ಮುಕ್ಕಾಟಿರ ವಿಠ್ಠಲ ಸೋಮಯ್ಯ ಇವರು ಮೂಲತಃ ದೇವಣಗೇರಿ ಗ್ರಾಮದ ಮುಕ್ಕಾಟಿರ ಸುಬ್ಬಯ್ಯ ಮತ್ತು ಮಾಚವ್ವ ದಂಪತಿಯ ತೃತೀಯ ಪುತ್ರನಾಗಿ 1949ರಲ್ಲಿ ಜನನ. ತಮ್ಮ ವಿದ್ಯಾಭ್ಯಾಸವನ್ನು ದೇವಣಗೇರಿ, ಒಂಟಿಯಂಗಡಿ, ಮಡಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಗಿಸಿದ್ದಾರೆ. ಮಡಿಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಸರ್ಕಾರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿರುವರು. ಬಳಿಕ ಬಿ.ಇ. (ತಾಂತ್ರಿಕ) ಪದವಿಯನ್ನು ಮಣಿಪಾಲ ತಾಂತ್ರಿಕ ಶಿಕ್ಷಣ ಸಂಸ್ಥೆ (ಈಗಿನ MIT)ಯಲ್ಲಿ ಪಡೆದಿರುತ್ತಾರೆ. ಎಳವೆಯಲ್ಲಿಯೇ ಕ್ರೀಡೆ ಹಾಗೂ ಚಿತ್ರಕಲೆಯಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದರು. ವೃತ್ತಿಯಿಂದ ಮುಂಬಯಿಯ ಟಾಟಾ ಪವರ್ ಕಂ ಮತ್ತು ಬರೋಡಾದ ಎಲ್. ಆ್ಯಂಡ್ ಟಿ. ಕಂಪನಿಗಳಲ್ಲಿ ಅಭಿಯಂತರರಾಗಿ ನೌಕರಿ ಮಾಡಿದ್ದಾರೆ.

ಬಳಿಕ ಹುಟ್ಟೂರಿಗೆ ಆಗಮಿಸಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಕೆ. ಮೋಹನ್ ಹಾಗೂ ವಿ.ಎಂ. ಶೋಲಾಪುರ್‌ಕರ್ ಅವರ ಗರಡಿಯಲ್ಲಿ ಮರದ ಕೆತ್ತನೆ, ಮರಗಳ ನೈಸರ್ಗಿಕ ಬಣ್ಣದ ಜೋಡಣೆ, ಉಬ್ಬು ಚಿತ್ರಕಲೆ, ಕುಂಡಲಿ ಅಥವಾ ಹುದುಗು ಕಲೆಗಳಲ್ಲಿ ತರಬೇತಿ ಪಡೆದಿದ್ದಾರೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೇ ವಿಶೇಷ ಬಣ್ಣ ವಿನ್ಯಾಸಗಳುಳ್ಳ 2 mm ದಪ್ಪದ ಮರದ ಹಾಳೆ (ವಿನೀರ್) ಗಳಿಂದ ಮಾರ್ಕ್ವೆಟ್ರಿ ತಂತ್ರವನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸುತ್ತಾರೆ. ಬಳಿಕ ಅದನ್ನು 8mmನ ಮೂಲ ಹಲಗೆಗೆ ಯಾಂತ್ರಿಕವಾಗಿ ಅಂಟಿಸಿ ಪ್ರೇಮ್ ಲಗತ್ತಿಸಿ ಹೊಳಪು ನೀಡಲಾಗುತ್ತದೆ. ಇದೊಂದು ಅತಿ ಸೂಕ್ಷ್ಮತೆಯ ಕೆಲಸವಾಗಿದೆ. ಈ ಕಲೆಯ ತಯಾರಿಕೆ, ಪ್ರದರ್ಶನಗಳಿಗೆ ಭಾರತ ಸರ್ಕಾರದ ವತಿಯಿಂದ ಅಧಿಕೃತ ಪರವಾನಗಿ ಮತ್ತು ಪ್ರತ್ಯೇಕ ಸಂಖ್ಯೆಯನ್ನು (G I TAGE) ಪಡೆದುಕೊಂಡಿದ್ದಾರೆ.

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ 2002ರಿಂದ 2024ರವರೆಗೆ ಸಾಕಷ್ಟು ಪ್ರದರ್ಶನಗಳನ್ನು ನೀಡಿದ್ದಾರೆ. 2019ರಿಂದ ಸತತವಾಗಿ ವಿರಾಜಪೇಟೆಯ ಕಲಾ ಉತ್ಸವ ಕೊಡಗು ಚಿತ್ರಕಲಾ ಪ್ರದರ್ಶನದಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಸ್ತುಪ್ರದರ್ಶನದಲ್ಲಿ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ. 2010-12-23ರಲ್ಲಿ ಬೆಂಗಳೂರಿನ ಚಿತ್ರಕಲಾ ಪ್ರದರ್ಶನ, ಮೈಸೂರು ಹಟ್ ಸಂಸ್ಥೆಯು ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಮೂಲತಃ ಪರ್ಷಿಯನ್ ಶೈಲಿಯ ಕುಂದಣ ಕಲೆಯನ್ನು ಕಲಿತು ಪಳಗಿದವರು ಮೈಸೂರಿನಲ್ಲಿ ಸಾಕಷ್ಟು ಇದ್ದಾರೆ. ಆದರೆ ಕೊಡಗಿನಲ್ಲಿ ಈ ಕಲೆಯ ಶಿಲ್ಪಿ ಇವರೊಬ್ಬರೇ ಎನಿಸುತ್ತದೆ. ಕುಂದಣ ಕಲೆಯಲ್ಲಿ 25 ವರ್ಷಗಳ ಅನುಭವ ಹೊಂದಿರುವ ಇವರು ಇತ್ತೀಚೆಗೆ ತಮ್ಮ ನಿವಾಸದ ಬಳಿ ಚಿತ್ರಕಲಾ ಗ್ಯಾಲರಿ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ಇವರಿಗೆ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದಿಂದ ಇವರ ‘ತಲಕಾವೇರಿ ಕಾವೇರಿ ನದಿಯ ಜನ್ಮಸ್ಥಳ’ ಎಂಬ ಕೃತಿಗೆ 2023-24ರ ‘ಕುಶಲಕಲಾ ರಾಜ್ಯ ಪ್ರಶಸ್ತಿ ದೊರಕಿದೆ. ಈ ಕೃತಿಗೆ ಕೊಡಗಿನಲ್ಲಿ ಬಹಳಷ್ಟು ಬೇಡಿಕೆಯಿದೆ. ಇವರು ಪತ್ನಿ ರೇಖಾರೊಂದಿಗೆ ಬೈರಂಬಾಡದ ತೋಟದ ಮನೆಯಲ್ಲಿ ಪ್ರಸ್ತುತ ವಾಸವಿದ್ದಾರೆ. ಮಗಳು ಕ್ಷಮಾ ಬೆಂಗಳೂರಿನಲ್ಲಿ ಮತ್ತು ಮಗ ಅಚ್ಚಯ್ಯ ವಿದೇಶದಲ್ಲಿ ತಮ್ಮ ಕುಟುಂಬ ಬಾಂಧವರೊಡನೆ ವಾಸಿಸುತ್ತಿದ್ದಾರೆ. ಇವರ ವೃತ್ತಿಯ ಅಗತ್ಯವೆನಿಸುವ ತಾಳ್ಮೆ ಸಹನೆ ಮತ್ತು ಸರಳ ವ್ಯಕ್ತಿತ್ವವನ್ನು ಹೊಂದಿರುವ ಇವರ ಬದುಕು ಮತ್ತು ಕಲೆಗಾರಿಕೆ ಇನ್ನಷ್ಟು ಉನ್ನತಿಗೇರಿ ಬೆಳಗಲೆಂದು ಹಾರೈಸೋಣ.

ವೈಲೇಶ ಪಿ.ಎಸ್. ಕೊಡಗು
8861405738
