ಪುತ್ತೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಇವರ ಜನ್ಮದಿನಾಚರಣೆಯ ಪ್ರಯುಕ್ತ ನೀಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ’ಯ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ವಿ.ಬಿ. ಆರ್ತಿಕಜೆ ಹಾಗೂ ರೆ. ವಿಜಯ್ ಹಾರ್ವಿನ್ ಇವರು ಆಯ್ಕೆಯಾಗಿದ್ದಾರೆ.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಇವರ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಸಮಿತಿಯನ್ನು ಅಧಿಕೃತವಾಗಿ ರಚಿಸಲಾಯಿತು. ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಸಮಿತಿಯ ಅಧ್ಯಕ್ಷರಾಗಿ ಹಾಗೂ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅವರು ಕಾರ್ಯದರ್ಶಿಯಾಗಿ ಮಾರ್ಗದರ್ಶನ ನೀಡಲಿದ್ದು, ಇವರ ನೇತೃತ್ವದಲ್ಲಿ ಅರ್ಹ ಸಾಧಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಹಿಂದೆ ಪ್ರಶಸ್ತಿ ಪಡೆದ ಗಣ್ಯರು ಹಾಗೂ ಕ್ಷೇತ್ರಗಳ ವಿವರ: ಬಾಲವನ ರಾಜ್ಯ ಪ್ರಶಸ್ತಿಯನ್ನು ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಗೌರವಾನ್ವಿತ ಸಾಧಕರಿಗೆ ನೀಡಿ ಗೌರವಿಸಲಾಗಿದೆ:
* 2010: ಮಹಮ್ಮದ್ ಕುಂಞಿ (ಸಾಹಿತ್ಯ)
* 2011: ಪ್ರಮೋದ ಕುಮಾರ್ ಮತ್ತು ಭಾರ್ಗವ (ಬಾಲವಿಜ್ಞಾನ)
* 2012: ಫೇತ್ರಿ ಮಾಧವ ನಾಯ್ಕ್ (ಯಕ್ಷಗಾನ)
* 2013: ಚಿದಂಬರ ರಾವ್ ಜಂಬೆ (ರಂಗಭೂಮಿ/ನಾಟಕ)
* 2014: ಪಿ. ಶೇಷಾದ್ರಿ (ಚಲನಚಿತ್ರ)
* 2015: ನಾಗೇಶ ಹೆಗ್ಡೆ (ವಿಜ್ಞಾನ ಮತ್ತು ಪರಿಸರ ಬರಹ)
* 2017: ವೈದೇಹಿ (ಸಾಹಿತ್ಯ)
* 2018: ಬನ್ನಂಜೆ ಸಂಜೀವ ಸುವರ್ಣ (ಯಕ್ಷಗಾನ)
* 2019: ಜಯಂತ ಕಾಯ್ಕಿಣಿ (ಸಾಹಿತ್ಯ ಮತ್ತು ಚಲನಚಿತ್ರ)
* 2020: ಪ್ರೊ. ಅಮೃತ ಸೋಮೇಶ್ವರ (ಸಾಹಿತ್ಯ)
* 2021: ಪ್ರೊ. ಕೆ.ಪಿ. ರಾವ್ (ವಿಜ್ಞಾನ ಮತ್ತು ತಂತ್ರಜ್ಞಾನ)
* 2022: ಕೆ.ವಿ. ಅಕ್ಷರ (ರಂಗಭೂಮಿ ಮತ್ತು ಸಾಹಿತ್ಯ)
* 2023: ಚಂದ್ರನಾಥ ಆಚಾರ್ಯ (ಚಿತ್ರಕಲೆ)
* 2024: ಸುಕುಮಾರ ಗೌಡ (ಸಾಹಿತ್ಯ ಮತ್ತು ಶಿಕ್ಷಣ )
* 2025: ಪ್ರೊ. ಬಿ.ಎ. ವಿವೇಕ ರೈ (ಸಾಹಿತ್ಯ ಮತ್ತು ಸಂಶೋಧನೆ)
ಹಿಂದಿನ ವರ್ಷಗಳಲ್ಲಿ ಸಾಹಿತ್ಯ, ಯಕ್ಷಗಾನ, ರಂಗಭೂಮಿ, ಚಲನಚಿತ್ರ, ವಿಜ್ಞಾನ ಹಾಗೂ ಕಲಾ ಕ್ಷೇತ್ರಗಳ ಧೀಮಂತ ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದರೆ, 2026ನೇ ಸಾಲಿನ ಪ್ರಶಸ್ತಿಯನ್ನು ಡಾ. ಕಾರಂತರ ಅತ್ಯಂತ ಪ್ರಿಯ ಕ್ಷೇತ್ರವಾದ ‘ಪರಿಸರ ಕ್ಷೇತ್ರ’ದಲ್ಲಿ ಗಣನೀಯ ಸೇವಾ ಸಾಧನೆ ಮಾಡಿದ ಸೂಕ್ತ ವ್ಯಕ್ತಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಮಾಲೋಚನಾ ಸಭೆಯಲ್ಲಿ ಈಗಾಗಲೇ ಹಲವು ಪ್ರಮುಖ ಪರಿಸರ ಪ್ರೇಮಿಗಳ ಹೆಸರುಗಳು ಪ್ರಸ್ತಾಪಗೊಂಡಿದ್ದು, ಅಂತಿಮ ಅಭ್ಯರ್ಥಿಯ ಆಯ್ಕೆಯ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ. ದಿನಾಂಕ 10 ಅಕ್ಟೋಬರ್ 2026ರಂದು ಪುತ್ತೂರಿನ ಪರ್ಲಡ್ಕದ ಐತಿಹಾಸಿಕ ಬಾಲವನದಲ್ಲಿ ನಡೆಯಲಿರುವ ಡಾ. ಶಿವರಾಮ ಕಾರಂತರ 125ನೇ ಜನ್ಮದಿನೋತ್ಸವದ ಭವ್ಯ ಸಮಾರಂಭದಲ್ಲಿ ಈ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಈ ಸಮಾಲೋಚನಾ ಸಭೆಯಲ್ಲಿ ಪುತ್ತೂರಿನ ತಹಶೀಲ್ದಾರ್ ಬಿ.ಎಸ್. ಕೂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಸುವರ್ಣ, ಬಾಲವನ ಸಮಿತಿಯ ಸದಸ್ಯರು, ಹಿರಿಯ ಸಾಹಿತಿಗಳು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
