Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ರಂಗಾಯಣದಲ್ಲಿ ಸಿ.ಜಿ.ಕೆ. ನೆನಪಿನ ಗ್ರೀಷ್ಮ ರಂಗೋತ್ಸವ -2026 | ಜುಲೈ 05

    July 2, 2026

    ಬೆಂಗಳೂರಿನ ಕಲಾ ಗ್ರಾಮದಲ್ಲಿ ‘ಪೋಲೀ ಕಿಟ್ಟೀ’ ನಾಟಕ ಪ್ರದರ್ಶನ | ಜುಲೈ 03

    July 2, 2026

    ಡಾ. ಎಂ. ಪ್ರಭಾಕರ ಜೋಶಿಗೆ ‘ಪು. ಶ್ರೀನಿವಾಸ ಭಟ್ಟ ಪ್ರಶಸ್ತಿ’

    July 2, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಮಕ್ಕಳು ಸವಿಯಬಲ್ಲ ಕಥೆಗಳು
    Article

    ಪುಸ್ತಕ ವಿಮರ್ಶೆ | ಮಕ್ಕಳು ಸವಿಯಬಲ್ಲ ಕಥೆಗಳು

    July 2, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಸ್ನೋವೈಟ್ ಮತ್ತು ಇತರ ಕಥೆಗಳು’ ಶಾರದಾ ಹೊಳ್ಳರು ಕನ್ನಡದಲ್ಲಿ ನಿರೂಪಿಸಿರುವ ಮಕ್ಕಳ ಕಥೆಗಳ ಸಂಕಲನ. 272 ಪುಟಗಳ ಈ ಸಂಕಲನದಲ್ಲಿ ಮಕ್ಕಳು ಖುಷಿಯಿಂದ ಸವಿಯಬಲ್ಲ 50 ಚಿಕ್ಕ ಚಿಕ್ಕ ಕಥೆಗಳಿವೆ. ಮಕ್ಕಳು ಯಾವಾಗಲೂ ಫ್ಯಾಂಟಸಿ ಕಥೆಗಳನ್ನು ಹೆಚ್ಚು ಇಷ್ಟಪಡುತ್ತಾರೆ.‌ ಕಥೆಗಳಲ್ಲಿ ರಾಕ್ಷಸ, ಭೂತ, ಮಂತ್ರವಾದಿ, ಮಾಟಗಾತಿ, ಚಾಣಾಕ್ಷ ಕಳ್ಳ, ರಾಜಕುಮಾರ- ರಾಜಕುಮಾರಿಯರು ಅಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಅಲ್ಲಾವುದ್ದೀನನ ಅದ್ಭುತ ದೀಪ, ಬೇಡಿದ್ದನ್ನೆಲ್ಲ ಕೊಡುವ ಮಂತ್ರದಂಡ, ಅಕ್ಷಯಪಾತ್ರೆಗಳು, ಆಕಾಶಕ್ಕೆ ಕರೆದೊಯ್ಯುವ ಪಕ್ಷಿ- ಹೀಗೆ ಅತಿಮಾನುಷ ಶಕ್ತಿಯುಳ್ಳವರಿರುವ ಯಾವುದೇ ಪಾತ್ರಗಳಾದರೂ ಅವರನ್ನು ಆವೇಶಕ್ಕೊಳಗಾಗಿಸುತ್ತವೆ. ಮನೆಯಲ್ಲಿ ಅಜ್ಜ-ಅಜ್ಜಿಯರಿದ್ದರೆ ಸಾಕು ಮಕ್ಕಳು ಅವರನ್ನು ಕತೆ ಹೇಳಿರೆಂದು ಪೀಡಿಸುತ್ತವೆ. ಅಂಥ ಮಕ್ಕಳಿಗೆ ಇಂಥ ಕಥೆಗಳನ್ನು ಹೇಳಿದರೆ ಅವರ ಕಲ್ಪನಾ ಶಕ್ತಿ ಸದೃಢಗೊಳ್ಳುತ್ತದೆ.

    ಇಲ್ಲಿರುವ ಅನೇಕ ಕಥೆಗಳಲ್ಲಿ ಗ್ರೀಸ್, ಇಟಲಿ, ರಷ್ಯಾ ಮೊದಲಾದ ಪಾಶ್ಚಾತ್ಯ ದೇಶಗಳ ಹಳ್ಳಿಗಳ ವಾತಾವರಣವಿದೆ. ಅಲ್ಲಿನ ಮನುಷ್ಯರು, ಕುಟುಂಬಗಳು, ರೈತರು, ಕೃಷಿ ವಿವರಗಳು, ಆಹಾರ ಸಂಸ್ಕೃತಿ, ಸಾಕು ಪ್ರಾಣಿ-ಪಕ್ಷಿಗಳು, ಕಾಡು, ಗಿಡ ಮರಗಳು, ಹೊಲಗದ್ದೆಗಳು, ಮಾಟಗಾತಿಯರು, ಅತಿಮಾನುಷ ಶಕ್ತಿಯುಳ್ಳ ಪಾತ್ರಗಳು-ಹೀಗೆ ಒಂದು ಜಾನಪದ ಲೋಕವೇ ಸೃಷ್ಟಿಯಾಗಿದೆ. ಹಾಗೆಯೇ ಪಟ್ಟಣಗಳು, ರಾಜರು, ರಾಜಕುಮಾರ-ರಾಜಕುಮಾರಿಯರು, ಸೇವಕ-ಸೇವಕಿಯರು, ಸೈನಿಕರು, ಸಿಪಾಯಿಗಳು, ವ್ಯಾಪಾರಿಗಳು ಇರುವ ನಾಗರಿಕ ಲೋಕದ ಕಥೆಗಳೂ ಇವೆ.

    ಉದಾಹರಣೆಗಾಗಿ ಮೊದಲ ಕತೆ ‘ಬಂಗಾರದ ಬಾತುಕೋಳಿ’ ಹೀಗಿದೆ : ಒಂದೂರಿನಲ್ಲಿ ವಾಸಿಸುತ್ತಿದ್ದ ಗಂಡ-ಹೆಂಡತಿಯರಿಗೆ ಮೂವರು ಗಂಡು ಮಕ್ಕಳಿರುತ್ತಾರೆ. ಅವರಲ್ಲಿ ಮೂರನೆಯವನು ಪೆದ್ದ. ಮೊದಲ ಇಬ್ಬರು ಗಂಡು ಮಕ್ಕಳು ತಾಯಿ ಕೊಟ್ಟ ಆಹಾರವನ್ನು ತೆಗೆದುಕೊಂಡು ಕಾಡಿಗೆ ಕಟ್ಟಿಗೆ ಕಡಿದು ತರಲು ಹೋಗುತ್ತಾರೆ. ಅಗ ಒಬ್ಬ ಕ್ಷೀಣಕಾಯನಾದ ಹಸಿದ ಮುದುಕ ಕಾಣಿಸಿಕೊಂಡು ತಿನ್ನಲು ಏನಾದರೂ ಕೊಡಿ ಎಂದು ಬೇಡುತ್ತಾನೆ. ಆದರೆ ಅವರಿಬ್ಬರೂ ಮಹಾಸ್ವಾರ್ಥಿಗಳು. ಅವರು ಮುದುಕನಿಗೆ ಏನನ್ನೂ ಕೊಡುವುದಿಲ್ಲ. ಪೆದ್ದಮಗನೆಂದರೆ ತಾಯಿ ತಂದೆಗೂ ತಾತ್ಸಾರ. ತಾಯಿ ಅವನಿಗೆ ಹಳಸಿದ ಆಹಾರವನ್ನು ಕಟ್ಟಿಕೊಡುತ್ತಾಳೆ. ಪೆದ್ದ ಮಗ ಹೃದಯವಂತ. ಅವನು ತಿನ್ನಲು ಕುಳಿತಿರುವಾಗ ಅದೇ ಮುದುಕ ಬಂದು ತಿನ್ನಲು ಏನಾದರೂ ಕೊಡು ಎಂದು ಬೇಡುತ್ತಾನೆ. ಪೆದ್ದ ತನ್ನ ತಟ್ಟೆಯಿಂದ ಅರ್ಧ ತೆಗೆದು ಕೊಡುತ್ತಾನೆ. ಅವನ ದಯೆಗೆ ಪ್ರತಿಫಲವಾಗಿ ಮುದುಕ ಅವನಿಗೆ ಅಲ್ಲೇ ಬಳಿ ಇರುವ ಒಂದು ಮರವನ್ನು ಕಡಿ, ಅಲ್ಲಿ ನಿನಗೊಂದು ವಿಶೇಷ ಉಡುಗೊರೆಯಿದೆ ಅನ್ನುತ್ತಾನೆ. ಪೆದ್ದ ಆ ಮರವನ್ನು ಕಡಿದಾಗ ಅದರ ಬೇರುಗಳಲ್ಲಿದ್ದ ಒಂದು ಪೊಟರೆಯಿಂದ ಅಪ್ಪಟ ಚಿನ್ನದ ಗರಿಗಳುಳ್ಳ ಒಂದು ಬಾತುಕೋಳಿ ಅವನಿಗೆ ಸಿಗುತ್ತದೆ. ಅದರ ಸಹಾಯದಿಂದ ಮುಂದೆ ಹಲವು ಹಂತಗಳನ್ನು ದಾಟಿ ಅವನು ಒಬ್ಬ ರಾಜಕುಮಾರಿಯನ್ನು ಮದುವೆಯಾಗಿ ಸುಖವಾಗಿರುತ್ತಾನೆ.

    ಇದೇ ರೀತಿ ಇಲ್ಲಿನ ಎಲ್ಲಾ ಕಥೆಗಳಲ್ಲೂ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಮತ್ತು ಅಹಂಕಾರಪಟ್ಟು ಇನ್ನೊಬ್ಬರಿಗೆ ತೊಂದರೆ ಕೊಡುವವರು ಒಂದಿಲ್ಲೊಂದು ರೀತಿಯಲ್ಲಿ ನಷ್ಟಕ್ಕೊಳಗಾಗುತ್ತಾರೆ ಎಂಬ ಮೌಲ್ಯಸಂದೇಶವಿದೆ. ಶಾರದಾ ಹೊಳ್ಳ ಅವರ ಭಾಷೆ ಮತ್ತು ನಿರೂಪಣಾ ಶೈಲಿ ತುಂಬಾ ಸುಂದರವಾಗಿದೆ. ವಾಕ್ಯಗಳು ಸರಳವಾಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.‌ ಮಕ್ಕಳಿಗೆ ಖಂಡಿತವಾಗಿಯೂ ಖುಷಿ ಕೊಡುವ ಕೃತಿಯಿದು.

    ಕೃತಿಯ ಹೆಸರು : ಸ್ನೋವೈಟ್ ಮತ್ತು ಇತರ ಕಥೆಗಳು
    ಲೇಖಕಿ : ಶಾರದಾ ಹೊಳ್ಳ
    ಪ್ರ : ಸೃಜನ ಪ್ರಕಾಶನ ಮಂಡ್ಯ (ಮೊ. ನಂ. 9448930173)
    ಪುಟ : 272. ಬೆಲೆ : ರೂ.210/-
    ಪ್ರ.ವರ್ಷ : 2021

    ವಿಮರ್ಶಕಿ : ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕಿ : ಶಾರದಾ ಹೊಳ್ಳ

    ಬಹುಮುಖ ಪ್ರತಿಭೆಯ ಶ್ರೀಮತಿ ಶಾರದಾ ಹೊಳ್ಳ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರು. ಇಂಗ್ಲೀಷ್ ಪ್ರಾಧ್ಯಾಪಕರು. ಸಾಹಿತಿಯಾಗಿ ಅನೇಕ ಕಥೆ ಮತ್ತು ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಲೇ ಬಂದಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿ ರಂಗದ ಮೇಲೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಿಂದುಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿ ಬಲ್ಲ ಇವರು ಬಹಳ ಒಳ್ಳೆಯ ಗಾಯಕಿ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕ್ರೀಡೆಗಳಲ್ಲೂ ಆಸಕ್ತರಾದ ಇವರು ವಿದ್ಯಾರ್ಥಿಯಾಗಿದ್ದಾಗ ಕ್ರೀಡಾ ಛಾಂಪಿಯನ್ ಕೂಡಾ ಆಗಿದ್ದರು.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ‘ಯಕ್ಷಗಾನ ದಾಖಲೀಕರಣ’ | ಜುಲೈ 05
    Next Article ಯಕ್ಷಭವನ ಕಲಾಕೇಂದ್ರದ ಮಹಿಳಾ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ | ಜುಲೈ 03
    roovari

    Add Comment Cancel Reply


    Related Posts

    ಮೈಸೂರು ರಂಗಾಯಣದಲ್ಲಿ ಸಿ.ಜಿ.ಕೆ. ನೆನಪಿನ ಗ್ರೀಷ್ಮ ರಂಗೋತ್ಸವ -2026 | ಜುಲೈ 05

    July 2, 2026

    ಬೆಂಗಳೂರಿನ ಕಲಾ ಗ್ರಾಮದಲ್ಲಿ ‘ಪೋಲೀ ಕಿಟ್ಟೀ’ ನಾಟಕ ಪ್ರದರ್ಶನ | ಜುಲೈ 03

    July 2, 2026

    ಡಾ. ಎಂ. ಪ್ರಭಾಕರ ಜೋಶಿಗೆ ‘ಪು. ಶ್ರೀನಿವಾಸ ಭಟ್ಟ ಪ್ರಶಸ್ತಿ’

    July 2, 2026

    ಯಕ್ಷಭವನ ಕಲಾಕೇಂದ್ರದ ಮಹಿಳಾ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ | ಜುಲೈ 03

    July 2, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.