ಬೆಂಗಳೂರು : ‘ವಿಶ್ವಪಥ ಕಲಾ ಸಂಗಮ’ ಹವ್ಯಾಸಿ ರಂಗತಂಡ ಅಭಿನಯಿಸುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ದಿನಾಂಕ 24 ಮೇ 2026ರ ಭಾನುವಾರ ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ನಾಟಕದ ಬಗ್ಗೆ : ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರ ಪ್ರಸಿದ್ಧ ಕಾದಂಬರಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ವನ್ನೇ ನಿರ್ದೇಶಕರು ಈ ನಾಟಕಕ್ಕೆ ರಂಗರೂಪವಾಗಿ ಬದಲಾಯಿಸಿಕೊಂಡಿದ್ದಾರೆ. ಈ ಕಾದಂಬರಿಯ ವಸ್ತು ಕೂಡ ಪ್ರೀತಿ ಮತ್ತು ಪ್ರೇಮ. ಆದರೆ, ಇಲ್ಲಿ ಪ್ರೀತಿಯ ಬಲೆಯಲ್ಲಿ ಬೀಳುವವರು ಮಾತ್ರ ಪ್ರತಿಷ್ಠಿತ ಕಾಲೇಜೊಂದರ ಘನತೆವೆತ್ತ ಇಳಿವಯಸ್ಸಿನ ಪ್ರಾಂಶುಪಾಲರು. ಇಡೀ ಪಟ್ಟಣದಲ್ಲೇ ಶಿಸ್ತಿನ ಸಿಪಾಯಿ ಎಂದು ಹೆಸರಾಗಿದ್ದ ಈ ಪ್ರಾಂಶುಪಾಲರು ಆ ಕಾಲೇಜಿನ ಶ್ರೇಯೋಭಿವೃದ್ಧಿಗಾಗಿ ತಮ್ಮ ಆಯಸ್ಸನ್ನೆ ಸವೆಸಿದವರು. ಕಾಲೇಜಿನ ಏಳಿಗಾಗಿ ಸದಾ ಚಿಂತಿಸುತ್ತಿದ್ದ ಜೀಕೆ ಮಾಸ್ತರರು ಪ್ರೇಮಕ್ಕೆ ಕಣ್ಣಿಲ್ಲವೆಂಬಂತೆ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿ ರೋಜಾ ಎನ್ನುವ ಹುಡುಗಿಯ ಪ್ರೇಮದ ಬಲೆಯಲ್ಲಿ ಬೀಳುತ್ತಾರೆ. ಮನೆಯಲ್ಲಿ ಸದಾ ಒಂದಿಲ್ಲೊಂದು ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದ ಹೆಂಡತಿಯ ಆರೈಕೆ ಮಾಡುತ್ತಲೇ ರೋಜಾಳ ಹಿಂದೆ ಬಿದ್ದು ತಮ್ಮ ಆದರ್ಶಗಳನ್ನೆಲ್ಲ ಬಲಿಕೊಡುತ್ತಾರೆ. ರೋಜಾ ಮಾಸ್ತರರ ಜೀವನದಲ್ಲಿ ಪ್ರೀತಿಯ ಆಟವಾಡಲು ಒಂದು ಕಾರಣವಿರುತ್ತದೆ. ಆಕೆ ಮಾಸ್ತರರನ್ನು ಪ್ರೀತಿಸಿದ್ದು ನಿಜವೋ, ಸುಳ್ಳೋ ಮಾಸ್ತರರ ಜೀವನದಲ್ಲಿ ಮುಂದೆ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ನಾಟಕ ನೋಡಿಯೇ ತಿಳಿಯಬೇಕು.

