ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನ ಹಾಗೂ ಮಂಗಳೂರು ಹವ್ಯಕ ಸಭಾ (ರಿ.) ಇದರ ಜಂಟಿ ಸಹಯೋಗದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ (ಜೀಜೀ) ಇವರ 10ನೆಯ ಕೃತಿ ‘ಹನಿ ಸಂಹಿತೆ’ಯು ದಿನಾಂಕ 25 ಅಕ್ಟೋಬರ್ 2026ರಂದು ಮಂಗಳೂರು ನಂತೂರಿನ ಶ್ರೀ ಭಾರತೀ ಕಾಲೇಜು ಸಭಾಂಗಣದಲ್ಲಿ ಬಿಡುಗಡೆಗೊಂಡಿತು.
ಖ್ಯಾತ ಹನಿಗವಿ ಡುಂಡಿರಾಜ್ ರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಹಲವಾರು ಕವಿತೆಗಳನ್ನು ವಿಶ್ಲೇಷಿಸಿದರು.
* ಒಳ್ಳೆಯ ವ್ಯಾಪಾರ ಎಂದ ತಕ್ಷಣ
ನನಗೆ ನೆನಪಿಗೆ
ಬರುವುದು ಶಿಕ್ಷಣ
* ಹಣತೆ ಇದ್ದು, ಬತ್ತಿ ಇದ್ದು
ಎಣ್ಣೆ ಇದ್ದರೇನು ಫಲ ?
ದೀಪ ಹಚ್ಚಬೇಕಲ್ಲ…?
* ನಾಡಿಗೆ ‘ಬರ’ ಬಂದಾಗ
ಯಾರಿಗೂ ದೊರೆಯಲಿಲ್ಲ ಪರಿಹಾರ
ಬರ ವೀಕ್ಷಣೆಗೆ ಸಚಿವರು ಬಂದಾಗ
ಅಬ್ಬಾ… ಎಷ್ಟೊಂದು ಪರಿ ‘ಹಾರ’
“ಇಂಥಾ ಅರ್ಥಪೂರ್ಣವಾದ ವ್ಯಂಗ್ಯ, ವಿಡಂಬನೆ, ಹಾಸ್ಯ, ಸಾಮಾಜಿಕ ಕಳಕಳಿಯ ‘ಹನಿ ಸಂಹಿತೆ’ಯು ಮತ್ತೆ ಮತ್ತೆ ಓದಬೇಕೆನಿಸುವ ಕೃತಿ, ಜೀಜೀ ಅಭಿನಂದನೀಯರು” ಎಂದು ನುಡಿದರು.

ಮಂಗಳೂರು ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಮಂಜುನಾಥ್ ಎಸ್. ರೇವಣಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ಹವ್ಯಕ ಸಭಾ ಅಧ್ಯಕ್ಷ ದಿವಾಣ ಗೋವಿಂದ ಭಟ್ಟರು ಅಭಿನಂದಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನದ ಅಧ್ಯಕ್ಷರೂ, ಸೂರಾಲು ಅರಮನೆಯ ಮುಖ್ಯಸ್ಥರೂ ಆದ ಎನ್. ತಿಲಕ್ ಪ್ರಸಾದ್ ಜೀಯವರು ಶುಭ ಹಾರೈಸಿ ಮಾತನಾಡಿದರು. ಉಷಾ ಜಿ. ಪ್ರಸಾದ್ ಜೀ ಪ್ರಾರ್ಥಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮುರಲೀಮೋಹನ್ ಚೂಂತಾರು ಸ್ವಾಗತಿಸಿ, ರಘು ಇಡ್ಕಿದುರವರು ಕಾರ್ಯಕ್ರಮ ನಿರೂಪಿಸಿ, ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು. ಪರಿಷತ್ತಿನ ಸನತ್ ಕುಮಾರ್ ಜೈನ್ ಮತ್ತು ಕೃಷ್ಣಪ್ಪ ನಾಯ್ಕ್ ಸಹಕರಿಸಿದರು.
