳೆ. ಮನೆಯೊಳಗೆ ಮಕ್ಕಳಿರುವ ಲಕ್ಷಣಗಳನ್ನು ತಾನು ಬಂದ ದಿನವೇ ತೋರ್ಪಡಿಸಿದ ಆ ನಾಯಿ ಅವಳ ದಾಸನಾಗುತ್ತಾನೆ. ಅದುಮಿ ಹಿಡಿದಿದ್ದ ಮಾತೃ ವಾತ್ಸಲ್ಯದ ತೊರೆ ಸಾಗರವಾಗಿ ದಾಸನನ್ನು ತೋಯಿಸಿಬಿಡುತ್ತದೆ. ಆಕೆ ಮುದ್ದಿಸುವಾಗ ಕೇಳಿಸುವ ಕೈ ಬಳೆಗಳ ಸದ್ದು ದಾಸನಿಗೆ ಬಹಳ ಇಷ್ಟ. ಹಾಲು ಕುಡಿಸಿ ಮೈ ನೇವರಿಸುವ ಕೈಗಳು ದಾಸನಿಗೆ ಹೆಚ್ಚು ಆಪ್ತ.

    ಪುಟ್ಟ ಕಂದನಿಗೆ ಅಪ್ಪ ಅಮ್ಮನನ್ನು ಬೆಸೆಯುವ ತಾಕತ್ತಿದೆ. ಅದನ್ನೇ ದಾಸ ಎಂಬ ನಾಯಿ ಸಮೀರ ಮತ್ತು ಅಂಜನಾಳನ್ನು ಇನ್ನಷ್ಟು ಹತ್ತಿರಕ್ಕೆ ಬರುವಂತೆ ಮಾಡುತ್ತದೆ. ‘ತಾಯ್ತನ! ಹೆಣ್ಣಿಗೆ ಎಂಥ ಸುಖ’ ಎಂದು ಲೇಖಕಿ ಹೇಳಿದ್ದರಲ್ಲಿ ಎರಡು ಮಾತಿಲ್ಲ. ಈ ಲೇಖನದಲ್ಲಿ ಮನುಷ್ಯ ಮತ್ತು ಪ್ರಾಣಿಯ ಸಂಬಂಧ ಅನ್ನುವುದಕ್ಕಿಂತ ತಾಯಿ ಮತ್ತು ಮಗುವಿನ ಬಂಧ ಎಷ್ಟು ಅಮೋಘ ಎನ್ನುವಷ್ಟು ಹತ್ತಿರವಾಗಿದ್ದರು ದಾಸ ಮತ್ತು ಅಂಜನಾ.

    ಅಂಜನ ತೀರಿಕೊಂಡ ಬಳಿಕ ಸಮೀರ ಆಕೆಯನ್ನು ಮರೆತು ಬೇರೆ ಮದುವೆಯಾದರೆ, ಋಣ ಹರಿಯಲೊಲ್ಲದ ದಾಸ ಆಕೆಯ ಕೈ ಬಳೆಗಳ ಸದ್ದಿಲ್ಲದ ಬೇಸರದಲ್ಲಿ ಆಕೆಯನ್ನು ಹುಡುಕುತ್ತಾ ಅಲೆಯುತ್ತಾನೆ. ಇದನ್ನು ಕಂಡ ಸುನಂದಾರವರು ಬಹಳ ನೊಂದುಕೊಳ್ಳುತ್ತಾರೆ. ಅಂಜನಾಳ ಚಿತಾ ಭಸ್ಮದಲ್ಲಿ ಸಿಕ್ಕಿದ ಎಲುಬನ್ನು ದಾಸ ಕಚ್ಚಿಕೊಂಡು ಬಂದಿದ್ದು ಅದು ಆಕೆಯ ಕೈಯದ್ದು ಆಗಿರಬಹುದೇ ಎಂದು ಸಂಶಯ ವ್ಯಕ್ತಪಡಿಸಿದ ಮಾತಿನ ಹಿಂದೆ ದಾಸನಿಗೆ ಅನ್ನ ನೀಡಿದ ಅಂಜನಾಳ ‘ಋಣ’ ಇತ್ತೆಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಮನೆಗಳಲ್ಲಿ ತಯಾರಿಸುವ ‘ಸಜ್ಜಿಗೆ ಅವಲಕ್ಕಿ’ಯಂತೆ ಧಾರವಾಡದ ಬ್ರಾಹ್ಮಣರ ಮನೆಯ ಬೆಳಗಿನ ಉಪಹಾರಗಳಲ್ಲೊಂದು ಮೊಸರವಲಕ್ಕಿ. ತಿನಿಸನ್ನು ಮುಂದಿಟ್ಟುಕೊಂಡು, ನಮ್ಮ ಜೊತೆಗೆ ಬದುಕಿ ಮರೆಯಾದವರ ನೆನಪನ್ನು ಹಸಿಯಾಗಿಸುವ ಪರಿಯನ್ನು ಲೇಖಕಿ ಚೆನ್ನಾಗಿ ನಿರೂಪಿಸಿದ್ದಾರೆ. ಅವರ ಬಾಲ್ಯದ ಸಮಯದಲ್ಲಿ ಮೊಸರವಲಕ್ಕಿ ಮಾಡುವ ಕೆಲಸ ಅವರ ವಿಧವೆ ಅತ್ತೆಯರದ್ದಾಗಿತ್ತು. ಅವರ ಕಷ್ಟದ ನೀರಸ ಬದುಕನ್ನು ಲೇಖಕಿ ‘ಕೆಸರಲ್ಲಿ ಬೆಳೆದು ಕಾಲಲ್ಲಿ ತುಳಿದು ಕುಟ್ಟಿ ಮಾಡಿದ ಬಿಳಿಯಾದ ಅವಲಕ್ಕಿಯಂತೆ’ ಎಂದು ಹೇಳುತ್ತಾರೆ. ತಾನು ವಿಧವೆಯಾದಾಗ ನಿತ್ಯವೂ ಮೊಸರವಲಕ್ಕಿಯನ್ನು ತಿನ್ನಬಹುದಲ್ಲ ಎಂದುಕೊಳ್ಳುವ ಲೇಖಕಿಯ ಬಾಲ್ಯದ ಮುಗ್ಧತೆ ಚೇತೋಹಾರಿಯಾಗಿದೆ. ಲೇಖಕಿಯ ತಾಯಿ ಮೊಸರವಲಕ್ಕಿಯನ್ನು ತಯಾರಿಸಿದಾಗ ನನಗೂ ಬೇಕು ಎಂದು ಅವರ ತಮ್ಮ ಕೈ ನೀಡುತ್ತಾನೆ. ಆತನ ಕೈ ಅವರ ತಂದೆಯ ಕೈಯನ್ನು ಹೋಲುತ್ತಿದ್ದು ಅದನ್ನು ನೆನಪಿಸಿಕೊಂಡ ತಕ್ಷಣ ತಾಯಿ ಬಹಳ ಸಂಕಟಪಟ್ಟರೆಂದು ಸುನಂದಾ ಅವರು ತಿಳಿಸುತ್ತಾರೆ. ತಂದೆಯವರು ಮೊಸರವಲಕ್ಕಿ ತಿನ್ನುತ್ತಿದ್ದ ಪರಿ, ಒಮ್ಮೊಮ್ಮೆ ತಯಾರಿಸುತ್ತಿದ್ದ ಸ್ಪೆಷಲ್ ಮೊಸರವಲಕ್ಕಿ ಅದರ ಮೇಲೆ ಅವರಿಗಿದ್ದ ಪ್ರೀತಿ ಎಲ್ಲವೂ ಸವಿನೆನಪುಗಳೇ ಆದರೂ ಲೇಖಕಿಗೆ ಬೇಸರವನ್ನು ಉಂಟುಮಾಡುತ್ತದೆ. ಅವರು ದುಃಖಿತರಾದಾಗ ತಾಯಿ ಸ್ವತಃ ನೋವಿನಲ್ಲಿದ್ದರೂ “ಏನು ನೆನಪು ಮಾಡಿಕೊಂಡೆ? ಹಿಂದಿನದನ್ನು ಕನಸು ಅಂತ ಮರೆತುಬಿಡು” ಅಂದರೂ ತಂದೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

    ಸುನಂದಾ ಅವರ ತಂದೆ ತೀರಿಕೊಂಡಾಗ ‘ಅಳಬೇಡ ನಾನಿದ್ದೇನೆ’ ಎಂದು ಸಂತೈಸಿದ ಮಾವ ನಿಜವಾಗಿಯೂ ಮಹಾನ್ ವ್ಯಕ್ತಿ. ಗಣೇಶ ಚತುರ್ಥಿಯ ಹಿಂದಿನ ದಿನ ಮಾವನ ತಿಥಿ ಆದರೆ ಮರುದಿನ ತಂದೆಯದ್ದು. ಅಗಲಿದವರ ಮೇಲಿನ ಪ್ರೀತಿಗೆ ಪ್ರತಿವರ್ಷ ಅವರ ನೆನಪಲ್ಲಿ ಅವರಿಗೆ ಪ್ರಿಯವಾದ ತಿನಿಸನ್ನು ಮಾಡುವ ಸಂಪ್ರದಾಯವಿದೆ. ಆದುದರಿಂದ ಮನೆಯಲ್ಲಿ ಆ ದಿನ ಮೊಸರವಲಕ್ಕಿಯೇ ಪ್ರಸಾದ. ಎಲ್ಲವನ್ನು ನೆನಪು ಮಾಡಿಕೊಂಡು ಲೇಖಕಿ ಅತ್ತಾಗ ಅವರ ತಾಯಿ ಹೇಳಿದ ಸಮಾಧಾನದ ಮಾತು ಮನಮುಟ್ಟುತ್ತದೆ. ‘ನಾನು ಮತ್ತು ನಿನ್ನ ಅತ್ತೆ ಎಲ್ಲಾ ದುಃಖ ಮರೆತು ಮುಂದೆ ಹರಿಯುವ ಪ್ರವಾಹದ ಜೊತೆ ಈಜ ಹೊರಟವರು’ ಎನ್ನುವ ಮಾತಿನಲ್ಲಿ ಅವರ ದೃಢ ಮನಸ್ಸು ಗೋಚರಿಸುತ್ತದೆ. ಇವರಿಬ್ಬರು ಕರಗುವ ಮೇಣದ ಬತ್ತಿಗಳಲ್ಲ, ಕಲ್ಲಿನ ಪ್ರತಿಮೆ ಎಂದು ಲೇಖಕಿ ಭಾವಿಸುತ್ತಾರೆ. ತಿಂಡಿ ತಿನಿಸುಗಳಲ್ಲದೆ ಬೇರೆ ಕೆಲವು ಸನ್ನಿವೇಶಗಳು ತಂದಿಡುವ ನೆನಪುಗಳಿಂದ ಕುಗ್ಗದೆ, ಮರೆಯಾದ ಆತ್ಮೀಯರ ಆದರ್ಶಗಳನ್ನು ಜೀವಮಾನವಿಡೀ ಕಾಪಿಟ್ಟು ಅವರಂತೆ ಬದುಕಿ ನಮ್ಮ ಕಿರಿಯರಿಗೆ ನಾವು ಕೂಡ ಮಾರ್ಗದರ್ಶಕರಾಗಬೇಕೆಂಬ ಆಶಯ ಈ ಬರಹದಲ್ಲಿದೆ.

    ‘ಹೆಣ್ಣು ಭೂಮಿ’ ಎಂಬ ಲೇಖನದಲ್ಲಿ ರುದ್ರನೆಂಬ ರೈತ ತನ್ನ ಸಂಸಾರ ಸಮೇತ ಲೇಖಕಿಯ ಮನೆಗೆ ಬಂದು ತನ್ನ ಮೊಮ್ಮಗನ ಬಗ್ಗೆ ಅವರ ತಂದೆಯಲ್ಲಿ ದೂರುತ್ತಾನೆ. ಹದಿಹರೆಯದ ನಿಂಗಣ್ಣಿ ತಾಯಿಯಲ್ಲಿ ‘ನಿನ್ನನ್ನು ಜನರು ಸೂಳೆ ಎನ್ನುತ್ತಾರೆ. ನನ್ನ ಅಪ್ಪ ಯಾರು?’ ಎಂದು ಕೇಳಿ ಕೊಡಲಿ ಎತ್ತಿದ ವಿಚಾರವನ್ನು ಲೇಖಕಿ ಹೇಳಿದರೂ ತನ್ನ ತಂದೆಯ ತಾಯಿಯ ಮನೆಗೆ ಹೋಗುವ ಅವಕಾಶವನ್ನು ತಾಯಿ ಚೆನ್ನಮ್ಮ ಮಾಡಿಕೊಟ್ಟಿದ್ದರಿಂದ ತನ್ನ ತಂದೆ ಮಲ್ಲೇಶಿ ಎಂದು ಮಗನಿಗೆ ಗೊತ್ತಿತ್ತು ಎಂದು ಅನಿಸುತ್ತದೆ. ಹದಿಹರೆಯದ ನಿಂಗಣ್ಣಿಗೆ ಕಾಲೇಜಿನಲ್ಲಿ ಸಹಪಾಠಿಗಳಿದ್ದರೂ ಅವಮಾನವಾಗಿರಬಹುದು. ಕಾಲೇಜಿನಲ್ಲಿ ಅಪ್ಪನ ಹೆಸರನ್ನು ನಮೂದಿಸದಿದ್ದುದರಿಂದ ಸಹಜವಾಗಿಯೇ ಆತ ಹತಾಶೆಯಿಂದ ಕುಗ್ಗಿ ಹೋಗಿರಬಹುದು ಎಂದು ಅರಿವಾಗುತ್ತದೆ. ಇಲ್ಲಿ ಲೇಖಕಿಯವರು ಮಕ್ಕಳ ಪಾಲಿಗೆ ತಂದೆಯ ಸ್ಥಾನದ ಮಹತ್ವವನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಂಗಣ್ಣಿಯ ಜೀವನವನ್ನು ಕಂಡ ಲೇಖಕಿ ತನ್ನ ಎದುರಿಗೆ ನಿಂತ ತಂದೆಯನ್ನು ಕಂಡಾಗ ಹೆಮ್ಮೆ ಅನಿಸಿ ತನಗಿರುವ ಭಾಗ್ಯಕ್ಕೆ ಸಂತಸಪಡುತ್ತಾರೆ. ಇಲ್ಲಿ ಚೆನ್ನಮ್ಮನ ತಂದೆ ತಾಯಿಯರಾದ ರುದ್ರ ಪಾರ್ವತಿಯರಿಗೆ ತಮ್ಮ ಮಗಳ ಜೀವನದ ಬಗ್ಗೆ ಅನುಕಂಪ, ಬೇಸರವಿದ್ದರೆ, ಚೆನ್ನಮ್ಮ ತಂದೆ ಇಲ್ಲದ ತನ್ನ ಕರುಳ ಬಳ್ಳಿಯನ್ನು ನೆನೆದು ನೊಂದುಕೊಂಡಿರುತ್ತಾಳೆ. ಕಾಕತಾಳೀಯ ಎಂಬಂತೆ ಮಲ್ಲೇಶಿ ಮತ್ತು ನಿಂಗಣ್ಣ ಇಬ್ಬರು ಹೆತ್ತ ತಾಯಿಗೆ ಕೊಡಲಿ ಎತ್ತಿದವರು. ತಾಯಿಗೆ ಏಟು ತಾಗಿದಾಗ ಮಲ್ಲೇಶಿ ಭಯದಿಂದ ಓಡಿ ಹೋಗುತ್ತಾನೆ. ಆತ ಮರಳಿ ಬಾರದಿದ್ದರೂ, ಅವನಿಗಾಗಿ ಕಾದು, ಬಾಳು ಸವೆಸುವ ಚೆನ್ನಮ್ಮನ ಸ್ಥಿತಿ ಚಿಂತನೀಯವಾಗಿದೆ. ಮೊಮ್ಮಗನ ಬುದ್ಧಿ ತಿಳಿದ ರುದ್ರ ಮೊಮ್ಮಗನ ಅಜ್ಜಿಯ ಮಾತು ಕೇಳಿ ಎಲ್ಲಿ ಅವನ ಅಪ್ಪ ಮಲ್ಲೇಶಿಯಂತೆ ತನ್ನ ಮಗಳನ್ನು ನಡು ನೀರಲ್ಲಿ ಬಿಡುತ್ತಾನೋ ಎಂದು ಭಯ ಪಡುತ್ತಾನೆ. ನಿಂಗಣ್ಣಿ ತಂದೆ ಹೆಸರಿನ ಪ್ರಸ್ತಾಪವಾದಾಗೆಲ್ಲ ಗೊಣಗುತ್ತಾನೆ. ಇವನ ಈ ನಡವಳಿಕೆಗೆ ಅಜ್ಜಿಯೇ ಕಾರಣ. ಅವಳು ಚೆನ್ನಮ್ಮನ ಬಗ್ಗೆ ಇಲ್ಲಸಲ್ಲದನ್ನು ಹೇಳಿಕೊಟ್ಟಿರುತ್ತಾರೆ. ತಿರುಗಿ ಬಾರದ ತಂದೆಯನ್ನು ನೆನೆದು ಸಂಕಟಪಡುವ ನಿಂಗಣ್ಣಿ ಕೊನೆಗೂ ತಾಯಿಯ ಮಾತುಗಳನ್ನು ಆಲಿಸಿದಾಗ ಅವಳ ಮನವರಿತು ದಂಗಾಗಿ ಸಮಾಧಾನ ತಂದುಕೊಳ್ಳುತ್ತಾನೆ. ಹೆಣ್ಣೆಂದರೆ ಭೂಮಿತಾಯಿ. ಏನು ಬಿತ್ತಿದ್ದೇವೋ ಅದನ್ನೇ ಬೆಳೆಯುತ್ತಾಳೆ. ಹಾಗೆಯೇ ಮಗುವಿನ ಮನದಲ್ಲಿ ಪ್ರೀತಿ ಭಾವನೆ ಬೆಳೆಸಿದರೆ ಅದು ಪ್ರೀತಿಯನ್ನೇ ಹಂಚುತ್ತದೆ. ಹೃದಯದಲ್ಲಿ ದ್ವೇಷ ಭಾವನೆ ಬಿತ್ತಿದರೆ ದ್ವೇಷದಿಂದಲೇ ಮೆರೆಯುತ್ತದೆ ಎಂಬುವುದನ್ನು ಸುನಂದಾರವರು ಈ ಬರಹದ ಮೂಲಕ ತಿಳಿಯಪಡಿಸುತ್ತಾರೆ.

    ‘ಕಜ್ಜಾಯ’ ಸಂಕಲನದ ಪ್ರಬಂಧಗಳು ಸುನಂದಾ ಬೆಳಗಾಂವಕರರ ಜೀವನಾನುಭವದ ನೆಲೆಯಿಂದ ಮೂಡಿ ಬಂದಿವೆ. ಈ ಕೃತಿಯು ಶ್ರದ್ಧೆ, ಸಹನೆ, ಸ್ನೇಹಶೀಲ ನಡವಳಿಕೆ, ಸೌಹಾರ್ದತೆ, ಮಾನವೀಯತೆ ಮುಂತಾದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಬದುಕಿನ ಹಲವು ಘಟ್ಟಗಳನ್ನು ಸಂದರ್ಭೋಚಿತವಾಗಿ ಸೆರೆಹಿಡಿದ ಈ ಸಂಕಲನದಲ್ಲಿ ಧಾರವಾಡದ ಆಡುಮಾತಿನ ಲಯವನ್ನು ಔಚಿತ್ಯವರಿತು ಬಳಸಿರುವುದರಿಂದ ಕರ್ನಾಟಕದ ಯಾವ ಮೂಲೆಯ ಕನ್ನಡಿಗನಿಗೂ ಸುಲಭದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ವಿಧವೆ ಮತ್ತು ಹೆಣ್ಣಿನ ವಿದ್ಯಾಭ್ಯಾಸದ ವಿಷಯದಲ್ಲಿ ಈಗ ಸಾಕಷ್ಟು ಪ್ರಗತಿಯಾಗಿದೆ. ಲೇಖಕಿಯ ತಂದೆ ವೈದ್ಯರಾದುದರಿಂದ ಮತ್ತು ಆ ಸಮಯದಲ್ಲಿ ಒಳ್ಳೆಯ ವಿದ್ಯಾಭ್ಯಾಸ ದೊರಕಿದುದರಿಂದ ಅವರಿಗೆ ಘನತೆಯುಕ್ತ ಬಾಳುವೆ ನಡೆಸಲು ಸಾಧ್ಯವಾಯಿತು ಎಂಬುದಕ್ಕೆ ಈ ಪುಸ್ತಕವು ಸಾಕ್ಷಿಯಾಗಿದೆ. ಸಮಾಜದ ಅಂಕುಡೊಂಕು, ಅವ್ಯವಸ್ಥೆ, ಅಸಹಾಯಕತೆ, ಸಾವು ನೋವುಗಳಿಗೆಲ್ಲ ಸುನಂದಾ ಅವರ ಮನಸ್ಸು ಮಿಡಿದ ಬಗೆಯನ್ನು ಕಟ್ಟಿಕೊಡುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ.

    ವಿಮರ್ಶಕಿ : ಸೌಮ್ಯ ಪ್ರವೀಣ್

    ಪ್ರಸ್ತುತ ಗೃಹಿಣಿಯಾಗಿ ಮಂಗಳೂರಿನಲ್ಲಿ ನೆಲೆಸಿರುವ ಸೌಮ್ಯ ಪ್ರವೀಣ್ ಇವರು ಕವನ, ಚುಟುಕು ಹಾಗೂ ಭಾವಗೀತೆಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದು, ಇವರ ಭಾವಗೀತೆಗಳಿಗೆ ಹೆಸರಾಂತ ಗಾಯಕರು ದನಿಯಾಗಿದ್ದಾರೆ. ಭಕ್ತಿಗೀತೆಗಳ ಒಂದು ಅಡಕ ಮುದ್ರಿಕೆ (ಸಿ.ಡಿ) ಬಿಡುಗಡೆಯಾಗಿದೆ. ‘ಹೀಗೊಂದು ಭಾವ’ ಅವರ ಚೊಚ್ಚಲ ಕವನ ಸಂಕಲನವಾಗಿದೆ. ಮಂಗಳೂರು ಆಕಾಶವಾಣಿಯ ಭಾವಗಾನ ಹಾಗೂ ಕಾವ್ಯಧಾರೆ ಕಾರ್ಯಕ್ರಮದಲ್ಲಿ ಅವರ ಕವಿತಾ ವಾಚನ ಪ್ರಸಾರವಾಗಿದೆ. ದಿನ ಪತ್ರಿಕೆ, ವಾರ ಪತ್ರಿಕೆ, ಮಾಸಪತ್ರಿಕೆಗಳು ಹಾಗೂ ಡಿಜಿಟಲ್ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ.

    ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಇವರು ಕವಿ ಗೋಷ್ಠಿಯಲ್ಲಿ ಭಾಗವಹಿಸಿರುತ್ತಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ನಡೆಸಿದ ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಡಾ. ಕೆ.ವಿ. ತಿರುಮಲೇಶ್ ಸ್ಮರಣಾರ್ಥ ನಡೆಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ, ರಾಜ್ಯ ಮಟ್ಟದ ಯುಗಾದಿ ಕವನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಮತ್ತು ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಗಡಿ ನಾಡಿನ ಶಾಖೆಯ ಆಶ್ರಯದಲ್ಲಿ ನಡೆಸಲಾದ ರಾಜ್ಯ ಮಟ್ಟದ ‘ಜೋಗುಳ ಹಾಡು ರಚನಾ ಸ್ಪರ್ಧೆ’ಯಲ್ಲಿ ತೃತೀಯ ಬಹುಮಾನ ಗಳಿಸಿರುತ್ತಾರೆ.

    ಲೇಖಕಿ : ಸುನಂದಾ ಬೆಳಗಾಂವಕರ

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಕಯ್ಯಾರರು ಕನ್ನಡದ ಧ್ವನಿಯಾಗಿ ಬಾಳಿದವರು – ಡಾ. ಪ್ರಸನ್ನ ರೈ
    Next Article ಬಾಲ್ಯದಿಂದಲೇ ಅಭಿರುಚಿ ಬೆಳೆಸಿಕೊಳ್ಳಬೇಕು – ಡಾ. ಯಶವಂತ ಎನ್. ನಾಯಕ್
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026

    ಬಾಲ್ಯದಿಂದಲೇ ಅಭಿರುಚಿ ಬೆಳೆಸಿಕೊಳ್ಳಬೇಕು – ಡಾ. ಯಶವಂತ ಎನ್. ನಾಯಕ್

    May 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.