ಮಂಗಳೂರು : ಕರಾವಳಿಯ ನೃತ್ಯ ಕ್ಷೇತ್ರಕ್ಕೆ ಪಂದನಲ್ಲೂರು ಶೈಲಿಯ ಮೂಲಕ ಅಪೂರ್ವ ಕೊಡುಗೆ ನೀಡಿದ ಕೀರ್ತಿಶೇಷ ಕರ್ನಾಟಕ ಕಲಾಶ್ರೀ ವಿದುಷಿ ಕಮಲಾ ಭಟ್ ಅವರ ಸ್ಮರಣಾರ್ಥ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕಮಲಾಂಜಲಿ ನೃತ್ಯ ಕಾರ್ಯಕ್ರಮ ನಡೆಯಿತು.
ನಾಟ್ಯಾಲಯ ಉರ್ವ ಸಂಸ್ಥಾಪಕಿ ಕಮಲಾ ಭಟ್ ಇವರ ಶಿಷ್ಯ ವಿದುಷಿ ವಿನಯ ರಾವ್ ಇವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುಗಳಿಗೆ ಶಿಷ್ಯರು ನೃತ್ಯಾರ್ಚನೆ ಸಲ್ಲಿಸಿದರು. ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಿನಯ್ ಪಿ.ಜೆ. ಮಾತನಾಡಿ, “ಕಮಲಾ ಭಟ್ ಅವರು ತಮ್ಮ ಆದರ್ಶ ನಡೆ-ನುಡಿ ಹಾಗೂ ಕಲಾ ಸಾಧನೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಕರಾವಳಿಯ ನೃತ್ಯ ಕ್ಷೇತ್ರಕ್ಕೆ ಪಂದನಲ್ಲೂರು ಶೈಲಿಯ ನೃತ್ಯವನ್ನು ಪರಿಚಯಿಸಿ, ಅದನ್ನು ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ” ಎಂದರು.

ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್, ಕಮಲಾ ಭಟ್ ಅವರ ಶಿಷ್ಯೆ ವಿನಯ ರಾವ್ ಇವರ ಗುರುಭಕ್ತಿ ಹಾಗೂ ಗೌರವವನ್ನು ಶ್ಲಾಘಿಸಿದರು. ತುಮಕೂರಿನ ಸಾಯಿ ರಾಮನ್ ನೃತ್ಯ ಕೇಂದ್ರದ ನಿರ್ದೇಶಕ ಡಾ. ಸಾಗರ್ ಟಿ.ಎಸ್. ಮಾತನಾಡಿದರು. ಭರತಾಂಜಲಿ ಸಂಸ್ಥೆಯ ನಿರ್ದೇಶಕ ಹಾಗೂ ನೃತ್ಯಗುರು ಶ್ರೀಧರ ಹೊಳ್ಳ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದರಾದ ವಿನಯ ರಾವ್, ಕೃಷ್ಣ ರಾವ್ ದಂಪತಿಯನ್ನು ಗೌರವಿಸಿದರು.

ವಿದುಷಿಯರಾದ ಪ್ರತೀಕ್ಷಾ ಆರ್. ರಾವ್, ದೀಪಾ ಪ್ರವೀಣ್, ಸಮೀಕ್ಷಾ ಆಚಾರ್ಯ, ದೀಕ್ಷಾ ಉಡುಪ, ದೀಪ್ತಿ ಎಚ್., ಹರ್ಷಿತಾ ಎಂ. ಮಲ್ಯ, ದಿವ್ಯಾ ತಂತ್ರಿ, ಕೃಷ್ಣ ಎಂ. ನಾಯರ್ ಮತ್ತು ಅಂಜನ ವಿಶ್ವೇಶ ಭಟ್ ನೃತ್ಯ ಪ್ರದರ್ಶನ ನೀಡಿದರು. ಹಿರಿಯ ಶಿಷ್ಯೆ ಹಾಗೂ ನೃತ್ಯಸುಧಾ ಸಂಸ್ಥೆಯ ವಿದುಷಿ ಸೌಮ್ಯ ಸುಧೀಂದ್ರ ಕಾರ್ಯಕ್ರಮ ನಿರೂಪಿಸಿ, ನಾಟ್ಯಾಲಯ ಉರ್ವದ ನಿರ್ದೇಶಕಿ ವಿನಯ ರಾವ್ ವಂದಿಸಿದರು.
