ಉಡುಪಿ : ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿಯ ನಗರ ಕೇಂದ್ರ ಗ್ರಂಥಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆ ಹಾಗೂ ವಿನೂತನ ಪರಿಕಲ್ಪನೆಯ ‘ಗ್ರಂಥಾಲಯದಲ್ಲಿ ನಮ್ಮ ಸಾಹಿತಿ’ ಎಂಬ ಕಾರ್ಯಕ್ರಮವು ದಿನಾಂಕ 14 ಆಗಸ್ಟ್ 2026ರಂದು ಉಡುಪಿ ಅಜ್ಜರಕಾಡು ಇಲ್ಲಿರುವ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೊದಲ ಸಾಹಿತಿಯಾಗಿ ಮಾತನಾಡಿದ ಡಾ. ಪಾರ್ವತಿ ಜಿ. ಐತಾಳ್ “ನಾನು ಅನುವಾದಿಸಿದ್ದು ಓದುಗರಿಂದ ಅಪಾರ ಮೆಚ್ಚುಗೆ ಪಡೆದ ಕೃತಿ ನೋಬೆಲ್ ಪ್ರಶಸ್ತಿ ವಿಜೇತ ಪರ್ಲ್ ಎಸ್. ಬಕ್ ಅವರ ‘ಗುಡ್ ಅರ್ತ್’. ಮನುಷ್ಯ ಮತ್ತು ಮಣ್ಣುಗಳ ನಡುವಣ ಗಾಢವಾದ ಬಂಧವೇ ಇದರ ಮುಖ್ಯ ಕಥಾವಸ್ತು. 1930ರ ದಶಕದ ಚೀನಾದ ರೈತರ ಬದುಕು ಇದರ ಹಿನ್ನೆಲೆ. ಅಂದಿನ ದಿನಗಳಲ್ಲಿ ಚೀನಾದಲ್ಲಿ ಭೂಮಾಲೀಕರ ಅಹಂಕಾರ ಹಾಗೂ ಅಟ್ಟಹಾಸಗಳ ನಡುವೆ ತುಳಿತಕ್ಕೊಳಗಾದ ರೈತರ ಕಥೆ, ಕಥಾನಾಯಕ ವಾಂಗ್ ಲುಂಗ್ ತನ್ನ ಪುಟ್ಟ ಭೂಮಿಯಲ್ಲಿ ಶ್ರದ್ಧಾಭಕ್ತಿಗಳಿಂದ ಅಪಾರ ಪರಿಶ್ರಮದಿಂದ ದುಡಿದು ಚಿನ್ನವನ್ನೇ ಬೆಳೆದು ಶ್ರೀಮಂತನಾದ ಕಥೆ, ತಾಳ್ಮೆಯ ಪ್ರತಿಮೂರ್ತಿಯಾಗಿ ಅವನಿಗೆ ಸದಾ ಸಾಥ್ ನೀಡಿದ ಅವನ ಹೆಂಡತಿ ಓಲನ್-ಹೀಗೆ ಒಂದು ಅಪೂರ್ವ ಚಿತ್ರಣ ಈ ಕಾದಂಬರಿಯಲ್ಲಿ ನಮಗೆ ಸಿಗುತ್ತದೆ.” ಎಂದು ಹೇಳಿದರು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ. ಉದ್ಘಾಟಿಸಿ “ಈ ಯೋಜನೆಯಲ್ಲಿ ಹೆಚ್ಚು ಹೆಚ್ಚು ಸ್ಥಳೀಯ ಸಾಹಿತಿಗಳು ಬಂದು ತಮ್ಮ ಸಾಹಿತ್ಯ ರಚನೆಗಳ ಕುರಿತು ಮಾತನಾಡಬೇಕು ಅನ್ನುವುದೇ ನಮ್ಮ ಉದ್ದೇಶ” ಎಂದರು. ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಹೆಚ್.ಪಿ. ಮಾತನಾಡಿದರು. ಮುಖ್ಯ ಗ್ರಂಥಪಾಲಕಿ ಸುರೇಖಾ ರಾವ್ ಯೋಜನೆಯ ರೂಪುರೇಷೆಗಳನ್ನು ಕುರಿತು ವಿವರಿಸಿದರು. ಗ್ರಂಥಾಲಯವು ಶಾಲಾಮಕ್ಕಳಿಗಾಗಿ ಏರ್ಪಡಿಸಿದ್ದ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

