ಬೆಂಗಳೂರು : ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಜಂಟಿಯಾಗಿ ನೀಡುವ 2026ನೇ ಸಾಲಿನ ‘ವಿ.ಕೃ. ಗೋಕಾಕ್ ಪ್ರಶಸ್ತಿ’ಗೆ ಲೇಖಕ ಎನ್. ಜಗದೀಶ ಕೊಪ್ಪ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ರೂ.25,000/- ನಗದು ಮತ್ತು ಫಲಕವನ್ನು ಒಳಗೊಂಡಿದೆ. ಟ್ರಸ್ಟ್ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ, ಗೌರವಾಧ್ಯಕ್ಷ ಅನಿಲ್ ಕೊಪ್ಪ ಗೋಕಾಕ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ಟ್ರಸ್ಟ್ ಕಾರ್ಯದರ್ಶಿ ಅಭಿನವ ರವಿಕುಮಾರ ಇವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ. ದಿನಾಂಕ 28 ಆಗಸ್ಟ್ 2026ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಜಗದೀಶ ಕೊಪ್ಪ ಅವರು ರೈತ ಕುಟುಂಬದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಜಾಗತೀಕರಣ ಮತ್ತು ಗ್ರಾಮಭಾರತ’ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 1981ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಸೃಜನಶೀಲ ಆಲೋಚನೆಗಳ ಮೂಲಕ ಹೆಸರಾಗಿದ್ದಾರೆ. ಅನುವಾದ ಸೇರಿ ಸಂಗೀತ, ಸಾಹಿತ್ಯ, ಜನ ಚಳವಳಿಗಳು ಹೀಗೆ ವೈವಿಧ್ಯಮಯ ವಿಷಯಗಳಲ್ಲಿ 45 ಕೃತಿಗಳನ್ನು ರಚಿಸಿದ್ದು, ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
