ಉಡುಪಿ : ತಮ್ಮ 27ನೇ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು, ನಾಲ್ವರು ಮಕ್ಕಳನ್ನು ಒಬ್ಬಂಟಿಯಾಗಿ ಸಾಕಿ-ಸಲಹಿದ ಕಾಸರಗೋಡು ಮೀಯಪದವಿನ ‘ಗಡಿನಾಡ ಧೀರೆ ಪ್ರೇಮ ಕೆ. ಭಟ್’ ಇವರ ಜೀವನ ಮತ್ತು ಸಾಧನೆಗಳ ಕುರಿತು ಮಣಿಪಾಲದ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಆಯೋಜಿಸಿದ್ದ ‘ಅಮ್ಮನ ಸವಿನೆನಪು’ ಕಾರ್ಯಕ್ರಮವು ದಿನಾಂಕ 01 ಆಗಸ್ಟ್ 2026ರಂದು ಉಡುಪಿ ಪರ್ಕಳ ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ವೇದಿಕೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ, ನಟ ಹಾಗೂ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ “ಗಡಿನಾಡ ಧೀರೆ ಪ್ರೇಮ ಕೆ. ಭಟ್ ಅವರು ಬದುಕಿದ ರೀತಿ, ಅನುಸರಿಸಿದ ಮೌಲ್ಯಗಳು ಮತ್ತು ಸಮಾಜಮುಖಿ ಕಾರ್ಯಗಳು ಅವರ ನಿಧನದ ನಂತರವೂ ಅವರ ಬದುಕನ್ನು ಜನಮನದಲ್ಲಿ ಜೀವಂತವಾಗಿರಿಸಿವೆ. ತಮ್ಮ ಎಳೆಯ ಮಕ್ಕಳೊಂದಿಗೆ ಏಕಾಂಗಿಯಾಗಿ ಬದುಕನ್ನು ಕಟ್ಟಿಕೊಂಡ ಅವರು, ಊರಿನಲ್ಲಿ ಶಾಲೆಗಳ ನಿರ್ಮಾಣ ಮತ್ತು ಬೆಳವಣಿಗೆಗೆ ಅಪಾರ ಶ್ರಮ ವಹಿಸಿದರು. ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದರ ಜೊತೆಗೆ ಅನೇಕ ಮಂದಿಗೆ ವಿದ್ಯಾದಾನ ನೀಡಿ ಮಾದರಿಯಾದರು. ಉತ್ತಮ ಕೃಷಿಕೆಯಾಗಿಯೂ, ಧಾರ್ಮಿಕ ಮುಖಂಡೆಯಾಗಿಯೂ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಅವರು ‘ಗಡಿನಾಡ ಧೀರೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕಾಸರಗೋಡಿನ ಹೆಮ್ಮೆಯಾಗಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರೇಮ ಕೆ. ಭಟ್ ಅವರ ಪುತ್ರಿ, ಕವಯಿತ್ರಿ ಪ್ರಮೀಳಾ ಚುಳ್ಳಿಕ್ಕಾನ ಅವರ ಕವನಗಳನ್ನು ಉಡುಪಿಯ ವಿದುಷಿ ಸಂಗೀತಾ ಬಾಲಚಂದ್ರ ಅತ್ಯಂತ ಭಾವಪೂರ್ಣವಾಗಿ ಹಾಡಿದರು. ಬಳಿಕ ಪ್ರಮೀಳಾ ಚುಳ್ಳಿಕ್ಕಾನ್ ಅವರು ತಾಯಿಯ ನೆನಪಿನಲ್ಲಿ ಆಶುಕವಿತೆಯನ್ನು ವಾಚಿಸಿ ಸಭಿಕರ ಮನಸ್ಸನ್ನು ಸ್ಪರ್ಶಿಸಿದರು. ಸಭೆಯ ಅಧ್ಯಕ್ಷತೆಯನ್ನು ಡಾ. ಜಯಪ್ರಕಾಶ್ ನಾರಾಯಣ ವಹಿಸಿದ್ದರು. ವಿದುಷಿ ಉಮಾಶಂಕರಿ ಸ್ವಾಗತಿಸಿ, ಡಾ. ಎಚ್. ಎನ್. ಉದಯಶಂಕರ್ ವಂದನಾರ್ಪಣೆಗೈದು, ಜಿ.ಪಿ. ಪ್ರಭಾಕರ್ ಹಾಗೂ ಶಿಲ್ಪ ಜೋಷಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಬೆಂಗಳೂರಿನ ವಿದುಷಿ ಚಾರುಲತಾ ರಾಮಾನುಜಂ ಇವರ ‘ನಾದ ನಮನ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗೆ ವಿದುಷಿ ಸಿಂಧು ಸುಚೇತನ್ ವಯೋಲಿನ್‌ನಲ್ಲಿ ಹಾಗೂ ವಿದ್ವಾನ್ ಅರ್ಜುನ ಕುಮಾರ್ ಮೃದಂಗದಲ್ಲಿ ಸೊಗಸಾಗಿ ಸಹಕರಿಸಿದರು.
