ಬೆಂಗಳೂರು : ರಂಗತಂತ್ರ ಅರ್ಪಿಸುವ ಬಿ.ಆರ್. ಲಕ್ಷ್ಮಣ ರಾವ್ ರವರ ‘ನನಗ್ಯಾಕೋ ಡೌಟು’ ನಾಟಕ ಪ್ರದರ್ಶನವನ್ನು ದಿನಾಂಕ 05 ನವೆಂಬರ್ 2026ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಟಿಕೆಟ್ ಮತ್ತು ಹೆಚ್ಚಿನ ಮಾಹಿತಿಗಾಗಿ 9845421929 ಸಂಖ್ಯೆಯನ್ನು ಸಂಪರ್ಕಿಸಿರಿ.

ರಂಗತಂತ್ರ ತಂಡದ ಪರಿಚಯ : ನಮ್ಮ ತಂಡದ ಪಯಣ ಶುರುವಾಗಿದ್ದು 2008ರಲ್ಲಿ. ಈ ತಂಡದಲ್ಲಿ ಹಲವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದೋರು, ಮಾಡುತ್ತಿರುವವರು. ನಮ್ಮೆಲ್ಲರಿಗೂ ರಂಗಭೂಮಿಯ ಕಡೆಗೆ ವಿಶೇಷವಾದ ಸೆಳೆತ. ಇಂಥ ಸಮಾನ ಮನಸ್ಕರು ಸಮಾನ ಅಭಿರುಚಿ ಇಟ್ಟುಕೊಂಡವರು ಈ ಮಹದಾಸೆಗೆ ರೆಕ್ಕೆ ಕೊಟ್ಟು ಹಾರಬೇಕು ಅಂತ ಮನಸ್ಸು ಮಾಡಿದಾಗ ಹುಟ್ಟಿದ ತಂಡವೇ ‘ರಂಗತಂತ್ರ’. ಈ 18 ವರ್ಷಗಳಲ್ಲಿ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದೇವೆ. ಹಾಸ್ಯ ಪ್ರಧಾನವಾದ ‘ಶ್ರೀ ಕೃಷ್ಣ ಸಂಧಾನ’, ಟಿ.ಪಿ. ಕೈಲಾಸಂ ರವರ ‘ಅಮ್ಮಾವ್ರ ಗಂಡ’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹುತ್ತದಲ್ಲಿ ಹುತ್ತ’, ರಾಜೇಂದ್ರ ಕಾರಂತರವರ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಹೀಗೆ ಇನ್ನೂ ಹಲವು ನಾಟಕಗಳನ್ನು ಬೆಂಗಳೂರಿನ ಹಲವಾರು ಪ್ರತಿಷ್ಠಿತ ರಂಗ ಮಂದಿರಗಳಲ್ಲಿ ಪ್ರದರ್ಶನ ನೀಡಿದ್ದೇವೆ.
ನಾಟಕದ ಪರಿಚಯ : ನಾವೆಲ್ಲರೂ ಆದಷ್ಟು ಆರೋಗ್ಯವಾಗಿರಬೇಕು ಅಂತ ಪ್ರಯತ್ನಪಟ್ಟರೂ ಒಂದು ರೋಗ ನಮ್ಮನ್ನು ಬಿಡುವುದಿಲ್ಲ. ಅದುವೇ ಪ್ರೇಮ ರೋಗ. ಕೆಲವರಿಗೆ ಮದುವೆಗೆ ಮುಂಚೆನೇ ಆಗುತ್ತೆ ಇನ್ನು ಕೆಲವರಿಗೆ ಮದುವೆ ಆದ್ಮೇಲೆ ಆಗತ್ತೆ. ಕೆಲವರಿಗೆ ತಮ್ಮ ಸ್ವಂತ ಹೆಂಡತಿ ಅಥವಾ ಗಂಡನ ಮೇಲೆ ಪ್ರೀತಿ ಆಗುತ್ತೆ.. ಇನ್ನು ಕೆಲವರಿಗೆ.. ಬಿಡಿ. ನಿಮಗೂ ಅರ್ಥ ಆಗಿರೋ ಹಾಗೆ ಕಾಣುತ್ತೆ. ಈ ರೋಗದ್ದು ಏನಪ್ಪಾ ಲಕ್ಷಣಗಳು ಅಂದ್ರೆ – ಊಟ ಸೇರದೇ ಇರೋದು, ನಿದ್ದೆ ಬರದೇ ಇರೋದು, ಗೋಡೆ ಬಣ್ಣ ಯಾವುದೇ ಇರಲಿ ಗಂಟೆ ಗಟ್ಟಲೇ ಅದನ್ನು ನೋಡುತ್ತಾ ಹಗಲುಗನಸು ಕಾಣುವುದು. ಇದೆಲ್ಲದಕ್ಕಿಂತ, ಇದರ ಜೊತೆ ಅಂಟಿಕೊಂಡೇ ಬರುವ ಅಂಥ ಒಂದು ಲಕ್ಷಣ ಎಂದರೆ.. ಹಾ.. ಡೌಟು.. ಗಂಡ ಸಲ್ಪ ಆಫೀಸ್ ನಿಂದ ಬರುವುದು ತಡ ಆಗಿ, ಮನೆಗೆ ಬಂದು ತಡವರಿಸುವುದಕ್ಕೆ ಶುರು ಮಾಡಿದರೆ ಸಾಕು. ಯಾರ ಜೊತೆ ಹೋಗಿದ್ದ ಅಂತ ಡೌಟು. ಗರ್ಲ್ ಫ್ರೆಂಡ್ ನಿಮ್ಮೆದುರಿಗೆನೇ ಮೊಬೈಲ್ ನಲ್ಲಿ ಏನೋ ಟೈಪ್ ಮಾಡುತ್ತಾ ಸಲ್ಪ ಮಂದಹಾಸ ಬೀರಿದರೂ ಸಾಕು.. ಯಾರ ಜೊತೆ ಚಾಟಿಂಗ್ ಅಂತ ಡೌಟು. ಈಗ ನಮ್ಮ ಕಥೆಯಲ್ಲೂ ಸಲ್ಪ ಹೀಗೆನೇ ವಿಷಯ. ಒಂದು ಚಿಕ್ಕ ಸಂದೇಹ ಚಿಕ್ಕದಿದ್ದಾಗಲೇ ಬುಡಸಮೇತ ಕಿತ್ತು ಬಿಸಾಕಲಿಲ್ಲವೆಂದರೆ ಏನೇನು ಆವಾಂತಾರ ಆಗತ್ತದೋ ನೋಡಣ ಬನ್ನಿ.
ನೋಡಿ ನಮ್ಮ ನಾಟಕ ‘ನನಗ್ಯಾಕೋ ಡೌಟು’.
