ಬೆಂಗಳೂರು : ‘ಕಲಾಂತರಿಕ್ಷಂ ನೃತ್ಯಕ್ಷೇತ್ರ’ ಸಾಂಪ್ರದಾಯಿಕ ಶಾಸ್ತ್ರೀಯ ಕಲಾ ಪ್ರಕಾರಗಳಿಗಾಗಿ ಒಂದು ಕಲಾ ವೇದಿಕೆಯಾಗಿ ನೃತ್ಯರಂಗದಲ್ಲಿ ಸದ್ದಿಲ್ಲದೆ ಸಾಧನಾ ಪಥದಲ್ಲಿ ಕ್ರಮಿಸುತ್ತಿದೆ. ಈ ಸಂಸ್ಥೆಯ ಕಲಾತ್ಮಕ ನಿರ್ದೇಶಕಿ – ಭರತನಾಟ್ಯ ಗುರು ಮತ್ತು ಕರ್ನಾಟಕ ಸಂಗೀತ ಶಿಕ್ಷಕಿಯಾಗಿ ನಿರಂತರ ನೃತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಶ್ರೀಮತಿ ಸುನೀತಾ ಅರವಿಂದ್ ಯಾವುದಾದರೂ ಹೊಸ ಪ್ರಯೋಗವನ್ನು ಆಗುಮಾಡುವ ಅತ್ಯುತ್ಸಾಹಿ ಪ್ರತಿಭಾವಂತೆ. ಅವರ ಕಲಾಯಾನವು ಗುರು–ಶಿಷ್ಯ ಪರಂಪರೆ ಮತ್ತು ಗುರುಕುಲ ಪದ್ಧತಿಯಲ್ಲಿ ಬೇರೂರಿದ್ದು, ಸಾಂಪ್ರದಾಯಿಕ ಭರತನಾಟ್ಯ ಅಭ್ಯಾಸ ಹಾಗೂ ತಂಜಾವೂರು ಕ್ವಾರ್ಟೆಟ್‌ನ ನೃತ್ಯ ಸಂಪ್ರದಾಯದ ಮೇಲೆ ವಿಶೇಷ ಒತ್ತು ನೀಡುತ್ತದೆ. ಕಳೆದ ಮೂರು ದಶಕಗಳಿಂದ ಅನೇಕ ಖ್ಯಾತ ನೃತ್ಯಜ್ಞರಿಂದ ತರಬೇತಿಗೊಂಡಿರುವ ನೃತ್ಯ ಕಲಾವಿದೆ ಸುನೀತಾ ಗುರುವಾಗಿ ತಮ್ಮ ನೃತ್ಯಸಂಸ್ಥೆಯ ಮೂಲಕ ಉದಯೋನ್ಮುಖ ಪ್ರತಿಭೆಗಳಿಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದು, ಶಿಸ್ತುಬದ್ಧ ನೃತ್ಯ ಶಿಕ್ಷಣ – ಭಾರತೀಯ ಶಾಸ್ತ್ರೀಯ ಕಲೆಗಳ ಬಗ್ಗೆ ಆಳವಾದ ಅರಿವು ನೀಡುವುದರೊಂದಿಗೆ ಕಲಾವಿದರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡುತ್ತಿರುವುದು ಅವರ ವಿಶೇಷ.

‘ಕಲಾಂತರಿಕ್ಷಂ ನೃತ್ಯಕ್ಷೇತ್ರ’ದ ವೈಶಿಷ್ಟ್ಯವೆಂದರೆ ಒಂದೇ ಸೂರಿನಡಿ ಉತ್ತಮ ಭರತನಾಟ್ಯ ಶಿಕ್ಷಣದ ಜೊತೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಸುತ್ತ ಪರಿಪೂರ್ಣ ಕಲಾವಿದರನ್ನು ರೂಪಿಸುತ್ತ ಬಂದಿರುವುದು. ವಿದ್ಯಾರ್ಥಿಗಳಲ್ಲಿ ಮೂಲಭೂತವಾಗಿರಬೇಕಾದ ನೃತ್ಯಜ್ಞಾನ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ನಮ್ಮ ಕಲಾ ಸಂಸ್ಕೃತಿಯ ಬಗ್ಗೆ ಉತ್ತಮ ಮಾರ್ಗದರ್ಶನ- ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಇದರಿಂದ ವಿದ್ಯಾರ್ಥಿಗಳು ನೃತ್ಯದ ತಂತ್ರ, ಲಯ, ಭಾವಾಭಿನಯ ಹಾಗೂ ನೃತ್ಯ ಸಂಗ್ರಹದಲ್ಲಿ (ರೆಪರ್ಟರಿ) ದೃಢವಾದ ಅಡಿಪಾಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಬೇರುಮಟ್ಟದಿಂದ ಗಟ್ಟಿಯಾದ ಅಡಿಪಾಯ ಹಾಕುವ ಪ್ರಯತ್ನ ಸುನೀತಾ ಅರವಿಂದ್ ಅವರದಾಗಿದೆ. ಅವರ ಬೋಧನಾ ವಿಧಾನವು ಸಾಂಪ್ರದಾಯಿಕ ಶಿಸ್ತು ಮತ್ತು ವ್ಯವಸ್ಥಿತ ಶೈಕ್ಷಣಿಕ ತರಬೇತಿಯನ್ನು ಸಮನ್ವಯಗೊಳಿಸುತ್ತದೆ. ಅನುಭವಿ ಶಿಕ್ಷಕಿಯಾಗಿ ಗುರು ಸುನಿತಾ ಅವರ ವ್ಯವಸ್ಥಿತ ಪಠ್ಯಕ್ರಮವು ವಿದ್ಯಾರ್ಥಿಗಳು ಹಂತವಾರು ಪರೀಕ್ಷೆಗಳಲ್ಲಿ ಪ್ರಗತಿ ಸಾಧಿಸುವುದರೊಂದಿಗೆ, ಭರತನಾಟ್ಯದ ಮೂಲಭೂತ ಅಂಶಗಳು ಮತ್ತು ಸಾಂಪ್ರದಾಯಿಕ ಮಾರ್ಗಂ ನೃತ್ಯಕ್ರಮದ ಮೇಲೆ ಉತ್ತಮ ಹಿಡಿತವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ.

ಗುರು ಸುನಿತಾ ಅವರು ಇಂಟರ್‌ನ್ಯಾಷನಲ್ ಡ್ಯಾನ್ಸ್ ಕೌನ್ಸಿಲ್ – CID UNESCOನ ಪ್ರಮಾಣೀಕೃತ ಶಿಕ್ಷಕಿಯಾಗಿದ್ದಾರೆ. ಕಲಾಂತರಿಕ್ಷಂ ನೃತ್ಯಕ್ಷೇತ್ರವು CID ಪ್ರಮಾಣೀಕರಣವನ್ನು ಹೊಂದಿದ್ದು, ಕರ್ನಾಟಕ ಸರ್ಕಾರದ ಅಡಿಯಲ್ಲಿ ನೋಂದಾಯಿತವಾಗಿದೆ. ಕಲಾಂತರಿಕ್ಷಂ ನೃತ್ಯಕ್ಷೇತ್ರದ ಮೂಲಕ ಅವರು ವಿದ್ಯಾರ್ಥಿಗಳಿಗೆ ವಾರ್ಷಿಕ ನೃತ್ಯ ಪ್ರದರ್ಶನಗಳು, ದೇವಾಲಯಗಳಲ್ಲಿ ನೃತ್ಯ ಪ್ರದರ್ಶನಗಳು, ನಟಾಂಜಲಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಸ್ಪರ್ಧೆಗಳು, ಪರೀಕ್ಷೆಗಳು ಹಾಗೂ ಬೃಹತ್ ವೇದಿಕೆ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಒದಗಿಸುತ್ತಿದ್ದಾರೆ.

ಭರತನಾಟ್ಯವು ಕೇವಲ ಪ್ರದರ್ಶನಾ ಕಲೆಯಲ್ಲ; ಅದು ಸಮರ್ಪಣೆ, ಏಕಾಗ್ರತೆ, ದೈಹಿಕ ಶಕ್ತಿ, ಸಾಂಸ್ಕೃತಿಕ ಅರಿವು ಹಾಗೂ ಆಧ್ಯಾತ್ಮಿಕ ಸಂಪರ್ಕವನ್ನು ಬೆಳೆಸುವ ಒಂದು ಶಿಸ್ತು ಎಂಬ ನಂಬಿಕೆಯೇ ಅವರ ಬೋಧನಾ ತತ್ತ್ವದ ಆಧಾರವಾಗಿದೆ. ಭರತನಾಟ್ಯದ ಹೊರತಾಗಿ, ಸುನಿತಾ ಅವರು ಯೋಗ, ದೈಹಿಕ ಕ್ಷಮತೆ (ಫಿಟ್ನೆಸ್) ಮತ್ತು ಸ್ವಾಸ್ಥ್ಯ ಕ್ಷೇತ್ರಗಳೊಂದಿಗೂ ತೊಡಗಿಸಿಕೊಂಡಿದ್ದಾರೆ. ಎಲ್ಲವನ್ನೂ ವೃತ್ತಿಪರ ಮಟ್ಟದಲ್ಲಿ ಆಯೋಜಿಸುವ ‘ಕಲಾಂತರಿಕ್ಷಂ ನೃತ್ಯಕ್ಷೇತ್ರ’ದ ಶಿಕ್ಷಕ ದಂಪತಿಗಳಾದ ಶ್ರೀ ಅರವಿಂದ್ ಚಂದ್ರಶೇಖರನ್ ಮತ್ತು ಸುನೀತಾ ಅರವಿಂದ್ ಪ್ರಸ್ತುತ ದಿನಾಂಕ 21 ಆಗಸ್ಟ್ 2026ರ ಶುಕ್ರವಾರದಂದು ಸಂಜೆ 4-00 ಗಂಟೆಯಿಂದ ಬೆಂಗಳೂರಿನ ಜೆ.ಸಿ. ರೋಡಿನಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ವಾರ್ಷಿಕ ‘ನೃತ್ಯಾರ್ಪಣಮ್’ ಶಾಸ್ತ್ರೀಯ ನೃತ್ಯ ಮಾತು ಕರ್ನಾಟಕ ಸಂಗೀತ ಪ್ರಸ್ತುತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಂಸ್ಥೆಯ ಉದಯೋನ್ಮುಖ ಕಲಾವಿದರ ಸುಮನೋಹರ ನೃತ್ಯವೈಭವವನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೃತ್ಯಗುರು ಡಾ. ಎ. ಚಿತ್ರಾ, ಹೊಸೂರಿನ ಪದ್ಮಶ್ರೀ ಕಲಾಮಂದಿರದ ನಿರ್ದೇಶಕರು ನಾಟ್ಯಗುರುಗಳಾದ ಎಸ್. ಕೃಷ್ಣನ್ – ಅಂಜನಾ ಕೃಷ್ಣನ್ ಮತ್ತು ಲೇಖಕಿ- ಕಲಾ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ ಭಾಗವಹಿಸುವರು. ಈ ಕಲಾಪ್ರಪೂರ್ಣ ವರ್ಣರಂಜಿತ ನೃತ್ಯರಮ್ಯತೆಯನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.


*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
