ಮುಂಬಯಿ : ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ 2026ನೇ ಸಾಲಿನ ಸರಣಿ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 15 ಆಗಸ್ಟ್ 2026ರಂದು ಶನಿವಾರ ದೇವಸ್ಥಾನದಲ್ಲಿ ಜರಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನವಿತ್ತ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾ ಗಣಪತಿ ದೇವಸ್ಥಾನದ ವೇದಮೂರ್ತಿ ಪೆರಣಂಕಿಲ ಹರಿದಾಸಭಟ್ಟರು “ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದಲ್ಲಿ ಅಜೆಕಾರು ಕಲಾಭಿಮಾನಿ ಬಳಗವು ಮುಂಬೈ ನಗರದಲ್ಲಿ ಯಕ್ಷಗಾನದ ಜಯಭೇರಿ ಬಾರಿಸಿದೆ. 2001ರಲ್ಲಿ ಇದೇ ದೇವಸ್ಥಾನದಲ್ಲಿ ಆರಂಭಗೊಂಡ ತಾಳಮದ್ದಳೆ ಸರಣಿಯ 25ನೇ ವರ್ಷದ ಕಾರ್ಯಕ್ರಮವು ಮತ್ತೆ ಇಲ್ಲಿಂದಲೇ ಆರಂಭಗೊಳ್ಳುವುದು ಯೋಗಾಯೋಗ. ಬಳಗದ ರಜತ ಪರ್ವದ ಸಲುವಾಗಿ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮುಂಬೈ ಯಕ್ಷಗಾನ ಸಮ್ಮೇಳನದಲ್ಲಿ ಎಲ್ಲಾ ಕಲಾಭಿಮಾನಿಗಳೂ, ಕಲಾಪೋಷಕರೂ ಜೊತೆಯಾಗಿ ಅದನ್ನು ಮುನ್ನಡೆಸೋಣ” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಂಬೈಯ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿ “ವರ್ಷದಿಂದ ವರ್ಷಕ್ಕೆ ಊರಿನ ಪ್ರಮುಖ ಕಲಾವಿದರನ್ನು ಬರಮಾಡಿಕೊಂಡು ಉತ್ತಮ ಗುಣಮಟ್ಟದ ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟ ಕಾರ್ಯಕ್ರಮಗಳನ್ನು ನೀಡುತ್ತಿರುವ ಅಜೆಕಾರು ಕಲಾಭಿಮಾನಿ ಬಳಗ ಮಹಾನಗರದಲ್ಲಿ ಮುಂದಕ್ಕೂ ಈ ಸಂಸ್ಕೃತಿಯನ್ನು ಬೆಳೆಸಿ ಯಕ್ಷಗಾನ ಕಲೆಯ ಪ್ರವರ್ಧಮಾನಕ್ಕೆ ಕಾರಣವಾಗಲಿ” ಎಂದು ಹಾರೈಸಿದರು.

ಪ್ರಸಿದ್ಧ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ದೇವಳದ ಟ್ರಸ್ಟಿ ಹರಿದಾಸ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಶುಭ ಕೋರಿದರು. ತವರೂರ ತಂಡದ ಹಿರಿಯ ಅರ್ಥಧಾರಿ ಹಾಗೂ ಮುಂಬಯಿ ಯಕ್ಷಗಾನ ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದು “ಇದೇ ಅಕ್ಟೋಬರ್ 3 ಮತ್ತು 4ರಂದು ಎರಡು ದಿನ ಮುಂಬೈ ಬಂಟರ ಭವನದಲ್ಲಿ ನಡೆಯುವ ‘ಮುಂಬಯಿ ಯಕ್ಷಗಾನ ಸಮ್ಮೇಳನ -2026’ ವಿವಿಧ ಗೋಷ್ಠಿಗಳು, ಯಕ್ಷಗಾನ ಪ್ರದರ್ಶನ, ಪ್ರಾತ್ಯಕ್ಷಿಕೆ, ತಾಳಮದ್ದಲೆ, ಸ್ಮೃತಿ ಸಂಪುಟ ಬಿಡುಗಡೆ, ಕಲಾವಿದರು – ಕಲಾ ಪೋಷಕರ ಸಂಮಾನ ಮತ್ತು ಪ್ರಶಸ್ತಿ ಪ್ರದಾನಗಳೊಂದಿಗೆ ಸಂಪನ್ನವಾಗಲಿದೆ” ಎಂದು ಕಾರ್ಯಕ್ರಮದ ವಿವರಗಳನ್ನು ನೀಡಿದರು. ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿ ವಂದನಾರ್ಪಣೆ ಸಲ್ಲಿಸಿದರು.

ಬಳಗದ 2026ನೇ ಸಾಲಿನ ಸರಣಿ ತಾಳಮದ್ದಳೆಯ ಪ್ರಥಮ ಕಾರ್ಯಕ್ರಮವಾಗಿ ವಿದ್ಯಾ ವಿಹಾರ್ ಅಂಬಿಕಾ ಮಂದಿರದಲ್ಲಿ ‘ಸುದರ್ಶನ ವಿಜಯ’ ಪ್ರಸಂಗದ ತಾಳಮದ್ದಳೆ ಜರಗಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ‘ಸುದರ್ಶನ ವಿಜಯ’ ಪ್ರಸಂಗ ಕರ್ತ ಮತ್ತು ಭಾಗವತ ಮಧುಕುಮಾರ್ ಬೋಳೂರು ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಿಮ್ಮೇಳದಲ್ಲಿ ದೇವಿಪ್ರಸಾದ್ ಆಳ್ವ ತಲಪಾಡಿ ಭಾಗವತರಾಗಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಚೆಂಡೆ ಮದ್ದಳೆಗಳಲ್ಲಿ ಸಹಕರಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಮಹಾವಿಷ್ಣು), ಜಯಪ್ರಕಾಶ ಶೆಟ್ಟಿ ಪೆರ್ಮುದೆ (ಲಕ್ಷ್ಮಿ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಸುದರ್ಶನ), ಸದಾಶಿವ ಆಳ್ವ ತಲಪಾಡಿ (ಶತ್ರುಪ್ರಸೂದನ) ಮತ್ತು ಪ್ರಜ್ವಲ್ ಕುಮಾರ್ ಶೆಟ್ಟಿ ಗುರುವಾಯನಕೆರೆ (ದೇವೇಂದ್ರ) ಅರ್ಥಧಾರಿಗಳಾಗಿ ಭಾಗವಹಿಸಿದ್ದರು.
