ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಹಾಸನ ಜಿಲ್ಲೆ ಆಲೂರು ತಾಲ್ಲೂಕು ಘಟಕದ ವತಿಯಿಂದ ಆಲೂರು ತಾಲ್ಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 12 ಜನವರಿ 2025ರ ಭಾನುವಾರದಂದು ನಡೆಯಲಿದೆ.
ಆಲೂರು ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿಯ ಹರಿಹಳ್ಳಿ ಕೆಂಚಾಂಬ ದೇವಸ್ಥಾನ ಆವರಣದಲ್ಲಿ ನಡೆಯಲಿರುವ ಈ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ಹಿರಿಯ ಪತ್ರಕರ್ತೆ ಹಾಗೂ ಬರಹಗಾರ್ತಿಯಾದ ಶ್ರೀಮತಿ ಲೀಲಾವತಿಯವರನ್ನು ದಿನಾಂಕ 06ಜನವರಿ 2025 ರಂದು ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ರವಿ ನಾಕಲಗೂಡು, ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಕೃಷ್ಣೇಗೌಡ ಮಣಿಪುರ, ಗೌರವಾಧ್ಯಕ್ಷರಾದ ಎಂ. ಬಾಲಕೃಷ್ಣ, ಕ. ಸಾ. ಪ. ಮಾಜಿ ಅಧ್ಯಕ್ಷರಾದ ಎಸ್. ಎಸ್. ಶಿವಮೂರ್ತಿ, ಉಪಾಧ್ಯಕ್ಷರಾದ ಟಿ. ಕೆ. ನಾಗರಾಜ್, ಕಾರ್ಯದರ್ಶಿಯಾದ ಧರ್ಮ ಕೆರಲೂರು, ಮಹಿಳಾ ಕಾರ್ಯದರ್ಶಿಯಾದ ಎಂ. ಚಂದ್ರಕಲಾ ಆಲೂರು, ಹಾಸನ ತಾಲ್ಲೂಕು ಅಧ್ಯಕ್ಷೆಯಾದ ಗೀತಾ ಕೆ. ಸಿ., ಸಮ್ಮೇಳನದ ಉಸ್ತುವಾರಿಯಾದ ಎಚ್. ಡಿ. ಸೋಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ :
ಲೀಲಾವತಿಯವರು 23 ನವೆಂಬರ್ 1950ರಂದು ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹರಿಹಳ್ಳಿಯಲ್ಲಿ ಎಚ್. ಎಸ್. ವೆಂಕಟನಾರಾಯಣಪ್ಪ ಹಾಗೂ ಶ್ರೀಮತಿ ಗೌರಮ್ಮ ಇವರ ಪುತ್ರಿಯಾಗಿ ಜನಿಸಿದರು.
ಎಂ. ಎ. ಸ್ನಾತಕೋತ್ತರ ಪದವೀಧರೆಯಾದ ಇವರು ‘ಜನಮಿತ್ರ’ ದಿನಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ, ‘ಜನತಾ ಮಾಧ್ಯಮ’ದಲ್ಲಿ ಸುದ್ಧಿಗಾರರಾಗಿ, ‘ಕನ್ನಡ ಪ್ರಭ’ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ, ‘ಕನ್ನಡ ಪ್ರಭ’ ಬೆಂಗಳೂರು ಕಛೇರಿಯಲ್ಲಿ ಉಪ ಸಂಪಾದಕಿಯಾಗಿ ಬಳಿಕ ‘ಹಾಸನವಾಣಿ’ ಸ್ವಂತ ದಿನಪತ್ರಿಕೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಪತ್ರಿಕೋಧ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ಐವತ್ತು ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿರುವ ಇವರು ‘ಭಾರತೀಯ ಭಾಷಾ ಪತ್ರಿಕೆ ಸಂಪಾದಕರ ಸಂಘ’ ನವದೆಹಲಿ ಇದರ ರಾಜ್ಯ ಸಂಘದ ಪ್ರತಿನಿಧಿಯಾಗಿದ್ದಾರೆ.’ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಎರಡು ವರ್ಷ ‘ರಾಜ್ಯ ಪತ್ರಿಕಾ ಮಾನ್ಯತಾ ಸಮಿತಿ’ ಇದರ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ. ಎರಡು ವರ್ಷಗಳ ಕಾಲ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇವರ ಸಾಹಿತ್ಯಿಕ, ಸಾಮಾಜಿಕ ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ‘ಯಶೋಧಮ್ಮ ಜಿ. ನಾರಾಯಣ ಪತ್ರಿಕಾ ಪ್ರಶಸ್ತಿ’, ‘ಕುವೆಂಪು ಕಾವ್ಯ ಪ್ರಶಸ್ತಿ’, ಶ್ರವಣ ಬೆಳಗೊಳ ಮಠದ ‘ನಿಸ್ವಾರ್ಥ ಸೇವಾ ಪ್ರಶಸ್ತಿ’, ‘ಪ್ರಾಮಾಣಿಕ ಗ್ರಾಹಕ ಪ್ರಶಸ್ತಿ’, ‘ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿ’, ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಪತ್ರಿಕಾ ಅಕಾಡೆಮಿ ಪ್ರಶಸ್ತಿ’ ಸೇರಿದಂತೆ ಹಲವು ಮಹತ್ತರ ಪ್ರಶಸ್ತಿಗಳು ಸಂದಿವೆ.
Subscribe to Updates
Get the latest creative news from FooBar about art, design and business.