ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ನೀಡಲಾಗುವ ಸಾಹಿತಿ ಮೇಟಿ ಮುದಿಯಪ್ಪ ನೆನಪಿನ ‘ಮಲಬಾರ್’ ವಿಶ್ವಸಾಹಿತ್ಯ ಪುರಸ್ಕಾರ’ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ (ಸಮಗ್ರ ಸಾಹಿತ್ಯ), ಉಡುಪಿಯ ಹಿರಿಯ ಸಾಹಿತಿ ಇಂದಿರಾ ಹಾಲಂಬಿ (ಮಕ್ಕಳ ಸಾಹಿತ್ಯ) ಹಾಗೂ ಡಿ.ಆರ್.ಡಿ.ಓ. ಮುಖ್ಯ ಸಂಪರ್ಕ ಅಧಿಕಾರಿಯಾಗಿದ್ದ ಮೈಸೂರಿನ ಜಯಪ್ರಕಾಶ್ ಪುತ್ತೂರು (ಅನುವಾದ ಸಾಹಿತ್ಯ) ಇವರು ಆಯ್ಕೆಯಾಗಿದ್ದು, ದಿನಾಂಕ 08 ನವೆಂಬರ್ 2026ರಂದು ನಡೆಯುವ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕ ಜೊತೆಗೆ ತಲಾ 5 ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿ ಸಂಚಾಲಕಿ ಸಂಧ್ಯಾ ಶೆಣೈ ತಿಳಿಸಿದ್ದಾರೆ.
