ಕಾಸರಗೋಡು : ಗಡಿಪ್ರದೇಶವಾದ ಕಾಸರಗೋಡಿನ ಅನೇಕ ಮಹಿಳಾ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿ ಕೊಡುವ ಮುಖಾಂತರ ಎಲೆ ಮರೆಯ ಮಹಿಳಾ ಸಾಧಕಿಯರಿಗೆ ಗೌರವ, ಸನ್ಮಾನಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಮಹಿಳಾ ಘಟಕ ‘ನಾರಿಚಿನ್ನಾರಿ’ ಸಂಸ್ಥೆಯು ಇದೀಗ ನವರಾತ್ರಿ ಮಹೋತ್ಸವವನ್ನು ‘ನವರಂಗಿಣಿ’ ಎಂಬ ಹೆಸರಿನಿಂದ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶ್ರೀಮತಿ ಸರೋಜಿನಿ ಕೆ. ಭಟ್ ಅವರು ತಿಳಿಸಿದರು.

ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 24 ಅಕ್ಟೋಬರ್ 2026ರ ಶನಿವಾರದಂದು ನಾರಿಚಿನ್ನಾರಿ ಏರ್ಪಡಿಸಿದ ‘ನವರಂಗಿಣಿ’ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.



ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಲಕ್ಷ್ಮೀ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ನವರಾತ್ರಿಯು ದುರ್ಗಾ ಮಾತೆಯ ಪ್ರಜನನ ಸಮಯವಾಗಿದೆ. ಈ ಸಮಯದಲ್ಲಿ ಉಪವಾಸ, ವೃತಗಳನ್ನು ಆಚರಿಸುವ ಮುಖಾಂತರ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಬಹುದು ಎಂದು ಹೇಳಿದರು. ಅವರು ನವರಾತ್ರಿಯ ವೈಶಿಷ್ಠ್ಯತೆ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿಚಿನ್ನಾರಿಯ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ಸವಿತಾ ಟೀಚರ್ ವಹಿಸಿದರು. ನಂತರ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಸ್ಕೂಲ್ ಆಫ್ ಡಾನ್ಸ್ ಕೆಟ್ಟುಂಕಲ್ ಮಹಿಳೆಯರಿಂದ ನೃತ್ಯ ಪ್ರದರ್ಶನ, ಸ್ವರಚಿನ್ನಾರಿ ಘಟಕದ ಸದಸ್ಯೆಯರಿಂದ ಭಕ್ತಿಗೀತೆಗಳ ಕಾರ್ಯಕ್ರಮ ಜರಗಿತು. ಕವಿ ಗೋಷ್ಠಿಯ ಅಂಗವಾಗಿ ಕವಿಯತ್ರಿಯರಾದ ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನ, ಧನ್ಯಶ್ರೀ ಸರಳಿ, ಜ್ಯೋತ್ಸ್ನಾ ಕಡಂದೇಲು, ನಿರ್ಮಲ ಶೇಷಪ್ಪ, ಸುಶೀಲ ಪದ್ಯಾಣರವರು ಸ್ವರಚಿತ ಕವನ ವಾಚಿಸಿದರು. ಶ್ರೀಮತಿ ಸವಿತಾ ಟೀಚರ್ ಹಾಗೂ ಶ್ರೀಮತಿ ವಿಜಯಲಕ್ಷ್ಮೀ ಅವರ ನೇತೃತ್ವದಲ್ಲಿ ರಸಪ್ರಶ್ನೆಗಳು, ಶ್ರೀಮತಿ ಸರ್ವಮಂಗಳಾ ಜಯ್ ಪುಣಿಂಚಿತ್ತಾಯ ಅವರ ನಿರ್ದೇಶನದಲ್ಲಿ ‘ಅಂತ್ಯಾಕ್ಷರಿ’ಯನ್ನು ಆಯೋಜಸಲಾಗಿತ್ತು.
ನಾರಿಚಿನ್ನಾರಿಯ ಕಾರ್ಯದರ್ಶಿ ಶ್ರೀಮತಿ ವಿಜಯಲಕ್ಷ್ಮೀ ಶ್ಯಾನುಭೋಗ್ ಸ್ವಾಗತಿಸಿ, ಶ್ರೀಲತಾ ಟೀಚರ್ ಪ್ರಾರ್ಥನೆ ಹಾಡಿದರು. ಶ್ರೀಮತಿ ಉಷಾ ಟೀಚರ್ ಧನ್ಯವಾದವಿತ್ತರು. ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಸಮಾರೋಪ ಮಾತುಗಳನ್ನಾಡಿ, ನವೆಂಬರ್ ತಿಂಗಳ 28ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗಾಗಿ ಕನ್ನಡ ದೇಶಭಕ್ತಿ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಮಾತ್ರವಲ್ಲ ಚಲನಚಿತ್ರ ನಟ ಸುಂದರ್ ರಾಜ್ ಹಾಗೂ ಶ್ರೀನಾಥ್ ಇವರಿಂದ ರಂಗಗೀತೆಗಳ ಕಾರ್ಯಕ್ರಮವನ್ನೂ ಏರ್ಪಡಿಸಲಾಗುವುದು ಎಂದರು.

ಶ್ರೀಮತಿ ಸರ್ವಮಂಗಳ ಜಯ್ ಪುಣಿಂಚಿತ್ತಾಯ ಕಾರ್ಯಕ್ರಮವನ್ನು ನಿರ್ವಹಿಸಿದರು. ರಂಗಚಿನ್ನಾರಿಯ ನಿರ್ದೇಶಕರಾದ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್ ಮತ್ತು ಸ್ವರಚಿನ್ನಾರಿಯ ಸಹ ಸಂಚಾಲಕಿ ಬಬಿತಾ ಆಚಾರ್ಯ ಉಪಸ್ಥಿತರಿದ್ದರು.

