ಬೆಂಗಳೂರು : ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ದಿನಾಂಕ 15 ಮೇ 2026ರಂದು ಹಮ್ಮಿಕೊಂಡ ‘ಕನಕದಾಸರ ಸಮಗ್ರ ಸಾಹಿತ್ಯ’ ಅನುವಾದ ಸಂಪುಟಗಳ 40 ಕೃತಿಗಳ ಬಿಡುಗಡೆ ಮತ್ತು ಕನಕ ಶಿಲ್ಪವನ ಅನಾವರಣವನ್ನು ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯರವರು ನೆರವೇರಿಸಿದರು.
14 ಭಾಷೆಗಳಲ್ಲಿ ಕನಕದಾಸರ ಸಾಹಿತ್ಯವನ್ನು ಅನುವಾದಿಸಲಾಗಿದ್ದು, ಪ್ರಪ್ರಥಮವಾಗಿ ಕನಕದಾಸರ ಸಾಹಿತ್ಯವನ್ನು ಕೊಂಕಣಿ ಭಾಷೆಯಲ್ಲೂ ಅನುವಾದ ಮಾಡಲಾಗಿದೆ. ಕೊಂಕಣಿ ಭಾಷೆಯ ಕೃತಿಗಳಿಗೆ ಡಾ. ಗೀತಾ ಶೆಣೈಯವರು ಸಂಪಾದಕರಾಗಿದ್ದು, ಹಲವಾರು ಕೊಂಕಣಿ ಸಾಹಿತಿಗಳು ಭಾಷಾಂತರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕೊಂಕಣಿ ಆವೃತ್ತಿಯ ಕೃತಿಯನ್ನು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರಿಂದ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಸ್ವೀಕರಿಸಿದರು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ್ ಎಸ್. ತಂಗಡಗಿ, ಕನಕದಾಸ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತಾ. ಚಿಕ್ಕಣ್ಣ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮೋಹನ ತರಂಗಿಣಿ, ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು, ನಳಚರಿತ್ರೆ, ಹರಿಭಕ್ತ ಸಾರ ಮತ್ತು ರಾಮಧಾನ್ಯ ಚರಿತ್ರೆ ಈ ಕೃತಿಗಳು ಕೊಂಕಣಿ ಭಾಷೆಗೆ ಅನುವಾದಗೊಂಡಿವೆ.

