ಡಾ. ಎನ್.ಕೆ. ರಾಜಲಕ್ಷ್ಮಿಯವರು ಕನ್ನಡಕ್ಕೆ ಅನುವಾದಿಸಿದ ‘ಅಂಡಮಾನ್-ಇತಿಹಾಸದೊಳಗೊಂದು ಪಯಣ’ ಹಲವು ದೃಷ್ಟಿಗಳಿಂದ ಇಂದಿನ ಭಾರತೀಯ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾದ ಒಂದು ಕೃತಿ. ಇತಿಹಾಸವನ್ನು ಕಥಿಸುವ ಶೈಲಿಯಲ್ಲಿಯೂ ಇಲ್ಲಿ ಹೊಸತನವಿರುವುದು ಇದರ ಇನ್ನೊಂದು ಪ್ಲಸ್ ಪಾಯಿಂಟ್. ಇದುವರೆಗೆ ಬರೆಯಲ್ಪಡುತ್ತಿದ್ದ ಎಲ್ಲ ಇತಿಹಾಸಗಳಂತೆ ಇಲ್ಲಿ ಬರಹಗಾರ್ತಿಯ ಫೋಕಸ್ ಆಡಳಿತ ಮತ್ತು ಪ್ರಭುತ್ವಗಳ ಮೇಲೆ ಇಲ್ಲ. ಅಂಡಮಾನಿನ ಜನಸಾಮಾನ್ಯರ ಕಥೆಯೇ ಇಲ್ಲಿರುವುದು.
‘ಅಂಡಮಾನ್-ಇತಿಹಾಸದೊಳಗೊಂದು ಪಯಣ’ ಕೃತಿಯು ಅಂಡಮಾನ್ ದ್ವೀಪ ಸಮೂಹದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಕುರಿತ ವಿವರಗಳನ್ನು ದೃಷ್ಟಾಂತಗಳ ಸಮೇತ ಚಿತ್ರಿಸುತ್ತದೆ. ಭಾರತದ ಮೊದಲ ಸ್ವಾತಂತ್ರ್ಯ ಸಮರದ ನಂತರ ಅದರಲ್ಲಿ ಭಾಗವಹಿಸಿದ ಅನೇಕರನ್ನು ಶಿಕ್ಷಿಸಲು ದೇಶದೊಳಗಿನ ಜೈಲುಗಳು ಸಾಲದಾದಾಗ ಬ್ರಿಟಿಷ್ ಸರಕಾರವು ಕಂಡುಕೊಂಡ ದಾರಿಯೆಂದರೆ ಅವರನ್ನು ಅಂಡಮಾನಿನ ನಿರ್ಜನವೂ ಭಯಾನಕವೂ ಆದ ದಟ್ಟಾರಣ್ಯ ಪ್ರದೇಶಕ್ಕೆ ಕಳುಹಿಸುವುದು. ಅಲ್ಲಿ ಸೆರೆಮನೆಯ ನಿರ್ಮಾಣ ಮಾಡಲು ಬೃಹದಾಕಾರದ ವೃಕ್ಷಗಳನ್ನು ಕಡಿದು ನೆಲಸಮಗೊಳಿಸಲಾಯಿತು. ಅಲ್ಲಿನ ಮೂಲನಿವಾಸಿಗಳಾದ ಬುಡಕಟ್ಟು ಜನರನ್ನು ಓಡಿಸಿ ಬದಿಗೆ ತಳ್ಳಲಾಯಿತು. ಅದನ್ನು ನಾಗರಿಕ ನಾಡನ್ನಾಗಿ ಪರಿವರ್ತಿಸಲು ಎಲ್ಲಾ ರೀತಿಯ ಕಠಿಣ ಕೆಲಸಗಳಿಗೂ ಭಾರತೀಯ ಖೈದಿಗಳನ್ನೇ ಅತ್ಯಂತ ಕ್ರೂರವಾಗಿ ಬಳಸಲಾಯಿತು. ಶಿಕ್ಷೆಯ ಅವಧಿ ಮುಗಿದ ನಂತರ ಅವರೆಲ್ಲರೂ ಸ್ವಾವಲಂಬಿಗಳಾಗಿ ಅದೇ ನಾಡಿನಲ್ಲಿ ನೆಲೆಸಿ ತಮ್ಮ ಬದುಕನ್ನು ಕಟ್ಟಿಕೊಂಡರು. ಈ ಕೃತಿಯು ಅಂಡಮಾನ್ ಒಂದು ಆರೋಗ್ಯವಂತ ಪ್ರಜೆಗಳ ನಾಡಾಗಿ ಪರಿವರ್ತನೆಗೊಂಡ ಕಥೆಯನ್ನು ಸಾದ್ಯಂತವಾಗಿ ಹೇಳುತ್ತದೆ.
ಖೈದಿಗಳನ್ನು ಶಿಕ್ಷಿಸಲು ಬಳಸಿದ್ದ ಒಂದು ನಾಡನ್ನು ಮತ್ತು ಅದರ ಪ್ರಜೆಗಳನ್ನು ಒಂದು ಕ್ರಿಯಾಶೀಲ ಸಮಾಜವಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮಹಿಳೆಯರ ಮೇಲೆ ಕೃತಿಯಲ್ಲಿ ಹೆಚ್ಚಿನ ಬೆಳಕು ಚೆಲ್ಲಲಾಗಿದೆ. ಅವರ ಭಾನಾತ್ಮಕ ಶಕ್ತಿ, ದೃಢ ಸಂಕಲ್ಪ, ಗಟ್ಟಿತನ ಮತ್ತು ಪರಿಶ್ರಮಗಳು ಆ ಸಮುದಾಯವನ್ನು ಸಂಸ್ಕಾರವಂತರನ್ನಾಗಿ ಮಾಡುವಲ್ಲಿ ಹಗಲಿರುಳೆನ್ನದೆ ದುಡಿದವು.
ಒಂದೊಮ್ಮೆ ನಿರಾಶೆ-ಹತಾಶೆಗಳ ಕೂಪದಲ್ಲಿ ಮುಳುಗಿ ನರಳಾಡುತ್ತಿದ್ದ ದ್ವೀಪ ಸಮೂಹವು ಅದೆಷ್ಟು ಸುಂದರ ನಾಡಾಗಿ ಬದಲಾಯಿತು, ವಿವಿಧ ಜಾತಿ-ಮತಗಳ, ವಿವಿಧ ಭಾಷೆಗಳನ್ನು ಮಾತನಾಡುವ ಎಲ್ಲರೂ ಸಮಾಜದಲ್ಲಿ ಒಗ್ಗಟ್ಟಾಗಿ ಯಾವುದೇ ಭೇದಭಾವಗಳನ್ನೆಣಿಸದೆ ಸೌಹಾರ್ದಯುತವಾಗಿ ಹೇಗೆ ಬದುಕುತ್ತಿದೆ ಅನ್ನುವುದರ ಕುರಿತು ಈ ಕೃತಿ ಇಂಚಿಂಚಾಗಿ ಅನ್ವೇಷಣೆ ನಡೆಸುತ್ತದೆ. ಅಧಿಕಾರ ಕೇಂದ್ರವನ್ನು ಗುರುತಿಸುವ ಗೋಜಿಗೆ ಹೋಗದೆ ದ್ವೀಪವನ್ನು ಪುನರ್ನಿರ್ಮಿಸಿದ ಜನರ ದೈನಂದಿನ ಜೀವನ ಕ್ರಮ ನಂಬಿಕೆ-ಆಚರಣೆಗಳು, ಮತೀಯ ಸಾಮರಸ್ಯ, ಆಹಾರ ಪದ್ಧತಿ, ವಿವಾಹ ಕ್ರಮಗಳು ಮೊದಲಾದವುಗಳನ್ನು ಮುನ್ನೆಲೆಗೆ ತರುತ್ತದೆ. ಭೇದಗಳನ್ನು ಒಪ್ಪಿಕೊಂಡೇ ವಿವಿಧತೆಯಲ್ಲೂ ಏಕತೆಯನ್ನು ಸಾಧಿಸಲು ಹೇಗೆ ಸಾಧ್ಯ ಅನ್ನುವುದನ್ನು ಈ ಕೃತಿ ಅನೇಕ ಕಥನಗಳ ಮೂಲಕ ಹೇಳುತ್ತ ಹೋಗುತ್ತದೆ. ಈ ವಿವರಗಳನ್ನು ಓದುತ್ತಿದ್ದಂತೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.
ಕೃತಿಯ ಆರಂಭದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಭೌಗೋಳಿಕ ಪರಿಸ್ಥಿತಿ, ಅಲ್ಲಿನ ಭೂಪ್ರದೇಶ, ಕಾಡುಗಳು, ಪಕ್ಷಿ ವೈವಿಧ್ಯ, ಜಲಸಂಪತ್ತು, ಬೆಳೆಗಳು, ಅಲ್ಲಿ ವಾಸಿಸುತ್ರಿದ್ದ ನೆಗ್ರೆಟೋ ಮೂಲನಿವಾಸಿಗಳು ಮತ್ತು ಹವಾಮಾನಗಳ ವಿವರಗಳಿವೆ. ಅಂಡಮಾನ್ ಅನ್ನುವ ಹೆಸರು ಹೇಗೆ ಬಂತು, ಅಂಡಮಾನ್ ಬಗೆಗಿನ ಮಿಥ್ಯೆಗಳು, ಪ್ರಥಮ ಬ್ರಿಟಿಷ್ ವಸಾಹತು ಆಗಿ ಆ ಪ್ರದೇಶವು ನೆಲೆಗೊಂಡ ಕಥೆ, ಪೋರ್ಟ್ ಬ್ಲೇರ್ ನಗರದ ನಿರ್ಮಾಣ, ಮೊದಲ ಮತ್ತು ಎರಡನೇ ವಸಾಹತೀಕರಣದ ನಡುವಿನ ವಿದ್ಯಮಾನಗಳು, ಖೈದಿಗಳ ನಾಡಾಗಿ ಅಂಡಮಾನ್, ವಸಾಹತು ನಿಧಾನವಾಗಿ ಸಾಧಿಸಿದ ಪ್ರಗತಿ, ಭಾರತದ ರಾಷ್ಟ್ರೀಯ ಕ್ರಾಂತಿಕಾರಿಗಳ ಆಗಮನ, ಸ್ವಾವಲಂಬಿ ಘಟಕವಾಗಿ ಪೋರ್ಟ್ ಬ್ಲೇರ್ ನಲ್ಲಿ ಕುಟುಂಬಗಳು ನೆಲೆಸಿದ್ದು, ವಿವಾಹ ಮತ್ತು ಸಂತಾನಾಭಿವೃದ್ಧಿಯ ಉದ್ದೇಶದಿಂದ ಮಹಿಳೆಯರ ಆಗಮನ, ಎಲ್ಲರಿಗೂ ವಿದ್ಯಾಭ್ಯಾಸ ಮತ್ತು ಶಾಲೆಗಳ ನಿರ್ಮಾಣ, ಎಲ್ಲಾ ಸಾರ್ವಜನಿಕರು ಭಾಗವಹಿಸುವ ಸಮಾರಂಭಗಳಲ್ಲಿ ಕಡ್ಡಾಯ ಸಸ್ಯಾಹಾರಿ ಊಟ -ಹೀಗೆ ಅಲ್ಲಿನ ಜನಜೀವನದ ಚಿತ್ರಣ ಸಾಗುತ್ತದೆ. ಎರಡನೇ ಮಹಾಯುದ್ಧದ ಕಾಲದಲ್ಲಿ ಜಪಾನೀಯರ ಆಕ್ರಮಣದಿಂದಾಗಿ ಅನೇಕ ರೀತಿಯಲ್ಲಿ ನಾಶಗಳುಂಟಾದರೂ ಭಾರತದ ಸ್ವಾತಂತ್ರ್ಯಾನಂತರ ಅಲ್ಲಿ ಕಾಂಗ್ರೆಸ್ ಕಮಿಟಿಯ ರಚನೆಯಾಗಿ ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ಅಂಡಮಾನ್ ತಲೆಯೆತ್ತಿ ನಿಲ್ಲುತ್ತದೆ.
ಇಂಥ ಒಂದು ಹೊಸ ಜಗತ್ತನ್ನು ಹಿಂದಿಯ ಲೇಖಕಿ ಶಕುಂತಳಾ ಶಿವರಾಂ ತಮ್ಮ ಈ ಕೃತಿಯ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಅವರು ಮೂಲತಃ ಅಂಡಮಾನಿನವರೇ ಆದಕಾರಣ ಇಲ್ಲಿ ಹೇಳಿದ ವಿಷಯಗಳು ಅಧಿಕೃತವಾಗಿವೆ. ಮೊದಲು ಇಂಗ್ಲೀಷ್ ಗೆ ಅನುವಾದಗೊಂಡ ಈ ಕೃತಿಯನ್ನು ಡಾ. ಎನ್.ಕೆ. ರಾಜಲಕ್ಷ್ಮಿಯವರು ಅತ್ಯಂತ ಸುಲಲಿತ ಶೈಲಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇಂಥ ಒಂದು ಘನವಾದ ಧ್ವನಿಯುಳ್ಳ ಗಂಭೀರ ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅನುವಾದಿಸುವ ಕೆಲಸ ತುಂಬಾ ಕಷ್ಟ. ಕೆಲವು ಪದಗಳಿಗೆ ಪರ್ಯಾಯ ಪದಗಳನ್ನು ಹೊಂದಿಸಬೇಕಿದ್ದರೆ ಬಹಳಷ್ಟು ಪರದಾಡ ಬೇಕಾಗುತ್ತದೆ. ಬರೇ ಶಬ್ದಕೋಶದ ಸಹಾಯದಿಂದ ಇದನ್ನು ಮಾಡಲಿಕ್ಕಾಗುವುದಿಲ್ಲ. ಇತರರ ಜತೆಗೆ ಚರ್ಚೆ ಮಾಡಬೇಕಾಗುತ್ತದೆ. ಚಿಂತನೆಯನ್ನೂ ಮಾಡಬೇಕಾಗುತ್ತದೆ. ಅಂಥದ್ದರಲ್ಲಿ ಕನ್ನಡಿಗರ ಸುಲಭ ಓದಿಗೆ ತಮ್ಮ ಸರಳ ಅನುವಾದದ ಮೂಲಕ ದಾರಿ ಮಾಡಿಕೊಟ್ಟು ರಾಜಲಕ್ಷ್ಮಿಯವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.
ಕೃತಿಯ ಹೆಸರು : ‘ಅಂಡಮಾನ್-ಇತಿಹಾಸದೊಳಗೊಂದು ಪಯಣ’
ಲೇಖಕಿ : ಡಾ. ರಾಜಲಕ್ಷ್ಮಿ ಎನ್.ಕೆ. (ಮೂಲ ಶಕುಂತಳಾ ಶಿವರಾಂ)
ಪ್ರಕಾಶನ : ನವಕರ್ನಾಟಕ ಪಬ್ಲಿಕೇಷನ್ಸ್
ಪ್ರ.ವ. : 2026 ಪುಟಗಳು : 168

ವಿಮರ್ಶಕಿ : ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
