ಸೋಮವಾರಪೇಟೆ : ಸೋಮವಾರಪೇಟೆ ಸೃಷ್ಟಿಯ ಚಿಗುರು ಕವಿ ಬಳಗ, ವಿದ್ಯಾ ನರ್ಸಿಂಗ್ ತರಬೇತಿ ಸಂಸ್ಥೆಯ ವತಿಯಿಂದ ಮಾನಸ ಸಭಾಂಗಣದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-2023 ಪ್ರಯುಕ್ತ ಆಯೋಜಿಸಿದ್ದ ಗೀತಗಾಯನ ಮತ್ತು ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 25-11-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಕನ್ನಡ ಸಿರಿ ಬಳಗದ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡಿದ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಮತ್ತು ಪತ್ರಕರ್ತರು ಕನ್ನಡ ಏಕೀಕರಣಕ್ಕಾಗಿ ತ್ಯಾಗ ಮಾಡಿದ್ದಾರೆ. ಇವತ್ತು ಕನ್ನಡ ನಮಗೆ ಅನ್ನ ಕೊಡುತ್ತಿರುವ ಭಾಷೆಯಾಗಿದೆ. ಕನ್ನಡ ಭಾಷಿಕರನ್ನು ಒಗ್ಗೂಡಿಸಿ ಕನ್ನಡ ನಾಡಿಗಾಗಿ ಸುದೀರ್ಘ ಹೋರಾಟ ನಡೆದಿದೆ. ಇದರಲ್ಲಿ ಅನೇಕರು ಪ್ರಾಣತ್ಯಾಗವನ್ನು ಮಾಡಿದ್ದಾರೆ. ಕನ್ನಡನಾಡು ಮತ್ತು ಭಾಷೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ” ಎಂದು ಹೇಳಿದರು.
ಕುಶಾಲನಗರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ, “ಗ್ರಾಮೀಣ ಭಾಗದಲ್ಲಿ ಕನ್ನಡ ಮನಸ್ಸುಗಳು ಹೆಚ್ಚಿವೆ. ಕನ್ನಡ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿ ಬೆಳಸುವ ಕೆಲಸ ತೆರೆಮರೆಯಲ್ಲೇ ಮಾಡುತ್ತಿದ್ದಾರೆ. ಕನ್ನಡ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಮೂಲಕ ಸಾಹಿತ್ಯ ಕೃಷಿಯನ್ನು ಮಾಡಬೇಕಿದೆ. ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಸಾಹಿತ್ಯ, ಪರಂಪರೆಯ ಬಗ್ಗೆ ಓದಿ ತಿಳಿದುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಕೆ.ಎನ್. ದೀಪಕ್, ಕವಯತ್ರಿ ಬಿ.ಪಿ. ಸುಮತಿ ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕವಿ ಬಳಗದ ಅಧ್ಯಕ್ಷ ನ.ಲ. ವಿಜಯ, ನರ್ಸಿಂಗ್ ತರಬೇತಿ ಕೇಂದ್ರದ ಪ್ರಾಂಶುಪಾಲ ಟಿ.ಎಚ್. ಆಲೀಮಾ, ವ್ಯವಸ್ಥಾಪಕ ಕೆ.ಇ. ಸುಲೈಮಾನ್, ಕ.ಸಾ.ಪ. ಮಾಜಿ ಅಧ್ಯಕ್ಷ ಎಚ್.ಜೆ.ಜವರಪ್ಪ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಭುವನೇಶ್ವರಿಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಕವಿ ಬಳಗ ಪಾರಿವಾಳ ಹಾರಿಬಿಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿತು.