ಸುಳ್ಯ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಂಘ ಸರಕಾರಿ ಪ್ರೌಢ ಶಾಲೆ ಎಣ್ಮೂರು ಇದರ ಸಹಯೊಗದಲ್ಲಿ ಸುವರ್ಣ ಸಂಭ್ರಮ -50’ರ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವು ದಿನಾಂಕ 07 ನವಂಬರ್ 2024ರಂದು ಸುಳ್ಯದ ಎಣ್ಮೂರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಖ್ಯಾತ ವಾಗ್ಮಿ ಹಾಗೂ ಚಿಂತಕರಾದ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿ “ಕನ್ನಡ ಭಾಷೆಗೆ ಅನೇಕ ಸವಾಲುಗಳಿವೆ. ಅದನ್ನು ನಾವೆಲ್ಲರೂ ಎದುರಿಸಿ ಕನ್ನಡ ಭಾಷೆ, ಸಾಹಿತ್ಯ ಪರಂಪರೆಯನ್ನು ಉಳಿಸಿ ಅದನ್ನು ಮುಂದಿನ ಜನಾಂಗಕ್ಕೆ ತಲಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಹಿತ್ಯ ಪರಿಷತ್ತಿನಂತಹ ಅನೇಕ ಸಂಸ್ಥೆಗಳು ಈ ಜವಾಬ್ದಾರಿಯನ್ನು ಹೊರಬೇಕು.”ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಮೇದಪ್ಪ ಗೌಡ ದೀವ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹೋಬಳಿ ಘಟಕ ಅಧ್ಯಕ್ಷರಾದ ಶ್ರೀ ಬಾಬು ಗೌಡ ಅಚ್ಚಪ್ಪಾಡಿ ಇವರು ಶಾಲೆಗೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ವಿತರಿಸಿದರು.
ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಕವಿತಾ ಡಿ. ಎಮ್., ಸಾಹಿತ್ಯ ಪರಿಷತ್ತು ಇದರ ಗೌರವ ಕಾರ್ಯದರ್ಶಿ ತೇಜಸ್ವಿ ಕಡವಳ, ಶ್ರೀ ಪ್ರಭಾಕರ ಕಿರಿಭಾಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎಣ್ಣೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರತಿನಿಧಿ ಶ್ರೀ ರಾಮಚಂದ್ರ ಪಳ್ಳತ್ತಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕನ್ನಡ ಸಂಘದ ಸಂಚಾಲಕಿ ಶ್ರೀಮತಿ ಉಷಾ ಕೆ. ಎಸ್. ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕ ಶ್ರೀ. ಲಿಂಗಪ್ಪ ಬೆಳ್ಳಾರೆ ವಂದಿಸಿದರು.