ಕಿನ್ನಿಗೋಳಿ : ನಾಡಿನ ಹಿರಿಯ ಬಹುಶ್ರುತ ವಿದ್ವಾಂಸ, ಲೇಖಕ, ಕಲಾವಿದ ಡಾ. ಎಂ. ಪ್ರಭಾಕರ ಜೋಷಿ ಇವರಿಗೆ ಈ ಬಾರಿಯ ‘ಕಟೀಲು ಪು. ಶ್ರೀನಿವಾಸ ಭಟ್ಟ ಪ್ರಶಸ್ತಿ’ ಘೋಷಿಸಲಾಗಿದೆ.
ಡಾ. ಜೋಶಿಯವರು ಯಕ್ಷಗಾನ ಕಲಾವಿದ, ವಿಮರ್ಶೆ ಮೌಲ್ಯ ರಕ್ಷಣೆ, ಶಿಕ್ಷಣ, ಸಂಸ್ಕೃತಿ, ತತ್ವಶಾಸ್ತ್ರ, ಭಾಷೆ, ಸಾಂಸ್ಥಿಕ ಸೇವೆಗಳಲ್ಲಿ ಆರು ದಶಕಗಳಿಗೂ ಮಿಕ್ಕಿ ಸಕ್ರಿಯರು. ತಾಳಮದ್ದಲೆ ಕಲಾವಿದ, ನಾಲ್ಕು ತಲೆಮಾರುಗಳ ಸಹ ಅರ್ಥಧಾರಿ, ಹಲವು ಗ್ರಂಥಗಳನ್ನು, ನೂರಾರು ಲೇಖನಗಳನ್ನು ಬರೆದವರು, ಅಕಾಡಮಿ ಪಾರ್ತಿಸುಬ್ಬ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕ.ಸಾ.ಪ. ಗೌರವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮಣಿಪಾಲ ಪ್ರಶಸ್ತಿ, ಕಲ್ಕೂರ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಜಾನಪದ ಅಕಾಡೆಮಿ ತಜ್ಞ ಪ್ರಶಸ್ತಿ ಸಹಿತ ನೂರಾರು ಮನ್ನಣೆಗಳಿಗೆ ಭಾಜನರಾಗಿರುವರು. ದಿನಾಂಕ 11 ಜುಲೈ 2026ರಂದು ಯುಗಪುರುಷ ನೇತೃತ್ವದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಅಧ್ಯಾಪಕ, ಕಲಾವಿದ, ಸಂಶೋಧಕ, ಭಾಗವತ, ಅರ್ಥಧಾರಿ, ಸಂಶೋಧಕರಾಗಿ ಪ್ರಸಿದ್ಧರಾಗಿದ್ದ ಪು. ಶ್ರೀನಿವಾಸ ಭಟ್‌ರವರ ಸ್ಮೃತಿ ದಿನ ಕಾರ್ಯಕ್ರಮವು ಜರಗಲಿರುವುದು. ಅಂದು ಡಾ. ಎಂ. ಪ್ರಭಾಕರ ಜೋಶಿಯವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಕೆ. ಭುವನಾಭಿರಾಮ ಉಡುಪ ಹಾಗೂ ಪು. ಗುರುಪ್ರಸಾದ ಭಟ್ ತಿಳಿಸಿದ್ದಾರೆ.
