ಉಳ್ತೂರು : ಉಳ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ನಮ್ಮ ಉಳ್ತೂರು ಬಳಗ, ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಸಹಯೋಗದಲ್ಲಿ ದಿನಾಂಕ 23 ಆಗಸ್ಟ್ 2026ರಂದು ಆಯೋಜಿಸಿದ ‘ಅರ್ಥಾಂಕುರ-28 ’ ಸರಣಿ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ವಿಜಯಲಕ್ಷ್ಮಿ ರಾಮದಾಸ ಅಡಿಗ ಇವರು ಮಾತನಾಡಿ “ನಿರಂತರ ಚಟುವಟಿಕೆಯಿಂದಲೇ ಉಭಯ ಸಂಸ್ಥೆಗಳು ಹೆಸರಾಗಿದೆ. ಈತನ್ಮದ್ಯೆ ಉಳ್ತೂರಿನಲ್ಲಿಯೂ ಹೊಸ ತಲೆಮಾರಿನ ಅರ್ಥದಾರಿಗಳನ್ನು ತಯಾರಿಸುವ ಸದುದ್ಧೇಶದಿಂದ ಅರ್ಥಾಂಕುರವನ್ನು ಆಯೋಜಿಸುತ್ತಿರುವುದು ಸಂತಸ ತಂದಿದೆ. ಉಳ್ತೂರಿನ ಯಕ್ಷಗಾನಾಸಕ್ತರಿಗೆ ರಸಾನುಭೂತಿಗೆ ಉತ್ತಮ ಅವಕಾಶ ದೊರೆತಂತಾಗಿದೆ” ಎಂದು ಹೇಳಿದರು.

ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ನಾನ್’ ಯಕ್ಷಕೃತಿಯನ್ನು ಬಿಡುಗಡೆ ಮಾಡಿದ ಪ್ರಾಚಾರ್ಯ ದೇವದಾಸ್ ರಾವ್ ಮಾತನಾಡಿ “ಕುಂದಾಪ್ರ ಕನ್ನಡ ಭಾಷಾಭಿಮಾನ ವಿಶ್ವವ್ಯಾಪಿಯಾಗಿದೆ. ಅದರಲ್ಲಿಯೂ ಯಕ್ಷಗಾನವನ್ನು ಕುಂದಾಪ್ರ ಕನ್ನಡದಲ್ಲಿ ಬರೆಯುವ ಕಾಯಕ ಕಷ್ಟಕರವಾದದ್ದು. ಸಾಹಿತ್ಯವನ್ನು ಹೊಂದಿಸಿಕೊಂಡು ಛಂದಸ್ಸಿಗನುಗುಣವಾಗಿ ಪದ್ಯ ರೂಪಕ್ಕೆ ತರುವುದು ಸುಲಭ ಸಾಧ್ಯವಲ್ಲ. ಇಂತಹ ಕ್ಲಿಷ್ಟಕರ ಸಾಹಸಗೈದ ಪ್ರಸಾದ್ ಮೊಗೆಬೆಟ್ಟು ಯಕ್ಷ ಕೃತಿಯನ್ನು ಶ್ಲಾಘಿಸಲೇ ಬೇಕು” ಎಂದು ಹೇಳಿದರು.

ಎ. ರವೀಂದ್ರ ಶೆಟ್ಟಿ, ರಮೇಶ್ ಅಡಿಗ ಉಳ್ತೂರು, ಬಾಬು ಪೂಜಾರಿ ಮಲ್ಯಾಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಯಶಸ್ವಿ ಕಲಾವೃಂದದ ಗೌರವಾಧ್ಯಕ್ಷ ಗೋಪಾಲ ಪೂಜಾರಿ ಸ್ವಾಗತಿಸಿ, ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ. ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದರು. ಪ್ರತಾಪ್ ಶೆಟ್ಟಿ ಉಳ್ತೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆ ‘ನಾನ್’ ರಂಗ ಪ್ರಸ್ತುತಿಗೊಂಡಿತು.
