ಮಂಗಳೂರು : ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕಲ್ಲಚ್ಚು ಪ್ರಕಾಶನವು ದಿನಾಂಕ 29 ಏಪ್ರಿಲ್ 2026ರಂದು ಏರ್ಪಡಿಸಿದ್ದ ಸಾಹಿತ್ಯ ಸಂವಾದ ಮತ್ತು ಅಭಿನಂದನೆ ಸಮಾರಂಭವು ಮಂಗಳೂರಿನ ವುಡ್ ಲ್ಯಾಂಡ್ ಹೊಟೇಲಿನಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗ್ಡೆ “ಗಾಂಧಿ ತತ್ವಗಳು ಅಮರವಾಗಿದ್ದು ಜನ ಮಾನಸದಲ್ಲಿ ಅದು ನೆಲೆಯೂರಿದೆ. ಇಂದಿನ ಕಾಲಘಟ್ಟದಲ್ಲಿ ಗಾಂಧೀಜಿಯವರ ಚಿಂತನೆ ಹೆಚ್ಚು ಪ್ರಸ್ತುತವಾಗುತ್ತಿದೆ” ಎಂದು ನುಡಿದಿದ್ದಾರೆ.
ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಹಾವೇರಿಯ ಯುವ ಕಥೆಗಾರ ಲಿಂಗರಾಜ ಸೊಟ್ಟಪ್ಪನವರ್ ತನ್ನ ಸಾಹಿತ್ಯದ ಪಯಣವನ್ನು ತಿಳಿಸಿ ಶಿಕ್ಷಕನಾಗಿ ತಾನು ಪಡೆದ ಅನುಭವಗಳು ತನ್ನನ್ನು ಕಥೆಗಾರನನ್ನಾಗಿ ರೂಪಿಸಿದೆ. ಸ್ಪರ್ಧೆಗಳನ್ನು ಮೀರಿ ಕಥೆಗಾರ ಬೆಳೆಯುವ ಅಗತ್ಯವಿದೆ ಎಂದರು.

ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್ ಮಾತನಾಡಿ “ಸಾಹಿತ್ಯ ಕೃತಿಗಳ ಕುರಿತಾಗಿ ಅರ್ಥಪೂರ್ಣ ಚರ್ಚೆಗಳು ನಡೆಯುವ ಅಗತ್ಯವಿದೆ” ಎಂದರು. ಲೇಖಕ ಕೃಷ್ಣಮೂರ್ತಿ ಪಿ. ಮಾತನಾಡಿ “ಎಂ.ಜಿ. ಹೆಗ್ಡೆಯವರ ಆತ್ಮಕಥನ ಒಂದು ತಲೆಮಾರಿನ ತಲ್ಲಣಗಳನ್ನು ನಿರೂಪಿಸುತ್ತದೆ. ಉತ್ತರ ಕರ್ನಾಟಕದ ಕಥೆಗಾರರು ಗ್ರಾಮೀಣ ಬದುಕಿನ ವಾಸ್ತವಗಳನ್ನು ಕಥನದ ಮೂಲಕ ಚಿತ್ರಿಸುತ್ತಿದ್ದಾರೆ” ಎಂದರು.
ಹಿರಿಯ ಕವಿ ಡಾ. ಸುರೇಶ್ ನೆಗಳಗುಳಿ, ಶ್ಯಾಮ ಸುಂದರ ರಾವ್, ವಿಕಾಸ್ ಹೊಸಮನಿ, ಡೊಂಬಯ್ಯ ಇಡ್ಕಿದು, ಹಂಜ ಮಲಾರ್, ಸುಧನ್ ಕುಮಾರ್, ಆರ್.ಕೆ. ಚೇಪ್ಟಕರ್, ಕಸ್ತೂರಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು.
