ಒಂದೇ ವೇದಿಕೆಯ ಮೇಲೆ ಎರಡು ವಿಭಿನ್ನ ಬಗೆಯ ಬಾನಿಗಳ ಭರತನಾಟ್ಯ ಕಲಾರ್ಪಣೆ ಬಹು ಸಾಮರಸ್ಯವಾಗಿ ಸಾಗಿ ಕಲಾರಸಿಕರ ಮನದುಂಬಿತು. ಅದೊಂದು ಆಹ್ಲಾದಕರ ಮುಂಜಾನೆ. ಬೆಂಗಳೂರು ನಗರದ ಮೆಡೈ ವೇದಿಕೆಯಲ್ಲಿ ದಿನಾಂಕ 11 ಜುಲೈ 2026ರಂದು ನಡೆದ ‘ಸಹಯಾತ್ರಾ’ ಭರತನಾಟ್ಯ ಕಾರ್ಯಕ್ರಮವು ಇಬ್ಬರು ಪ್ರತಿಭಾವಂತ ನೃತ್ಯಕಲಾವಿದೆಯರಾದ ರಕ್ಷಿತಾ ರಘುನಾಥನ್ ಹಾಗೂ ಸಾಗರಾ ಬಿ.ಎಸ್. ಇವರ ಕಲಾಸಾಧನೆಯ ವಿಭಿನ್ನ ಪಯಣಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿ, ಪ್ರೇಕ್ಷಕರಿಗೆ ಮನಮುಟ್ಟುವ ರಸಾನುಭವವನ್ನು ನೀಡಿತು. ಗುರು-ಶಿಷ್ಯ ಪರಂಪರೆಯ ಮೌಲ್ಯಗಳನ್ನು ಸಾರಿದ ಈ ಕಾರ್ಯಕ್ರಮವು ವಿಶಿಷ್ಟ ನೃತ್ತಗಳ ವಿನ್ಯಾಸ, ಕಲಾತ್ಮಕ ನರ್ತನ ಹಾಗೂ ಹೃದಯಂಗಮ ಭಾವಾಭಿನಯಗಳ ಸಮನ್ವಯದಿಂದ ಪರಿಣಾಮಕಾರಿಯಾಗಿ ಮೂಡಿಬಂತು.

ಅಂದಿನ ಭರತನಾಟ್ಯ ಪ್ರಸ್ತುತಿಯ ಶುಭಾರಂಭ- ಕಲೈಮಾಮಣಿ ರಮ್ಯಾ ರಾಮನಾರಾಯಣ್ ಅವರ ಶಿಷ್ಯೆ ರಕ್ಷಿತಾ ರಘುನಾಥನ್ ಅವರು ಖಂಡ ತ್ರಿಪುಟ ತಾಳದ ಮಲ್ಲಾರಿಯೊಂದಿಗೆ ಆರಂಭಿಸಿದರು. ಸಾಮಾನ್ಯವಾಗಿ ‘ಮಲಾರಿ’ಗಳು ಭರತನಾಟ್ಯ ಕಾರ್ಯಕ್ರಮದಲ್ಲಿ ಮೊದಲ ಪ್ರಸ್ತುತಿಯಾಗಿ ಉದ್ಘಾಟನಾ ಕೃತಿಯಾಗಿ ಕಂಡು ಬರುವ ನೃತ್ತಬಂಧಗಳು. ಪ್ರಾಚೀನ ಕಾಲದಲ್ಲಿ ದೇವಾಲಯಗಳ ಪ್ರಾಕಾರಗಳಲ್ಲಿ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಗಳಲ್ಲಿ ಹೊತ್ತು ನಡೆಯುತ್ತಿದ್ದ ಮೆರವಣಿಗೆಗೆಗಳಲ್ಲಿ ನರ್ತಕಿಯರು ಅದರ ಜೊತೆ ಜೊತೆ ನರ್ತನ ಮಾಡುತ್ತ ಸಾಗುತ್ತಿದ್ದರು. ಇದೂ ಒಂದು ಬಗೆಯ ನೃತ್ಯಸೇವೆಯಾಗಿತ್ತು. ಕಲಾವಿದೆ ರಕ್ಷಿತಾ, ಇದನ್ನು ಬಹು ಕಲಾತ್ಮಕವಾದ ನೃತ್ಯ ವಿನ್ಯಾಸ, ಅಡವುಗಳ ಸೌಂದರ್ಯದಲ್ಲಿ, ಭಾವ ಭಂಗಿಗಳ ಸೊಬಗಿನಲ್ಲಿ ಪ್ರಸ್ತುತಪಡಿಸಿದರು. ನಂತರ ಭಾಗವತ ಪುರಾಣದ ಕೃಷ್ಣಕರ್ಣಾಮೃತ ಶ್ಲೋಕವನ್ನು ಅತ್ಯಂತ ಭಾವಪೂರ್ಣವಾಗಿ ಸುಂದರಾಭಿನಯದಿಂದ ಕಲಾರಸಿಕರಲ್ಲಿ ದೈವೀಕ ಅನುಭೂತಿಯನ್ನು ಸೃಷ್ಟಿಸಿದರು.



ಮುಂದೆ- ರಕ್ಷಿತಾ- ಮೇಳತ್ತೂರು ವೆಂಕಟರಾಮ ಶಾಸ್ತ್ರಿ ವಿರಚಿತ ಹುಸೇನಿ ರಾಗ, ರೂಪಕ ತಾಳದ “ಏ ಮಾಯಲಾಡಿರಾ” – ‘ಸ್ವರಜತಿ’ಯಲ್ಲಿ ವಿರಹೋತ್ಕಂಠಿತ ನಾಯಕಿಯ ಅಂತರಂಗದ ಭಾವಲೋಕವನ್ನು ಮನೋಜ್ಞವಾದ ಅಂಗಿಕಾಭಿನಯ ಮತ್ತು ಸೂಕ್ಷ್ಮ – ಸಾತ್ವಿಕಾಭಿನಯದ ಮೂಲಕ ಜೀವಂತಗೊಳಿಸಿದರು. ಅಭಿಸಾರಿಕೆಯಾದ ನಾಯಕಿಯ ತೀವ್ರ ವಿರಹ – ತಲ್ಲಣ- ನೈರಾಶ್ಯ, ಹುಸಿಗೋಪದ ವಿವಿಧ ಆಯಾಮಗಳನ್ನು ರಕ್ಷಿತಾ ಬಹು ನವಿರಾಗಿ ನಿರೂಪಿಸಿದರು. ಪ್ರಿಯತಮನ ಬರುವಿಕೆಗಾಗಿ ಮಾಡಿಕೊಂಡ ಸಿದ್ಧತೆ – ಅಲಂಕಾರಗಳು, ನಿರೀಕ್ಷೆ – ನಿರಾಶೆ, ಅವನಿಗೆ ಇನ್ನೊಬ್ಬ ಪ್ರೇಯಸಿ ಇರಬಹುದೇ ಎಂಬ ಕಲ್ಪನೆಯಲ್ಲಿ ಮೂಡಿಬರುವ ಅಸೂಯೆಯ ಭಾವಗಳು ಸುವ್ಯಕ್ತವಾದವು. ಮುಂದಿನ ಹಂತದಲ್ಲಿ ಅದು ಸಮರ್ಪಣೆ ಮತ್ತು ಭಕ್ತಿ—ಶೃಂಗಾರರಸದ ಅನೇಕ ಆಯಾಮಗಳನ್ನು ಪಡೆದು, ನಾಯಕಿಯ ಭಾವಭಿವ್ಯಕ್ತಿಯನ್ನು ಅತ್ಯಂತ ಸಂವೇದನಾಶೀಲವಾಗಿ ನಿರೂಪಿಸಿದ ಅವರು, ಮಾನವೀಯ ಪ್ರೀತಿಯು ದೈವಿಕ ಪ್ರೇಮವಾಗಿ ಪರಿವರ್ತನೆಯಾಗುವ ಆಧ್ಯಾತ್ಮಿಕ ಅನುಭವ – ಶ್ರೀಕೃಷ್ಣನ ಮೇಲಿನ ಅಚಲ ಭಕ್ತಿಯಾಗಿ ಭಾವಪೂರ್ಣವಾಗಿ ಅನಾವರಣಗೊಂಡಿತು. ಕಲಾವಿದೆಯ ಲಯಬದ್ಧ ಹೆಜ್ಜೆಯ ಪಾದಭೇದಗಳು, ಖಚಿತ ಅಡವುಗಳು, ಸುಂದರ ಲಾಲಿತ್ಯ ಪೂರ್ಣ ಭಂಗಿಗಳು ಕಣ್ಮನ ಸೆಳೆದವು.
ಹಿರಿಯ ನೃತ್ಯಪ್ರವೀಣೆ ಮೈಲಾಪೂರ್ ಗೌರಿ ಅಮ್ಮಾಳ್ ರಚಿಸಿದ ಜತಿಗಳಿಗೆ ಅವರು ನೀಡಿದ ನಿಖರ ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಯಿತು.



ಕಾರ್ಯಕ್ರಮದ ದ್ವಿತೀಯಾರ್ಧದಲ್ಲಿ ಬೆಂಗಳೂರು ಮೂಲದ ಭರತನಾಟ್ಯ ಕಲಾವಿದೆ, ಶಿಕ್ಷಕಿ ಹಾಗೂ ‘ನೃತ್ಯ ಸಾಗರ ಕಲಾ ಕೇಂದ್ರ’ದ ಸಂಸ್ಥಾಪಕಿ ಸಾಗರಾ ಬಿ.ಎಸ್. ಇವರು ತಮ್ಮ ನೃತ್ಯದಲ್ಲಿ ಪ್ರೌಢತೆ ಮತ್ತು ಭಾವಪಕ್ವತೆಯನ್ನು ಪ್ರದರ್ಶಿಸಿದರು. ಮೊದಲಿಗೆ ಕಲಾವಿದೆ ಕೆ.ಎನ್. ದಂಡಾಯುಧಪಾಣಿ ಪಿಳ್ಳೈ ವಿರಚಿತ ರಾಗ ನಾಟಕುರಂಜಿ, ರೂಪಕ ತಾಳದ ‘ಮಾ ಮೋಹಂ ತಾನೇ ಮೀರುದೇ’ ಪದವರ್ಣಂ ಅನ್ನು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅನುಭವಜನ್ಯವಾಗಿ ಅಭಿನಯಿಸಿದರು. ಮನಮೋಹಕ ನೃತ್ತಗಳ ಮೆರುಗಿನೊಂದಿಗೆ ಮಿಡಿದ ವಿಪ್ರಲಂಭ ಶೃಂಗಾರದ ವಿರಹತಪ್ತ ನಾಯಕಿಯ ಮನದ ತುಮುಲ- ಒಳತೋಟಿಗಳನ್ನು ತಮ್ಮ ನುರಿತಾಭಿನಯದ ಭಾವಸಾಗರದಲ್ಲಿ ಸಾಕ್ಷಾತ್ಕರಿಸಿ ಹೃದಯಸ್ಪರ್ಶಿ ಅನುಭವ ನೀಡಿದರು. ಇಲ್ಲಿ ನಾಯಕಿಯ ಮನದಲ್ಲಿ ಸ್ಥಾಯಿಯದವನು ತಿರುಮಲದ ಶ್ರೀ ವೆಂಕಟೇಶ್ವರ. ಅವನ ಸನಿಧ್ಯಕ್ಕಾಗಿ ತಹತಹಿಸುವ ನಾಯಕಿಯ ತೀವ್ರ ವಿರಹಡ ಭಾವನೆಗಳು, ತವಕ-ತಲ್ಲಣಗಳಲ್ಲಿ ಅಭಿವ್ಯಕ್ತವಾಗಿ ಅದು ಶರಣಾಗತಿಯ ಭಾವ ನಿಮಜ್ಜನದಲ್ಲಿ ಮುಳುಗಿ ಭಾವಪೂರ್ಣ ಅಭಿನಯದ ಸಾತತ್ಯದ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತವಾಯಿತು. ಅವರು ನಿರೂಪಿಸಿದ ಮಿಂಚಿನ ವೇಗದ ಸುಂದರ ನೃತ್ತ ವಿನ್ಯಾಸಗಳು ನಾಯಕಿಯ ಮನದ ವಿಪ್ಲವಕ್ಕೆ ಕನ್ನಡಿ ಹಿಡಿಯಿತು.




ಕೊನೆಯಲ್ಲಿ ಮೂಡಿಬಂದ ಸಂತ ಕನಕದಾಸರ ‘ಬಾರೋ ಕೃಷ್ಣಯ್ಯ’ ದೇವರನಾಮ ಹೊಸ ಪರಿಕಲ್ಪನೆಯಲ್ಲಿ ಅನಾವರಣವಾಯಿತು. ತುಂಬು ಗರ್ಭಿಣಿಯೊಬ್ಬಳು ಬಾಲಕೃಷ್ಣನನ್ನು ತನ್ನ ಗರ್ಭಗುಡಿಯೊಳಗೆ ಬಂದು ನೆಲೆಸು ಎಂಬ ಭಾವದೀಪ್ತಿಯ ಕನಸು-ಕಲ್ಪನೆಗಳ ಸಾಕಾರವಾಗಿ ಶ್ರೀಕೃಷ್ಣನನ್ನು ತನ್ನೊಡಲೊಳಗೆ ಆಹ್ವಾನಿಸುವ, ದೇವಾದಿದೇವನಿಗೆ ತಾಯಿಯಗುವ ವಿಶಿಷ್ಟ ಹಂಬಲ ವ್ಯಕ್ತಪಡಿಸುವ ಪರಿಕಲ್ಪನೆ ನಿಜಕ್ಕೂ ವಿನೂತನ-ವಿಶಿಷ್ಟವಾಗಿತ್ತು. ಗರ್ಭಿಣಿಯ ಪ್ರತಿ ನಡೆ–ಆಂಗಿಕಾಭಿನಯದಲ್ಲಿ ಸಹಜತೆಯನ್ನು ಕಾಯ್ದುಕೊಂಡ ಕಲಾವಿದೆ ಸಾಗರ ಅವರ ಸಹಜಾಭಿನಯ ಮತ್ತು ಭಾವಪೂರ್ಣತೆ ಮೆಚ್ಚುಗೆ ಪಡೆಯಿತು.


ಒಟ್ಟಾರೆಯಾಗಿ ‘ಸಹಯಾತ್ರಾ’ ಎಂಬ ಅರ್ಥಪೂರ್ಣ ಶೀರ್ಷಿಕೆಯಲ್ಲಿ ಸಾಗಿದ ಇಬ್ಬರು ವಿಭಿನ್ನ ಬಾನಿಗಳಲ್ಲಿ ಅಭ್ಯಾಸ ಮಾಡಿದ ಕಲಾವಿದೆಯರ ಜೊತೆ ಪಯಣದ ಸಾಮರಸ್ಯ ಭರತನಾಟ್ಯದ ಸಾಂಪ್ರದಾಯಿಕ ಸೊಬಗನ್ನು ಉಳಿಸಿಕೊಂಡಿದ್ದು ವಿಶೇಷ ಎನ್ನಬಹುದು.


*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
