ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಪ್ರೊ. ಅಭಯ ಕುಮಾರ್ ಅವರ ಬೀಳ್ಕೊಡುಗೆ ಸಮಾರಂಭ ದಿನಾಂಕ : 30-06-2023ರಂದು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು, “ಪ್ರೊ. ಅಭಯ್ ಕುಮಾರ್ ಅವರು ತುಂಬಾ ಸರಳ ವ್ಯಕ್ತಿತ್ವದ ಮತ್ತು ಮಾನವ ಪ್ರೀತಿಯುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಜಾನಪದ ವಿದ್ವಾಂಸನಾಗಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಿವೃತ್ತ ಜೀವನವು ಸುಖಮಯವಾಗಿರಲಿ” ಎಂದು ಹಾರೈಸಿದರು.
ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ ಅವರು ಮಾತನಾಡಿ, “ಒಳ್ಳೆಯದನ್ನು ಗುರುತಿಸಿ, ಪ್ರೋತ್ಸಾಹಿಸುವ ವ್ಯಕ್ತಿತ್ವ ಪ್ರೊ, ಅಭಯ ಕುಮಾರ್ ಅವರದ್ದು. ಸಮಾಜಮುಖಿಯಾಗಿ ಯೋಚನೆ ಮಾಡುವವರಾಗಿ, ಸಿದ್ಧಾಂತ, ವೈಚಾರಿಕತೆ, ನಿಲುವುಗಳಿಗನುಸಾರವಾಗಿ ಸಮಾಜದಲ್ಲಿ ಬದುಕನ್ನು ಕಟ್ಟಿಕೊಂಡವರು. ಜಾನಪದ ಕ್ಷೇತ್ರದಲ್ಲಿ ಅಪಾರ ಜ್ಞಾನವನ್ನು ಹೊಂದಿದ ಇವರ ಅನುಭವಗಳು ನಿವೃತ್ತಿ ಬಳಿಕ ಕೃತಿಗಳ ಮೂಲಕ ಅನಾವರಣಗೊಳ್ಳಲಿ” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಅಭಯ್ ಕುಮಾರ್ ವಿದ್ಯೆ ನೀಡಿ ಬೆಳೆಸಿದ ಮಂಗಳೂರು ವಿವಿಗೆ ನಾನು ಅಭಾರಿಯಾಗಿದ್ದೇನೆ. ಬದುಕಿನಲ್ಲಿ ಛಲ ಹಿಡಿದು ಮುನ್ನಡೆದರೆ ಖಂಡಿತಾವಾಗಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದ ಅವರು, ಬಾಲ್ಯದಿಂದ ತಾವು ನಡೆದು ಬಂದ ಹಾದಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಪ್ರೊ. ಅಭಯರು ಕನ್ನಡ ವಿಭಾಗವನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದರು. ಅವರು ಕರಾವಳಿಯ ತುಳು ಜಾನಪದ ಲೋಕದ ಏಕೈಕ ಶ್ರೇಷ್ಠ ವಿದ್ವಾಂಸರಾಗಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಡಾ. ಪೂವಪ್ಪ ಕಣಿಯೂರು, ಪ್ರೊ. ನಿಕೇತನ, ಡಾ. ಗಣನಾಥ ಎಕ್ಕಾರು, ಡಾ. ಎಂ.ಕೆ. ಮಾಧವ, ಡಾ. ಶ್ರೀನಿವಾಸ ಗಿಳಿಯಾರು, ಡಾ. ಗಿರಿಯಪ್ಪ, ಡಾ. ಆಶಾಲತಾ, ಡಾ. ನಿತಿನ್ ಬಾಳೆಪುಣಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.