ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಾಸುದೇವ ಭೂಪಾಳಂ ಅವರ ಕವನಗಳ ಗಾಯನ, ವಾಚನ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 31-03-2024ರಂದು ಶಿವಮೊಗ್ಗದ ನಿವೃತ್ತಿ ನೌಕರರ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ. ಸಾ. ಪ. ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ “ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರವನ್ನು ಸದಾಜಾಗೃತವಾಗಿಡುವಲ್ಲಿ ವಾಸುದೇವ ಭೂಪಾಳಂ ಅವರ ಪಾತ್ರ ಪ್ರಮುಖವಾಗಿತ್ತು. ವಸುದೇವ ಭೂಪಾಳಂ ಅವರು ಹದಿನೆಂಟಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಕವನ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಕಥೆ, ವೈಚಾರಿಕತೆಯ ಕೃತಿಗಳು ಆ ಕಾಲದಲ್ಲಿ ಮೆಚ್ಚುಗೆ ಪಡೆದಿದ್ದವು. ಅವರು ಬರೆದ ‘ದೇವರು ಸತ್ತ’ ಕೃತಿ ಸದ್ದುಮಾಡಿತ್ತು.” ಎಂದು ವಿವರಿಸಿದರು.
ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ. ಎಂ. ಚಂದ್ರಶೇಖರ ಅವರು ಭೂಪಾಳಂ ಅವರ ಕವನ ವಾಚಿಸುವ ಮೂಲಕಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್ ಉಪಸ್ಥಿತರಿದ್ದರು. ಗಾಯಕಿ ಲಕ್ಷ್ಮೀ ಮಹೇಶ್ ಪ್ರಾರ್ಥನೆ ಹಾಡಿ, ಭೈರಾಪುರ ಶಿವಪ್ಪಗೌಡ ಸ್ವಾಗತಿಸಿ, ಎಂ. ಎಂ. ಸ್ವಾಮಿ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ನಡೆದ ಭೂಪಾಳಂ ಅವರ ಕವನಗಳ ವಾಚನ ಸ್ಪರ್ಧೆಯಲ್ಲಿ ಶ್ರೀನಿವಾಸ ನಗಲಾಪುರ ಪ್ರಥಮ, ಕೆ. ಪಿ. ಶಿವಮೂರ್ತಿ ದ್ವಿತೀಯ ಹಾಗೂ ಕೆ. ರಾಮಚಂದ್ರ ತೃತೀಯ, ಕವನಗಳ ಗಾಯನ ಸ್ಪರ್ಧೆಯಲ್ಲಿ ಮಹಾದೇವಿ ಪ್ರಥಮ, ಸಂಪ್ರೀತ್ ದ್ವಿತೀಯ ಮತ್ತು ಸುಶೀಲಾ ಷಣ್ಮುಗಂ ತೃತೀಯ ಬಹುಮಾನಕ್ಕೆ ಪಡೆದುಕೊಂಡರು.