ಹಾಸನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ಇದರ ವತಿಯಿಂದ ಹನ್ನೊಂದನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2026ರಂದು ಹಾಸನದ ಸಂಸ್ಕೃತ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಉಪನ್ಯಾಸಕಿ, ಸಾಹಿತಿ ಡಾ. ಹೆಚ್.ಕೆ. ಹಸೀನಾ ಇವರು ಮಾತನಾಡಿ “ವಿಶ್ವ ಸಹೋದರತೆ ಕಲ್ಪನೆಯ ಭದ್ರ ಬುನಾದಿಯ ದೇಶ ಕಟ್ಟುವ ಕೆಲಸ ಬರಹಗಾರರಿಂದ ಆಗಬೇಕಿದ್ದು ಸಮಾಜದ ನ್ಯೂನತೆಗಳನ್ನು ಸರಿಪಡಿಸುವ ಬರಹ ಹೆಚ್ಚು ಬರಬೇಕು. ಖಡ್ಗದಿಂದ ಬದಲಿಸಲಾಗದನ್ನು ಲೇಖನಿಯಿಂದ ಬದಲಿಸಬಹುದು. ಬಂಕಿಮ್ಚಂದ್ರ ಚಟರ್ಜಿ ಅವರು ‘ವಂದೇ ಮಾತರಂ’ ಕಾವ್ಯದ ಸ್ವಾತಂತ್ರ್ಯಭ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ. ಅದು ಸಮಾಜವನ್ನು ಚಿಂತಿಸುವಂತೆ ಮಾಡುವ ಶಕ್ತಿ. ಅನ್ಯಾಯ, ಅಸಮಾನತೆ, ಮೂಢನಂಬಿಕೆ ಮತ್ತು ಶೋಷಣೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಒಳ್ಳೆಯ ಸಾಹಿತ್ಯ ಮನುಷ್ಯನ ಮನಸ್ಸನ್ನು ವಿಶಾಲಗೊಳಿಸಿ, ಮಾನವೀಯತೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ. ಜಗತ್ತಿನಲ್ಲಿ ಕಾವ್ಯ ಸತ್ತರೆ ಅಲ್ಲಿ ಮನುಷ್ಯತ್ವವೇ ಇರಲ್ಲ. ಸಮಾಜದಲ್ಲಿ ಕಾವ್ಯದ ಉಳಿವು ಬಹು ದೊಡ್ಡ ಜವಾಬ್ದಾರಿಯಾಗಿದೆ. ಕಾವ್ಯದಿಂದ ಮಾತ್ರ ಮನಸು ಬೆಸೆಯಲು ಸಾಧ್ಯವಾಗುತ್ತದೆ. ಇಡೀ ಜಗತ್ತು ಸೌಹಾರ್ದತೆಯಲ್ಲಿ ಬದುಕಬೇಕೆಂದರೆ ಅಲ್ಲಿ ಮನುಷ್ಯ ಪ್ರೇಮ ಬೆಳೆಯಬೇಕು” ಎಂದು ಪ್ರತಿಪಾದಿಸಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, “ಕಾವ್ಯ ಯಾವಾಗಲೂ ಸಮಕಾಲೀನವಾಗಿರಬೇಕು. ಸಮಾಜಕ್ಕೆ ಹೊಸ ವಿಚಾರಗಳನ್ನು ಕಟ್ಟಿಕೊಡುವ ಶಕ್ತಿ ಕಾವ್ಯಕ್ಕಿದೆ. ಕುವೆಂಪು, ನರಸಿಂಹಸ್ವಾಮಿ, ದ.ರಾ. ಬೇಂದ್ರೆ, ಮಾಸ್ತಿ, ಪು.ತಿ.ನ., ಗೋಪಾಲಕೃಷ್ಣ ಅಡಿಗ, ನಿಸಾರ್ ಅಹಮದ್ ಹಾಗೂ ಚನ್ನವೀರ ಕಣವಿ ಸೇರಿ ಅನೇಕ ಸಾಹಿತಿಗಳು ಈ ನಿಟ್ಟಿನಲ್ಲಿ ಸಾಹಿತ್ಯ ರಚಿಸಿದ್ದಾರೆ. ಬೇಂದ್ರೆಯವರ ‘ಇನ್ನೂ ಯಾಕ ಬರಲಿಲ್ಲವ ಹುಬ್ಬಳ್ಳಿಯವ’ ಹಾಡು ಪ್ರೇಮ ಕಾವ್ಯವಾಗಿರಲಿಲ್ಲ; ಅದು ಅವರಿಗೆ ಪ್ರಾರ್ಥನಾ ಪದ್ಯವಾಗಿತ್ತು. ಆಸಕ್ತರು ತಮ ಅನುಭವಕ್ಕೆ ತಕ್ಕಂತೆ ಕಾವ್ಯವನ್ನು ವಿಭಿನ್ನ ರೀತಿಯಲ್ಲಿ ಆಸ್ವಾದಿಸುತ್ತಾರೆ. ಬರಗೂರು ರಾಮಚಂದ್ರಪ್ಪ ಸೇರಿ ಅನೇಕರು ದಲಿತ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿಟ್ಟು ಮತ್ತು ಆಕ್ರೋಶವನ್ನು ಅಭಿವ್ಯಕ್ತಿಸುವ ಕಾವ್ಯವೂ ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕನ್ನಡ ಕಾವ್ಯ ಸಾಹಿತ್ಯ ಎಂದಿಗೂ ನಿಂತ ನೀರಾಗಿಲ್ಲ. ವರ್ಷಕ್ಕೆ ಸುಮಾರು 27 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿದ್ದು, ಮೂರು ಸಾವಿರ ಬರಹಗಾರರು ಹೊಸದಾಗಿ ಸಾಹಿತ್ಯ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕನ್ನಡ ಓದುಗರ ಸಂಖ್ಯೆಯೂ ಹೆಚ್ಚುತ್ತಿದೆ. ಜಗತ್ತನ್ನು ಅರ್ಥಮಾಡಿಕೊಳ್ಳುವ ದೃಷ್ಟಿ ಬೆಳೆಸಿಕೊಳ್ಳಬೇಕು. ಕಾವ್ಯದಲ್ಲಿ ಪ್ರೀತಿ ಮತ್ತು ಶಾಂತಿ ಮೇಳೈಸಬೇಕು” ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಅವರು ಮಾತನಾಡಿ, “ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂಬಂತೆ ಕವಿ ತನ್ನ ಭಾವನೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುತ್ತಾನೆ. ಸಾಂಸ್ಕೃತಿಕ, ಭೌಗೋಳಿಕ ಹಿನ್ನಲೆ, ಕಲೆ ಹಾಗೂ ವೃತ್ತಿಗಳನ್ನು ಆಧರಿಸಿ ಕಾವ್ಯ ಸೃಷ್ಟಿಯಾಗುತ್ತದೆ. ಸಮಾಜವನ್ನು ಉತ್ತಮ ದಾರಿಗೆ ಕೊಂಡೊಯ್ಯುವುದು ಕವಿಯ ಆಶಯವಾಗಿದೆ. ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದೆ. ಇಂದಿನ ದಿನಮಾನಗಳಲ್ಲಿ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ. ಸಾಮಾಜಿಕ ಜಾಲತಾಣಗಳಲ್ಲಿಯೂ ಬರಹಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಸಾಹಿತ್ಯ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು” ಸಲಹೆ ನೀಡಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅವರು ಮಾತನಾಡಿ, “ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಾಚೀನ ಹಾಗು ಶ್ರೇಷ್ಟ ಶಾಸ್ತ್ರೀಯ ಸ್ಥಾನಮಾನದ ಬೆರಳೆಣಿಕೆಯ ಭಾಷೆಗಳಲ್ಲಿ ಕನ್ನಡವೂ ಒಂದು. ಹಲವಾರು ಸತ್ವಯುತ ಸಾಹಿತ್ಯ ಪ್ರಕಾರಗಳಲ್ಲಿ ಎರಡೂವರೆ ಸಾವಿರ ವರ್ಷಗಳಿಗೂ ಅಧಿಕ ಉತ್ಕೃಷ್ಟ ಫಸಲನ್ನು ನೀಡಿರುವ ನಮ ಕನ್ನಡ ಸಾಹಿತ್ಯದ ಕೈಂಕರ್ಯ ಮಾಡಲು ಸಾವಿರಾರು ಸಂಘಟನೆಗಳು ಸಾಲುವುದಿಲ್ಲ. ಕಾವ್ಯ ಕೇವಲ ಹೊಗಳಿಕೆ ಅಥವಾ ಊಹಾತಕ ಪರಿಕಲ್ಪನೆಗಳಿಗೆ ಸೀಮಿತಗೊಳ್ಳದೆ ಸಮಾಜದ ಕಟ್ಟಕಡೆಯ ಬದುಕಿಗೂ ಬೆಳಕಾಗಬೇಕು” ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಗೌರವಾಧ್ಯಕ್ಷ ರವಿ ನಾಕಲಗೂಡು ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಮೈಸೂರಿನ ಸಾಹಿತಿ ಮತ್ತು ಸಂಘಟಕ ಟಿ. ಸತೀಶ್ ಜವರೇಗೌಡ, ಆಲೂರು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು, ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ಪ್ರಕಾಶಕಿ ದೀಪಾ ಉಪ್ಪಾರ್, ಸಾಂಸ್ಕೃತಿಕ ಸಂಘಟಕ ಪ್ರಸನ್ನ ಜಾವಗಲ್, ಹಾಸನ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಕೆ.ಸಿ. ಗೀತಾ ಮತ್ತಿತರರು ಉಪಸ್ಥಿತರಿದ್ದರು.
