ಉಡುಪಿ : ಮಾಹೆ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ. ರಂಜನ್ ಆರ್. ಪೈಯವರು ದಿನಾಂಕ 16 ಜೂನ್ 2026ರಂದು ಯಕ್ಷಗಾನ ಕಲಾರಂಗದ ನೂತನ ಕಟ್ಟಡಕ್ಕೆ ಭೇಟಿ ನೀಡಿ ಇಡೀ ಕಟ್ಟಡ ವೀಕ್ಷಿಸಿದರು. ಐ.ವೈ.ಸಿ. ಸಭಾಭವನದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಸಾಕ್ಷ್ಯಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಯಕ್ಷಗಾನ ಕಲಾರಂಗ ಯಾವ ಆಡಂಬರವಿಲ್ಲದೆ ಮನೆಯಿಲ್ಲದವರಿಗೆ ಮನೆ ನಿರ್ಮಿಸಿ ಕೊಡುತ್ತಿರುವುದನ್ನು ಶ್ಲಾಘಿಸಿ ಮಾಹೆ ವತಿಯಿಂದ ಪ್ರತಿವರ್ಷ ಹತ್ತು ಮನೆಗಳಂತೆ ಐವತ್ತು ಮನೆಗಳ ಪ್ರಾಯೋಜಕತ್ವ ವಹಿಸುವದಾಗಿ ಹೇಳಿದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ಡಾ. ರಂಜನ್ ಪೈಯವರು ಸಂಸ್ಥೆಗೆ ಜಾಗ ಖರೀದಿಸುವುದಕ್ಕೆ ಮತ್ತು ಕಟ್ಟಡ ನಿರ್ವಹಣೆಗೆ ಈಗಾಗಲೇ ನೀಡಿದ ಉದಾರ ಆರ್ಥಿಕ ನೆರವಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಟ್ಟಡದಲ್ಲಿ ಇನ್ನೂ ಆಗಬೇಕಾಗಿರುವ ಕಾಮಗಾರಿಯನ್ನು ಪ್ರಾಸಂಗಿಕವಾಗಿ ಸಭೆಯ ಗಮನಕ್ಕೆ ತಂದರು. ಡಾ. ಟಿ.ಎಂ.ಎ. ಪೈ ಇವರಿಂದ ಆರಂಭಗೊಂಡ ಮಣಿಪಾಲ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಡಾ. ರಾಮದಾಸ ಪೈಯವರಿಂದ ಅಭಿವೃದ್ಧಿ ಹೊಂದಿ, ಡಾ. ರಂಜನ್ ಪೈಯವರ ಅವಧಿಯಲ್ಲಿ ಜಾಗತಿಕವಾಗಿ ವಿಸ್ತರಿಸಿಕೊಂಡಿವೆ. ಅವರ ಕರ್ತೃತ್ವ ಶಕ್ತಿ, ಸರಳತೆ, ಔದಾರ್ಯ ನಮಗೆಲ್ಲ ಮಾದರಿಯಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳರು ಮಾತನಾಡಿ “ಆರೋಗ್ಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾಹೆ ನಿರಂತರ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಯಕ್ಷಗಾನ ಕಲಾರಂಗದ ಅವಶ್ಯಕತೆಗೆ ಮಾಹೆ ಸದಾ ಬೆಂಬಲವಾಗಿ ನಿಲ್ಲುತ್ತದೆ” ಎಂದರು. ಡಾ. ರಂಜನ್ ಆರ್. ಪೈಯವರಿಗೆ ಕೃತಜ್ಞತಾಪೂರ್ವಕವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ ರಾವ್ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಜತೆಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಪ್ರೊ. ಎಂ.ಎಲ್. ಸಾಮಗ, ಭುವನ ಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಪ್ರೊ. ಶಂಕರ್, ಅನಂತರಾಜ ಉಪಾಧ್ಯ, ಡಾ. ರಾಜೇಶ್ ನಾವುಡ, ಗಣೇಶ ಬ್ರಹ್ಮಾವರ, ಕುಮಾರಿ ಸಂಸ್ಕೃತಿ ಉಪಸ್ಥಿತರಿದ್ದರು.

