ಕಳೆದ ಶತಮಾನದ ಉತ್ತರಾರ್ಧದಲ್ಲಿ ಜಾರಿಗೆ ಬಂದ ಭೂಮಸೂದೆ ಕಾಯ್ದೆಯು ಭಾರತದ ಗ್ರಾಮೀಣ ಸಮಾಜದ ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಿತು. ಇದನ್ನು ವಸ್ತುವನ್ನಾಗಿಟ್ಟುಕೊಂಡು ಡಾ. ನಾ. ಮೊಗಸಾಲೆಯವರು ಬರೆದ ‘ಭೂಮಿಗೀತ’ ಎಂಬ ಕಾದಂಬರಿಯು ಅವಿಭಜಿತ ದಕ್ಷಿಣ ಕನ್ನಡದ ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲಿ ನೆಲದ ಕುರಿತು ಬರೆದ ಕಥನವೇ ಹೊರತು ಭೂಮಿಯನ್ನು ಅಂಧವಾಗಿ ಆರಾಧಿಸುವ ಅಥವಾ ಅದಕ್ಕೆ ಒದಗಿದ ದುಸ್ಥಿತಿಗಳ ಬಗ್ಗೆ ಹಳಹಳಿಸುವ ಕೃತಿಯಲ್ಲ. ತಮ್ಮದೇ ಆದ ಕಟ್ಟುಕಟ್ಟಳೆಗಳಲ್ಲಿ ಬದುಕುತ್ತಿದ್ದ ಸಮುದಾಯಗಳು ಭೂಮಸೂದೆ ಕಾನೂನಿನಿಂದ ಪ್ರಭಾವಿತವಾಗಿ ಅನಿರೀಕ್ಷಿತ ಹೊಸ ವಿದ್ಯಮಾನಗಳಿಗೆ ಸಾಕ್ಷಿಯಾಗುವುದರೊಂದಿಗೆ ಕಾಲಕ್ರಮೇಣ ಬೇರೆ ಉದ್ಯೋಗಕ್ಕೆ ಆಕರ್ಷಿತರಾಗಿ ಭೂಮಿಯಿಂದ ವಿಮುಖರಾಗುವ ಪರಿಸ್ಥಿತಿಯು ಈ ಕಾದಂಬರಿಯ ಮುಖ್ಯ ಭಾಗವಾಗಿದೆ.
ವ್ಯಕ್ತಿ ಪ್ರಧಾನವಲ್ಲದ, ನಾಯಕ ಪ್ರಧಾನವಲ್ಲದ ಈ ಕಾದಂಬರಿಯಲ್ಲಿ ಪರಂಪರಾಗತ ಸಾಮಾಜಿಕ ಆವರಣವನ್ನು ಪ್ರವೇಶಿಸುವ ಹೊಸ ಪ್ರಜ್ಞೆಯು ಮೂರ್ತವಾಗಿದೆ. ಕಾದಂಬರಿಯ ಶೀರ್ಷಿಕೆಯು ಸೂಚಿಸುವಂತೆ ಭೂಮಿಯೇ ಕೇಂದ್ರವಾಗಿದೆ. ಅಲ್ಲಿ ಬದುಕುವ ಹಲವು ಸಮುದಾಯದ, ಸಂಸ್ಕೃತಿಯ ಜೀವನಕ್ರಮದ ಚಿತ್ರಣವನ್ನು ಆಧುನಿಕ ಇತಿಹಾಸದ ಮುಖ್ಯ ಕಾಲಾವಧಿಯಲ್ಲಿ ಜರಗುವ ವಿದ್ಯಮಾನಗಳ ಜೊತೆಯಲ್ಲಿ ಕಟ್ಟಿ ಕೊಟ್ಟಿರುವುದರಿಂದ ಈ ಕಾದಂಬರಿಯು ಕೇವಲ ಒಂದು ಸ್ಥಿರ, ನಿಶ್ಚಲ, ಮಾನವಶಾಸ್ತ್ರೀಯ ದಾಖಲೆಯಾಗಿ ಬಿಡುವ ಅಪಾಯದಿಂದ ಪಾರಾಗಿದೆ. ಹೊಸ ಕಾಲದ ಇತಿಹಾಸವು ಈ ಸಮುದಾಯಗಳ ಮೇಲೆ ಪ್ರಭಾವ ಬೀರಿದಂತೆ ಸಮುದಾಯದೊಳಗಿನ ಕಂಪನ ಪಲ್ಲಟಗಳು ಹೊಸ ಇತಿಹಾಸಕ್ಕೆ ಕಾಣಿಕೆಯನ್ನು ನೀಡಿರುವುದಲ್ಲದೆ ಅವಾಂತರಗಳಿಗೆ ಕಾರಣವಾದ ಬಗೆಯನ್ನು ವಿಶ್ಲೇಷಿಸಲಾಗಿದೆ.
ಕಾದಂಬರಿಯಲ್ಲಿ ಕಾಣಿಸುವ ಪ್ರಾದೇಶಿಕತೆ, ವಿವರಗಳು ಮತ್ತು ಲೇಖಕರ ದೃಷ್ಟಿಕೋನಗಳು ಪ್ರತಿ ಸಂದರ್ಭದ ಬದಲಾವಣೆಯನ್ನು ಸೂಚಿಸುತ್ತವೆ. ತುಳು ಭಾಷೆ ಸಂಸ್ಕೃತಿಯನ್ನು ಒಳಗೊಂಡ ದೇಸಿ ಹಿನ್ನೆಲೆಯಲ್ಲಿ ಮೂಡಿಬಂದ ಮೋಂಟ ಮತ್ತು ಅವನ ಕುಟುಂಬದ ಚಿತ್ರಣವು ನೆಲದ ಬದುಕನ್ನು ಸಾರುತ್ತದೆ. ಕರಾವಳಿ ಕಡೆಯ ಬೇಸಾಯಕ್ಕೆ ಸಂಬಂಧಿಸಿದಂತೆ ಅಳಿವಿನಂಚಿನಲ್ಲಿರುವ ಬಾಕ್ಯಾರು (ಬಾಕಿಮಾರು) ಕಂಡ ಕೋರುವ ದಿನ (ಕೊನೆಯ ಸುತ್ತಿನ ಹೂಟೆ ಮುಗಿಸಿ ಬೀಜ ಬಿತ್ತುವ ದಿನ) ಒರಲ್ (ಗದ್ದೆ ಉಳುವಾಗ ಹೇಳುವ ಹಾಡು) ಈಗ ಅಳಿವಿನಂಚಿನಲ್ಲಿರುವ ಪದಗಳಾಗಿವೆ. ಬಡವರು “ಗೇರು ಮರದ ಎಲೆಯನ್ನು ಕಿತ್ತು ಅದರ ಮಧ್ಯದ ನಾರನ್ನು ತೆಗೆದು, ಅದನ್ನು ಉರುಟುರುಟಾಗಿಸಿಕೊಂಡು” (ಪುಟ 8-9) ಹಲ್ಲುಜ್ಜುವ ಕ್ರಮವು ಲೇಖಕರ ಸೂಕ್ಷ್ಮ ನಿರೀಕ್ಷಣೆಗೆ ಸಾಕ್ಷಿಯಾಗಿದೆ.
ವಾಸುದೇವ ಭಟ್ಟರ ಹೊಲದ ಒಕ್ಕಲಾದ ಮುಡ್ತಿನಿ ಪುರ್ಬು ಸರಿಯಾಗಿ ಗೇಣಿ ಕೊಡದೆ ಉಡಾಫೆಯ, ಸೊಕ್ಕಿನ ಮಾತನಾಡಿದಾಗ ಭಟ್ಟರಿಗೆ ನ್ಯಾಯವನ್ನು ಸಲ್ಲಿಸಲು ಗುತ್ತಿನ ಒಡೆಯರಾದ ಶೀನ ಶೆಟ್ಟಿಯು ಸಂಗಡಿಗರ ಮೂಲಕ ಮುಡ್ತಿನಿಯನ್ನು ಬೆದರಿಸಿ ಗೇಣಿಯನ್ನು ವಸೂಲಿ ಮಾಡುವುದರಲ್ಲಿ ಯಶಸ್ವಿಯಾಗುತ್ತಾನೆ. ವಾಸುದೇವ ಭಟ್ಟರ ಕಷ್ಟಕ್ಕೆ ಸ್ಪಂದಿಸಿ, ಹಣವನ್ನು ಕೊಡುತ್ತಾನೆ. ಇದು ಅವನ ವ್ಯಕ್ತಿತ್ವದ ಸಕಾರಾತ್ಮಕ ಮಗ್ಗುಲಾದರೆ ಅಸೌಖ್ಯದಿಂದಾಗಿ ಕೆಲಸಕ್ಕೆ ಬರಲಾಗದ ಮೋಂಟನನ್ನು ಶಿಕ್ಷಿಸುವ ರೀತಿಯು ಅತ್ಯಂತ ಹೇಯವಾಗಿದೆ. ಅವನನ್ನು ಗುತ್ತಿನ ಮನೆಗೆ ಬೆನ್ನು ಹಾಕಿ ನಿಲ್ಲಿಸಿ ಕುಂಡೆಗೆ ಒದೆಯುವಂತೆ ಕೆಲಸದಾಳು ಮಾಂಕುವಿಗೆ ಆದೇಶಿಸುತ್ತಾನೆ. ಕೆಳಜಾತಿಯವನನ್ನು ಒದೆಯುವುದು ತನ್ನ ಅಂತಸ್ತಿಗೆ ಕಡಿಮೆ ಎಂಬ ಭಾವ ಇಲ್ಲಿದೆ. ಜಾತೀಯತೆಯ ಪರಾಕಾಷ್ಠೆ ಮತ್ತು ಕ್ರೌರ್ಯವನ್ನು ಲೇಖಕರು ಅತ್ಯಂತ ಸೂಕ್ಷ್ಮವಾಗಿ, ಎದೆ ನಡುಗಿಸುವ ರೀತಿಯಲ್ಲಿ ತಂದಿದ್ದಾರೆ.
ನ್ಯಾಯದ ಕಲ್ಪನೆಯ ರೂಪವು ಸಂಕೀರ್ಣವಾಗಿರುತ್ತದೆ. ಸಮಾಜ ತನ್ನ ಸಂರಕ್ಷಣೆಗಾಗಿ ಕಟ್ಟಿಕೊಂಡ ಕಟ್ಟಳೆಗಳು ಮತ್ತು ವಿವೇಕದ ನಡುವೆ ಸಮನ್ವಯವಿರಬೇಕಾಗಿಲ್ಲ. ಆದ್ದರಿಂದ ಮೋಂಟನು ಅನ್ಯಾಯವಾಗಿ ಶಿಕ್ಷೆಗೊಳಗಾಗಬೇಕಾಗುತ್ತದೆ. ಈ ಚೌಕಟ್ಟು ನ್ಯಾಯದ ಮುಖಗಳನ್ನೂ ತೆರೆದು ತೋರಿಸುತ್ತದೆ. ಮೋಂಟನ ಪರಿಸ್ಥಿತಿಯು ಶೀನ ಶೆಟ್ಟಿಯ ದುಃಖಕ್ಕೆ ಕಾರಣವಾದರೂ ಆತನಲ್ಲಿ ತಪ್ಪಿತಸ್ಥ ಭಾವನೆ ಕಾಣಿಸಿಕೊಳ್ಳುತ್ತದೆಯೇ ಹೊರತು ಮೋಂಟನ ದುರಂತವು ಅವನನ್ನು ಕಾಡುವುದಿಲ್ಲ. ಯಾಕೆಂದರೆ ಆ ಕಾಲದ ಸಾಮಾಜಿಕ ಸಂದರ್ಭದಲ್ಲಿ ಇಂಥ ಪ್ರತಿಕ್ರಿಯೆಗಳು ಅನಿರೀಕ್ಷಿತವಲ್ಲ. ಪ್ರತಿಷ್ಠಿತ ವ್ಯಕ್ತಿಯಾದ ಶೀನ ಶೆಟ್ಟಿಯು ಇಂಥ ಕೃತ್ಯಕ್ಕಿಳಿಯುವುದು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳಿಗೆ ಕನ್ನಡಿಯನ್ನು ಹಿಡಿದಂತಿದೆ. ನೊಂದವರೇ ಶಿಕ್ಷೆಗೊಳಗಾಗುವುದು ಗ್ರಾಮೀಣ ವಾಸ್ತವದ ಅಂಗವಾಗಿ ಕಾದಂಬರಿಯ ತೀವ್ರತೆಯನ್ನು ಹೆಚ್ಚಿಸುತ್ತದೆ. ಒದೆ ತಿಂದ ಮೋಂಟನು ಸೊಂಟದ ಸ್ವಾಧೀನವನ್ನು ಕಳೆದುಕೊಳ್ಳುವ ಕ್ರಿಯೆಯು ಅಸ್ತಿತ್ವದ ಜೀವ ಕಳೆದುಕೊಳ್ಳುವ ಕ್ಷಣವಾಗಿದೆ. “ನೀವು ಈ ದಿನ ಬಡ ಬ್ರಾಹ್ಮಣನಿಗೆ ದಾನ ಮಾಡಿದ್ದು ಇಷ್ಟವಾಯಿತು. ಆದರೆ ಬಡಪಾಯಿ ಮೋಂಟನನ್ನು ದಂಡಿಸಿದ್ದು ತಪ್ಪು” (ಪುಟ 51) ಎಂಬ ರಾಧಕ್ಕನ ಅಭಿಪ್ರಾಯ ಮತ್ತು “ಹುಟ್ಟಿನಿಂದಲೇ ನಾವು ಗುತ್ತಿನವರು ಎಂಬ ಅಹಂಕಾರ ಬಂದು ಬಿಟ್ಟಿದೆ. ನಮ್ಮ ಗುತ್ತು ಗತ್ತು ಎಲ್ಲವೂ ಹಾಗೇ” (ಪುಟ 51) ಎಂಬ ಉತ್ತರದಲ್ಲಿ ಲೇಖಕರ ವಿಮರ್ಶಾತ್ಮಕ ದೃಷ್ಟಿಕೋನವನ್ನು, ಪಾತ್ರಚಿತ್ರಣದಲ್ಲಿ ಸಮತೋಲನವನ್ನು ಕಾಣುತ್ತೇವೆ. “ನಾವು ಬೆಳಗ್ಗೆ ತಂಗಳು ತಿಂದು ಕೆಲಸಕ್ಕೆ ಬಂದರೆ ಮಧ್ಯಾಹ್ನ ಎರಡು ಗಂಟೆಯವರೆಗೂ ಊಟಕ್ಕಾಗಿ ಕೆಲಸ ಬಿಡುವ ಹಾಗಿಲ್ಲ. ಉಂಡ ಕೈಯ ಎಂಜಲು ಆರುವ ಮೊದಲೇ ಕೆಲಸಕ್ಕೆ ಹಾಜರಾಗಬೇಕು. ಸಂಜೆ ಆರು ಗಂಟೆ ಆಗದೆ ಕೆಲಸ ಬಿಟ್ಟರೆ ಪಾವಕ್ಕಿ ಕಡಿತ. ದಿನಕ್ಕೆ ಕೂಲಿ ಎಂದರೆ ಎರಡು ಪಾವು ಅಕ್ಕಿ. ಅಳೆದು ಕೊಡುವಾಗಲೂ ಸೇರಿನ ಬಾಯಿಯನ್ನು ತಗ್ಗಿಸಿ ಕೊಡುವುದೇ ಹೆಚ್ಚು. ಬೈತ್ತ ಬಾರ್ ಕೊಟ್ಟರೂ ಬೇಡ ಎನ್ನುವಂತಿಲ್ಲ. ಒಂದು ಸಲದ ತಾಂಬೂಲ ಸೇವನೆ ಅಥವಾ ಚಹಾಕ್ಕಾಗಿ ಯಜಮಾನಿಯ ಮನೆಯ ಎಂಜಲು ಎಲೆಯೆತ್ತಿ, ಬಟ್ಟೆ ಒಗೆದು, ಪಾತ್ರೆ ತಿಕ್ಕಿ ಫಳಫಳ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ಒಕ್ಕಲು ಮಕ್ಕಳ ಮನೆಯಲ್ಲಿ ತಂಗಳನ್ನ ಇರುವುದು ಕಡಿಮೆ. ಬೇಯಿಸಿದ ಹಲಸಿನ ಬೇಳೆ ಅಥವಾ ಕಡಿಯಕ್ಕಿ ಗಂಜಿ” (ಪುಟ 59) ಎನ್ನುವ ತುಂಗುವಿನ ಮಾತು ಗೇಣಿ ಜೀವನದ ಕಷ್ಟ ನಷ್ಟಗಳ ಜೊತೆಗೆ ಶೋಷಣೆಯ ವಿರಾಟ್ ಸ್ವರೂಪವನ್ನು ಬಿಚ್ಚಿಡುತ್ತದೆ. ಮುಂಬಯಿಗೆ ಹೋಗಲು ಒಪ್ಪದೆ ಹಟ ಮಾಡುವ ಮಗ ಭಾಸ್ಕರನ ಬಳಿ “ನಮಗೆ ನಮ್ಮದೇ ಆದ ಭೂಮಿಯಿಲ್ಲ. ಈಗ ನಾವಿರುವ ಭೂಮಿ ಗುತ್ತಿನ ಮನೆಯದ್ದು. ಉತ್ತು ಬಿತ್ತು ಗೇಣಿ ಸಂದಾಯ ಮಾಡುವಷ್ಟು ದಿನ ಮಾತ್ರ ನಮ್ಮದು. ಗೇಣಿ ಕೊಡದಿದ್ದರೆ ಧಣಿ ಹೊರದಬ್ಬುತ್ತಾನೆ” (ಪುಟ 106 – 107) ಎನ್ನುವಲ್ಲಿ ತಮಗೆ ಆಸರೆಯನ್ನು ನೀಡಿದ ನೆಲ ತಮ್ಮದಲ್ಲದಿರುವುದರಿಂದ, ಅದರ ಮೇಲೆ ಅವರಿಗೆ ಹಕ್ಕಿಲ್ಲದಿರುವುದರಿಂದ ಕಾಡುವ ಪರಕೀಯ ಪ್ರಜ್ಞೆಯು ವ್ಯಕ್ತವಾಗುತ್ತದೆ. ಮನುಷ್ಯನು ತನ್ನ ಶ್ರಮದಿಂದ ಉತ್ಪಾದನೆಗೊಳ್ಳುವ ವಸ್ತುಗಳಿಂದ ಪ್ರತ್ಯೇಕವೆನಿಸಿಕೊಳ್ಳಬೇಕಾಗಿ ಬರುವ ಪರಿಸ್ಥಿತಿಯು ನಿರ್ಮಾಣಗೊಳ್ಳುತ್ತದೆ. ಕೆಲಸವು ತನ್ನ ಹೊಟ್ಟೆ ಬಟ್ಟೆಗಳ ಅಗತ್ಯವನ್ನು ಪೂರೈಸುವುದಕ್ಕೆ ಮಾಡುವ ಅನಿವಾರ್ಯ ಕರ್ಮವಾಗುವುದೇ ಹೊರತು ಆತ್ಮತೃಪ್ತಿಯು ದೊರಕುವುದಿಲ್ಲ. ಇಂಥ ವ್ಯವಸ್ಥೆಯಲ್ಲಿ ವ್ಯಕ್ತಿಯ ಅಸ್ತಿತ್ವವು ಬೆಲೆ ಕಳೆದುಕೊಳ್ಳುವುದನ್ನು ಕಾದಂಬರಿಯು ಧ್ವನಿಸುತ್ತದೆ. ಮೋಂಟನ ಮಗ ಭಾಸ್ಕರನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುಂಬಯಿಯ ಉಪಾಹಾರ ಗೃಹದಲ್ಲಿ ಮಾಣಿಯ ಕೆಲಸ ಮಾಡುತ್ತಾ ರಾತ್ರಿ ಹೊತ್ತಿನಲ್ಲಿ ಶಿಕ್ಷಣವನ್ನು ಪಡೆಯುತ್ತಾನೆ. ಬದುಕಿನ ಮಟ್ಟ ಸುಧಾರಿಸುವಷ್ಟರಲ್ಲಿ ಅಪಘಾತಕ್ಕೆ ಸಿಲುಕಿ ಸಾಯುತ್ತಾನೆ. ಕಾಲ ಬದಲಾಗುತ್ತಿದ್ದಂತೆ ಜಮೀನ್ದಾರಿ ಪದ್ಧತಿಯು ನಿಷ್ಕ್ರಿಯವಾಗುವುದರ ಸೂಚನೆಯೆಂಬಂತೆ ಶೀನ ಶೆಟ್ಟಿಯು ಪಾರ್ಶ್ವವಾಯುವಿಗೆ ತುತ್ತಾಗುತ್ತಾನೆ. ಅಳಿಯಕಟ್ಟು ಸಂಪ್ರದಾಯಕ್ಕೆ ಅನುಸಾರವಾಗಿ ಅಧಿಕಾರಕ್ಕೆ ಬಂದ ಸೋದರಳಿಯ ರಮೇಶನ ಡೌಲು, ಸೊಕ್ಕು, ದುಂದುವೆಚ್ಚಗಳಿಂದಾಗಿ ಮನೆಯ ವಹಿವಾಟುಗಳು ಹಳಿ ತಪ್ಪುತ್ತವೆ. ಅವನ ನಡವಳಿಕೆಗಳು ಶೆಟ್ಟಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಆದರೆ ಅದನ್ನು ತಡೆಗಟ್ಟುವ ಶಕ್ತಿಯನ್ನು ಆತನು ಕಳೆದುಕೊಂಡಿರುತ್ತಾನೆ. ಸಾಮಾನ್ಯವಾಗಿ ಹೆಚ್ಚಿನ ಕಾದಂಬರಿಗಳ ಮುಖ್ಯ ಪಾತ್ರ ಅಥವಾ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಸಾಕಷ್ಟು ಕಷ್ಟ ಸುಖಗಳನ್ನುಂಡು, ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ಮಾಡಿ, ಅನೇಕ ಬಗೆಯ ಏರಿಳಿತಗಳನ್ನು ಕಂಡು ಮಾಗುತ್ತಾ ಬೆಳೆಯುತ್ತಾರೆ. ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ಲೌಕಿಕ ಕಾಮನೆಗಳಿಂದ ಕಳಚಿಕೊಂಡು ವೈರಾಗ್ಯದ ಅಂಚನ್ನು ಮುಟ್ಟಿರುತ್ತಾರೆ. ಕೆಟ್ಟವರು ಕಠಿಣ ಶಿಕ್ಷೆಗೆ ಒಳಗಾಗಿ ಅಪರಾಧಿ ಭಾವದಿಂದ ಕುಸಿದಿರುತ್ತಾರೆ ಇಲ್ಲವೇ ಬದುಕಿನ ಶೂನ್ಯತೆಯನ್ನು ಅನುಭವಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿರುವ ಶೀನ ಶೆಟ್ಟಿಯು ತಾನು ಗುತ್ತಿನ ಒಡೆಯನಾಗಿದ್ದ ಕಾಲದಲ್ಲಿ ಯಾವ ಮೋಂಟನ ಸೊಂಟ ಮುರಿಯಲು ಕಾರಣನಾಗಿದ್ದನೋ ಅವನ ಮನೆಯವರ ಕಡೆಯಿಂದ ವಾತಕ್ಕೆ ಮದ್ದು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.
ಭೂಮಸೂದೆ ಕಾನೂನು ಇತರರ ಮಾತುಗಳು, ಹೇಳಿಕೆ ಕೇಳಿಕೆಗಳ ಮೂಲಕ ತಲುಪುತ್ತದೆಯೇ ಹೊರತು ಒಕ್ಕಲುಗಳ ಮನದೊಳಗೆ ನೇರವಾಗಿ ಇಳಿಯುವುದಿಲ್ಲ. ಧಣಿಗಳ ಭೂಮಿಯ ಒಡೆತನ ಮುಂದಿನ ದಿನಗಳಲ್ಲಿ ತನ್ನದಾಗಬಹುದೆಂಬ ಉದ್ದೇಶದಿಂದ ಮೋಂಟನ ಅಳಿಯನಾದ ಲಿಂಗಪ್ಪನು ಅಡಿಕೆಯ ಗಿಡಗಳನ್ನು ನೆಟ್ಟಾಗ ರಮೇಶನು ಅವುಗಳನ್ನು ಕಡಿಸುತ್ತಾನೆ. ಈ ಘಟನೆ ಮತ್ತು ಕೊರಡ್ಕಲ್ ಶ್ರೀನಿವಾಸ ರಾಯರ ‘ಧನಿಯರ ಸತ್ಯನಾರಾಯಣ’ ಎಂಬ ಕತೆಯಲ್ಲಿ ಬರುವ ಸನ್ನಿವೇಶದ ನಡುವಿನ ಹೋಲಿಕೆಯು ಗಮನಾರ್ಹವಾಗಿದೆ. ‘ಧನಿಯರ ಸತ್ಯನಾರಾಯಣ’ದಲ್ಲಿ ತೌಡನು ಬಾಳೆಯ ಗಿಡವನ್ನು ನೆಡುತ್ತಾನೆ. ಅವನ ಪುಟ್ಟ ಮಕ್ಕಳು ಗಿಡವನ್ನು ಪ್ರೀತಿಯಿಂದ ಬೆಳೆಸುತ್ತಾ, ಗೊನೆಗೆ ಆಸೆ ಪಡುತ್ತಾರೆ. ಆದರೆ ಒಡೆಯರ ನೆಲದಲ್ಲಿ ಬೆಳೆದ ಗೊನೆಯಾದ್ದರಿಂದ ಸತ್ಯನಾರಾಯಣ ಪೂಜೆಗಾಗಿ ಅದನ್ನು ಅವರಿಗೆ ಒಪ್ಪಿಸಬೇಕಾಗುತ್ತದೆ. ಮಕ್ಕಳ ಅಳು, ಗೋಳಾಟ ಮುಗಿಲು ಮುಟ್ಟುತ್ತದೆ. ಶ್ರೀನಿವಾಸರಾಯರಂತೆ ಮೊಗಸಾಲೆಯವರದ್ದು ಕೂಡ ಸಂಯಮದ ಬರವಣಿಗೆಯಾಗಿದೆ. ಧಣಿಗಳ ಅಧಿಕಾರ ದೃಷ್ಟಿ, ಹೆತ್ತವರ ವಾಸ್ತವಜ್ಞಾನ, ಮಕ್ಕಳ ನ್ಯಾಯದ ದೃಷ್ಟಿಕೋನಗಳನ್ನು ಚಿತ್ರಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸತ್ಯನಾರಾಯಣ ಪೂಜೆಯ ನೆಪದಿಂದ ಧಣಿಗಳ ಮನೆಗೆ ಬಾಳೆಗೊನೆಯನ್ನು ಸಾಗಿಸುವಂತೆ ಮಾಡಿ, ಮಕ್ಕಳ ಸಾತ್ವಿಕ ಆಕ್ರೋಶವನ್ನು ತೋರಿಸಿ ಕತೆಯನ್ನು ಮುಗಿಸಿದ ಶ್ರೀನಿವಾಸರಾಯರಿಗಿಂತ ಭಿನ್ನವಾಗಿ, ಬದಲಾದ ಕಾಲಮಾನಕ್ಕೆ ತಕ್ಕಂತೆ ಕಾನೂನಿನ ನೆರವನ್ನು ಪಡೆದು ಲಿಂಗಪ್ಪನಿಗೆ ನ್ಯಾಯವನ್ನು ಒದಗಿಸಿದ ರೀತಿಯು ಪರಿಣಾಮಕಾರಿಯಾಗಿದೆ. ದಿಕ್ಕೆಟ್ಟು ಕುಳಿತ ಲಿಂಗಪ್ಪನು ತುಂಗುವಿನ ಮಾತಿಗೆ ಅನುಸಾರವಾಗಿ ಮಿತ್ತೊಟ್ಟು ಗುತ್ತಿಗೆ ನ್ಯಾಯ ಕೇಳಲು ಹೊರಟಾಗ ಅವನ ಹಿತೈಷಿಗಳಾದ ಕಾಮತರು ಅವನ ಪರವಾಗಿ ಆರಕ್ಷಕರಿಗೆ ದೂರು ಕೊಡುತ್ತಾರೆ. ಅವರನ್ನು ಕಂಡಾಗುವ ಹೆದರುವ ರಮೇಶನು ಹೊರಗೆ ಕ್ರೂರವಾಗಿದ್ದುಕೊಂಡು ಒಳಗೆ ನಿರ್ವೀರ್ಯವಾಗಿರುವ ಊಳಿಗಮಾನ್ಯ ವ್ಯವಸ್ಥೆಗೆ ಸಂಕೇತವಾಗುತ್ತಾನೆ. “ಧನಿಗಳು ಮತ್ತು ಅವರ ಹಾಗಿರುವ ಶೋಷಕರ ದಬ್ಬಾಳಿಕೆ ಅಂತ್ಯ ಮಾಡುವ ಕೆಲಸವನ್ನು ಸರಕಾರ ಮಾಡಲು ಹೊರಟಿದೆ. ಗ್ರಾಮೀಣ ಜನತೆ ಮತ್ತು ಗೇಣಿದಾರರ ಆರ್ಥಿಕ ಸ್ಥಾನಮಾನಗಳನ್ನು ಬದಲಾಯಿಸಲು 1961ರಲ್ಲಿ ಜಾರಿಗೆ ತಂದಿದ್ದ ‘ಕರ್ನಾಟಕ ಭೂ ಸುಧಾರಣಾ ಕಾಯಿದೆ’ಯು ಈ ತನಕ ಅನುಷ್ಠಾನವಾಗದಿರುವುದನ್ನು ಗಮನಿಸಿ ಈ ವರ್ಷ 1971ರ ಕರ್ನಾಟಕ ಭೂ ಸುಧಾರಣಾ ಕಾಯಿದೆ ಎಂಬ ಹೆಸರಿನಲ್ಲಿ 1961ರ ಕಾಯಿದೆಗೆ ಸುಧಾರಣೆಗಳನ್ನು ತರಲು ಹೊರಟಿದೆ. ಇದರ ಪ್ರಕಾರ ಚಾಲಗೇಣಿಗಳನ್ನು ಬಲಾತ್ಕಾರವಾಗಿ ಒಕ್ಕಲೆಬ್ಬಿಸುವ ಹಾಗಿಲ್ಲ. ಹಾಗೇನಾದರೂ ಮಾಡಿದರೆ ಭೂಮಾಲೀಕರು ಶಿಕ್ಷೆ ಅನುಭವಿಸಬೇಕಾಗುತ್ತದೆ” (ಪುಟ 180) ಎಂಬ ಎಸ್.ಐ. ಅವರ ಮಾತು ಭೂಮಸೂದೆಯ ವಿವರಗಳನ್ನು ಸ್ಪಷ್ಟಪಡಿಸುವುದರೊಂದಿಗೆ ಕಾದಂಬರಿಯು ಚಿತ್ರಿಸುವ ಪರಿಸರದ ಕಾಲಮಾನವನ್ನೂ ತಿಳಿಸುತ್ತದೆ.
ಮಿತ್ತೊಟ್ಟು ಗುತ್ತಿನ ರಾಮಚಂದ್ರನು ಕಾನೂನನ್ನು ವಿರೋಧಿಸದೆ, ಭೂಮಿ ಕೈಬಿಟ್ಟು ಹೋಗಲಿರುವುದನ್ನೂ ಚಿಂತಿಸದೆ ಊರಿಗೆ ಪ್ರಯೋಜನವಾಗುವಂಥ ದೂರವಾಣಿ ಕೇಂದ್ರ ಮತ್ತು ವಿದ್ಯುತ್ ಸರಬರಾಜಿನ ಕಡೆ ಗಮನ ಹರಿಸಿ ಸುಧಾರಣವಾದಿಯೆನಿಸಿದರೆ, ಭೂಮಸೂದೆಯು ಜಾರಿಗೆ ಬರುವ ಮೊದಲು ಒಕ್ಕಲುಗಳನ್ನು ಕಂಡರಾಗದಿದ್ದ ರಮೇಶನು ಚುನಾವಣೆಯ ಅಭ್ಯರ್ಥಿಯಾದಾಗ ಅವರನ್ನು ಓಲೈಸುತ್ತಾನೆ. ಗುತ್ತಿನ ನೆಲ ಕೈತಪ್ಪಿ ಹೋಗುವುದರಿಂದ ಅದರಲ್ಲಿ ಬೆಳೆದ ಮರಗಳೂ ಒಕ್ಕಲುಗಳಿಗೆ ಸಿಗಬಾರದು ಎಂಬ ಉದ್ದೇಶದಿಂದ ಮೋಪಿನ ಮರಗಳನ್ನು ಕಡಿದು ರಾಜಕಾರಣಿಯಾದ ರಜಾಕ್ ಸಾಹೇಬನ ಮಿಲ್ಲಿಗೆ ಮಾರಿ ವ್ಯವಹಾರವನ್ನು ಕುದುರಿಸಿಕೊಳ್ಳುವುದರೊಂದಿಗೆ ಅವರ ಬಾಲಬಡುಕನಾಗಿ ರಾಜಕೀಯ ಕ್ಷೇತ್ರದೊಳಗೆ ನುಸುಳಲು ಹಾತೊರೆಯುತ್ತಾನೆ. ಹಾಡಿಗಳು ಭೂಮಿಯಿಂದ ಕಣ್ಮರೆಯಾಗತೊಡಗುತ್ತವೆ. ದುಡ್ಡು ಮಾಡುವ ಹಪಾಹಪಿಯಿಂದಾಗಿ ಪರಿಸರ ನಾಶವಾಗುವುದರ ಸೂಚನೆಯು ಸಿಗುತ್ತದೆ. ಪ್ರಭುತ್ವದ ಸೊಕ್ಕು, ದೊಡ್ಡಸ್ತಿಕೆ, ಅರ್ಥಹೀನ ಹಿಂಸೆಯ ಸ್ವರೂಪವನ್ನು ಕಟ್ಟಿಕೊಡುವ ಕಾದಂಬರಿಯು ದಕ್ಷ ಆಡಳಿತ, ನ್ಯಾಯ – ಅನ್ಯಾಯ ವಿವೇಚನೆ, ಶಿಸ್ತು, ಕರುಣೆ, ಅಭಿಮಾನ ಮುಂತಾದ ಕಲ್ಪನೆಗಳು – ಮೌಲ್ಯಗಳು ಬೆಲೆಯನ್ನು ಕಳೆದುಕೊಳ್ಳುವ ಕಹಿ ಸತ್ಯವನ್ನು ವಿವರಿಸುವುದರೊಂದಿಗೆ ಪ್ರಭುತ್ವ, ಸಮಾಜಸೇವೆ, ನಾಯಕತ್ವ ಮುಂತಾದ ಕಲ್ಪನೆಗಳನ್ನು ವೈಭವೀಕರಿಸದೆ ಅವುಗಳ ಹಿಂದಿನ ಪೊಳ್ಳುತನವನ್ನು ಅನಾವರಣಗೊಳಿಸುತ್ತಾ, ಮಾನವ ನಿರ್ಮಿತ ಸಂಸ್ಥೆಗಳಲ್ಲಿ ಮಾನವನೇ ಸಮಾಜದ ದುರಂತಕ್ಕೆ ಕಾರಣವಾಗುವ ವಿಪರ್ಯಾಸ – ವೈಪರೀತ್ಯಗಳನ್ನು ಬಯಲುಗೊಳಿಸುತ್ತದೆ. ಭೂಮಸೂದೆಯ ಹೆಸರಿನಲ್ಲಿ ಭೂಮಿಯು ರಾಜಕೀಯದ ಮುಷ್ಠಿಯೊಳಗೆ ಸಿಲುಕುವ ವಿದ್ಯಮಾನಗಳನ್ನು ಬಿಚ್ಚಿಡುವ ವಿವರಗಳಿರುವುದರಿಂದ ಕಾದಂಬರಿಗೆ ವಿಶೇಷ ಅರ್ಥವ್ಯಾಪ್ತಿಯು ಒದಗಿದೆ. ಈ ಪರಿಸ್ಥಿತಿಯು ರಾಜಕೀಯ ದೃಷ್ಟಿಕೋನವಿಲ್ಲದವರ ಬದುಕನ್ನೂ ಸೆರೆಹಿಡಿಯುತ್ತದೆ. ಕಾಲದ ದುರ್ನಡತೆಗೆ ಬಲಿಯಾಗಿ, ಉಪಯೋಗ ಶೂನ್ಯವಾಗುವ ಭೂಮಿಯ ಚಿತ್ರಣವನ್ನು ನೀಡುತ್ತದೆ. ಕೆಳಜಾತಿಯವರು ಭೂಮಿಗೆ ಒಡೆಯರಾದರೂ ಬದಲಾಗುವ ಆಶೋತ್ತರಗಳು ಭೂಮಿಯು ಹಡಿಲು ಬೀಳಲು ಕಾರಣವಾಗುತ್ತಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ. ಊರನ್ನು ವಿಚಲಿತಗೊಳಿಸುವ ರಾಜಕಾರಣದ ಪರಿಣಾಮಗಳನ್ನು ಪರ ವಿರೋಧಗಳ ನೆಲೆಗಳಲ್ಲಿ ದಾಖಲಿಸದೆ ಇವುಗಳು ಓದುಗರ ಪ್ರಜ್ಞೆಯಲ್ಲಿ ಅಚ್ಚೊತ್ತುವ, ಅವುಗಳಿಗೆ ಅದರದ್ದೇ ಆದ ಪ್ರತಿಕ್ರಿಯೆ ಮತ್ತು ಪ್ರತಿಸ್ಪಂದನೆಯನ್ನು ಉಂಟುಮಾಡುವ ಬಗೆಯನ್ನು ನಿರೂಪಿಸುತ್ತದೆ.
ವ್ಯಕ್ತಿಯ ಪ್ರಜ್ಞೆಯಲ್ಲಿ, ಅವನು ಬದುಕುತ್ತಿರುವ ಸಮಾಜದಲ್ಲಿ ಕಾಣಿಸಿಕೊಂಡ ಪಲ್ಲಟಗಳನ್ನು ದಾಖಲಿಸುವುದರೊಂದಿಗೆ ಸಮಾಜದಲ್ಲಿ ಅನ್ಯಾಯ, ಅನೀತಿ ಮತ್ತು ಭ್ರಷ್ಟಾಚಾರಗಳು ಹಲವು ಪದರಗಳೊಂದಿಗೆ ಬೆಸೆದುಕೊಂಡಿರುವುದನ್ನು ಅನುಭವಕ್ಕೆ ತಂದುಕೊಡುವ ಕಾದಂಬರಿಯು ಕಪ್ಪು ಬಿಳುಪಿನ ಪಾತ್ರ ಚಿತ್ರಣದಲ್ಲಿ ಲೀನವಾಗದೆ, ಅನುಕರಣೆಗೆ ಯೋಗ್ಯರಾದ ಒಳ್ಳೆಯವರು ಮತ್ತು ತಿರಸ್ಕಾರಕ್ಕೆ ಅರ್ಹರಾದ ಕೆಟ್ಟವರು ಯಾರು ಎಂಬ ನೈತಿಕ ತೀರ್ಮಾನವನ್ನು ಕೊಡುವುದರಲ್ಲಿ ನಿರತವಾಗದೆ, ಮನುಷ್ಯ ಸ್ವಭಾವದ ವೈವಿಧ್ಯಗಳನ್ನು ಅರ್ಥ ಮಾಡಿಸುತ್ತದೆ. “ರೈತರು ಭೂನ್ಯಾಯ ಮಂಡಳಿಯ ಮೂಲಕ ಸಿಕ್ಕಿದ ಜಮೀನನ್ನು ತಮ್ಮದೆಂದು ಸಂಭ್ರಮಿಸಿದ್ದರೂ ಭತ್ತದ ಕೃಷಿಯನ್ನು ನಡೆಸುವುದಕ್ಕೆ ಕೂಲಿ ಕಾರ್ಮಿಕರ ಕೊರತೆಯಿರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಕ್ಕಳಿಗೆ ಶಿಕ್ಷಣವನ್ನು ನೀಡಿದ ಸಂತಸವಿದ್ದರೂ ಓದಿದ ನಂತರ ಅವರು ಹೊಲದ ಕಡೆ ಮುಖ ಮಾಡದಿರುವುದು, ಪೇಟೆಯ ಕಡೆ ಆಕರ್ಷಿತರಾಗಿರುವುದು ಆತಂಕದಲ್ಲಿ ಕೆಡವಿದೆ. ಹಸುರಾಗಿ ನಳನಳಿಸಿ ಕಣ್ಣುಗಳನ್ನು ತುಂಬುತ್ತಿದ್ದ ಹೊಲಗಳು ಉತ್ತು ಬಿತ್ತುವರಿಲ್ಲದೆ ಹಡಿಲಾಗಿ ಕಳೆ ಗಿಡಗಳಿಂದ ತುಂಬಿವೆ. ದನಕರುಗಳ ಹೊಟ್ಟೆ ತುಂಬಿಸುತ್ತಿದ್ದ ಹುಲ್ಲುಗಳು ಹಿಂದೆ ಸರಿದು ಗಿಡಗಂಟೆಗಳು ಮತ್ತು ನಾಚಿಕೆ ಮುಳ್ಳುಗಳು ನರ್ತಿಸುತ್ತವೆ” (ಪುಟ 317) ಎಂಬ ಒಳನೋಟವನ್ನು ನೀಡುತ್ತದೆ.
ಲೇಖಕರು ಚಿತ್ರಿಸುವ ಸಮುದಾಯವು ಜಾತಿ ಶ್ರೇಣೀಕರಣದ ಮೆಟ್ಟಿಲುಗಳನ್ನು ಹೊಂದಿದೆ. ಬ್ರಾಹ್ಮಣ, ಬಂಟರು ಮತ್ತು ಸಮಾಜದ ಕೆಳಸ್ತರದವರವರೆಗೆ ಹಬ್ಬಿರುವ ಸಮುದಾಯದಲ್ಲಿ ಎಲ್ಲ ಜಾತಿಯವರು ಪರಸ್ಪರ ಭಿನ್ನವಾಗಿದ್ದೂ ಒಂದನ್ನೊಂದು ಅವಲಂಬಿಸಿ ಬದುಕುತ್ತಿರುವ ವಿನ್ಯಾಸವನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕೃಷಿ ಪ್ರಧಾನವಾದ ವ್ಯವಸ್ಥೆಯಲ್ಲಿ ಇವರೆಲ್ಲರೂ ಪರಸ್ಪರ ಪ್ರೀತಿ ದ್ವೇಷಗಳ ಸಂಬಂಧದಲ್ಲಿ ಒಟ್ಟು ಬದುಕೊಂದನ್ನು ಬದುಕುತ್ತಿದ್ದಾರೆ. ಸೊಂಟ ಮುರಿದು ಬಿದ್ದ ಮೋಂಟ, ಕಂಗಾಲಾದ ತುಂಗು, ಅಪಘಾತದಲ್ಲಿ ತೀರಿಕೊಳ್ಳುವ ಭಾಸ್ಕರನ ಪಾತ್ರಗಳು ಮನಸ್ಸನ್ನು ತಟ್ಟುತ್ತವೆ. ಬದುಕಿನ ಬಗ್ಗೆ ನಿರಾಸೆಯಿದ್ದರೂ ಮೋಂಟ ಮತ್ತು ತುಂಗುವಿಗೆ ಯಾರ ಮೇಲೂ ರೊಚ್ಚಿಲ್ಲ. ಅವರ ಸ್ವಭಾವದಲ್ಲಿ ಬಂಡಾಯವಿಲ್ಲದಿದ್ದರೂ ಅವರ ಅನುಭವಗಳು ಬಂಡಾಯಕ್ಕೆ ಹಿನ್ನೆಲೆ ಮತ್ತು ಪ್ರೇರಣೆಗಳನ್ನು ಒದಗಿಸುತ್ತದೆ. ಈ ಕಾದಂಬರಿಯು ಕೆಳಸ್ತರದ ಸಮುದಾಯ ಮಾತ್ರವಲ್ಲ ಬಂಟ ಸಮಾಜದ ಇಕ್ಕಟ್ಟುಗಳು ಮತ್ತು ಅಶಾಂತ ಜ್ವಾಲಾಮುಖಿಗಳನ್ನು ಮಂಡಿಸುತ್ತದೆ. ಬಂಟ ಸಮುದಾಯದಲ್ಲಿ ಹೆಚ್ಚಿನವರು ಶೀನ ಶೆಟ್ಟರಂತೆಯೇ ಇದ್ದರೂ ಜಾತಿ ಮತಗಳ ಇಕ್ಕಟ್ಟುಗಳನ್ನು ಮೀರಿ ಮಾನವೀಯತೆಯನ್ನು ಉಳಿಸಿಕೊಂಡ ರಾಧಕ್ಕ, ಮಿತ್ತೊಟ್ಟು ಗುತ್ತಿನ ವೀರಮ್ಮಕ್ಕ, ಶ್ರೀಧರ ಶೆಟ್ಟರೂ ಸೇರಿದಂತೆ ಬೆಸ್ತರ ಸರಸುವನ್ನು ಕೂಡ ವಿಶೇಷವಾಗಿ ಗಮನಿಸುತ್ತದೆ. ಒಂದು ಸಂಪ್ರದಾಯದೊಳಗಿನ ಭಿನ್ನಮತವನ್ನು ಬಯಲುಗೊಳಿಸುತ್ತದೆ. ಲೇಖಕರ ವಾಸ್ತವವಾದವು ಘೋಷಿತ ಸಾಮಾಜಿಕ ವಾಸ್ತವವಾದವಲ್ಲದಿದ್ದರೂ ಅದಕ್ಕೆ ಬಹಳ ಹತ್ತಿರವಾಗಿದೆ. ಕತೆಯೊಂದಿಗೆ ತಲ್ಲೀನವಾಗಲು ಅಡ್ಡಿಯಾಗುವ ಚರ್ಚೆಗಳು, ವಾದಗಳು ‘ಭೂಮಿಗೀತ’ದಲ್ಲಿ ಇಲ್ಲದಿರುವುದು ಧನಾತ್ಮಕ ಅಂಶವಾಗಿದೆ. ಬಡವರ ಬದುಕನ್ನು ಸಮೀಪದಿಂದ ನೋಡಿದ್ದ ಲೇಖಕರು ಅವರ ಬವಣೆಗಳನ್ನು ಸಮಕಾಲೀನ ಸಾಂಸ್ಕೃತಿಕ ಸಂದರ್ಭದಲ್ಲಿ ಚಿತ್ರಿಸಿದ್ದಾರೆ. ಪ್ರಕೃತಿ ಸಹಜ ಮಾನವೀಯತೆ ಮತ್ತು ಮಾನವ ನಿರ್ಮಿತ ವ್ಯವಸ್ಥೆಗಳ ನಡುವಿನ ದುರಂತ, ವಿರೋಧದ ಕಲ್ಪನೆಯೂ ಮೈದಾಳುತ್ತದೆ. ಅವರ ಮನೋಧರ್ಮವು ಪ್ರಗತಿಶೀಲ ಮತ್ತು ದಲಿತ ಬಂಡಾಯದ ಕಡೆಗೆ ಒಲಿಯದಿದ್ದರೂ ದೀನರ ಬಗೆಗಿನ ಅನುಕಂಪ, ಅವರಿಗಾಗಿದ್ದ ಅನ್ಯಾಯಗಳಿಗೆ ದನಿಯಾಗುತ್ತದೆ.
ಮೊಗಸಾಲೆಯವರು ಕರಾವಳಿಯ ಜನಜೀವನದ ವಿವರಗಳನ್ನು, ಸಮಾಜದ ಶ್ರೇಣೀಕೃತ ವ್ಯವಸ್ಥೆಯನ್ನು ತಮ್ಮ ಕಾದಂಬರಿಗಳಲ್ಲಿ ಈ ಮೊದಲೇ ಶೋಧಿಸಿದ್ದಾರೆ. ಅವರ ಮೊದಲ ಘಟ್ಟದ ಕಾದಂಬರಿಗಳಲ್ಲಿ ಶಿವರಾಮ ಕಾರಂತರ ದಟ್ಟ ಪ್ರಭಾವವನ್ನು ಗುರುತಿಸಬಹುದಾದರೂ ನಂತರದ ರಚನೆಗಳಲ್ಲಿ ತಮ್ಮದೇ ವಿಧಾನದ ಮೂಲಕ ಬದುಕಿನ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಾಡಿದ್ದಾರೆ. ಕರಾವಳಿಯ ಬಹು ಸಂಸ್ಕೃತಿ, ಜಾತಿ ಜನಾಂಗಗಳ ಪ್ರಾತಿನಿಧ್ಯ ಅವರ ಕಾದಂಬರಿಗಳಲ್ಲಿ ಎಡೆ ಪಡೆದಿದೆ. ಹಳ್ಳಿಗಳು ಜಾಗತೀಕರಣದ ದಾಳಿಗೆ ಬಲಿಯಾಗುವ ಬಗೆಯನ್ನು ‘ಉಲ್ಲಂಘನೆ’, ಮುಖಾಂತರ’ಗಳಂಥ ಬೃಹತ್ ಕಾದಂಬರಿಗಳು ಈಗಾಗಲೇ ದಾಖಲಿಸಿವೆ. ಈ ಪ್ರಶ್ನೆಯನ್ನು ಭೂಮಸೂದೆ ಜಾರಿಯಾದ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ಶೋಧಿಸುವಲ್ಲಿ ‘ಭೂಮಿಗೀತ’ವು ಯಶಸ್ವಿಯಾಗಿದೆ.

ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

